ಹೊರ್ಮುಜ್ ಜಲಸಂಧಿ ದಾಟಲು ಯತ್ನಿಸಿದ ಭಾರತದ 2 ಹಡಗುಗಳ ಮೇಲೆ ಇರಾನ್ ಗುಂಡಿನ ದಾಳಿ
Strait of Hormuz: ಇರಾನ್ ಮತ್ತೆ ಹೊರ್ಮುಜ್ ಜಲಸಂಧಿಯನ್ನು ಮುಚ್ಚಿದ್ದು, ಇದರ ಮೂಲಕ ಹಾದು ಹೋಗಲು ಯತ್ನಿಸಿದ ಭಾರತದ ಧ್ವಜ ಹೊತ್ತ 2 ಹಡಗುಗಳ ಮೇಲೆ ಸೇರಿ 2 ವಾಣಿಜ್ಯ ಹಡಗಿನ ಮೇಲೆ ಗುಂಡಿನ ದಾಳಿ ನಡೆಸಿದೆ. ಸದ್ಯ ಕೇಂದ್ರ ಈ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.
ಸಾಂದರ್ಭಿಕ ಚಿತ್ರ -
ಟೆಹರಾನ್, ಏ. 18: ಇರಾನ್ ಮತ್ತೆ ಹೊರ್ಮುಜ್ ಜಲಸಂಧಿಯನ್ನು (Strait of Hormuz) ಮುಚ್ಚಿದ್ದು, ಇದರ ಮೂಲಕ ಹಾದು ಹೋಗಲು ಯತ್ನಿಸಿದ ಭಾರತದ ಧ್ವಜ ಹೊತ್ತ 2 ಹಡಗುಗಳ ಮೇಲೆ ಗುಂಡಿನ ದಾಳಿ ನಡೆಸಿದೆ ಎಂದು ಮೂಲಗಳು ತಿಳಿಸಿವೆ. ಇರಾನ್ ಮತ್ತು ಅಮೆರಿಕ ನಡುವಿನ ದ್ವಂದ್ವ ನಿಲುವಿನ ಮಧ್ಯೆ ಬೆಳವಣಿಗೆ ಸಂಭವಿಸಿದ್ದು, ಜಾಗತಿಕ ಇಂಧನ ಪೂರೈಕೆಯ ಮೇಲೆ ಮತ್ತೆ ಹೊಡೆತ ಬೀಳುವ ಆತಂಕ ಎದುರಾಗಿದೆ. ಸದ್ಯ ಕೇಂದ್ರ ಈ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.
ಹೊರ್ಮುಜ್ ಜಲಸಂಧಿಯ ಮೂಲಕ ಸಾಗುತ್ತಿದ್ದ 2 ವಾಣಿಜ್ಯ ಹಡಗುಗಳ ಮೇಲೆ ಇರಾನ್‌ನ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್‌ನ 2 ಗನ್ ಬೋಟ್‌ಗಳು ಗುಂಡು ಹಾರಿಸಿದವು ಎಂದು ಯುನೈಟೆಡ್ ಕಿಂಗ್‌ಡಮ್ ಮ್ಯಾರಿಟೈಮ್ ಟ್ರೇಡ್ ಆಪರೇಷನ್ಸ್ (UKMTO) ಕೇಂದ್ರ ತಿಳಿಸಿದೆ. ಹಡಗು ಮತ್ತು ಅದರಲ್ಲಿನ ಸಿಬ್ಬಂದಿ ಸುರಕ್ಷಿತವಾಗಿದ್ದಾರೆ ಎಂದು ಹೇಳಿದೆ.
ಹೊರ್ಮುಜ್ ಜಲಸಂಧಿಯಲ್ಲಿ ಗುಂಡಿನ ದಾಳಿ:
🇮🇷🇮🇳 An Indian oil tanker was fired upon by IRGC Navy gunboats and forced to turn around, after attempting to cross the Strait of Hormuz without Iranian approval pic.twitter.com/3GdGJuKw8w
— Rohitash Mahur ( Lodhi ) (@MahurRohitash) April 18, 2026
ಘಟನೆ ಬಳಿಕ ಸುಮಾರು 2 ಮಿಲಿಯನ್ ಬ್ಯಾರೆಲ್‌ಗಳಷ್ಟು ಇರಾಕ್ ತೈಲವನ್ನು ಸಾಗಿಸುತ್ತಿದ್ದ ಭಾರತೀಯ ಧ್ವಜ ಹೊತ್ತ ಅತಿ ದೊಡ್ಡ ಕಚ್ಚಾ ವಾಹಕವೂ ಸೇರಿ ಹಲವು ಹಡಗುಗಳು ಇದೀಗ ಯುಟರ್ನ್ ತೆಗೆದುಕೊಂಡಿವೆ ಎಂದು ಟ್ಯಾಂಕರ್‌ಟ್ರಾಕರ್ಸ್ ವರದಿ ಮಾಡಿದೆ. ಹಡಗುಗಳು ಜಲಸಂಧಿ ದಾಟಲು ಯತ್ನಿಸಿಸುತ್ತಿದ್ದಂತೆ ಐಆರ್‌ಜಿಸಿ ಗನ್‌ಬೋಟ್‌ಗಳು ಗುಂಡು ಹಾರಿಸಿದವು ಎಂದು ಮೂಲಗಳು ತಿಳಿಸಿವೆ.
ಏನಿದು ಇರಾನ್‌ನ 'ಪರಮಾಣು ಧೂಳು'? ಟ್ರಂಪ್ ಕಣ್ಣಿಟ್ಟಿರೋದ್ಯಾಕೆ?
ಕ್ವೆಶ್ಮ್ ಮತ್ತು ಲಾರಕ್ ದ್ವೀಪಗಳ ನಡುವಿನ ಸಮುದ್ರದಲ್ಲಿ ಗುಂಡಿನ ಚಕಮಕಿ ನಡೆದಿರುವುದಾಗಿ ರಾಯಿಟರ್ಸ್ ವರದಿ ಮಾಡಿದೆ. ಇದರಿಂದ ಹಡಗುಗಳು ಜಲಸಂಧಿ ದಾಟದೆ ಹಿಂತಿರುಗಿದವು ಎಂದು ಅಧಿಕಾರಿಗಳು ತಿಳಿಸಿದ್ದಾರೆ. "ಎಲ್ಲ ಹಡಗುಗಳ ಗಮನಕ್ಕೆ. ಅಮೆರಿಕ ಸರ್ಕಾರವು ತನ್ನ ಬದ್ಧತೆಯನ್ನು ಪೂರೈಸಲು ವಿಫಲವಾದ ಕಾರಣ, ಇರಾನ್ ಹೊರ್ಮುಜ್ ಜಲಸಂಧಿಯನ್ನು ಮತ್ತೆ ಸಂಪೂರ್ಣವಾಗಿ ಮುಚ್ಚಿದೆ. ಯಾವುದೇ ರೀತಿಯ, ಯಾವುದೇ ದೇಶದ ಹಡಗು ಹೊರ್ಮುಜ್ ಜಲಸಂಧಿಯ ಮೂಲಕ ಹಾದುಹೋಗಲು ಅನುಮತಿ ನೀಡುವುದಿಲ್ಲ" ಎಂದು ಇರಾನ್ ಘೋಷಿಸಿದೆ. ಅದರ ಭಾಗವಾಗಿಯೇ ಈ ದಾಳಿ ನಡೆದಿದೆ ಎನ್ನಲಾಗಿದೆ.
ಯಾಕಾಗಿ ಮತ್ತೆ ನಿರ್ಬಂಧ?
ಇರಾನ್‌ನ ಜಂಟಿ ಮಿಲಿಟರಿ ಕಮಾಂಡ್ ಹೊರ್ಮುಜ್ ಜಲಸಂಧಿಯ ನಿಯಂತ್ರಣವು ಅದರ ಹಿಂದಿನ ಸ್ಥಿತಿಗೆ ಮರಳಿದೆ ಎಂದು ಹೇಳಿದೆ. ತನ್ನ ಬಂದರುಗಳ ಮೇಲಿನ ಅಮೆರಿಕದ ದಿಗ್ಬಂಧನ ಜಾರಿಯಲ್ಲಿರುವವರೆಗೆ ಸಾಗಣೆಯನ್ನು ನಿರ್ಬಂಧಿಸುವುದನ್ನು ಮುಂದುವರಿಸುತ್ತದೆ ಎಂದು ಇರಾನ್ ಎಚ್ಚರಿಸಿದೆ. ಕದನ ವಿರಾಮದ ನಂತರ ಇರಾನ್ ತೈಲ ಟ್ಯಾಂಕರ್‌ಗಳು ಮತ್ತು ವಾಣಿಜ್ಯ ಹಡಗುಗಳಿಗೆ ಸೀಮಿತ ಅನುಮತಿ ನೀಡಿತ್ತು. ಅದನ್ನು ಈಗ ಹಿಂಪಡೆಯಲಾಗಿದೆ.
ಹೊರ್ಮುಜ್ ಜಲಸಂಧಿಯಲ್ಲಿ ವಾಣಿಜ್ಯ ಹಡಗು ಮೇಲೆ ಇರಾನ್‌ನಿಂದ ಗುಂಡಿನ ದಾಳಿ
ಲೆಬನಾನ್- ಇಸ್ರೇಲ್ ನಡುವೆ 10 ದಿನಗಳ ಕದನ ವಿರಾಮ ಜಾರಿಯಾದ ನಂತರ ಇರಾನ್‌ನ ವಿದೇಶಾಂಗ ಸಚಿವ ಅಬ್ಬಾಸ್ ಅರಘ್ವಿ ಜಲಸಂಧಿಯನ್ನು ಮುಕ್ತವೆಂದು ಘೋಷಿಸಿದ ಕೇವಲ ಒಂದು ದಿನದ ನಂತರ ಈ ಬದಲಾವಣೆ ಸಂಭವಿಸಿದೆ. ಅಮೆರಿಕದೊಂದಿಗಿನ ಉದ್ವಿಗ್ನತೆ ಹೆಚ್ಚಾದಂತೆ ಇರಾನ್ ಮತ್ತೆ ನಿರ್ಬಂಧ ವಿಧಿಸಿದೆ. ಇರಾನಿನ ಬಂದರಿನ ಮೇಲೆ ಅಮೆರಿಕ ಹಿಡಿತ ಸಾಧಿಸುತ್ತಿದ್ಧಂತೆ ಮತ್ತೆ ಜಗತ್ತಿನ ಮೇಲೆ ತೈಲ ಬೆಲೆ ಏರಿಕೆಯ ಆತಂಕದ ಕಾರ್ಮೋಡ ಕವಿದಿದೆ.
ವಿದೇಶದ ಇನ್ನಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.
ʼಪ್ರವಾಸಿ ಪ್ರಪಂಚʼ ವೆಬ್‌ಸೈಟ್‌ಗೆ ಭೇಟಿ ನೀಡಲು ಇಲ್ಲಿ ಕ್ಲಿಕ್ ಮಾಡಿ.