IND vs NZ: ʻಗೆಲ್ಲಬೇಕೆಂಬ ಮನಸ್ಥಿತಿ ಯಾರಲ್ಲೂ ಕಾಣಲಿಲ್ಲʼ-ಭಾರತ ತಂಡವನ್ನು ಟೀಕಿಸಿದ ಆರ್ ಅಶ್ವಿನ್!
ನ್ಯೂಜಿಲೆಂಡ್ ವಿರುದ್ಧದ ಮೊದಲನೇ ಟೆಸ್ಟ್ ಪಂದ್ಯ ಡ್ರಾನಲ್ಲಿ ಅಂತ್ಯವಾದ ಬಳಿಕ ಸ್ಪಿನ್ ದಿಗ್ಗಜ ರವಿಚಂದ್ರನ್ ಅಶ್ವಿನ್ ಭಾರತ ತಂಡವನ್ನು ಟೀಕಿಸಿದ್ದಾರೆ. ಇನ್ನೂ ಒಂದು ಗಂಟೆ ಭಾರತ ತಂಡ ಕೊನೆಯ ದಿನ ಆಡಬೇಕಾಗಿತ್ತು ಎಂದು ಹೇಳಿದ್ದಾರೆ. ಅಲ್ಲದೆ, ತಂಡದಲ್ಲಿ ಗೆಲ್ಲುವ ಮನಸ್ಥಿತಿ ಎಲ್ಲಿಯೂ ಕಾಣಲಿಲ್ಲ ಎಂದು ಹೇಳಿದ್ದಾರೆ.
ಭಾರತ ತಂಡವನ್ನು ಟೀಕಿಸಿದ ಆರ್ ಅಶ್ವಿನ್. -
ವೆಲ್ಲಿಂಗ್ಟನ್: ನ್ಯೂಜಿಲೆಂಡ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯವನ್ನು (IND vs NZ) ಗೆಲ್ಲುವ ಅವಕಾಶವಿದ್ದರೂ ಭಾರತ ತಂಡ ಅದನ್ನು ಕೈಚೆಲ್ಲಿದೆ. ಪಂದ್ಯ ಡ್ರಾದಲ್ಲಿ ಅಂತ್ಯಗೊಂಡಿರುವುದಕ್ಕೆ ಭಾರತದ ಮಾಜಿ ಸ್ಪಿನ್ನರ್ ಆರ್ ಅಶ್ವಿನ್ (R Ashwin) ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಕೊನೆಯ ದಿನ ಇನ್ನೂ 15 ಓವರ್ಗಳು ಬಾಕಿ ಇರುವಾಗಲೇ ಉಭಯ ತಂಡಗಳ ನಾಯಕರು ಪಂದ್ಯವನ್ನು ಡ್ರಾ ಮಾಡಿಕೊಳ್ಳಲು ಒಪ್ಪಿಕೊಂಡ ನಿರ್ಧಾರವನ್ನು ಅವರು ಪ್ರಶ್ನಿಸಿದ್ದಾರೆ.
ವೆಲ್ಲಿಂಗ್ಟನ್ನ ಬೇಸಿನ್ ರಿಸರ್ವ್ ಮೈದಾನದಲ್ಲಿ ನಡೆದಿದ್ದ ಮೊದಲ ಟೆಸ್ಟ್ ಪಂದ್ಯದಲ್ಲಿ ಭಾರತ ಮೊದಲ ಇನಿಂಗ್ಸ್ನಲ್ಲಿ 9 ವಿಕೆಟ್ ನಷ್ಟಕ್ಕೆ 720 ರನ್ ಗಳಿಸಿ ಡಿಕ್ಲೇರ್ ಮಾಡಿಕೊಂಡಿತ್ತು. ಇದರಿಂದ 352 ರನ್ಗಳ ಬೃಹತ್ ಮುನ್ನಡೆ ಪಡೆದಿತ್ತು. ಆದರೆ ಎರಡನೇ ಇನಿಂಗ್ಸ್ನಲ್ಲಿ ನ್ಯೂಜಿಲೆಂಡ್ ತಂಡವನ್ನು ಆಲೌಟ್ ಮಾಡಲು ಭಾರತಕ್ಕೆ ಸಾಧ್ಯವಾಗಲಿಲ್ಲ.
ನ್ಯೂಜಿಲೆಂಡ್ 120 ಓವರ್ಗಳ ಕಾಲ ಬ್ಯಾಟಿಂಗ್ ನಡೆಸಿ 5 ವಿಕೆಟ್ ನಷ್ಟಕ್ಕೆ 239 ರನ್ ಗಳಿಸಿತು. ಡ್ಯಾರಿಲ್ ಮಿಚೆಲ್ ಮತ್ತು ಗ್ಲೆನ್ ಫಿಲಿಪ್ಸ್ ಭಾರತೀಯ ಬೌಲರ್ಗಳನ್ನು ಕಾಡಿದರು. ಅಂತಿಮವಾಗಿ ಎರಡೂ ತಂಡಗಳ ನಾಯಕರು ಪಂದ್ಯವನ್ನು ಡ್ರಾ ಮಾಡಿಕೊಳ್ಳಲು ನಿರ್ಧರಿಸಿದರು.
720, 352 ರನ್ ಲೀಡ್; ವೆಲ್ಲಿಂಗ್ಟನ್ನಲ್ಲಿ ಅನಗತ್ಯ ದಾಖಲೆ ಹೆಗಲೇರಿಸಿಕೊಂಡ ಭಾರತ!
ಆದರೆ ಭಾರತ ತಂಡ ಗೆಲುವಿಗಾಗಿ ಕೊನೆಯವರೆಗೂ ಹೋರಾಟ ನಡೆಸುವ ಮನೋಭಾವ ತೋರಲಿಲ್ಲ ಎಂದು ಅಶ್ವಿನ್ ಟೀಕಿಸಿದ್ದಾರೆ. "ಪಂದ್ಯ ಗೆಲ್ಲುವ ವಿಶ್ವಾಸ ಅಥವಾ ನಂಬಿಕೆ ತಂಡದ ಆಟಗಾರರಲ್ಲಿ ಕಾಣಿಸಲಿಲ್ಲ. ಗೆಲುವಿಗಾಗಿ ಅಗತ್ಯವಿರುವ ಆತುರ ಮತ್ತು ತೀವ್ರತೆ ಮೈದಾನದಲ್ಲಿ ಇರಲಿಲ್ಲ," ಎಂದು ಅಶ್ವಿನ್ ತಿಳಿಸಿದ್ದಾರೆ.
ವಿರಾಟ್ ಕೊಹ್ಲಿ ನಾಯಕತ್ವದಿಂದ ಕಲಿಯಬೇಕಿತ್ತು
ಭಾರತದ ಮಾಜಿ ನಾಯಕ ವಿರಾಟ್ ಕೊಹ್ಲಿ ಅವರ ನಾಯಕತ್ವದ ಶೈಲಿಯನ್ನು ಉದಾಹರಣೆಯಾಗಿ ನೀಡಿದ ಅಶ್ವಿನ್, ಪಂದ್ಯ ಗೆಲ್ಲುವ ಹೋರಾಟದಲ್ಲಿ ಆತುರ ಮತ್ತು ಆಕ್ರಮಣಕಾರಿ ಮನೋಭಾವ ಎಷ್ಟು ಮುಖ್ಯ ಎಂಬುದನ್ನು ವಿವರಿಸಿದ್ದಾರೆ.
"ವಿರಾಟ್ ಕೊಹ್ಲಿ ನಾಯಕತ್ವದಿಂದ ಕಲಿಯಬೇಕಾದ ಒಂದು ವಿಷಯವಿದೆ. ಬೇರೆ ನಾಯಕ ಅಥವಾ ಬೇರೆ ಬೌಲರ್ ಇದ್ದಿದ್ದರೆ ಈ ಪರಿಸ್ಥಿತಿಯಲ್ಲಿ ಟೆಸ್ಟ್ ಪಂದ್ಯ ಗೆಲ್ಲಿಸುತ್ತಿದ್ದರು ಎಂದು ನಾನು ಹೇಳುವುದಿಲ್ಲ. ಆದರೆ ಗೆಲುವಿಗಾಗಿ ತೋರಿಸುವ ಆತುರ ಬಹಳ ಮುಖ್ಯ," ಎಂದು ಅಶ್ವಿನ್ ಅಭಿಪ್ರಾಯಪಟ್ಟಿದ್ದಾರೆ.
ಶಾಲೆಗೆ ಚಕ್ಕರ್ ಹಾಕಿ ಭಾರತ vs ನ್ಯೂಜಿಲೆಂಡ್ ಟೆಸ್ಟ್ ನೋಡಲ ಬಂದು ತಗಲಾಕಿಕೊಂಡ ವಿದ್ಯಾರ್ಥಿಗಳು! ವಿಡಿಯೊ
ಡ್ಯಾರಿಲ್ ಮಿಚೆಲ್ಗೆ ಆರಾಮವಾಗಿ ಆಡಲು ಬಿಟ್ಟರು
ನ್ಯೂಜಿಲೆಂಡ್ ಬ್ಯಾಟರ್ ಡ್ಯಾರಿಲ್ ಮಿಚೆಲ್ ಕ್ರೀಸ್ನಲ್ಲಿ ನೆಲೆಗೊಳ್ಳಲು ಭಾರತೀಯ ಫೀಲ್ಡರ್ಗಳು ಅವಕಾಶ ಮಾಡಿಕೊಟ್ಟಿದ್ದನ್ನೂ ಅಶ್ವಿನ್ ಟೀಕಿಸಿದ್ದಾರೆ. ಮಿಚೆಲ್ ಬ್ಯಾಟ್ ಮಾಡುವಾಗ ಸೈಟ್ ಸ್ಕ್ರೀನ್ ಸರಿಪಡಿಸುವ ನೆಪದಲ್ಲಿ ಸಮಯ ವ್ಯರ್ಥ ಮಾಡುತ್ತಿದ್ದರು. ಅಲ್ಲದೆ, ಭಾರತೀಯ ಆಟಗಾರರೊಂದಿಗೆ ಮಾತನಾಡುತ್ತಾ ನಗುತ್ತಾ ಕಾಲ ಕಳೆಯುತ್ತಿದ್ದರು ಎಂದು ಅಶ್ವಿನ್ ಹೇಳಿದ್ದಾರೆ.
"ಡ್ಯಾರಿಲ್ ಮಿಚೆಲ್ ಸೈಟ್ ಸ್ಕ್ರೀನ್ ಸರಿಪಡಿಸುವ ನೆಪದಲ್ಲಿ ಸಮಯ ತೆಗೆದುಕೊಳ್ಳುವುದನ್ನು ನಾನು ಗಮನಿಸಿದೆ. ಅವರು ನಮ್ಮ ನಾಯಕ ಮತ್ತು ಆಟಗಾರರೊಂದಿಗೆ ಮಾತನಾಡುತ್ತಿದ್ದರು. ನಮ್ಮ ಫೀಲ್ಡರ್ಗಳೊಂದಿಗೆ ನಗುತ್ತಾ, ತಮಾಷೆ ಮಾಡುತ್ತಿದ್ದರು. ಇಂತಹ ಘಟನೆಗಳು ನಮ್ಮ ತಂಡದಲ್ಲಿ ಎಂದಿಗೂ ನಡೆಯುತ್ತಿರಲಿಲ್ಲ" ಎಂದು ಅಶ್ವಿನ್ ಹೇಳಿದ್ದಾರೆ.
IND vs NZ: ʻ ಚೆಂಡಿಗೆ ಎಂಜಲು ಬಳಸಲು ಅನುಮತಿ ನೀಡಿʼ-ಐಸಿಸಿಗೆ ಮನವಿ ಮಾಡಿದ ಶುಭಮನ್ ಗಿಲ್!
"ಹೌದು, ನಾವು ಪಂದ್ಯದ ಮೇಲೆ ಹಿಡಿತ ಸಾಧಿಸಿದಾಗ ಸ್ವಲ್ಪ ಸಮಯ ತೆಗೆದುಕೊಂಡು ಸಂಭ್ರಮಿಸುತ್ತಿದ್ದೆವು. ಆದರೆ ಪಂದ್ಯ ಗೆಲ್ಲಲು ಹೋರಾಡುವಾಗ ಯಾವಾಗಲೂ ಸಿದ್ಧರಾಗಿರುತ್ತಿದ್ದೆವು. ಬ್ಯಾಟರ್ಗಳು ತಮ್ಮ ಆರಾಮದಾಯಕ ವಲಯಕ್ಕೆ ಹೋಗಲು ಅವಕಾಶ ನೀಡಬಾರದು. ನಮ್ಮ ಫೀಲ್ಡರ್ಗಳು ಬ್ಯಾಟರ್ಗಳ ಹತ್ತಿರಕ್ಕೆ ಹೋಗುತ್ತಿರಲಿಲ್ಲ," ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.