ಪ್ರಯಾಣಿಕರೇ ಗಮನಿಸಿ: ರೈಲಿನಲ್ಲಿ ಇನ್ನು ಮುಂದೆ ರಾತ್ರಿ ಮೊಬೈಲ್ ಫೋನ್ ಸೇರಿ ಎಲೆಕ್ಟ್ರಾನಿಕ್ ವಸ್ತುಗಳನ್ನು ಚಾರ್ಜ್ ಮಾಡುವಂತಿಲ್ಲ
ರೈಲಿನಲ್ಲಿ ಪವರ್ ಬ್ಯಾಂಕ್ ಸ್ಫೋಟದ ಬಳಿಕ ರಾತ್ರಿ ವೇಳೆ ಎಲೆಕ್ಟ್ರಾನಿಕ್ ವಸ್ತುಗಳ ಚಾರ್ಜಿಂಗ್ ಗೆ ನಿಷೇಧ ಹೇರಿರುವ ರೈಲ್ವೆ ಮಂಡಳಿಯು ಈ ಕುರಿತು ಕಟ್ಟುನಿಟ್ಟಿನ ನಿಯಮ ಪಾಲನೆ ಮಾಡುವಂತೆ ತನ್ನ ಎಲ್ಲಾ ವಲಯಗಳಿಗೆ ನಿರ್ದೇಶನವನ್ನು ನೀಡಿದೆ. ಇತ್ತೀಚೆಗೆ ದಾದರ್ನಿಂದ ಬದ್ಲಾಪುರಕ್ಕೆ ತೆರಳುತ್ತಿದ್ದ ರೈಲಿನಲ್ಲಿ ಚಾರ್ಜ್ ಗೆ ಇಟ್ಟಿದ್ದ ಪವರ್ ಬ್ಯಾಂಕ್ ಸ್ಫೋಟಗೊಂಡು ಕೋಚ್ನಲ್ಲಿ ದಟ್ಟ ಹೊಗೆ ತುಂಬಿತ್ತು. ಹೆಚ್ಚಿನ ಯಾವುದೇ ಹಾನಿಯಾಗದೇ ಇದ್ದರೂ ಇದು ಸುರಕ್ಷತಾ ನಿಯಮಗಳ ಬಗ್ಗೆ ಚರ್ಚೆ ನಡೆಸುವಂತೆ ಮಾಡಿತ್ತು.
ಸಂಗ್ರಹ ಚಿತ್ರ -
ನವದೆಹಲಿ: ರೈಲುಗಳಲ್ಲಿ (Indian Railways) ಇನ್ನು ಮುಂದೆ ಮೊಬೈಲ್ ಸೇರಿದಂತೆ ಎಲೆಕ್ಟ್ರಾನಿಕ್ ವಸ್ತುಗಳನ್ನು ರಾತ್ರಿ ಚಾರ್ಜ್ ಗೆ (Night Charging Ban) ಇಡುವಂತಿಲ್ಲ. ಈ ಕುರಿತು ಕಟ್ಟುನಿಟ್ಟಿನ ನಿಯಮ ಪಾಲನೆಗೆ ಭಾರತೀಯ ರೈಲ್ವೆ ಮಂಡಳಿಯು (Railway Board) ಎಲ್ಲಾ ವಲಯಗಳಿಗೆ ನಿರ್ದೇಶನವನ್ನು ನೀಡಿದೆ. ದಾದರ್ನಿಂದ ಬದ್ಲಾಪುರಕ್ಕೆ (Badlapur-bound local train) ತೆರಳುತ್ತಿದ್ದ ರೈಲಿನಲ್ಲಿ ಇತ್ತೀಚೆಗೆ ಚಾರ್ಜ್ ಗೆ ಇಟ್ಟಿದ್ದ ಪವರ್ ಬ್ಯಾಂಕ್ ಸ್ಫೋಟಗೊಂಡ ಬಳಿಕ ರೈಲಿನಲ್ಲಿ ಸುರಕ್ಷತಾ ನಿಯಮಗಳ ಪಾಲನೆ ಕುರಿತು ಚರ್ಚೆಯನ್ನು ಹುಟ್ಟುಹಾಕಿತ್ತು. ಹೀಗಾಗಿ ರೈಲು ಮಂಡಳಿಯು ರಾತ್ರಿ 11 ರಿಂದ ಬೆಳಗ್ಗೆ 5 ಗಂಟೆಯವರೆಗೆ ರೈಲುಗಳಲ್ಲಿ ಮೊಬೈಲ್ ಚಾರ್ಜಿಂಗ್ ಪಾಯಿಂಟ್ಗಳಿಗೆ ವಿದ್ಯುತ್ ಸಂಪರ್ಕವನ್ನು ಸ್ಥಗಿತಗೊಳಿಸಲು ನಿರ್ದೇಶನವನ್ನು ನೀಡಿದೆ.
ಮುಂಬೈ ಸ್ಥಳೀಯ ರೈಲಿನಲ್ಲಿ ಚಾರ್ಜ್ ಗೆ ಇಟ್ಟಿದ್ದ ಪವರ್ ಬ್ಯಾಂಕ್ ಒಂದು ಸ್ಫೋಟಗೊಂಡು ಕೋಚ್ನಲ್ಲಿ ದಟ್ಟ ಹೊಗೆ ತುಂಬಿದ ಘಟನೆಯ ಬಳಿಕ ರೈಲು ಮಂಡಳಿಯು ಅಕ್ಟೋಬರ್ 26 ರಂದು ಬರೆದ ಪತ್ರದಲ್ಲಿ ರಾತ್ರಿ 11 ರಿಂದ ಬೆಳಗ್ಗೆ 5 ಗಂಟೆಯವರೆಗೆ ರೈಲುಗಳಲ್ಲಿ ಮೊಬೈಲ್ ಚಾರ್ಜಿಂಗ್ ಪಾಯಿಂಟ್ಗಳಿಗೆ ವಿದ್ಯುತ್ ಸಂಪರ್ಕವನ್ನು ಸ್ಥಗಿತಗೊಳಿಸಬೇಕು. ಇದಕ್ಕೆ ಸಂಬಂಧಿಸಿ ಯಾವುದೇ ವಿನಾಯಿತಿ ನೀಡುವಂತಿಲ್ಲ ಎಂದು ಸ್ಪಷ್ಟಪಡಿಸಿದೆ.
ಅರ್ನಾಬ್ ಚಂಡಮಾರುತ: ಆಂಧ್ರಪ್ರದೇಶದ ಮೂರು ವಿಮಾನ ನಿಲ್ದಾಣಗಳಲ್ಲಿ ವಿಮಾನಗಳ ಹಾರಾಟ ಸ್ಥಗಿತ
ದಾದರ್ನಿಂದ ಬದ್ಲಾಪುರಕ್ಕೆ ತೆರಳುತ್ತಿದ್ದ ರೈಲಿನಲ್ಲಿ ಪವರ್ ಬ್ಯಾಂಕ್ ಸ್ಪೋಟಗೊಂಡ ವೇಳೆ ಚಾರ್ಜಿಂಗ್ ಪಾಯಿಂಟ್ಗಳನ್ನು ಆಫ್ ಮಾಡಲು ರೈಲ್ವೆ ಸಿಬ್ಬಂದಿ ವಿಫಲರಾಗಿದ್ದಾರೆ ಎಂದು ಪತ್ರದಲ್ಲಿ ಉಲ್ಲೇಖಿಸಿರುವ ರೈಲು ಮಂಡಳಿ ರಾತ್ರಿ ಅವಧಿಯಲ್ಲಿ ಎಲ್ಲಾ ಕೋಚ್ಗಳಲ್ಲಿನ ಚಾರ್ಜಿಂಗ್ ಪಾಯಿಂಟ್ಗಳನ್ನು ಆಫ್ ಮಾಡಲಾಗಿದೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಲು ಅಧಿಕಾರಿಗಳು ಮತ್ತು ಮೇಲ್ವಿಚಾರಕರು ಅನಿರೀಕ್ಷಿತ ತಪಾಸಣೆ ನಡೆಸುವಂತೆ ಸೂಚಿಸಿದೆ.
ರೈಲಿನಲ್ಲಿ ಚಾರ್ಜಿಂಗ್ ಮೇಲೆ ನಿರ್ಬಂಧವನ್ನು 2014ರಿಂದಲೇ ಜಾರಿಗೊಳಿಸಲಾಗಿದೆ. ಬೆಂಗಳೂರು-ಹಜೂರ್ ಸಾಹಿಬ್ ನಾಂದೇಡ್ ಎಕ್ಸ್ಪ್ರೆಸ್ ರೈಲಿನಲ್ಲಿ ಬೆಂಕಿ ಕಾಣಿಸಿಕೊಂಡ ಅನಂತರ ರೈಲ್ವೆ ಸುರಕ್ಷತಾ ಆಯುಕ್ತರ ಶಿಫಾರಸಿನ ಮೇರೆಗೆ ಇದನ್ನು ಪರಿಚಯಿಸಲಾಯಿತು. ಇದರ ಬಳಿಕ 2021ರಲ್ಲಿ ಮತ್ತೊಮ್ಮೆ ಈ ಕುರಿತು ನಿರ್ದೇಶನವನ್ನು ನೀಡಲಾಯಿತು ಮತ್ತು ಪಶ್ಚಿಮ ರೈಲ್ವೆ ಚಾರ್ಜಿಂಗ್ ಪಾಯಿಂಟ್ಗಳಿಗೆ ವಿದ್ಯುತ್ ಕಡಿತಗೊಳಿಸಲು ಪ್ರಾರಂಭಿಸಿತ್ತು.