ನೀಟ್ ಪ್ರಶ್ನೆಪತ್ರಿಕೆ ಸೋರಿಕೆ: ಸಂಸತ್ತಿನಲ್ಲಿ 18 ಗಂಟೆಗಳ ಚರ್ಚೆಗೂ ಸಿದ್ಧ ಎಂದ ಕೇಂದ್ರ ಸರ್ಕಾರ
ನೀಟ್ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣದ ಕುರಿತು ಸಂಸತ್ತಿನಲ್ಲಿ 12 ಅಥವಾ 18 ಗಂಟೆಗಳ ಸುದೀರ್ಘ ಚರ್ಚೆಗೆ ಸರ್ಕಾರ ಸಿದ್ಧ ಎಂದು ಜೆ.ಪಿ. ನಡ್ಡಾ ತಿಳಿಸಿದ್ದಾರೆ. ವಿದ್ಯಾರ್ಥಿಗಳ ಸಮಸ್ಯೆಯನ್ನು ರಾಜಕೀಯಗೊಳಿಸಬಾರದು ಎಂದು ಅವರು ಪ್ರತಿಪಕ್ಷಗಳಿಗೆ ಮನವಿ ಮಾಡಿದ್ದು, ಪ್ರತಿಯೊಂದು ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣದ ತನಿಖೆ ನಡೆಸುವುದಾಗಿ ಭರವಸೆ ನೀಡಿದ್ದಾರೆ. ಮತ್ತೊಂದೆಡೆ, ವಿದ್ಯಾರ್ಥಿಗಳ ಬೇಡಿಕೆಗಳು ನ್ಯಾಯಸಮ್ಮತವಾಗಿವೆ ಎಂದು ರಾಹುಲ್ ಗಾಂಧಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಜೆ.ಪಿ. ನಡ್ಡಾ -
ನವದೆಹಲಿ: ನೀಟ್ (NEET) ಪ್ರಶ್ನೆಪತ್ರಿಕೆ ಸೋರಿಕೆ ಹಾಗೂ ವಿದ್ಯಾರ್ಥಿಗಳ ಪ್ರತಿಭಟನೆ ಕುರಿತು ಸಂಸತ್ತಿನಲ್ಲಿ ಸಮಗ್ರ ಮತ್ತು ಸುದೀರ್ಘ ಚರ್ಚೆಗೆ ಕೇಂದ್ರ ಸರ್ಕಾರ (Centaral Government) ಸಂಪೂರ್ಣ ಸಿದ್ಧವಾಗಿದೆ ಎಂದು ರಾಜ್ಯಸಭೆಯ ಸದನ ನಾಯಕ ಹಾಗೂ ಕೇಂದ್ರ ಸಚಿವ ಜೆ.ಪಿ. ನಡ್ಡಾ (JP Nadda) ತಿಳಿಸಿದ್ದಾರೆ.
ಬಿಜೆಪಿ ಕೇಂದ್ರ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿದ ಅವರು, ವಿದ್ಯಾರ್ಥಿಗಳ ಸಮಸ್ಯೆಯನ್ನು ರಾಜಕೀಯ ಲಾಭಕ್ಕಾಗಿ ಬಳಸಬಾರದು ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಗೆ ತಿರುಗೇಟು ನೀಡಿದರು. "ಇದು ಅತ್ಯಂತ ಗಂಭೀರ ವಿಷಯ. ಇದರ ಬಗ್ಗೆ ಸಂಸತ್ತಿನಲ್ಲಿ ಆಳವಾದ ಚರ್ಚೆ ನಡೆಯಬೇಕು. 12 ಗಂಟೆಗಳಾಗಲಿ, 18 ಗಂಟೆಗಳಾಗಲಿ ಚರ್ಚೆಗೆ ನಾವು ಸಿದ್ಧರಿದ್ದೇವೆ" ಎಂದು ಹೇಳಿದರು.
ರಾಹುಲ್ ಗಾಂಧಿ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣಗಳನ್ನು ಆಯ್ದ ರಾಜ್ಯಗಳಲ್ಲಷ್ಟೇ ಪ್ರಸ್ತಾಪಿಸುತ್ತಿದ್ದು, ಕಾಂಗ್ರೆಸ್ ಹಾಗೂ ಪ್ರತಿಪಕ್ಷ ಆಡಳಿತದ ರಾಜ್ಯಗಳಲ್ಲಿ ನಡೆದ ಘಟನೆಗಳನ್ನು ಉದ್ದೇಶಪೂರ್ವಕವಾಗಿ ಕಡೆಗಣಿಸುತ್ತಿದ್ದಾರೆ ಎಂದು ನಡ್ಡಾ ಆರೋಪಿಸಿದರು. ಜಮ್ಮು-ಕಾಶ್ಮೀರ, ಹಿಮಾಚಲ ಪ್ರದೇಶ, ಜಾರ್ಖಂಡ್, ತೆಲಂಗಾಣ, ತಮಿಳುನಾಡು, ಪಶ್ಚಿಮ ಬಂಗಾಳ, ಪಂಜಾಬ್, ಕೇರಳ ಮತ್ತು ಕರ್ನಾಟಕ ಸೇರಿದಂತೆ ಹಲವು ರಾಜ್ಯಗಳಲ್ಲಿ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣಗಳು ನಡೆದಿವೆ ಎಂದು ಅವರು ಹೇಳಿದರು.
ದೆಹಲಿಯಲ್ಲಿ ಕೋಲಾಹಲ ಸೃಷ್ಟಿಸಿದ ಕಾಕ್ರೋಚ್ ಜನತಾ ಪಾರ್ಟಿಯ ಸಂಸತ್ ಚಲೋ: ಪೊಲೀಸರಿಂದ ಲಾಠಿಚಾರ್ಜ್
"ಪ್ರತಿ ಪ್ರಕರಣದ ತನಿಖೆಗೆ ಸರ್ಕಾರ ಬದ್ಧವಾಗಿದೆ. ಸತ್ಯವನ್ನು ದೇಶದ ಮುಂದೆ ತರುತ್ತೇವೆ. ವಿದ್ಯಾರ್ಥಿಗಳ ಭವಿಷ್ಯ ಎಲ್ಲರಿಗೂ ಮುಖ್ಯ. ಸರ್ಕಾರ ಮತ್ತು ಪ್ರತಿಪಕ್ಷಗಳು ಸೇರಿ ದೀರ್ಘಕಾಲಿಕ ಪರಿಹಾರ ಕಂಡುಹಿಡಿಯಬೇಕು" ಎಂದು ನಡ್ಡಾ ಕರೆ ನೀಡಿದರು.
ಇದೇ ವೇಳೆ, ಕಾಕ್ರೋಚ್ (CJP) ಪ್ರತಿನಿಧಿಗಳೊಂದಿಗೆ ನಡೆದ ಸಭೆ ಸೌಹಾರ್ದಯುತವಾಗಿತ್ತು ಎಂದು ಹೇಳಿದ ನಡ್ಡಾ, ಅವರು ತಮ್ಮ ಬೇಡಿಕೆಗಳನ್ನು ಲಿಖಿತ ರೂಪದಲ್ಲಿ ಸಲ್ಲಿಸಿದ್ದು, ಚರ್ಚೆಗೆ ಸರ್ಕಾರ ಯಾವಾಗಲೂ ಸಿದ್ಧವಿದೆ ಎಂದು ತಿಳಿಸಿದರು.
ಇನ್ನೊಂದೆಡೆ, ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವಿದ್ಯಾರ್ಥಿಗಳ ಪ್ರತಿಭಟನೆಗೆ ಬೆಂಬಲ ಸೂಚಿಸಿ, ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ ಅವರ ರಾಜೀನಾಮೆ ಸೇರಿದಂತೆ ವಿದ್ಯಾರ್ಥಿಗಳ ಬೇಡಿಕೆಗಳು "ಸಂಪೂರ್ಣ ನ್ಯಾಯಸಮ್ಮತ ಹಾಗೂ ರಾಜಿಯಾಗದಂತಹವು" ಎಂದು ಹೇಳಿದರು.
ಸರ್ಕಾರ ವಿದ್ಯಾರ್ಥಿಗಳ ಧ್ವನಿಯನ್ನು ಹತ್ತಿಕ್ಕಲು ಪ್ರಯತ್ನಿಸುತ್ತಿದೆ ಎಂದು ಆರೋಪಿಸಿದ ಅವರು, "ವಿದ್ಯಾರ್ಥಿಗಳು ಭಯೋತ್ಪಾದಕರಲ್ಲ. ಅವರು ನ್ಯಾಯಯುತ ಮತ್ತು ಪಾರದರ್ಶಕ ಶಿಕ್ಷಣ ವ್ಯವಸ್ಥೆಯನ್ನು ಮಾತ್ರ ಕೇಳುತ್ತಿದ್ದಾರೆ" ಎಂದರು.
ಕಳೆದ ಹತ್ತು ವರ್ಷಗಳಲ್ಲಿ 152 ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣಗಳು ನಡೆದಿದ್ದು, ಸುಮಾರು 7.5 ಕೋಟಿ ವಿದ್ಯಾರ್ಥಿಗಳು ಇದರಿಂದ ಸಂಕಷ್ಟ ಅನುಭವಿಸಿದ್ದಾರೆ ಎಂದು ರಾಹುಲ್ ಗಾಂಧಿ ಆರೋಪಿಸಿದರು. ಭಾರತದ ಶಿಕ್ಷಣ ವ್ಯವಸ್ಥೆ ಅಕ್ರಮಗಳಿಂದ ಕೂಡಿದ್ದು, ಬಡ ಹಾಗೂ ಮಧ್ಯಮ ವರ್ಗದ ಕುಟುಂಬಗಳಿಗೆ ಅದು ದುಬಾರಿಯಾಗಿದೆ ಎಂದು ಅವರು ಟೀಕಿಸಿದರು.