ದಾವೂದ್ ಇಬ್ರಾಹಿಂಗೆ ಸಂಬಂಧಿಸಿದ ಮುಂಬೈನ ಕಟ್ಟಡ ನೆಲಸಮಕ್ಕೆ ಹೈಕೋರ್ಟ್ ತಡೆ!
ಮುಂಬೈನ ಭೆಂಡಿ ಬಜಾರ್‌ನಲ್ಲಿರುವ ದಾವೂದ್ ಇಬ್ರಾಹಿಂ ಕುಟುಂಬ ವಾಸವಿದ್ದ ಮುಸಾಫಿರ್ಖಾನಾ ಕಟ್ಟಡ ನೆಲಸಮ ಕಾರ್ಯಾಚರಣೆಗೆ ಬಾಂಬೆ ಹೈಕೋರ್ಟ್ ತಡೆ ನೀಡಿದೆ. ಬಿಎಂಸಿ ಆರಂಭಿಸಿದ್ದ ತೆರವು ಕಾರ್ಯಾಚರಣೆ ಸ್ಥಗಿತಗೊಳಿಸಿರುವ ನ್ಯಾಯಾಲಯ, ನವೆಂಬರ್ 25ರವರೆಗೆ ಯಥಾಸ್ಥಿತಿ ಕಾಯ್ದುಕೊಳ್ಳುವಂತೆ ಆದೇಶಿಸಿದೆ.
ದಾವೂದ್ ಇಬ್ರಾಹಿಂಗೆ ಸೇರಿದ ಮುಂಬೈನ ಕಟ್ಟಡ ನೆಲಸಮಕ್ಕೆ ತಡೆ! -
ಮುಂಬೈ: ಭೂಗತ ಪಾತಕಿ ದಾವೂದ್ ಇಬ್ರಾಹಿಂ (Dawood Ibrahim) ಮತ್ತು ಆತನ ಕುಟುಂಬ ವಾಸವಿದ್ದ ಮುಂಬೈನ ಹಳೆಯ ಕಟ್ಟಡವನ್ನು ನೆಲಸಮಗೊಳಿಸುವ ಕಾರ್ಯಾಚರಣೆಗೆ ಬಾಂಬೆ ಹೈಕೋರ್ಟ್ ತಾತ್ಕಾಲಿಕ ತಡೆ ನೀಡಿದೆ. ಗುರುವಾರ (ನವೆಂಬರ್ 19) ಬೆಳಗ್ಗೆಯಿಂದ ಬೃಹತ್ ಮುಂಬೈ ಮಹಾನಗರ ಪಾಲಿಕೆ (BMC) ಆರಂಭಿಸಿದ್ದ ಕಟ್ಟಡ ತೆರವು ಕಾರ್ಯಾಚರಣೆಗೆ ನ್ಯಾಯಾಲಯ ಬ್ರೇಕ್ ಹಾಕಿದೆ.
ಮುಂಬೈನ ಭೆಂಡಿ ಬಜಾರ್‌ನ ಪಕ್ಮೋಡಿಯಾ ಸ್ಟ್ರೀಟ್‌ನಲ್ಲಿರುವ ಹಾಜಿ ಇಸ್ಮಾಯಿಲ್ ಹಾಜಿ ಹಬೀಬ್ ಮುಸಾಫಿರ್ಖಾನಾ ಕಟ್ಟಡವನ್ನು ನೆಲಸಮಗೊಳಿಸುವುದನ್ನು ನವೆಂಬರ್ 25ರವರೆಗೆ ಸ್ಥಗಿತಗೊಳಿಸುವಂತೆ ನ್ಯಾಯಾಲಯ ಆದೇಶಿಸಿದೆ. ಪ್ರಕರಣದಲ್ಲಿ ಹಲವು ವಿವಾದಾತ್ಮಕ ಅಂಶಗಳಿದ್ದು, ಸಮಗ್ರ ವಿಚಾರಣೆಯ ಅಗತ್ಯವಿದೆ ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿದೆ. ಅಲ್ಲಿಯವರೆಗೆ ಕಟ್ಟಡದ ಪ್ರಸ್ತುತ ಸ್ಥಿತಿಯನ್ನು ಕಾಯ್ದುಕೊಳ್ಳುವಂತೆ ಸಂಬಂಧಪಟ್ಟ ಎಲ್ಲ ಪಕ್ಷಗಳಿಗೆ ಸೂಚಿಸಿದೆ.
ಭಾರತದ ಖಾದ್ಯಕ್ಕೆ ಮನಸೋತು ದೋಸೆ ತಿನ್ನುವ ಇಂಗಿತ ವ್ಯಕ್ತಪಡಿಸಿದ ದುಬೈ ಸಚಿವ; ಪ್ರಲ್ಹಾದ ಜೋಶಿ ಹೇಳಿದ್ದೇನು?
ಈಗಾಗಲೇ ಆರಂಭವಾಗಿತ್ತು ಬುಲ್ಡೋಜರ್ ಕಾರ್ಯಾಚರಣೆ
ಬೃಹನ್ಮುಂಬೈ ಮಹಾನಗರ ಪಾಲಿಕೆ ಗುರುವಾರ ಬೆಳಗ್ಗೆ ಭಾರೀ ಪೊಲೀಸ್ ಭದ್ರತೆಯೊಂದಿಗೆ ಕಟ್ಟಡ ನೆಲಸಮ ಕಾರ್ಯಾಚರಣೆ ಆರಂಭಿಸಿತ್ತು. ಇದಕ್ಕಾಗಿ ನಾಲ್ಕು ಜೆಸಿಬಿಗಳು, ಯಂತ್ರೋಪಕರಣಗಳು ಹಾಗೂ ಸುಮಾರು 80 ಕಾರ್ಮಿಕರನ್ನು ನಿಯೋಜಿಸಲಾಗಿತ್ತು. ಸ್ಥಳದಲ್ಲಿ ಸುಮಾರು 680 ಪೊಲೀಸ್ ಸಿಬ್ಬಂದಿ ಮತ್ತು 80 ಪೊಲೀಸ್ ಅಧಿಕಾರಿಗಳು ಭದ್ರತೆ ಒದಗಿಸಿದ್ದರು.
ಕಟ್ಟಡದ ಶಿಥಿಲಾವಸ್ಥೆಯನ್ನು ಪರಿಗಣಿಸಿ ಬಿಎಂಸಿ ಇದನ್ನು C-1 ವರ್ಗಕ್ಕೆ ಸೇರಿಸಿತ್ತು. ಈ ವರ್ಗವು ಕಟ್ಟಡ ಅಪಾಯಕಾರಿ ಸ್ಥಿತಿಯಲ್ಲಿದ್ದು, ತಕ್ಷಣ ತೆರವುಗೊಳಿಸುವ ಅಗತ್ಯವಿದೆ ಎಂಬುದನ್ನು ಸೂಚಿಸುತ್ತದೆ. ಆದರೆ ಕಟ್ಟಡದ ನೆಲಮಹಡಿಯಲ್ಲಿರುವ ಮಸೀದಿ ಹಾಗೂ ಪ್ರಾರ್ಥನಾ ಸ್ಥಳದ ವಿಚಾರವಾಗಿ ವಿರೋಧ ವ್ಯಕ್ತವಾಗಿತ್ತು. ಈ ನಡುವೆ ಕಟ್ಟಡದ ಒಂದು ಭಾಗವನ್ನು ನೆಲಸಮಗೊಳಿಸಿದ ಬಳಿಕ ಹೈಕೋರ್ಟ್ ಮಧ್ಯಪ್ರವೇಶಿಸಿ ಮುಂದಿನ ಕಾರ್ಯಾಚರಣೆಗೆ ತಡೆ ನೀಡಿದೆ.
NCB Raid: ಮೋಸ್ಟ್ ವಾಂಟೆಡ್ ಗ್ಯಾಂಗ್‌ಸ್ಟರ್ ದಾವೂದ್ ಇಬ್ರಾಹಿಂ ಸಹಚರ ಡ್ಯಾನಿಶ್ ಚಿಕ್ನಾ ಅರೆಸ್ಟ್
ಕಟ್ಟಡದ ಮಾಲೀಕತ್ವದ ಬಗ್ಗೆ ವಿವಾದ
ಹಾಜಿ ಇಸ್ಮಾಯಿಲ್ ಹಾಜಿ ಹಬೀಬ್ ಮುಸಾಫಿರ್ಖಾನಾ ಟ್ರಸ್ಟ್‌ಗೆ ಸೇರಿದ ಆಸ್ತಿಯ ವಿಚಾರವಾಗಿ ವಿವಾದ ಉಂಟಾಗಿದೆ. 1864ರಲ್ಲಿ ಹಾಜಿ ಇಸ್ಮಾಯಿಲ್ ಹಾಜಿ ಹಬೀಬ್ ಅವರು ಹಜ್ ಯಾತ್ರಿಕರಿಗಾಗಿ ವಿಶ್ರಾಂತಿ ಗೃಹ ಹಾಗೂ ಮಸೀದಿ ನಿರ್ಮಾಣಕ್ಕೆ ಈ ಆಸ್ತಿಯನ್ನು ಮೀಸಲಿಟ್ಟಿದ್ದರು ಎಂದು ಅರ್ಜಿದಾರರು ವಾದಿಸಿದ್ದಾರೆ.
Dawood Ibrahim’s former Mumbai residence faces the wrecking ball! BMC has begun demolishing the dilapidated Musafirkhana building in Bhendi Bazaar amid heavy police deployment. The fugitive underworld don once lived here with his family Civic action follows its classification as a dangerous C-1 structure and is linked to the Bhendi Bazaar redevelopment project
— Nabila Jamal (@nabilajamal_) November 19, 2026
ಇದು ವಕ್ಫ್ ಆಸ್ತಿಯಾಗಿದ್ದು, ಸುಪ್ರೀಂ ಕೋರ್ಟ್‌ನ ಹಿಂದಿನ ಆದೇಶಗಳನ್ನು ಉಲ್ಲಂಘಿಸಿ ನೆಲಸಮ ಕಾರ್ಯಾಚರಣೆ ನಡೆಸಲಾಗುತ್ತಿದೆ ಎಂಬುದು ಅರ್ಜಿದಾರರ ಆರೋಪವಾಗಿದೆ. ಕಟ್ಟಡವನ್ನು ತೆರವುಗೊಳಿಸುವ ಬಿಎಂಸಿಯ ನೋಟಿಸ್ ಮತ್ತು ಅದರ ಪ್ರಕ್ರಿಯೆಯನ್ನು ಪ್ರಶ್ನಿಸಿ ಇಬ್ಬರು ಅರ್ಜಿದಾರರು ಹೈಕೋರ್ಟ್ ಮೆಟ್ಟಿಲೇರಿದ್ದರು. ಈ ಆಸ್ತಿ ಸೈಫಿ ಬುರ್ಹಾನಿ ಅಪ್‌ಲಿಫ್ಟ್‌ಮೆಂಟ್ ಟ್ರಸ್ಟ್ (SBUT) ಕೈಗೊಂಡಿರುವ ಭೆಂಡಿ ಬಜಾರ್ ಪುನರಾಭಿವೃದ್ಧಿ ಯೋಜನೆಗೂ ಸಂಬಂಧಿಸಿದೆ.
ನಿವೃತ್ತ ನೌಕರರಿಗೆ ಇಪಿಎಫ್‌ಒ ಸಿಹಿಸುದ್ದಿ: ಇನ್ಮುಂದೆ ಪ್ರತಿ ತಿಂಗಳು ಪಿಎಫ್ ಹಣ ಪಡೆಯುವ ಅವಕಾಶ
1970ರ ದಶಕದಲ್ಲಿ ದಾವೂದ್ ಕುಟುಂಬದ ವಾಸಸ್ಥಳ
ಈ ಮುಸಾಫಿರ್ಖಾನಾ ಕಟ್ಟಡದಲ್ಲಿ ದಾವೂದ್ ಇಬ್ರಾಹಿಂ ತನ್ನ ಕುಟುಂಬದೊಂದಿಗೆ 1970ರ ದಶಕದಲ್ಲಿ ವಾಸಿಸುತ್ತಿದ್ದ. ಬಳಿಕ ಮುಂಬೈ ಭೂಗತ ಜಗತ್ತಿನಲ್ಲಿ ಪ್ರಭಾವಿ ವ್ಯಕ್ತಿಯಾಗಿ ಬೆಳೆದಿದ್ದ ದಾವೂದ್ 1986ರಲ್ಲಿ ಭಾರತವನ್ನು ತೊರೆದಿದ್ದ ಎಂದು ವರದಿಗಳು ತಿಳಿಸಿವೆ. 1993ರ ಮುಂಬೈ ಸರಣಿ ಸ್ಫೋಟಗಳ ಪ್ರಮುಖ ಆರೋಪಿಯಾಗಿರುವ ದಾವೂದ್ ಇಬ್ರಾಹಿಂಗೆ ಸಂಬಂಧಿಸಿದ ಇತಿಹಾಸ ಹೊಂದಿರುವ ಕಾರಣ ಈ ಕಟ್ಟಡದ ತೆರವು ಕಾರ್ಯಾಚರಣೆ ರಾಷ್ಟ್ರಮಟ್ಟದಲ್ಲಿ ಗಮನ ಸೆಳೆದಿದೆ.
ನ್ಯಾಯಮೂರ್ತಿಗಳಾದ ಮಹೇಶ್ ಚಂದ್ರ ತ್ರಿಪಾಠಿ ಮತ್ತು ಅದ್ವೈತ್ ಸೇಥ್ನಾ ಅವರನ್ನೊಳಗೊಂಡ ನ್ಯಾಯಪೀಠ ಪ್ರಕರಣದ ಮುಂದಿನ ವಿಚಾರಣೆಯನ್ನು ನವೆಂಬರ್ 25ರಂದು ನಡೆಸಲಿದೆ. ಅಲ್ಲಿಯವರೆಗೆ ಕಟ್ಟಡದ ಯಾವುದೇ ಮುಂದಿನ ನೆಲಸಮ ಕಾರ್ಯಾಚರಣೆ ನಡೆಸುವಂತಿಲ್ಲ.