Freedom Fighters: ಮರೆಯಾಗುತ್ತಿದ್ದಾರೆ ಸ್ವಾತಂತ್ರ್ಯದ ಧ್ವಜಧಾರಿಗಳು; ಈ ರಾಜ್ಯದಲ್ಲಿ ಕೇವಲ 15 ಸ್ವಾತಂತ್ರ್ಯ ಹೋರಾಟಗಾರರು ಜೀವಂತ
ಭಾರತದ ಸ್ವಾತಂತ್ರ್ಯ ಹೋರಾಟದ ಪ್ರಮುಖ 1942ರ ಸ್ವಾತಂತ್ರ್ಯ ಚಳುವಳಿಯಾದ ಕ್ವಿಟ್ ಇಂಡಿಯಾ ಚಳವಳಿಯಲ್ಲಿ ಪಾಲ್ಗೊಂಡಿದ್ದ 97 ವರ್ಷದ ಧರಮ್ ರಾಜ್ ಅವರು ಉತ್ತರ ಪ್ರದೇಶದಲ್ಲಿ ತಮ್ಮ ಕೊನೆಯ ದಿನಗಳನ್ನು ಕಳೆಯುತ್ತಿದ್ದು, ಸ್ವಾತಂತ್ರ್ಯ ಚಳುವಳಿಯಲ್ಲಿ ಗುರುತಿಸಿಕೊಂಡ ಧೀಮಂತ ನಾಯಕರಲ್ಲಿ ಇವರು ಒಬ್ಬರು. ವಿಶೇಷವೆಂದರೆ ಇವರೊಂದಿಗೆ ಇನ್ನು 15 ಸ್ವಾತಂತ್ರ್ಯ ಹೋರಾಟಗಾರರು ಒಡನಾಟವನ್ನು ಇಟ್ಟುಕೊಂಡಿದ್ದಾರೆ. ಇವರ ಜೀವನದ ಕಿರು ಪರಿಚಯ ಇಲ್ಲಿದೆ.


ಅಂಬೇಡ್ಕರ್ ನಗರ: ಉತ್ತರ ಪ್ರದೇಶದ (Uttar Pradesh) ಅಂಬೇಡ್ಕರ್ ನಗರದ (Ambedkar Nagar) 97 ವರ್ಷದ ಧರಮ್ ರಾಜ್, ಭಾರತದ ಸ್ವಾತಂತ್ರ್ಯ ಸಂಗ್ರಾಮದ (Freedom Struggle) ಕೊನೆಯ ಜೀವಂತ ಸಾಕ್ಷಿಗಳಲ್ಲಿ ಒಬ್ಬರಾಗಿದ್ದಾರೆ. 1942ರ ಭಾರತ ಬಿಟ್ಟು ತೊಲಗಿ ಚಳವಳಿಯಲ್ಲಿ ಭಾಗವಹಿಸಿದ್ದಕ್ಕಾಗಿ ಜೈಲು ಶಿಕ್ಷೆಗೊಳಗಾದ ಇವರು, ರಾಜ್ಯದ ಉಳಿದ 15 ಸ್ವಾತಂತ್ರ್ಯ ಹೋರಾಟಗಾರರಲ್ಲಿ (Freedom Fighters) ಒಬ್ಬರು. ಆದರೆ, ಉತ್ತರ ಪ್ರದೇಶ ಸರ್ಕಾರದ ಅಧಿಕಾರಿಗಳ ಪ್ರಕಾರ, ವಯಸ್ಸಾದ ಕಾರಣ ಈ ಸಂಖ್ಯೆ ಕಡಿಮೆಯಾಗುತ್ತಿದ್ದು, 2026ರ ಸ್ವಾತಂತ್ರ್ಯ ದಿನಾಚರಣೆಯ ವೇಳೆಗೆ ಒಬ್ಬರೂ ಜೀವಂತವಾಗಿ ಇರದಿರಬಹುದು.
ಕಡಿಮೆಯಾಗುತ್ತಿದೆ ಹೋರಾಟಗಾರರ ಸಂಖ್ಯೆ
ಡಿಸೆಂಬರ್ 2020ರಲ್ಲಿ 73 ಸ್ವಾತಂತ್ರ್ಯ ಹೋರಾಟಗಾರರಿದ್ದ ಉತ್ತರ ಪ್ರದೇಶದಲ್ಲಿ, ಆಗಸ್ಟ್ 2025ರ ವೇಳೆಗೆ ಕೇವಲ 15 ಜನ ಉಳಿದಿದ್ದಾರೆ, ಐದು ವರ್ಷಗಳಲ್ಲಿ 58 ಜನರನ್ನು ಕಳೆದುಕೊಂಡಿದೆ. “ವರ್ಷಕ್ಕೆ ಸರಾಸರಿ 13 ಜನರ ಸಂಖ್ಯೆ ಕಡಿಮೆಯಾಗುತ್ತಿದೆ. ಈ ಗತಿಯಲ್ಲಿ, 2026ರ ಮಧ್ಯಭಾಗದ ವೇಳೆಗೆ ರಾಜ್ಯದಲ್ಲಿ ಒಬ್ಬರೂ ಹೋರಾಟಗಾರರು ಉಳಿಯದಿರಬಹುದು” ಎಂದು ರಾಜಕೀಯ ಪಿಂಚಣಿ ವಿಭಾಗದ ಅಧಿಕಾರಿ ಪೂರ್ಣೇಂದು ಕುಮಾರ್ ಮಿಶ್ರಾ ಹೇಳಿದ್ದಾರೆ. ಇದರ ಜೊತೆಗೆ, 664 ಆಶ್ರಿತರಿಗೆ ಪಿಂಚಣಿ ಮತ್ತು ಇತರ ಸೌಲಭ್ಯಗಳನ್ನು ಒದಗಿಸಲಾಗುತ್ತಿದೆ.
ಧರಮ್ ರಾಜ್ ಕತೆ
1942ರ ಆಗಸ್ಟ್‌ನಲ್ಲಿ, ಕೇವಲ 15 ವರ್ಷದವರಾಗಿದ್ದ ಧರಮ್ ರಾಜ್, ಗಾಂಧಿಯವರ ಭಾರತ ಬಿಟ್ಟು ತೊಲಗಿ ಚಳವಳಿಯ ಕರೆಗೆ ಸ್ಪಂದಿಸಿದರು. “ಗಾಂಧೀಜಿಯ ಮಾತು ಇಡೀ ದೇಶವನ್ನು ಒಂದೇ ಸಮನೆ ಎಬ್ಬಿಸಿತು” ಎಂದು ಅವರು ನೆನಪಿಸಿಕೊಳ್ಳುತ್ತಾರೆ. ರಾತ್ರಿಯ ಕತ್ತಲಲ್ಲಿ ಗ್ರಾಮಗಳಿಗೆ ಸಂದೇಶಗಳನ್ನು ತಲುಪಿಸುವುದು, ದೇವಾಲಯದ ಸಭೆಗಳ ಆಡಿಯಲ್ಲಿ ಜನರನ್ನು ಒಗ್ಗೂಡಿಸುವುದು ಮತ್ತು ಬ್ರಿಟಿಷ್ ಗಸ್ತು ತಂಡಗಳಿಂದ ತಪ್ಪಿಸಿಕೊಳ್ಳುವ ಕೆಲಸ ಅಪಾಯಕಾರಿಯಾಗಿತ್ತು. ವಾರಗಟ್ಟಲೆ ಜೈಲಿನಲ್ಲಿದ್ದ ರಾಜ್, “ಜೈಲಿನ ಗೋಡೆಗಳು ಎತ್ತರವಾಗಿದ್ದವು, ಆದರೆ ನನ್ನ ದೃಢಸಂಕಲ್ಪ ಇನ್ನೂ ಎತ್ತರವಾಗಿತ್ತು” ಎಂದು ಕೋಲಿನ ಮೇಲೆ ಒರಗಿಕೊಂಡು ಹೇಳುತ್ತಾರೆ.
ಈ ಸುದ್ದಿಯನ್ನೂ ಓದಿ: Independence Day: ಸ್ವಾತಂತ್ರ್ಯೋತ್ಸವ ಸಂಭ್ರಮದ ನಡುವೆಯೇ ಯುವಕರಿಗೆ ಭರ್ಜರಿ ಗಿಫ್ಟ್! ಇಂದಿನಿಂದಲೇ ರೋಜ್‌ಗಾರ್ ಯೋಜನೆ ಜಾರಿ
ಸ್ವಾತಂತ್ರ್ಯದ ನೆನಪು
“ಬ್ರಿಟಿಷ್ ಆಡಳಿತ ಕೊನೆಗೊಂಡಿತು ಎಂಬ ಸುದ್ದಿ ಕೇಳಿದ ರಾತ್ರಿ, ಮಳೆಯಲ್ಲಿ ಕಾಲಿಗೆ ಚಪ್ಪಲಿಯಿಲ್ಲದೆ ‘ಭಾರತ್ ಮಾತಾ ಕೀ ಜೈ’ ಎಂದು ಕೂಗುತ್ತಾ ಕುಣಿದೆವು” ಎಂದು ಅವರು ಭಾವುಕರಾಗಿ ನೆನಪಿಸಿಕೊಳ್ಳುತ್ತಾರೆ. “ತ್ರಿವರ್ಣ ಧ್ವಜವನ್ನು ಎತ್ತರಕ್ಕೆ ಏರಿಸುವಾಗ, ನಾನು ಕಾಣುವುದು ಬಟ್ಟೆಯಲ್ಲ, ಪ್ರತಿಭಟನೆಯಿಂದ ಮರಳದ ಸ್ನೇಹಿತರ ಮುಖಗಳು, ತಮ್ಮ ಮಕ್ಕಳಿಗಾಗಿ ಕಾಯುತ್ತಿದ್ದ ತಾಯಂದಿರು ಮತ್ತು ಕೊನೆಯ ರೊಟ್ಟಿಯನ್ನು ನಮ್ಮೊಂದಿಗೆ ಹಂಚಿಕೊಂಡ ರೈತರನ್ನು” ಎಂದು ಧರಮ್ ರಾಜ್ ಹೇಳುತ್ತಾರೆ.
ಕೇಂದ್ರ ಗೃಹ ಖಾತೆ ರಾಜ್ಯ ಸಚಿವ ಬಂಡಿ ಸಂಜಯ್ ಕುಮಾರ್, ಆಗಸ್ಟ್ 12, 2025ರಂದು ಲೋಕಸಭೆಯಲ್ಲಿ, ಸ್ವಾತಂತ್ರತಾ ಸೈನಿಕ ಸಮ್ಮಾನ್ ಯೋಜನೆಯಡಿ ದೇಶಾದ್ಯಂತ 13,212 ಸ್ವಾತಂತ್ರ್ಯ ಹೋರಾಟಗಾರರು ಜೀವಂತವಿದ್ದಾರೆ ಎಂದು ತಿಳಿಸಿದ್ದಾರೆ. ತೆಲಂಗಾಣದಲ್ಲಿ ಅತಿ ಹೆಚ್ಚು (3,017) ಹೋರಾಟಗಾರರಿದ್ದಾರೆ. ಪ್ರತಿಯೊಬ್ಬರಿಗೂ ತಿಂಗಳಿಗೆ ₹20,176 ಪಿಂಚಣಿ, ಸಾರಿಗೆ ಮತ್ತು ಅಂತ್ಯಕ್ರಿಯೆಗೆ ಸಹಾಯ ಒದಗಿಸಲಾಗುತ್ತದೆ.