ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ದೆಹಲಿ ವಿಶ್ವವಿದ್ಯಾನಿಲಯದ ವಿದ್ಯಾರ್ಥಿ ಸಂಘದ ನೂತನ ಅಧ್ಯಕ್ಷ ಎಬಿವಿಪಿಯ ಯಶ್ ದಬಾಸ್ ಯಾರು? ಏನಿವರ ಹಿನ್ನೆಲೆ?

Yash Dabas: ದೆಹಲಿ ವಿಶ್ವವಿದ್ಯಾಲಯ ವಿದ್ಯಾರ್ಥಿ ಸಂಘದ ಅಧ್ಯಕ್ಷರಾಗಿ ಎಬಿವಿಪಿ ಅಭ್ಯರ್ಥಿ ಯಶ್ ದಬಾಸ್ ಆಯ್ಕೆಯಾಗಿದ್ದಾರೆ. 24,576 ಮತಗಳನ್ನು ಪಡೆದ ಅವರು ಎನ್‌ಎಸ್‌ಯುಐ ಅಭ್ಯರ್ಥಿ ವಿಜಯ್ ಶಂಕರ್ ಮೀನಾ ಅವರನ್ನು 2,053 ಮತಗಳ ಅಂತರದಿಂದ ಸೋಲಿಸಿದ್ದಾರೆ. ಅಂತಾರಾಷ್ಟ್ರೀಯ ಟೆನಿಸ್ ಪಂದ್ಯಾವಳಿಗಳಲ್ಲಿ ಭಾಗವಹಿಸಿರುವ ದಬಾಸ್ ಪ್ರಸ್ತುತ ದೆಹಲಿ ವಿಶ್ವವಿದ್ಯಾಲಯದಲ್ಲಿ ಬೌದ್ಧ ಅಧ್ಯಯನದಲ್ಲಿ ಎಂಎ ವ್ಯಾಸಂಗ ಮಾಡುತ್ತಿದ್ದಾರೆ.

ಎಬಿವಿಪಿಯ ಯಶ್ ದಬಾಸ್‌ಗೆ DUSU ಅಧ್ಯಕ್ಷ ಪಟ್ಟ

ಎಬಿವಿಪಿಯ ಯಶ್ ದಬಾಸ್‌ -

Profile
Sushmitha Jain Sep 19, 2026 9:08 PM

ನವದೆಹಲಿ, ಸೆ. 19: ದೆಹಲಿ ವಿಶ್ವವಿದ್ಯಾನಿಲಯ ವಿದ್ಯಾರ್ಥಿ ಸಂಘದ (DUSU) 2026-27ನೇ ಸಾಲಿನ ಅಧ್ಯಕ್ಷರಾಗಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್‌ (ABVP) ಅಭ್ಯರ್ಥಿ ಯಶ್ ದಬಾಸ್ (Yash Dabas) ಆಯ್ಕೆಯಾಗಿದ್ದಾರೆ. ಸೆಪ್ಟೆಂಬರ್‌ 19ರಂದು ನಡೆದ ಮತ ಎಣಿಕೆಯಲ್ಲಿ ದಬಾಸ್ ಒಟ್ಟು 24,576 ಮತಗಳನ್ನು ಪಡೆದು, ಕಾಂಗ್ರೆಸ್‌ ಬೆಂಬಲಿತ ರಾಷ್ಟ್ರೀಯ ವಿದ್ಯಾರ್ಥಿ ಒಕ್ಕೂಟದ (NSUI) ಅಭ್ಯರ್ಥಿ ವಿಜಯ್ ಶಂಕರ್ ಮೀನಾ ಅವರನ್ನು 2,053 ಮತಗಳ ಅಂತರದಿಂದ ಪರಾಭವಗೊಳಿಸಿದರು.

ದೆಹಲಿಯ ಕಂಜಾವಾಲಾ ಪ್ರದೇಶದವರಾದ 21 ವರ್ಷದ ಯಶ್ ದಬಾಸ್, ಶ್ರೀ ಗುರು ತೇಗ್ ಬಹದ್ದೂರ್ ಖಾಲ್ಸಾ ಕಾಲೇಜಿನಲ್ಲಿ ಪದವಿ ಶಿಕ್ಷಣ ಪೂರ್ಣಗೊಳಿಸಿದ್ದಾರೆ. ಪ್ರಸ್ತುತ ದೆಹಲಿ ವಿಶ್ವವಿದ್ಯಾಲನಿಯದ ಬೌದ್ಧ ಅಧ್ಯಯನ ವಿಭಾಗದಲ್ಲಿ ಎಂಎ ಪ್ರಥಮ ವರ್ಷದ ವಿದ್ಯಾರ್ಥಿ.

ಅಂತಾರಾಷ್ಟ್ರೀಯ ಮಟ್ಟದ ಟೆನಿಸ್ ಆಟಗಾರ

ವಿದ್ಯಾರ್ಥಿ ನಾಯಕ ಜತೆಗೆ ಯಶ್ ದಬಾಸ್ ಅಂತಾರಾಷ್ಟ್ರೀಯ ಮಟ್ಟದ ಟೆನಿಸ್ ಆಟಗಾರರೈ ಹೌದು. ಸ್ಪೇನ್‌, ಆಸ್ಟ್ರೇಲಿಯಾ ಮತ್ತು ಸೆರ್ಬಿಯಾದಲ್ಲಿ ನಡೆದ ಅಂತಾರಾಷ್ಟ್ರೀಯ ಟೆನಿಸ್ ಫೆಡರೇಷನ್‌ (ITF) ಸ್ಪರ್ಧೆಗಳಲ್ಲಿ ಅವರು ಭಾಗವಹಿಸಿದ್ದಾರೆ. ಅಲ್ಲದೆ CBSE ನ್ಯಾಷನಲ್ಸ್, SGFI ನ್ಯಾಷನಲ್ಸ್, ಖೇಲೋ ಇಂಡಿಯಾ ಮತ್ತು ಅಖಿಲ ಭಾರತ ವಿಶ್ವವಿದ್ಯಾಲಯ ಕ್ರೀಡಾಕೂಟಗಳಲ್ಲಿಯೂ ಸ್ಪರ್ಧಿಸಿದ್ದಾರೆ. 2023ರ ಅಖಿಲ ಭಾರತ ವಿಶ್ವವಿದ್ಯಾಲಯ ಕ್ರೀಡಾಕೂಟದಲ್ಲಿ ಸ್ಪರ್ಧಿಸಿದ್ದ ಅವರು, ಉತ್ತರ ಭಾರತ ವಿಶ್ವವಿದ್ಯಾಲಯ ಕ್ರೀಡಾಕೂಟದಲ್ಲಿ ದೆಹಲಿ ವಿಶ್ವವಿದ್ಯಾಲಯವನ್ನು ಪ್ರತಿನಿಧಿಸಿದ್ದರು.

ವಿದ್ಯಾರ್ಥಿಗಳ ಸಮಸ್ಯೆಗಳೇ ಪ್ರಮುಖ ಅಜೆಂಡ

ಚುನಾವಣಾ ಪ್ರಚಾರದ ಸಂದರ್ಭದಲ್ಲಿ ದಬಾಸ್ ವಿದ್ಯಾರ್ಥಿಗಳ ಸಮಸ್ಯೆಗಳನ್ನು ನೇರವಾಗಿ ಆಲಿಸುವುದಕ್ಕೆ ಆದ್ಯತೆ ನೀಡುವುದಾಗಿ ಹೇಳಿದ್ದರು. ವಿವಿಧ ಕಾಲೇಜುಗಳಿಗೆ ಭೇಟಿ ನೀಡಿದ ವೇಳೆ ವಿದ್ಯಾರ್ಥಿಗಳಿಂದ ಲಿಖಿತವಾಗಿ ದೂರುಗಳು ಹಾಗೂ ಸಲಹೆಗಳನ್ನು ಪಡೆದು, ಅವುಗಳ ಆಧಾರದ ಮೇಲೆ ತಮ್ಮ ಚುನಾವಣಾ ಪ್ರಣಾಳಿಕೆಯನ್ನು ರೂಪಿಸಿದ್ದಾಗಿ ಅವರು ತಿಳಿಸಿದ್ದರು.

ವಿದ್ಯಾರ್ಥಿಗಳ ಸುರಕ್ಷತೆ, ವಿಶೇಷವಾಗಿ ವಿದ್ಯಾರ್ಥಿನಿಯರ ಸುರಕ್ಷತೆ, ಕಾಲೇಜು ಹಾಸ್ಟೆಲ್‌ಗಳ ವ್ಯವಸ್ಥೆ ಮತ್ತು ವಿದ್ಯಾರ್ಥಿಗಳ ಮೂಲಭೂತ ಸೌಲಭ್ಯಗಳು ಅವರ ಪ್ರಚಾರದಲ್ಲಿ ಪ್ರಮುಖ ವಿಷಯಗಳಾಗಿದ್ದವು. ಇತ್ತೀಚೆಗೆ ದೆಹಲಿಯ ಸತ್ಯ ನಿಕೇತನ ಪ್ರದೇಶದಲ್ಲಿ ನಡೆದ ಕಟ್ಟಡ ಕುಸಿತದ ಘಟನೆಯ ಬಳಿಕ ವಿದ್ಯಾರ್ಥಿಗಳ ವಸತಿ ಮತ್ತು ಸುರಕ್ಷತೆ ಕುರಿತ ಚರ್ಚೆಯೂ ಚುನಾವಣೆಯಲ್ಲಿ ಪ್ರಮುಖವಾಗಿತ್ತು.

ನಾಲ್ಕು ಪ್ರಮುಖ ಹುದ್ದೆಗಳಲ್ಲಿ ಮೂರು ಎಬಿವಿಪಿಗೆ

ಈ ಬಾರಿಯ DUSU ಚುನಾವಣೆಯಲ್ಲಿ ನಾಲ್ಕು ಪ್ರಮುಖ ಹುದ್ದೆಗಳಿಗೆ ಚುನಾವಣೆ ನಡೆದಿತ್ತು. ಅಧ್ಯಕ್ಷ, ಕಾರ್ಯದರ್ಶಿ ಮತ್ತು ಜಂಟಿ ಕಾರ್ಯದರ್ಶಿ ಹುದ್ದೆಗಳನ್ನು ಎಬಿವಿಪಿ ಗೆದ್ದುಕೊಂಡಿದೆ. ಅಧ್ಯಕ್ಷರಾಗಿ ಯಶ್ ದಬಾಸ್, ಕಾರ್ಯದರ್ಶಿಯಾಗಿ ರಿಯಾ ಛವಾಡಿ ಹಾಗೂ ಜಂಟಿ ಕಾರ್ಯದರ್ಶಿಯಾಗಿ ಲಕ್ಷ್ಯ ರಾಜ್ ಸಿಂಗ್ ಆಯ್ಕೆಯಾಗಿದ್ದಾರೆ. ಉಪಾಧ್ಯಕ್ಷ ಸ್ಥಾನವನ್ನು ಸ್ವತಂತ್ರ ಅಭ್ಯರ್ಥಿ ದೀಪಾಂಶು ಶೋಕೀನ್ ಗೆದ್ದಿದ್ದಾರೆ.

ಉಪಾಧ್ಯಕ್ಷ ಸ್ಥಾನಕ್ಕೆ ದೀಪಾಂಶು ಶೋಕೀನ್ 30,615 ಮತಗಳನ್ನು ಪಡೆದು ಗೆಲುವು ಸಾಧಿಸಿದ್ದಾರೆ. ಅವರು ಎನ್‌ಎಸ್‌ಯುಐ ಟಿಕೆಟ್‌ ಸಿಗದ ಬಳಿಕ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದರು. ಚುನಾವಣೆಗೆ ಮುನ್ನ ದಬಾಸ್ ಅವರ ಶೈಕ್ಷಣಿಕ ದಾಖಲೆಗಳಿಗೆ ಸಂಬಂಧಿಸಿದ ಕೆಲವು ಪ್ರಶ್ನೆಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ್ದವು. ಈ ಆರೋಪಗಳನ್ನು ಎಬಿವಿಪಿ ಪ್ರಚಾರಾತ್ಮಕ ದಾಳಿ ಎಂದು ತಳ್ಳಿಹಾಕಿತ್ತು.