100 ಪಟ್ಟು ಅಧಿಕ ಆದಾಯ, ಫೋನ್ ಡೇಟಾ ಡಿಲೀಟ್; ರಾಮ ಮಂದಿರ ದೇಣಿಗೆ ಕದ್ದವರ ಕೃತ್ಯ ಒಂದೊಂದೇ ಬೆಳಕಿಗೆ
Ram Temple Theft: ಉತ್ತರ ಪ್ರದೇಶದ ಅಯೋಧ್ಯೆ ಶ್ರೀ ರಾಮ ಮಂದಿರಕ್ಕೆ ಭಕ್ತರು ನೀಡಿದ ದೇಣಿಗೆಗಳ ಪೈಕಿ ಸುಮಾರು 7.75 ಕೋಟಿ ರುಪಾಯಿ ಕಳವಾಗಿದ್ದು, ಎಸ್‌ಐಟಿ ಈ ಬಗ್ಗೆ ತನಿಖೆ ಕೈಗೆತ್ತಿಕೊಂಡಿದೆ. ಈಗಾಗಲೇ 8 ಆರೋಪಿಗಳನ್ನು ಬಂಧಿಸಲಾಗಿದ್ದು, ಅವರ ಆದಾಯದಲ್ಲಿ ಹಲವು ಪಟ್ಟು ಏರಿಕೆ ದಾಖಲಾಗಿದ್ದು ಕಂಡು ಬಂದಿದೆ. ಈ ಮಧ್ಯೆ ಆರೋಪಿಗಲ ಮನೆಯವರನ್ನೂ ವಿಚಾರಣೆಗೆ ಒಳಪಡಿಸಲಾಗಿದೆ.
ಅಯೋಧ್ಯೆ ರಾಮ ಮಂದಿರ (ಸಂಗ್ರಹ ಚಿತ್ರ) -
ಲಖನೌ, ಜೂ. 28: ಉತ್ತರ ಪ್ರಬದೇಶದ ಅಯೋಧ್ಯೆ ಶ್ರೀ ರಾಮ ಮಂದಿರ ನಿರ್ಮಾಣಕ್ಕಾಗಿ ದೇಶ-ವಿದೇಶದ ರಾಮ ಭಕ್ತರು ನೀಡಿದ್ದ ನಗದು, ಚಿನ್ನ-ಬೆಳ್ಳಿ ದೇಣಿಗೆಯಲ್ಲಿ ಕೋಟ್ಯಂತರ ರುಪಾಯಿ ಲೂಟಿಯಾಗಿದ್ದು, ತನಿಖೆಗೆ ವಿಶೇಷ ತನಿಖಾ ತಂಡ (SIT) ರಚಿಸಲಾಗಿದೆ. ತನಿಖೆ ಮುಂದುವರಿದಂತೆ ಬೆಚ್ಚಿ ಬೀಳಿಸುವ ವಿವರ ಹೊರ ಬೀಳುತ್ತಿದೆ (Ram Temple Theft). ದೇಣಿಗೆ ಎಣಿಕೆ ಪ್ರಕಿಯೆ ವೇಳೆ ನಿಗದಿಪಡಿಸಿದ ಪ್ರಮಾಣದಲ್ಲಿ ಭದ್ರತಾ ಸಿಬ್ಬಂದಿ ಇರುತ್ತಿರಲಿಲ್ಲ. ದೇಣಿಗೆ ಎಣಿಸುವ ಕೋಣೆಗೆ ಪ್ರವೇಶಿಸುವ ಮತ್ತು ಅಲ್ಲಿಂದ ಹೊರ ಬೀಳುವವರನ್ನು ಪ್ರತಿ ಬಾರಿಯೂ ಪರಿಶೀಲಿಸುತ್ತಿರಲಿಲ್ಲ ಎನ್ನುವುದು ಗೊತ್ತಾಗಿದೆ. ಜತೆಗೆ ಈ ಹಗರಣದಲ್ಲಿ ಭಾಗಿಯಾದವರ ಆದಾಯ ಕಡಿಮೆ ಅವಧಿಯಲ್ಲೇ 100 ಪಟ್ಟು ಬೆಳವಣಿಗೆ ದಾಖಲಿಸಿದೆ ಎಂದು ತನಿಖಾಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಅಲ್ಲದೆ ಹಲವರು ಭೂಮಿ, ಫ್ಯಾಟ್‌ಗಳು ಮತ್ತು ಹೋಟೆಲ್ ಸೇರಿ ದುಬಾರಿ ಆಸ್ತಿಗಳನ್ನು ಖರೀದಿಸಿರುವುದೂ ಬೆಳಕಿಗೆ ಬಂದಿದೆ. ʼʼಕಾನೂನುಬದ್ಧ ಆದಾಯದ ಮೂಲಗಳಿಂದ ಇವನ್ನು ಖರೀದಿಸಲು ಸಾಧ್ಯವೇ ಇಲ್ಲʼʼ ಎಂದು ಅಧಿಕಾರಿಗಳು ತಿಳಿಸಿದ್ದು, ಹಗರಣದ ವ್ಯಾಪ್ತಿ ಇನ್ನಷ್ಟು ಹೆಚ್ಚುವ ಸಾಧ್ಯತೆ ಇದೆ.
ರಾಮ ಮಂದಿರ ಕಳವು ಪ್ರಕರಣ: ಸಿಸಿಟಿವಿ ತಿರುಚಿದ ಶಂಕೆ, SITಗೆ ಮಹತ್ವದ ಸುಳಿವು
ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ಗೆ ಸಂಬಂಧಿಸಿದ ವಾಹನಗಳ ಮಾಜಿ ಚಾಲಕ ರಾಮಶಂಕರ್ ಯಾದವ್ (ಟಿನ್ನು ಯಾದವ್) ಸೇರಿ ಶಂಕಿತ 30 ಮಂದಿಯ ವಿಚಾರಣೆ ಮುಂದುವರಿದಿದೆ. ಕದ್ದ ಹಣ ಹಂಚಿಕೊಳ್ಳುವ ವೇಳೆ ಉಂಟಾದ ವಿವಾದದಿಂದ ದೇಶವನ್ನೇ ಬೆಚ್ಚಿ ಬೀಳಿಸಿದ ಕಳವು ಪ್ರಕರಣ ಬೆಳಕಿಗೆ ಬಂದಿದೆ. ಶಂಕಿತರು ಸಿಸಿಟಿವಿ ಕ್ಯಾಮರಾ ಫೋಟೇಜ್ ಸೇರಿ ಡಿಜಿಟಲ್ ಸಾಕ್ಷ್ಯಗಳನ್ನು ಡಿಲೀಟ್ ಮಾಡಲು ಯತ್ನಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ. ದೇಣಿಗೆ ಕಳವು ಪ್ರಕರಣದ ತನಿಖೆಯ ಆರಂಭವಾಗುತ್ತಿದ್ಧಂತೆ ಆರೋಪಿಗಳು ಕಾರ್ಯ ಪ್ರವೃತ್ತರಾಗಿದ್ದು, ಹಲವರು ತಮ್ಮ ಮೊಬೈಲ್ ಫೋನ್‌ಗಳಿಂದ ವಾಟ್ಸ್‌ಆ್ಯಪ್ ಚಾಟ್ ಮತ್ತು ಇತರ ಡೇಟಾವನ್ನು ಡಿಲೀಟ್ ಮಾಡಿದ್ದರೆ, ಇನ್ನು ಕೆಲವರು ಮೊಬೈಲ್ ಫೋನ್‌ಗಳನ್ನು ಸಂಪೂರ್ಣವಾಗಿ ಫಾರ್ಮ್‌ಮ್ಯಾಟ್ ಮಾಡಿದ್ದಾರೆ.
ಹಲವು ಲೋಪ-ದೋಷ ಪತ್ತೆ
ಪೊಲೀಸರು ಸಿಸಿಟಿವಿ ಕ್ಯಾಮರಾ ದೃಶ್ಯಾವಳಿ, ಮೊಬೈಲ್ ಫೋನ್ ಮತ್ತು ಎಲೆಕ್ಟ್ರಾನಿಕ್ ಸಾಕ್ಷ್ಯಗಳ ಆಧಾರದಲ್ಲಿ ತನಿಖೆ ನಡೆಸುತ್ತಿದ್ದಾರೆ. ಈ ವೇಳೆ ದೇವಸ್ಥಾನದಲ್ಲಿ ಅಳವಡಿಸಿದ್ದ ಸುರಕ್ಷತಾ ಕ್ರಮಗಳ ಬಗ್ಗೆಯೂ ಗಂಭೀರ ಕಳವಳ ಮೂಡಿದೆ. ಹೀಗಾಗಿ ದೇವಸ್ಥಾನದ ಭದ್ರತಾ ವ್ಯವಸ್ಥೆಗಳ ಮೇಲೆ ತನಿಖೆಯನ್ನು ಕೇಂದ್ರೀಕರಿಸಲಾಗಿದೆ. ಕಂಟ್ರೋಲ್ ರೂಮ್ ಇನ್‌ಚಾರ್ಜ್ ಮತ್ತು ಭದ್ರತಾ ಸಿಬ್ಬಂದಿಯನ್ನೂ ವಿಚಾರಣೆಗೆ ಒಳಪಡಿಸಲಾಗಿದೆ.
ಕ್ಲೀನ್ ಚಿಟ್ ನೀಡಿಲ್ಲ
ಪ್ರಕರಣದಲ್ಲಿ ಟ್ರಸ್ಟ್ ಅಧಿಕಾರಿಗಳ ಪಾತ್ರದ ಕುರಿತೂ ತನಿಖೆ ನಡೆಸಲಾಗುತ್ತಿದೆ. ಟ್ರಸ್ಟ್‌ಗೆ ಸಂಬಂಧಿಸಿದ ಉನ್ನತ ಅಧಿಕಾರಿಗಳಿಗೆ ಇದುವರೆಗೆ ಕ್ಲೀನ್ ಚಿಟ್ ನೀಡಿಲ್ಲ ಎಂದು ಮೂಲಗಳು ಖಚಿತ ಪಡಿಸಿವೆ. ಅವಿನಾಶ್ ಶುಕ್ಲಾ, ಅನುಕಲ್ಪ್ ಮಿಶ್ರ, ಲವ್‌ಕುಶ್ ಮಿಶ್ರ, ಮನೀಶ್ ಕುಮಾರ್ ಯಾದವ್, ಕರುಣೇಶ್ ಪಾಂಡೆ, ರಾಮ್ ಶಂಕರ್ ಮಿಶ್ರ, ಸುಭಾಷ್ ಶ್ರೀವಾಸ್ತವ ಮತ್ತು ರಾಮಶಂಕರ್ ಆಲಿಯಾಸ್ ಟಿನ್ನು ಯಾದವ್ ಸೇರಿ 8 ಮಂದಿಯನ್ನು ಪ್ರಕರಣದಲ್ಲಿ ಬಂಧಿಸಲಾಗಿದೆ. ತನಿಖಾಧಿಕಾರಿಗಳು ಅವರ ಮನೆಗಳ ಮೇಲೆ ದಾಳಿ ನಡೆಸಿ ಪರಿಶೀಲಿಸುತ್ತಿದ್ದಾರೆ. ದೇಣಿಗೆ ನೀಡಿದವರ ನಗದು ಮತ್ತು ಆಭರಣಗಳನ್ನು ಇವರೇ ಲೆಕ್ಕ ಹಾಕುತ್ತಿದ್ದರು ಎನ್ನಲಾಗಿದ್ದು, ಅವರ ಮನೆಯವರನ್ನೂ ತನಿಖೆಗೆ ಒಳಪಡಿಸಲಾಗಿದೆ.
ಗುಪ್ತ ಕ್ಯಾಮೆರಾಗಳು, ಬ್ಯಾಂಕ್ ಖಾತೆ ಜಾಡು; ರಾಮ ಮಂದಿರ ದೇಣಿಗೆ ಲೂಟಿ ಬಯಲಾಗಿದ್ದೇಗೆ?
7.75 ಕೋಟಿ ರುಪಾಯಿ ಕಳವು
ಶಂಕಿತ ಅನುಕಲ್ಪ್‌ನ ಸಂಬಂಧಿಕರೊಬ್ಬರ ಪ್ರಕಾರ ರಾಮ ಮಂದಿರ ಟ್ರಸ್ಟ್‌ನಲ್ಲಿ ಉದ್ಯೋಗ ಸಿಕ್ಕ ಬಳಿಕ ಆತನ ಜೀವನಶೈಲಿಯೇ ಬದಲಾಗಿದೆ. ಮೂಲಗಳ ಪ್ರಕಾರ ರಾಮ ಮಂದಿರಕ್ಕೆ ಬಂದ ದೇಣಿಗೆಗಳ ಪೈಕಿ ಸುಮಾರು 7.75 ಕೋಟಿ ರುಪಾಯಿ ಕಳವಾಗಿದ್ದು, ಈಗಾಗಲೇ 80 ಲಕ್ಷ ರುಪಾಯಿ ಪತ್ತೆ ಹಚ್ಚಲಾಗಿದೆ. ʼʼಬಂಧಿತ 8 ಮಂದಿ ನಗದು ಕಳವು ಮಾಡುತ್ತಿರುವ ದೃಶ್ಯ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದೆʼʼ ಎಂದು ಪೊಲೀಸರು ತಿಳಿಸಿದ್ದಾರೆ. ತಪ್ಪು ಮಾಡಿದವರು ಎಷ್ಟೇ ಪ್ರಭಾವಿಗಳಾಗಿದ್ದರೂ ಕಠಿಣ ಶಿಕ್ಷೆ ನೀಡುವುದಾಗಿ ಈಗಾಗಲೇ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಪ್ರಕಟಿಸಿದ್ದಾರೆ. ಈ ಪ್ರಕರಣದ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಪ್ರತಿಕ್ರಿಯಿಸುವಂತೆ ಕಾಂಗ್ರೆಸ್ ಆಗ್ರಹಿಸಿದೆ.
ದೇಶದ ಇನ್ನಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.
ʼಪ್ರವಾಸಿ ಪ್ರಪಂಚʼ ವೆಬ್‌ಸೈಟ್‌ಗೆ ಭೇಟಿ ನೀಡಲು ಇಲ್ಲಿ ಕ್ಲಿಕ್ ಮಾಡಿ.