ಇಸ್ಲಾಂಗೆ ಹಿಜಾಬ್ ಅನಿವಾರ್ಯವಲ್ಲ: ವಿದ್ಯಾರ್ಥಿನಿ ಅರ್ಜಿ ತಿರಸ್ಕರಿಸಿದ ಅಲಹಾಬಾದ್ ಹೈಕೋರ್ಟ್
Hijab row: ಇಸ್ಲಾಂ ಧರ್ಮದ ಅನುಯಾಯಿಗಳಿಗೆ ಹಿಜಾಬ್ ಅನಿವಾರ್ಯವಲ್ಲ ಎಂದು ಅಲಹಾಬಾದ್ ಹೈಕೋರ್ಟ್ ಹೇಳಿದೆ. ವಿದ್ಯಾರ್ಥಿನಿಯೊಬ್ಬಳು ಶಾಲೆಯಲ್ಲಿ ಹಿಜಾಬ್ ಧರಿಸಲು ಶಾಲಾ ಅಧಿಕಾರಿಗಳಿಗೆ ನಿರ್ದೇಶನ ನೀಡಬೇಕು ಎಂದು ಕೋರಿ ಸಲ್ಲಿಸಿದ್ದ ಅರ್ಜಿಯನ್ನು ತಿರಸ್ಕರಿಸಿದ ನ್ಯಾಯಾಲಯ ಶಿಕ್ಷಣ ಸಂಸ್ಥೆಯ ನಿಗದಿತ ಡ್ರೆಸ್ ಕೋಡ್ ಅನ್ನು ಬದಲಾಯಿಸುವ ಹಕ್ಕು ಯಾವ ವಿದ್ಯಾರ್ಥಿಗೂ ಇಲ್ಲ ಎಂದು ಹೇಳಿದೆ.
ಸಂಗ್ರಹ ಚಿತ್ರ -
ಪ್ರಯಾಗರಾಜ್: ಶಾಲೆಯ ಸಮವಸ್ತ್ರದೊಂದಿಗೆ (school uniform) ಹಿಜಾಬ್ (Hijab) ಧರಿಸಲು ಅನುಮತಿ ಕೋರಿ ನ್ಯಾಯಾಲಯದ ಮೆಟ್ಟಿಲೇರಿದ ವಿದ್ಯಾರ್ಥಿನಿಯ ಅರ್ಜಿಯನ್ನು ವಜಾಗೊಳಿಸಿರುವ ಅಲಹಾಬಾದ್ ಹೈಕೋರ್ಟ್ (Allahabad High Court), ಶಿಕ್ಷಣ ಸಂಸ್ಥೆಯು ನಿಗದಿಪಡಿಸಿದ ಡ್ರೆಸ್ ಕೋಡ್ ಅನ್ನು ವೈಯಕ್ತಿಕ ಆದ್ಯತೆಗಳಿಗೆ ಬದಲಾಯಿಸುವ ಹಕ್ಕು ಯಾವುದೇ ವಿದ್ಯಾರ್ಥಿನಿಯರಿಗೆ ಇಲ್ಲ ಎಂದು ಹೇಳಿದೆ. ಇಸ್ಲಾಂ (Islam) ಧರ್ಮದ ಅನುಯಾಯಿಗಳಿಗೆ ಹಿಜಾಬ್ ಅನಿವಾರ್ಯವಲ್ಲ ಎಂದು ಹೇಳಿರುವ ನ್ಯಾಯಾಲಯ ಹಿಜಾಬ್ ಧರಿಸುವುದು ಅತ್ಯಗತ್ಯ ಇಸ್ಲಾಮಿಕ್ ಪದ್ಧತಿಯಲ್ಲ ಎಂದು ತಿಳಿಸಿದೆ.
ಶಾಲೆಯು ನಿಗದಿಪಡಿಸಿರುವ ಸಮವಸ್ತ್ರದ ಜೊತೆಗೆ ಹಿಜಾಬ್ ಧರಿಸಲು ಅನುಮತಿ ನೀಡುವಂತೆ ಶಾಲಾ ಅಧಿಕಾರಿಗಳಿಗೆ ನಿರ್ದೇಶನ ನೀಡಬೇಕೆಂದು ಕೋರಿ ಪ್ರಯಾಗರಾಜ್‌ನ ಖಾಸಗಿ ಶಾಲೆಯ ವಿದ್ಯಾರ್ಥಿನಿ ತನ್ನ ತಾಯಿಯ ಮೂಲಕ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದಳು. ಪ್ರೌಢಶಾಲೆಯಲ್ಲಿ ಉತ್ತೀರ್ಣಳಾಗಿದ್ದ ಆಕೆ ಅದೇ ಸಂಸ್ಥೆಯಲ್ಲಿ ಹನ್ನೊಂದನೇ ತರಗತಿಗೆ ಪ್ರವೇಶ ಕೋರಿದ್ದಳು.
ನೀರು ಬಿಡಿ: ಮತ್ತೊಮ್ಮೆ ಸಿಡಬ್ಲ್ಯೂಆರ್‌ಸಿ ಆರ್ಡರ್
ಹಿಜಾಬ್ ಧರಿಸುವುದು ಇಸ್ಲಾಮಿಕ್ ಪದ್ಧತಿಯ ಅತ್ಯಗತ್ಯ ಭಾಗವಾಗಿದೆ. ವಿದ್ಯಾರ್ಥಿನಿಯು ಅದೇ ಶಾಲೆಯಲ್ಲಿ 6 ನೇ ತರಗತಿಯಿಂದ ಅದನ್ನು ಧರಿಸುತ್ತಿದ್ದಾಳೆ ಎಂದು ಅರ್ಜಿದಾರರು ನ್ಯಾಯಾಲಯಕ್ಕೆ ತಿಳಿಸಿದ್ದಾರೆ.
ಇವರ ವಾದವನ್ನು ಆಲಿಸಿದ ಅಲಹಾಬಾದ್ ಹೈಕೋರ್ಟ್ ನ್ಯಾಯಮೂರ್ತಿಗಳಾದ ಜೆ.ಜೆ. ಮುನೀರ್ ಮತ್ತು ಇಂದ್ರಜಿತ್ ಶುಕ್ಲಾ ಅವರನ್ನೊಳಗೊಂಡ ದ್ವಿಸದಸ್ಯ ಪೀಠವು, ಅರ್ಜಿದಾರರಿಗೆ ಸಂಬಂಧಿಸಿ ವಿವಿಧ ಸಮುದಾಯಗಳ ವಿದ್ಯಾರ್ಥಿನಿಗಳ ಚಿತ್ರಗಳನ್ನು ನಾವು ಪರಿಶೀಲಿಸಿದ್ದೇವೆ. ಅರ್ಜಿದಾರ ವಿದ್ಯಾರ್ಥಿನಿಯನ್ನು ಹೊರತುಪಡಿಸಿ ಬೇರೆ ಯಾವುದೇ ವಿದ್ಯಾರ್ಥಿನಿ ಹಿಜಾಬ್ ಧರಿಸುತ್ತಿಲ್ಲ. ಅರ್ಜಿದಾರರಂತೆಯೇ ಅದೇ ಧಾರ್ಮಿಕ ಸಮುದಾಯಕ್ಕೆ ಸೇರಿದವರು ಕೂಡ ಅವರ ಶಾಲೆಯಲ್ಲಿ ಹಿಜಾಬ್ ಧರಿಸುವುದು ಕಂಡು ಬಂದಿಲ್ಲ. ಹಿಜಾಬ್ ಧರಿಸುವುದು ಅತ್ಯಗತ್ಯ ಇಸ್ಲಾಮಿಕ್ ಪದ್ಧತಿಯಲ್ಲ ಎಂದು ತಿಳಿಸಿದೆ.
ಈ ಕುರಿತು ಆಗಸ್ಟ್ 21 ರಂದು ನ್ಯಾಯಾಲಯ ತೀರ್ಪು ನೀಡಿದ್ದು,ಹಿಜಾಬ್ ಧರಿಸುವುದು ಅತ್ಯಗತ್ಯ ಧಾರ್ಮಿಕ ಪದ್ಧತಿ ಎಂಬುದು ಕೇವಲ ಒಂದು ಪ್ರತಿಪಾದನೆಯಾಗಿದೆ. ಶಾಲೆಯ ಸಮವಸ್ತ್ರ ಸಂಹಿತೆ ನ್ಯಾಯಯುತ, ತಾರತಮ್ಯರಹಿತ, ಸಾಂಸ್ಥಿಕ ಶಿಸ್ತು ಮತ್ತು ಸಮಾನತೆಯನ್ನು ಕಾಪಾಡಿಕೊಳ್ಳಲು ಜಾರಿಗೆ ತರಲಾಗಿರುತ್ತದೆ. ಸಂಸ್ಥೆಯು ತನ್ನ ಆಂತರಿಕ ಶಿಸ್ತು ಮತ್ತು ಡ್ರೆಸ್ ಕೋಡ್ ಅನ್ನು ಜಾರಿಗೊಳಿಸಲು ಸಂಪೂರ್ಣ ಸ್ವತಂತ್ರವಾಗಿದೆ ಎಂದು ನ್ಯಾಯಾಲಯವು ಸ್ಪಷ್ಟ ಪಡಿಸಿದೆ.
ಯಾವುದೇ ಅನುದಾನರಹಿತ ಖಾಸಗಿ ಶಿಕ್ಷಣ ಸಂಸ್ಥೆಯು ತನ್ನ ಆವರಣದಲ್ಲಿ ಏಕರೂಪದ ಡ್ರೆಸ್ ಕೋಡ್ ಅನ್ನು ಜಾರಿಗೊಳಿಸುವ ಸಂಪೂರ್ಣ ಹಕ್ಕನ್ನು ಹೊಂದಿದೆ. ನಿಗದಿತ ಶಾಲಾ ಸಮವಸ್ತ್ರವನ್ನು ಪಾಲಿಸುವುದು ಎಲ್ಲ ವಿದ್ಯಾರ್ಥಿಗಳಿಗೂ ಕಡ್ಡಾಯವಾಗಿದೆ. ಅದಕ್ಕೆ ವೈಯಕ್ತಿಕ ಆಧಾರದ ಮೇಲೆ ಹಿಜಾಬ್ ಧರಿಸುವುದಕ್ಕೆ ಅನುಮತಿ ಪಡೆಯಲು ಯಾವುದೇ ಕಾನೂನುಬದ್ಧ ಹಕ್ಕಿಲ್ಲ ಎಂದು ನ್ಯಾಯಾಲಯ ತಿಳಿಸಿದೆ.
ಎಲ್ಲಾ ವಿದ್ಯಾರ್ಥಿಗಳಿಗೆ ಸಮವಸ್ತ್ರವು ಸಮಾನವಾಗಿ ಅನ್ವಯವಾಗುತ್ತದೆ. ಇದರಲ್ಲಿ ವೈಯಕ್ತಿಕ ಆಯ್ಕೆಯ ಅಧಿಕಾರ ನೀಡುವುದರಿಂದ ಸಮವಸ್ತ್ರದ ಪರಿಕಲ್ಪನೆಯೇ ವಿಫಲವಾಗುತ್ತದೆ. ಇದು ಶಾಲಾ ಶಿಸ್ತನ್ನು ನಿರ್ಧರಿಸುವ ಅಧಿಕಾರವನ್ನು ಸಂಸ್ಥೆಯಿಂದ ವಿದ್ಯಾರ್ಥಿಗಳಿಗೆ ವರ್ಗಾಯಿಸಿದಂತಾಗುತ್ತದೆ ಎಂದು ಹೇಳಿದೆ.