ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಫ್ಲೈದುಬೈ ವಿಮಾನದ ಹೀರೋ ಪೈಲಟ್‌ ಸ್ಮಿತ್ ಮಚ್ಚಾರ್‌ಗೆ ಗುಜರಾತ್ ರಾಜ್ಯ ಪ್ರಶಸ್ತಿ ಘೋಷಣೆ

Gujarat award for pilot: ದುಬೈಯಿಂದ ಇಸ್ರೇಲ್‌ಗೆ ಹೊರಟಿದ್ದ ವಿಮಾನದ ಪೈಲಟ್ ಕ್ಯಾಪ್ಟನ್ ಸ್ಮಿತ್ ಮಚ್ಚಾರ್ ಅವರ ಧೈರ್ಯವನ್ನು ಇಂದು ಇಡೀ ಜಗತ್ತು ಶ್ಲಾಘಿಸುತ್ತಿದೆ. ದಾಳಿಯಿಂದಾಗಿ ರಕ್ತದಲ್ಲಿ ತೊಯ್ದಿದ್ದರೂ ಅವರು 174 ಪ್ರಯಾಣಿಕರ ಜೀವಗಳನ್ನು ಉಳಿಸಲು ಅದಮ್ಯ ಶೌರ್ಯವನ್ನು ಪ್ರದರ್ಶಿಸಿದ್ದಾರೆ. ಇದು ಅತ್ಯಂತ ಸ್ಪೂರ್ತಿದಾಯಕ ಮತ್ತು ಶ್ಲಾಘನೀಯ ಸಾಧನೆ” ಎಂದು ಗುಜರಾತ್‌ ಸಿಎಂ ಭೂಪೇಂದ್ರಭಾಯಿ ಪಟೇಲ್ ಎಕ್ಸ್‌ ಪೋಸ್ಟ್‌ನಲ್ಲಿ ತಿಳಿಸಿದ್ದಾರೆ.

ಸ್ಮಿತ್ ಮಚ್ಚಾರ್‌ಗೆ ಗುಜರಾತ್ ರಾಜ್ಯ ಪ್ರಶಸ್ತಿ ಘೋಷಣೆ

ಸ್ಮಿತ್‌ ಮಚ್ಚಾರ್‌ (ಸಂಗ್ರಹ ಚಿತ್ರ) -

Priyanka P
Priyanka P Oct 1, 2026 5:07 PM

ಗಾಂಧಿನಗರ, ಅ. 1: ಫ್ಲೈದುಬೈ ವಿಮಾನವನ್ನು ಅಪಘಾತಕ್ಕೀಡು ಮಾಡಲು ಯತ್ನಿಸಿ, ಚೂರಿಯಿಂದ ಇರಿದರೂ ಧೈರ್ಯಗೆಡದೆ ನೂರಾರು ಪ್ರಯಾಣಿಕರ ಪ್ರಾಣ ಉಳಿಸಿದ ಕ್ಯಾಪ್ಟನ್, ಭಾರತೀಯ ಪೈಲಟ್‌ ಸ್ಮಿತ್ ಮಚ್ಚಾರ್ (Smit Machchhar) ಅವರ ಅದಮ್ಯ ಶೌರ್ಯಕ್ಕಾಗಿ ಗುಜರಾತ್ ರಾಜ್ಯ ಪ್ರಶಸ್ತಿ (Gujarat state award) ಘೋಷಿಸಿದೆ. ಪೈಲಟ್ ಮಚ್ಚಾರ್ ಅವರಿಗೆ 'ವಿಶಿಷ್ಟ್‌ ಗುಜರಾತ್ ಗರಿಮಾ ಪ್ರಶಸ್ತಿ' ನೀಡುವುದಾಗಿ ಗುಜರಾತ್ ಸರ್ಕಾರ ತಿಳಿಸಿದೆ.

ಸೌದಿ ಅರೇಬಿಯಾದಲ್ಲಿ ಚಿಕಿತ್ಸೆ ಪಡೆಯುತ್ತಿರುವ ಕ್ಯಾಪ್ಟನ್ ಮಚ್ಚಾರ್ ಅವರ ಧೈರ್ಯ, ಸಾಹಸ ಹಲವು ಜೀವಗಳನ್ನು ಉಳಿಸಿದ್ದು, ಸಮಾಜದ ಎಲ್ಲ ವರ್ಗಗಳಿಂದ ಪ್ರಶಂಸೆಗೆ ಪಾತ್ರವಾಗಿದೆ. ಅವರ ಶೀಘ್ರ ಚೇತರಿಕೆಗಾಗಿ ಪ್ರಸಿದ್ಧ ಸೋಮನಾಥ ದೇವಾಲಯದಲ್ಲಿ ವಿಶೇಷ ಪ್ರಾರ್ಥನೆಯನ್ನು ಸಹ ಆಯೋಜಿಸಲಾಗಿದೆ.

“ಇಸ್ರೇಲ್‌ಗೆ ಹೊರಟಿದ್ದ ವಿಮಾನದ ಪೈಲಟ್ ಕ್ಯಾಪ್ಟನ್ ಸ್ಮಿತ್ ಮಚ್ಚಾರ್ ಅವರ ಧೈರ್ಯವನ್ನು ಇಂದು ಇಡೀ ಜಗತ್ತು ಶ್ಲಾಘಿಸುತ್ತಿದೆ. ದಾಳಿಯಿಂದಾಗಿ ರಕ್ತದಲ್ಲಿ ತೊಯ್ದಿದ್ದರೂ ಅವರು 174 ಪ್ರಯಾಣಿಕರ ಜೀವಗಳನ್ನು ಉಳಿಸಲು ಅದಮ್ಯ ಶೌರ್ಯವನ್ನು ಪ್ರದರ್ಶಿಸಿದರು. ಇದು ಅತ್ಯಂತ ಸ್ಪೂರ್ತಿದಾಯಕ ಮತ್ತು ಶ್ಲಾಘನೀಯ ಸಾಧನೆ” ಎಂದು ಸಿಎಂ ಭೂಪೇಂದ್ರಭಾಯಿ ಪಟೇಲ್ ಎಕ್ಸ್‌ ಪೋಸ್ಟ್‌ನಲ್ಲಿ ತಿಳಿಸಿದ್ದಾರೆ.

ಸಿಎಂ ಪೋಸ್ಟ್:



“ಗುಜರಾತಿನ ಈ ಧೀರ ಪುತ್ರ ತನ್ನ ಶೌರ್ಯದ ಮೂಲಕ ರಾಜ್ಯ ಮತ್ತು ರಾಷ್ಟ್ರಕ್ಕೆ ಪ್ರಪಂಚದಾದ್ಯಂತ ಕೀರ್ತಿ ತಂದಿದ್ದಾರೆ. ಅವರ ರಕ್ತನಾಳಗಳಲ್ಲಿ ಹರಿಯುವ ಗುಜರಾತಿ ಚೈತನ್ಯ ನಮ್ಮೆಲ್ಲರಿಗೂ ಅಪಾರ ಹೆಮ್ಮೆಯನ್ನು ತುಂಬುತ್ತದೆ” ಎಂದು ಅವರು ಹೇಳಿದ್ದಾರೆ.

ಪೈಲಟ್ ಸ್ಮಿತ್ ಮಚ್ಚಾರ್ ಮೇಲೆ ಚಾಕುವಿನಿಂದಲ್ಲ ಕೊಡಲಿಯಿಂದ ಹಲ್ಲೆ

“ಅವರ ಅಸಾಧಾರಣ ಶೌರ್ಯ ಮತ್ತು ಮಾನವೀಯತೆಯನ್ನು ಗೌರವಿಸಲು, ರಾಜ್ಯವು ಕ್ಯಾಪ್ಟನ್ ಸ್ಮಿತ್ ಮಚ್ಚಾರ್ ಅವರಿಗೆ ವಿಶಿಷ್ಟ್‌ ಗುಜರಾತ್ ಗರಿಮಾ ಪ್ರಶಸ್ತಿಯನ್ನು ನೀಡಲಿದೆ” ಎಂದು ಪಟೇಲ್ ಘೋಷಿಸಿದ್ದಾರೆ. “ಇಡೀ ರಾಜ್ಯವು ಅವರ ಶೀಘ್ರ ಚೇತರಿಕೆಗಾಗಿ ಪ್ರಾರ್ಥಿಸುತ್ತಿದೆ. ಅವರ ಶೀಘ್ರ ಚೇತರಿಕೆಗಾಗಿ ದೇಶದ ನಾಗರಿಕರು ಸಹಾನುಭೂತಿ ಮತ್ತು ಪ್ರಾರ್ಥನೆ ಮಾಡುತ್ತಿದ್ದಾರೆ” ಎಂದು ಅವರು ತಿಳಿಸಿದ್ದಾರೆ.

ಪೈಲಟ್ ಸ್ಮಿತ್ ಮಚ್ಚಾರ್ ಗುಜರಾತ್ ಮೂಲದವರು ಎಂದು ಅಧಿಕಾರಿಗಳು ಹೇಳಿದ್ದಾರೆ. ಆದರೆ ಅವರ ಕುಟುಂಬವು ಬಹಳ ಹಿಂದೆಯೇ ಮುಂಬೈಗೆ ಸ್ಥಳಾಂತರಗೊಂಡಿತ್ತು. ಈ ಮಧ್ಯೆ ಪೈಲಟ್‌ನ ಆರೋಗ್ಯ ಮತ್ತು ದೀರ್ಘಾಯುಷ್ಯಕ್ಕಾಗಿ ಸೋಮನಾಥ ದೇವಾಲಯದಲ್ಲಿ ವಿಶೇಷ ಪ್ರಾರ್ಥನೆ ನಡೆಸಲಾಯಿತು. ದೇವಾಲಯದ ಆಡಳಿತ ಮಂಡಳಿಯು ಮಹಾಮೃತ್ಯುಂಜಯ ಮಂತ್ರ ಜಪವನ್ನು ಪ್ರಾರಂಭಿಸಿದೆ.

“ದೇವರ ದೇವರಾದ ಸೋಮನಾಥನಲ್ಲಿ ನಾವು ಪ್ರಾರ್ಥಿಸುತ್ತೇವೆ. ನಮ್ಮ ಧೀರ ನಾಯಕನಿಗೆ ಶೀಘ್ರವಾಗಿ ಸಂಪೂರ್ಣ ಆರೋಗ್ಯವನ್ನು ಮರಳಿ ನೀಡಿ, ದೀರ್ಘಾಯುಷ್ಯವನ್ನು ಕರುಣಿಸಲಿ” ಎಂದು ಪಟೇಲ್‌ ಎಕ್ಸ್‌ನಲ್ಲಿ ಮಾಡಿರುವ ಮತ್ತೊಂದು ಪೋಸ್ಟ್‌ನಲ್ಲಿ ಹೇಳಿದ್ದಾರೆ.