ಎಲ್ಲ ಎಸ್‌ಐಆರ್ ಆದೇಶಗಳಿಗೆ ಸರ್ವಾನುಮತದ ಅನುಮೋದನೆ ಪಡೆಯಲಾಗಿದೆ: ಭಿನ್ನಾಭಿಪ್ರಾಯ ವದಂತಿ ತಳ್ಳಿ ಹಾಕಿದ ಚುನಾವಣಾ ಆಯೋಗ
SIR-EC Dissent Row: ವಿಶೇಷ ತೀವ್ರ ಮತದಾರರ ಪಟ್ಟಿ ಪರಿಷ್ಕರಣೆಗೆ ಸಂಬಂಧಿಸಿದಂತೆ ಚುನಾವಣಾ ಆಯೋಗದಲ್ಲಿ ಭಿನ್ನಾಭಿಪ್ರಾಯಗಳಿವೆ ಎಂಬ ವರದಿಗಳ ನಡುವೆ, ಎಸ್‌ಐಆರ್ ಸೇರಿ ಆಯೋಗದ ಎಲ್ಲ ಅಂತಿಮ ನಿರ್ಧಾರಗಳಿಗೆ ಮೂವರು ಚುನಾವಣಾ ಆಯುಕ್ತರ ಸರ್ವಾನುಮತದ ಒಪ್ಪಿಗೆ ಇತ್ತು ಎಂದು ಚುನಾವಣಾ ಆಯೋಗ ಸ್ಪಷ್ಟಪಡಿಸಿದೆ. ಆಯೋಗದ ಸದಸ್ಯರು ಆಂತರಿಕ ಚರ್ಚೆಯ ವೇಳೆ ಪ್ರಶ್ನೆಗಳು, ಸಲಹೆಗಳು ಹಾಗೂ ಭಿನ್ನ ಅಭಿಪ್ರಾಯಗಳನ್ನು ವ್ಯಕ್ತಪಡಿಸುವುದು ಸಾಮಾನ್ಯ ಪ್ರಕ್ರಿಯೆ ಎಂದು ತಿಳಿಸಿದೆ.
ಸಂಗ್ರಹ ಚಿತ್ರ -
ನವದೆಹಲಿ, ಸೆ. 26: ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR)ಗೆ ಸಂಬಂಧಿಸಿದಂತೆ ಚುನಾವಣಾ ಆಯೋಗದೊಳಗೆ ಭಿನ್ನಾಭಿಪ್ರಾಯಗಳಿವೆ ಎಂಬ ವರದಿಗಳ ನಡುವೆಯೇ, ಎಲ್ಲ ಎಸ್‌ಐಆರ್ ಆದೇಶಗಳು ಹಾಗೂ ವೇಳಾಪಟ್ಟಿಗಳಿಗೆ ಮೂವರು ಚುನಾವಣಾ ಆಯುಕ್ತರ ಸರ್ವಾನುಮತದ ಒಪ್ಪಿಗೆ ಇತ್ತು ಎಂದು ಚುನಾವಣಾ ಆಯೋಗ (Election Commission) ಸ್ಪಷ್ಟಪಡಿಸಿದೆ.
ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅಧ್ಯಕ್ಷತೆಯಲ್ಲಿ ಶನಿವಾರ ನವದೆಹಲಿಯ ನಿರ್ವಚನ್ ಸದನ್‌ನಲ್ಲಿ ನಡೆದ ಪೂರ್ಣ ಆಯೋಗದ ಸಭೆಯಲ್ಲಿ ಈ ಕುರಿತು ಸ್ಪಷ್ಟನೆ ನೀಡಲಾಗಿದೆ. ಚುನಾವಣಾ ಆಯುಕ್ತರಾದ ಸುಖ್ಬೀರ್ ಸಿಂಗ್ ಸಂಧು ಮತ್ತು ವಿವೇಕ್ ಜೋಶಿ ಕೂಡ ಸಭೆಯಲ್ಲಿ ಭಾಗವಹಿಸಿದ್ದರು.
ಚುನಾವಣಾ ಆಯೋಗದ ಪ್ರೆಸ್‌ಮೀಟ್:
CEC and ECs meet after expose on rift in Election Comm; projects united face; subtle admission of lacunae highlighted by 2 ECs; to review ECINET to 'double-check' it complies with law; Agenda for full EC meetings to be circulated in advance; SIR decisions unanimous @DeccanHerald pic.twitter.com/OKeNsGLh78
— Shemin (@shemin_joy) September 26, 2026
2025ರ ಜೂನ್ 24ರಂದು ದೇಶಾದ್ಯಂತ ಎಸ್‌ಐಆರ್ ನಡೆಸುವಂತೆ ಹೊರಡಿಸಿದ್ದ ಆದೇಶಕ್ಕೂ ಮೂವರು ಆಯುಕ್ತರ ಸರ್ವಾನುಮತದ ಒಪ್ಪಿಗೆ ಇತ್ತು ಎಂದು ಆಯೋಗ ತಿಳಿಸಿದೆ. ಈ ಆದೇಶವನ್ನು 2026ರ ಮೇ 27ರಂದು ಸುಪ್ರೀಂ ಕೋರ್ಟ್ ಎತ್ತಿಹಿಡಿದಿದೆ ಎಂದು ಕೂಡ ಆಯೋಗ ಉಲ್ಲೇಖಿಸಿದೆ.
ಇತ್ತೀಚೆಗೆ ಇಬ್ಬರು ಚುನಾವಣಾ ಆಯುಕ್ತರು ಕಳೆದ 10 ತಿಂಗಳಲ್ಲಿ ಹಲವು ನಿರ್ಧಾರಗಳ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ ಎಂಬ ವರದಿಗಳು ಪ್ರಕಟವಾಗಿದ್ದವು. ಹೊಸ ಮತದಾರರ ನೋಂದಣಿ, ಮತದಾರರ ಹೆಸರು ಸೇರ್ಪಡೆ–ಡಿಲೀಟ್, ಮತದಾರರ ದತ್ತಾಂಶ ನಿರ್ವಹಣೆ ಸೇರಿ ಹಲವು ವಿಷಯಗಳ ಕುರಿತು ಆಕ್ಷೇಪಗಳು ವ್ಯಕ್ತವಾಗಿದ್ದವು ಎಂದು ವರದಿಯಾಗಿತ್ತು.
ಬಿಜೆಪಿ ಹಿರಿಯ ನಾಯಕ ಎಲ್‌ಕೆ ಅಡ್ವಾಣಿ, ಜೈಶಂಕರ್, ಚುನಾವಣಾ ಆಯುಕ್ತ ಸಂಧುಗೂ SIR ನೋಟಿಸ್!
ಆಯೋಗದ ಪ್ರಕಾರ ಆಂತರಿಕ ಚರ್ಚೆಯ ವೇಳೆ ಸದಸ್ಯರು ಪ್ರಶ್ನೆಗಳು, ಸಲಹೆಗಳು ಅಥವಾ ಅಭಿಪ್ರಾಯಗಳನ್ನು ವ್ಯಕ್ತಪಡಿಸುವುದು ಸಾಮಾನ್ಯ ಆಡಳಿತಾತ್ಮಕ ಪ್ರಕ್ರಿಯೆಯಾಗಿದ್ದು, ಅಂತಿಮವಾಗಿ ಹೊರಡಿಸಲಾದ ಅಧಿಕೃತ ಆದೇಶಗಳು ಕಾನೂನುಬದ್ಧ ಪ್ರಕ್ರಿಯೆಯಂತೆ ಅಂಗೀಕರಿಸಲ್ಪಟ್ಟಿವೆ.
ಇದೇ ವೇಳೆ, ಇಬ್ಬರು ಚುನಾವಣಾ ಆಯುಕ್ತರು ಕೇಂದ್ರ ಸಚಿವ ಸಂಪುಟ ಕಾರ್ಯದರ್ಶಿಗೆ ಪತ್ರ ಬರೆದಿರುವ ವಿಚಾರವೂ ಚರ್ಚೆಗೆ ಬಂದಿದ್ದು, ಅದು ಆಯೋಗದ ನೀತಿ ಅಥವಾ ಎಸ್‌ಐಆರ್‌ಗೆ ಸಂಬಂಧಿಸಿದ ವಿಷಯವಲ್ಲ; ನಿಯೋಜನೆಯಲ್ಲಿದ್ದ ಅಧಿಕಾರಿಯ ಕಾರ್ಯವ್ಯವಸ್ಥೆಗೆ ಸಂಬಂಧಿಸಿದ ವಿಚಾರ ಎಂದು ಆಯೋಗ ಸ್ಪಷ್ಟಪಡಿಸಿದೆ.