ʼʼಕೆಲವೇ ಗಂಟೆಗಳಲ್ಲಿ ಸಿಗಲಿದೆ ಗುಡ್‌ನ್ಯೂಸ್ʼʼ: ಹೊರ್ಮುಜ್ ಜಲಸಂಧಿ ಬಿಕ್ಕಟ್ಟು ಬಗೆಹರಿಯುವ ಸೂಚನೆ ನೀಡಿದ ಅಮೆರಿಕ ವಿದೇಶಾಂಗ ಕಾರ್ಯದರ್ಶಿ ಮಾರ್ಕೊ ರುಬಿಯೋ
Marco Rubio: ಭಾರತ ಪ್ರವಾಸದಲ್ಲಿರುವ ಅಮೆರಿಕ ವಿದೇಶಾಂಗ ಕಾರ್ಯದರ್ಶಿ ಮಾರ್ಕೊ ರುಬಿಯೋ ಜಗತ್ತಿಗೆ ಕೆಲವೇ ಗಂಟೆಗಲಲ್ಲಿ ಗುಡ್‌ನ್ಯೂಸ್ ಸಿಗಲಿದೆ ಎಂದು ಹೇಳುವ ಮೂಲಕ ಪಶ್ಚಿಮ ಏಷ್ಯಾ ಸಂಘರ್ಷ ಬಗೆಹರಿಯುವ ಸೂಚನೆ ನೀಡಿದ್ದಾರೆ. ದೆಹಲಿಯಲ್ಲಿ ಅವರು ಭಾರತದ ವಿದೇಶಾಂಗ ಸಚಿವ ಎಸ್. ಜೈಶಂಕರ್ ಜತೆ ಜಂಟಿ ಪ್ರತಿಗಾಗೋಷ್ಠಿ ನಡೆಸಿ ಮಾತನಾಡಿದರು.
ಹೊರ್ಮುಜ್ ಜಲಸಂಧಿ ಮತ್ತು ಮಾರ್ಕೋ ರುಬಿಯೋ (ಸಂಗ್ರಹ ಚಿತ್ರ) -
ದೆಹಲಿ, ಮೇ 24: ಕೆಲವು ದಿನಗಳಿಂದ ಜಗತ್ತನ್ನೇ ಹಿಂಡಿ ಹಿಪ್ಪೆ ಮಾಡಿರುವ, ಆರ್ಥಿಕ ವ್ಯವಸ್ಥೆಯನ್ನೇ ಬುಡಮೇಲು ಮಾಡಿರುವ, ಇಂಧನ ಸಾಗಾಟದ ಮೇಲೆ ಪರಿಣಾಮ ಬೀರಿರುವ ಪಶ್ಚಿಮ ಏಷ್ಯಾದ ಸಂಘರ್ಷಕ್ಕೆ (Iran War) ಶೀಘ್ರದಲ್ಲೇ ತೆರೆ ಬೀಳುವ ಸಾಧ್ಯತೆ ದಟ್ಟವಾಗಿದೆ. ಹೊರ್ಮುಜ್ ಜಲಸಂಧಿಯ ಬಿಕ್ಕಟ್ಟು ಅಂತ್ಯವಾಗುವ ಸೂಚನೆಯನ್ನು ದೆಹಲಿಯಲ್ಲಿ ಅಮೆರಿಕ ವಿದೇಶಾಂಗ ಕಾರ್ಯದರ್ಶಿ ಮಾರ್ಕೊ ರುಬಿಯೋ (Marco Rubio) ನೀಡಿದ್ದಾರೆ. ಕೆಲವೇ ಗಂಟೆಗಳಲ್ಲಿ ಜಗತ್ತಿಗೆ ಸಿಹಿ ಸುದ್ದಿಯೊಂದು ಹೊರ ಬರಲಿದೆ ಎನ್ನುವ ಮೂಲಕ ಇರಾನ್ ಜತೆಗಿನ ಶಾಂತಿ ಒಪ್ಪಂದ ಜಾರಿಗೆ ಬರಲಿದೆ ಎಂದು ಪರೋಕ್ಷವಾಗಿ ತಿಳಿಸಿದ್ದಾರೆ. ಇದರಿಂದ ಜಗತ್ತನ್ನು ಕಾಡುತ್ತಿರುವ ಇಂಧನ ಬಿಕ್ಕಟ್ಟು ಬಗೆಹರಿಯಲಿದೆ.
ʼʼಮುಂದಿನ ಕೆಲವೇ ಗಂಟೆಗಳಲ್ಲಿ ಜಗತ್ತಿಗೆ ಗುಡ್‌ನ್ಯೂಸ್ ಸಿಗುವ ಸಾಧ್ಯತೆ ಇದೆʼʼ ಎಂದು ಮಾರ್ಕೋ ರುಬಿಯೋ ಹೇಳಿದ್ದಾರೆ. ಅಮೆರಿಕ-ಇಸ್ರೇಲ್ ಜಂಟಿ ದಾಳಿಗೆ ಪ್ರತಿಯಾಗಿ ಇರಾನ್ ತಡೆದಿದ್ದ ಹೊರ್ಮುಜ್ ಜಲಸಂಧಿಯ ಬಿಕ್ಕಟ್ಟನ್ನು ಈ ಶಾಂತಿ ಒಪ್ಪಂದವು ಬಗೆಹರಿಸಲಿದೆ ಎಂದು ರುಬಿಯೊ ತಿಳಿಸಿದ್ದಾರೆ.
ʼʼಈ ಒಪ್ಪಂದವು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಏನನ್ನೂ ಉದ್ದೇಶಿಸಿದ್ದಾರೋ ಆ ಕಾರ್ಯವನ್ನು ಈಡೇರಿಸಲಿದೆ. ಇನ್ನು ಮುಂದೆ ಇರಾನಿನ ಪರಮಾಣು ಶಸ್ತ್ರಾಸ್ತ್ರದ ಬಗ್ಗೆ ಯಾರೂ ಭಯಪಡಬೇಕಾಗಿಲ್ಲ" ಎಂದು ಅವರು ವಿವರಿಸಿದ್ದಾರೆ. ಇರಾನ್ ಎಂದಿಗೂ ಪರಮಾಣು ಶಸ್ತ್ರಾಸ್ತ್ರ ಹೊಂದಲು ಸಾಧ್ಯವಿಲ್ಲ ಎನ್ನುವುದನ್ನು ಖಚಿತಪಡಿಸಿಕೊಳ್ಳುವುದೇ ಅಮೆರಿಕದ ಅಂತಿಮ ಗುರಿ ಎಂದೂ ಅವರು ಪ್ರತಿಪಾದಿಸಿದ್ದಾರೆ.
ಮಾರ್ಕೋ ರುಬಿಯೋ ಅವರ ಪತ್ರಿಕಾಗೋಷ್ಠಿ:
Addressing the media alongside US @SecRubio.
— Dr. S. Jaishankar (@DrSJaishankar) May 24, 2026
🇮🇳 🇺🇸 https://t.co/Qg2qZY5qBj
"ಇರಾನ್ ಎಂದಿಗೂ ಪರಮಾಣು ಶಸ್ತ್ರಾಸ್ತ್ರ ಹೊಂದಲು ಸಾಧ್ಯವಿಲ್ಲ. ಹೊರ್ಮುಜ್ ಜಲಸಂಧಿಯು ಅಂತಾರಾಷ್ಟ್ರೀಯ ಜಲಮಾರ್ಗ. ಈಗ ಇರಾನ್ ಮಾಡುತ್ತಿರುವುದು ಮೂಲತಃ ಅಂತಾರಾಷ್ಟ್ರೀಯ ಕಾನೂನಿನ ಉಲ್ಲಂಘನೆ. ಅಂತಾರಾಷ್ಟ್ರೀಯ ಜಲಮಾರ್ಗವನ್ನು ಬಳಸಿಕೊಂಡು ವಾಣಿಜ್ಯ ಹಡಗುಗಳನ್ನು ನಾಶಮಾಡುವ ಬೆದರಿಕೆ ಹಾಕುತ್ತಿದೆ" ಎಂದು ಅವರು ದೂರಿದ್ದಾರೆ. ಭಾರತದ ವಿದೇಶಾಂಗ ಸಚಿವ ಎಸ್. ಜೈಶಂಕರ್ ಅವರೊಂದಿಗೆ ಆಯೋಜಿಸಿದ್ದ ಜಂಟಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಅವರು ಮಾತನಾಡಿದರು.
ಹೊರ್ಮುಜ್ ಜಲಸಂಧಿ ದಾಟಲು ಯತ್ನಿಸಿದ ಭಾರತದ 2 ಹಡಗುಗಳ ಮೇಲೆ ಇರಾನ್ ಗುಂಡಿನ ದಾಳಿ
ಡೊನಾಲ್ಡ್ ಟ್ರಂಪ್ ಹೇಳಿದ್ದೇನು?
ಇಸ್ರೇಲ್ ಮತ್ತು ಇತರ ಮಿತ್ರರಾಷ್ಟ್ರಗಳೊಂದಿಗೆ ಚರ್ಚಿಸಿದ ನಂತರ ಇರಾನ್ ಜತೆ ಶಾಂತಿ ಒಪ್ಪಂದದ ಮಾತುಕತೆ ನಡೆಸಲಾಗಿದೆ ಎಂದು ಶನಿವಾರ (ಮೇ 23) ಡೊನಾಲ್ಡ್ ಟ್ರಂಪ್ ಹೇಳಿದ್ದರು. ಇದು ಮೂರು ತಿಂಗಳ ಕಾಲ ನಡೆದ ಯುದ್ಧವನ್ನು ಕೊನೆಗೊಳಿಸಲಿದೆ ಎಂದು ವಿಶೇಷಕರು ಅಭಿಪ್ರಾಯಪಟ್ಟಿದ್ದಾರೆ. ತಮ್ಮ ಟ್ರೂತ್ ಸೋಶಿಯಲ್ ಪ್ಲಾಟ್‌ಫಾರ್ಮ್‌ನಲ್ಲಿ ಪೋಸ್ಟ್ ಮಾಡಿದ ಟ್ರಂಪ್, ಔಪಚಾರಿಕ ಘೋಷಣೆಗೆ ಮುಂಚಿತವಾಗಿ ಒಪ್ಪಂದದ ಅಂತಿಮ ವಿವರಗಳನ್ನು ಚರ್ಚಿಸಲಾಗುತ್ತಿದೆ ಎಂದು ತಿಳಿಸಿದ್ದರು. ಪ್ರಸ್ತಾವಿತ ಒಪ್ಪಂದದ ಭಾಗವಾಗಿ ಹೊರ್ಮುಜ್ ಜಲಸಂಧಿಯನ್ನು ಮತ್ತೆ ತೆರೆಯಲಾಗುವುದು ಎಂದು ಹೇಳಿದ್ದರು.
ಹೊರ್ಮುಜ್ ಜಲಸಂಧಿಯಲ್ಲಿ ಸುರಕ್ಷಿತ ಸಾಗಣೆ ಪುನಃಸ್ಥಾಪನೆಗೆ ಭಾರತ ಕರೆ: ಹಡಗುಗಳ ಮೇಲಿನ ದಾಳಿಗೆ ಖಂಡನೆ
ನಿರಾಕರಿಸಿದ ಇರಾನ್
ಅದಾಗ್ಯೂ ಟ್ರಂಪ್ ಅವರ ಹೇಳಿಕೆಯನ್ನು ಇರಾನ್ ತಿರಸ್ಕರಿಸಿದೆ. ಟೆಹ್ರಾನ್ ಹೊರ್ಮುಜ್ ಜಲಸಂಧಿ ಮೇಲಿನ ನಿಯಂತ್ರಣವನ್ನು ಮುಂದುವರಿಸುತ್ತದೆ ಎಂದು ತಿಳಿಸಿದೆ. ಇರಾನ್‌ನ ಕ್ರಾಂತಿಕಾರಿ ಗಾರ್ಡ್ (IRGC) ಟ್ರಂಪ್ ಅವರ ಪೋಸ್ಟ್ ಅನ್ನು ʼಪ್ರಚಾರದ ಭಾಗʼ ಎಂದು ಕರೆದಿದೆ. ಟೆಹ್ರಾನ್‌ನ ಪರಮಾಣು ಕಾರ್ಯಕ್ರಮದ ಬಗ್ಗೆ ಯಾವುದೇ ತೀರ್ಮಾನಕ್ಕೆ ಬರಲಾಗಿಲ್ಲ ಎಂದು ಹೇಳಿದ್ದಾಗಿ ಫಾರ್ಸ್ ಸುದ್ದಿ ಸಂಸ್ಥೆ ವರದಿ ಮಾಡಿದೆ.