ತಮಿಳುನಾಡು ಚುನಾವಣೆ: ಅಕ್ರಮವಾಗಿ ಮತದಾನ ಮಾಡಿದ 10 ವಿದೇಶಿಗರ ಬಂಧನ; ಪತ್ತೆಯಾಗಿದ್ದು ಹೇಗೆ?
ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ ಅಕ್ರಮವಾಗಿ ಮತದಾನ ಮಾಡಿದ ಆರೋಪದ ಮೇಲೆ ಚೆನ್ನೈ ಮತ್ತು ಮಧುರೈ ವಿಮಾನ ನಿಲ್ದಾಣಗಳಲ್ಲಿ 10 ವಿದೇಶಿ ಪ್ರಜೆಗಳನ್ನು ಬಂಧಿಸಲಾಗಿದೆ. ಮತದಾನದ ಶಾಯಿಯ ಗುರುತಿನಿಂದ ಈ ಪ್ರಕರಣ ಬೆಳಕಿಗೆ ಬಂದಿದ್ದು, ಇವರ ಬಳಿ ಭಾರತೀಯ ವೋಟರ್ ಐಡಿ ಕಾರ್ಡ್‌ಗಳೂ ಪತ್ತೆಯಾಗಿವೆ. ಈ ಘಟನೆ ಚುನಾವಣಾ ಆಯೋಗದ ಭದ್ರತಾ ಕ್ರಮಗಳ ಕುರಿತು ಗಂಭೀರ ಪ್ರಶ್ನೆಗಳನ್ನು ಎಬ್ಬಿಸಿದೆ.
ಸಾಂದರ್ಭಿಕ ಚಿತ್ರ -
ಚೆನ್ನೈ: ತಮಿಳುನಾಡು ವಿಧಾನಸಭಾ ಚುನಾವಣೆ (Tamil Nadu assembly Ellection) ಯ ಫಲಿತಾಂಶ ಪ್ರಕಟವಾದ ಕೆಲವೇ ದಿನಗಳಲ್ಲಿ ಒಂದು ಅತ್ಯಂತ ಆಘಾತಕಾರಿ ಬೆಳವಣಿಗೆ ಬೆಳಕಿಗೆ ಬಂದಿದೆ. ವಿದೇಶಿ ಪಾಸ್‌ಪೋರ್ಟ್ (foreign passports) ಹೊಂದಿದ್ದರೂ ಕಳೆದ ತಿಂಗಳು ನಡೆದ ತಮಿಳುನಾಡು ಚುನಾವಣೆಯಲ್ಲಿ ಅಕ್ರಮವಾಗಿ ಮತದಾನ ಮಾಡಿದ ಆರೋಪದ ಮೇಲೆ ಚೆನ್ನೈ ಮತ್ತು ಮಧುರೈ (Channai-Madhurai) ವಿಮಾನ ನಿಲ್ದಾಣಗಳಲ್ಲಿ ಕನಿಷ್ಠ 10 ವಿದೇಶಿ ಪ್ರಜೆಗಳನ್ನು ವಲಸೆ ಅಧಿಕಾರಿಗಳು ಬಂಧಿಸಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ.
ಮತದಾನದ ಶಾಯಿ ತಂದಿಟ್ಟ ಆಪತ್ತು
ಬಂಧಿತರು ಭಾರತದಿಂದ ಬೇರೆ ದೇಶಗಳಿಗೆ ಪ್ರಯಾಣಿಸಲು ವಿಮಾನ ನಿಲ್ದಾಣಕ್ಕೆ ಬಂದು ತಪಾಸಣೆಗೆ ಒಳಗಾಗುತ್ತಿದ್ದಾಗ ಸಿಕ್ಕಿಬಿದ್ದಿದ್ದಾರೆ. ಪ್ರಯಾಣಿಕರ ದಾಖಲೆಗಳನ್ನು ಪರಿಶೀಲಿಸುವಾಗ ಅಧಿಕಾರಿಗಳು ಅವರ ಎಡಗೈ ತೋರುಬೆರಳಿನಲ್ಲಿದ್ದ ಅಳಿಸಲಾಗದ ಮತದಾನದ ಶಾಯಿಯ ಗುರುತನ್ನು ಗಮನಿಸಿದ್ದಾರೆ. ಭಾರತೀಯ ಪ್ರಜೆಗಳಲ್ಲದ ಇವರ ಬೆರಳಿಗೆ ಶಾಯಿ ಬಂದಿದ್ದು ಹೇಗೆ ಎಂದು ತನಿಖೆ ನಡೆಸಿದಾಗ ಇಡೀ ಹಗರಣ ಬಯಲಾಗಿದೆ. ಚೆನ್ನೈ ವಿಮಾನ ನಿಲ್ದಾಣದ ಅಧಿಕಾರಿಯೊಬ್ಬರು ಈ ಬಂಧನವನ್ನು ದೃಢಪಡಿಸಿದ್ದಾರೆ.
ವಿಶ್ವಾಸ ಮತ ಅಗ್ನಿ ಪರೀಕ್ಷೆ ಗೆದ್ದ ತಮಿಳುನಾಡು ಮುಖ್ಯಮಂತ್ರಿ ವಿಜಯ್; ಪರ ಮತ ಚಲಾಯಿಸಿದ್ದು ಯಾರೆಲ್ಲ?
ಅಕ್ರಮ ವೋಟರ್ ಐಡಿ ಪತ್ತೆ:
ಬಂಧಿತರಲ್ಲಿ ಹೆಚ್ಚಿನವರು ಶ್ರೀಲಂಕಾ ಮೂಲದವರಾಗಿದ್ದು, ಬ್ರಿಟನ್, ಕೆನಡಾ ಮತ್ತು ಇಂಡೋನೇಷ್ಯಾದ ತಲಾ ಒಬ್ಬರು ಪ್ರಜೆಗಳು ಸೇರಿದ್ದಾರೆ. ಶ್ರೀಲಂಕಾದ ರಂಜಿನಿ (59), ಸರ್ಫುದ್ದೀನ್ (68), ನಿಲಂತಿ (44), ಜಯಂತನ್ (40), ಚಾರ್ಲಿ ಬಾಲಚಂದ್ರನ್ (48), ಚಕ್ರವರ್ತಿ ಲೋಗಪ್ರಿಯಾ (50), ಸುನಿತಾ ಚಕ್ರವರ್ತಿ (48) ಮತ್ತು ಬ್ರಿಟನ್‌ನ ಅಯ್ಯಾದೊರೈ (53), ಇಂಡೋನೇಷ್ಯಾದ ಟಿಟ್ಟಿನ್ ಮಾರಿಯಾಟ್ಟಿ (47), ಕೆನಡಾದ ಜಿತ್ತೇಂದ್ರನಾಥ್ (38) ಬಂಧಿತ ಆರೋಪಿಗಳಾಗಿದ್ದಾರೆ. ಇವರು ವಿದೇಶಿ ಪಾಸ್‌ಪೋರ್ಟ್ ಹೊಂದಿದ್ದರೂ, ಭಾರತೀಯ ಚುನಾವಣಾ ಆಯೋಗ ನೀಡಿದ ವೋಟರ್ ಐಡಿ ಕಾರ್ಡ್‌ಗಳನ್ನು ಹೊಂದಿದ್ದರು. ಭಾರತೀಯ ಕಾನೂನಿನ ಪ್ರಕಾರ ವಿದೇಶಿ ಪ್ರಜೆಗಳು ಭಾರತದ ಮತದಾರರ ಗುರುತಿನ ಚೀಟಿ ಹೊಂದುವುದು ಸಂಪೂರ್ಣವಾಗಿ ಅಕ್ರಮವಾಗಿದೆ.
ಚುನಾವಣಾ ಆಯೋಗದ ಭದ್ರತಾ ಲೋಪದ ಪ್ರಶ್ನೆ:
ತಮಿಳುನಾಡು ಚುನಾವಣೆಗೆ ಮುನ್ನವಷ್ಟೇ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ ನಡೆಸಲಾಗಿತ್ತು. ಈ ಪ್ರಕ್ರಿಯೆಯಲ್ಲಿ ಮೃತಪಟ್ಟ ಹಾಗೂ ಕಾಯಂ ಆಗಿ ವಲಸೆ ಹೋದ ಸುಮಾರು 74 ಲಕ್ಷ ಮತದಾರರ ಹೆಸರುಗಳನ್ನು ಪಟ್ಟಿಯಿಂದ ತೆಗೆದುಹಾಕಲಾಗಿತ್ತು ಮತ್ತು 27.5 ಲಕ್ಷ ಹೊಸ ಮತದಾರರನ್ನು ಸೇರಿಸಲಾಗಿತ್ತು. ಇಷ್ಟೆಲ್ಲಾ ಕಟ್ಟುನಿಟ್ಟಿನ ತಪಾಸಣೆಯ ನಡುವೆಯೂ ವಿದೇಶಿ ಪ್ರಜೆಗಳ ಹೆಸರುಗಳು ಮತದಾರರ ಪಟ್ಟಿಯಲ್ಲಿ ಹೇಗೆ ಉಳಿದುಕೊಂಡವು ಮತ್ತು ಅವರಿಗೆ ಭಾರತೀಯ ವೋಟರ್ ಐಡಿ ಹೇಗೆ ಸಿಕ್ಕಿತು ಎಂಬುದು ಈಗ ದೊಡ್ಡ ಆಡಳಿತಾತ್ಮಕ ಮತ್ತು ರಾಜಕೀಯ ವಿವಾದಕ್ಕೆ ಕಾರಣವಾಗಿದೆ.
ಏಪ್ರಿಲ್ 22 ರಂದು ನಡೆದ ತಮಿಳುನಾಡು ವಿಧಾನಸಭಾ ಚುನಾವಣೆಯು ದಶಕಗಳ ದ್ರಾವಿಡ ಪಕ್ಷಗಳ ಪ್ರಾಬಲ್ಯವನ್ನು ಕೊನೆಗೊಳಿಸಿ ಹೊಸ ರಾಜಕೀಯ ಇತಿಹಾಸ ಸೃಷ್ಟಿಸಿದೆ. ಇಂತಹ ಹೈವೋಲ್ಟೇಜ್ ಚುನಾವಣೆಯಲ್ಲಿ ನಡೆದಿರುವ ಈ ಅಕ್ರಮದ ಹಿಂದೆ ಯಾವುದಾದರೂ ದೊಡ್ಡ ಜಾಲ ಕೆಲಸ ಮಾಡುತ್ತಿದೆಯೇ ಎಂಬ ನಿಟ್ಟಿನಲ್ಲಿ ಸಿಬಿಐ ಮತ್ತು ಕೇಂದ್ರ ಸಂಸ್ಥೆಗಳು ಈಗ ತನಿಖೆಯನ್ನು ತೀವ್ರಗೊಳಿಸಿವೆ. ಅಧಿಕಾರಿಗಳು ಇವರ ಪ್ರಯಾಣದ ದಾಖಲೆಗಳು ಮತ್ತು ಹೂಡಿಕೆಗಳ ವಿವರಗಳನ್ನು ಪರಿಶೀಲಿಸುತ್ತಿದ್ದಾರೆ.