ಹಾಳಾದ, ಹರಿದ ನೋಟುಗಳನ್ನು ಏನು ಮಾಡಬೇಕು? ಇದನ್ನು ಬದಲಾಯಿಸೋದು ಹೇಗೆ? RBI ನಿಯಮದಲ್ಲಿ ಏನಿದೆ? ಇಲ್ಲಿದೆ ಸಂಪೂರ್ಣ ಮಾಹಿತಿ
ರಾಜಸ್ಥಾನದ ಬಲೋತ್ರಾ ಜಿಲ್ಲೆಯ ರೈತ ಮಂಗಿಲಾಲ್ ಮೇಘವಾಲ್ ಮನೆಯವರಿಗೆ ತಿಳಿಯದಂತೆ ಜಮೀನಿನಲ್ಲಿ ಹೂತಿಟ್ಟಿದ್ದ ಸುಮಾರು 5 ಲಕ್ಷ ರುಪಾಯಿ ಮೌಲ್ಯದ 500ರ ನೋಟುಗಳನ್ನು ಗೆದ್ದಲು ತಿಂದು ನಾಶಪಡಿಸಿವೆ. ಹಾಳಾದ ನೋಟುಗಳ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಹಾಗಾದರೆ ನೋಟು ಹರಿದ ಸಂದರ್ಭದಲ್ಲಿ ಏನು ಮಾಡಬೇಕು? ಈ ಬಗ್ಗೆ RBI ಏನು ಹೇಳುತ್ತದೆ ಎನ್ನುವ ವಿವರ ಇಲ್ಲಿದೆ.
ಗೆದ್ದಲು ತಿಂದು ಹಾಳಾದ ನೋಟು (ಸಂಗ್ರಹ ಚಿತ್ರ) -
ಜೈಪುರ, ಆ. 11: ರಾಜಸ್ಥಾನದ ಬಲೋತ್ರಾ ಜಿಲ್ಲೆಯ ಪಚ್‌ಪದ್ರಾ ನಿವಾಸಿ ಮಂಗಿಲಾಲ್ ಮೇಘವಾಲ್ ಅವರಿಗೆ ಸೇರಿದ ಸುಮಾರು 5 ಲಕ್ಷ ರುಪಾಯಿ ಮೌಲ್ಯದ 500ರ ನೋಟುಗಳು ಗೆದ್ದಲು ತಿಂದು ಹಾಳಾಗಿರುವ ಘಟನೆ ನಡೆದಿದೆ. ಮಂಗಿಲಾಲ್ ಸುಮಾರು ಒಂದು ವರ್ಷದ ಹಿಂದೆ ತಮ್ಮ ಜಮೀನನ್ನು ಮಾರಾಟ ಮಾಡಿದ್ದು, ಅದರಿಂದ ಬಂದ ಹಣದಲ್ಲಿ ಕೃಷಿ ಭೂಮಿಯಲ್ಲಿ ಸಣ್ಣ ಮನೆ ನಿರ್ಮಿಸಲು ಉದ್ದೇಶಿಸಿದ್ದರು. ಆದರೆ ಹಣವನ್ನು ಮನೆಯವರು ಖರ್ಚು ಮಾಡಬಹುದೆಂಬ ಕಾರಣಕ್ಕೆ ಸುಮಾರು 5 ಲಕ್ಷ ರುಪಾಯಿಯನ್ನು ಜಮೀನಿನಲ್ಲಿ ರಹಸ್ಯವಾಗಿ ಹೂತಿಟ್ಟಿದ್ದರು.
ಇದೀಗ ಹಣವನ್ನು ಹೊರತೆಗೆದಾಗ ನೋಟುಗಳನ್ನು ಗೆದ್ದಲುಗಳು ತಿಂದು ನಾಶಪಡಿಸಿರುವುದು ಗೊತ್ತಾಗಿದೆ. ಬಹುತೇಕ 500ರ ನೋಟುಗಳು ಹಾನಿಗೊಳಗಾಗಿದ್ದು, ಈ ಹಾಳಾದ ನೋಟುಗಳ ವಿಡಿಯೊ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಆದರೆ ನಿಮ್ಮ ಬಳಿ ಇಂತಹ ಹಾಳಾದ ನೋಟುಗಳಿದ್ದರೆ ಅವುಗಳನ್ನು ಎಸೆಯಬೇಕಿಲ್ಲ. ನೋಟಿನ ಹಾನಿಯ ಪ್ರಮಾಣ ಮತ್ತು ಅದರ ಸ್ಥಿತಿಯನ್ನು ಆಧರಿಸಿ ಬ್ಯಾಂಕ್ ಮೂಲಕ ಬದಲಾಯಿಸಿಕೊಳ್ಳುವ ಅವಕಾಶವಿದೆ. ಈ ಕುರಿತು ನಿಯಮ ಏನು ಹೇಳುತ್ತದೆ ಎನ್ನುವ ವಿವರ ಇಲ್ಲಿದೆ.
ಹಾಳಾದ ನೋಟುಗಳನ್ನು ಹೇಗೆ ಬದಲಾಯಿಸಬಹುದು?
ಕೊಳಕಾದ ಅಥವಾ ಸ್ವಲ್ಪ ಹರಿದ ನೋಟುಗಳು: ಸಾಮಾನ್ಯ ಬಳಕೆಯಿಂದ ಕೊಳಕಾದ, ಬಣ್ಣ ಬದಲಾದ ಅಥವಾ ಸ್ವಲ್ಪ ಹರಿದ ನೋಟುಗಳನ್ನು ಸಾಮಾನ್ಯವಾಗಿ ಯಾವುದೇ ಬ್ಯಾಂಕ್ ಶಾಖೆಯಲ್ಲಿ ಬದಲಾಯಿಸಿಕೊಳ್ಳಬಹುದು. ಇಂತಹ ನೋಟುಗಳನ್ನು ಬ್ಯಾಂಕ್ ಸ್ವೀಕರಿಸಿ ನಿಯಮಾನುಸಾರ ಬದಲಾಯಿಸುವ ವ್ಯವಸ್ಥೆ ಇದೆ.
ಹೆಚ್ಚು ಹರಿದ ಅಥವಾ ಹಾನಿಗೊಳಗಾದ ನೋಟುಗಳು: ನೋಟಿನ ಒಂದು ಭಾಗ ಕಾಣೆಯಾಗಿದ್ದರೂ ಅಥವಾ ಅದು ಎರಡುಕ್ಕಿಂತ ಹೆಚ್ಚು ತುಂಡುಗಳಾಗಿದ್ದರೂ, ಅದನ್ನು mutilated note ಎಂದು ಪರಿಗಣಿಸಬಹುದು. ಇಂತಹ ನೋಟುಗಳನ್ನು ಬ್ಯಾಂಕ್ ಶಾಖೆಯಲ್ಲಿ ಸಲ್ಲಿಸಿ RBIಯ Note Refund Rules ಪ್ರಕಾರ ಪರಿಶೀಲನೆ ಮಾಡಿಸಬಹುದು. ನೋಟಿನ ಸ್ಥಿತಿ ಮತ್ತು ಉಳಿದಿರುವ ಭಾಗವನ್ನು ಆಧರಿಸಿ ಅದರ ಮೌಲ್ಯವನ್ನು ನಿರ್ಧರಿಸಲಾಗುತ್ತದೆ. ಅಂದರೆ 500ರ ನೋಟು ಸಂಪೂರ್ಣವಾಗಿ ಹಾಳಾಗಿದೆ ಎಂದು ಕಂಡರೂ, ಅದಕ್ಕೆ ಯಾವುದೇ ಮೌಲ್ಯವಿಲ್ಲ ಎಂದು ತಕ್ಷಣ ನಿರ್ಧರಿಸಬಾರದು. ನೋಟನ್ನು ಬ್ಯಾಂಕ್‌ಗೆ ತೆಗೆದುಕೊಂಡು ಹೋಗಿ ಪರಿಶೀಲನೆ ಮಾಡಿಸುವುದು ಮುಖ್ಯ.
ಮನೆಯವರಿಗೆ ತಿಳಿಸದೆ ಹೊಲದಲ್ಲಿ ಹಣ ಬಚ್ಚಿಟ್ಟ ರೈತ: ಗೆದ್ದಲು ತಿಂದ 5 ಲಕ್ಷ ರುಪಾಯಿ ಮೌಲ್ಯದ ನೋಟು ಕಂಡು ಕಣ್ಣೀರು!
ಸಂಪೂರ್ಣವಾಗಿ ಸುಟ್ಟುಹೋದ ಅಥವಾ ಪುಡಿಯಾದ ನೋಟುಗಳು: ನೋಟು ತುಂಬಾ ದುರ್ಬಲವಾಗಿದ್ದು ಸಾಮಾನ್ಯವಾಗಿ ಕೈಯಲ್ಲಿ ಹಿಡಿಯಲು ಸಾಧ್ಯವಾಗದಷ್ಟು ಹಾಳಾಗಿದ್ದರೆ, ಸುಟ್ಟು ಕರಕಲಾಗಿದ್ದರೆ ಅಥವಾ ನೋಟುಗಳು ಒಂದಕ್ಕೊಂದು ಬೇರ್ಪಡಿಸಲಾಗದಂತೆ ಅಂಟಿಕೊಂಡಿದ್ದರೆ ಸಾಮಾನ್ಯ ಬ್ಯಾಂಕ್ ಶಾಖೆಯಲ್ಲಿ ಬದಲಾಯಿಸಲು ಸಾಧ್ಯವಾಗದಿರಬಹುದು. ಇಂತಹ ನೋಟುಗಳನ್ನು RBIಯ ಸಂಬಂಧಿತ Issue Officeಗೆ ಸಲ್ಲಿಸಿ ವಿಶೇಷ ಪರಿಶೀಲನೆಗೆ ಒಳಪಡಿಸಬಹುದು.
ಬ್ಯಾಂಕ್‌ಗೆ ಹೋಗುವಾಗ ಏನು ಮಾಡಬೇಕು?
ಹಾಳಾದ ನೋಟುಗಳನ್ನು ಸಾಧ್ಯವಾದಷ್ಟು ಅವು ಇರುವ ಮೂಲ ಸ್ಥಿತಿಯಲ್ಲೇ ಬ್ಯಾಂಕ್‌ಗೆ ತೆಗೆದುಕೊಂಡು ಹೋಗುವುದು ಉತ್ತಮ. ನೋಟುಗಳನ್ನು ಮತ್ತಷ್ಟು ಹಾಳು ಮಾಡುವ ರೀತಿಯಲ್ಲಿ ಕತ್ತರಿಸುವುದು, ಅಂಟಿಸುವುದು ಅಥವಾ ಬದಲಾಯಿಸುವ ಪ್ರಯತ್ನ ಮಾಡಬಾರದು. ಬ್ಯಾಂಕ್ ಅಧಿಕಾರಿಗಳು ನೋಟಿನ ಸ್ಥಿತಿ ಮತ್ತು ಅದರಲ್ಲಿರುವ ಪ್ರಮುಖ ಲಕ್ಷಣಗಳನ್ನು ಪರಿಶೀಲಿಸಿ, ಆರ್‌ಬಿಐ ನಿಯಮಗಳ ಪ್ರಕಾರ ಮುಂದಿನ ಕ್ರಮ ಕೈಗೊಳ್ಳುತ್ತಾರೆ.
ಗಮನಿಸಿ
ಆರ್‌ಬಿಐ ನಿಯಮಗಳ ಪ್ರಕಾರ ಹರಿದ ನೋಟುಗಳ ವಿನಿಮಯಕ್ಕೆ ಬ್ಯಾಂಕ್‌ಗಳಲ್ಲಿ ವ್ಯವಸ್ಥೆ ಇದೆ. ಆರ್‌ಬಿಐಯ Master Direction ಕೂಡ ಹಾಳಾದ/ಮ್ಯುಟಿಲೇಟೆಡ್ ನೋಟುಗಳ ವಿನಿಮಯಕ್ಕೆ ಸಂಬಂಧಿಸಿದ ನಿಯಮಗಳನ್ನು ವಿವರಿಸುತ್ತದೆ. ಹೀಗಾಗಿ, ಹಳೆಯದಾಗಿರುವ, ಹರಿದಿರುವ ಅಥವಾ ಹಾನಿಗೊಳಗಾದ ನೋಟುಗಳನ್ನು ಇನ್ನು ಈ ಹಣಕ್ಕೆ ಬೆಲೆ ಇಲ್ಲ ಎಂದು ಭಾವಿಸಿ ಎಸೆಯಬೇಡಿ.
ಮೊದಲು ಹತ್ತಿರದ ಬ್ಯಾಂಕ್ ಶಾಖೆಗೆ ತೆಗೆದುಕೊಂಡು ಹೋಗಿ ಪರಿಶೀಲಿಸಿ. ನೋಟಿನ ಸ್ಥಿತಿಯನ್ನು ಆಧರಿಸಿ ಅದರ ಮೌಲ್ಯವನ್ನು ಮರಳಿ ಪಡೆಯುವ ಅವಕಾಶ ಇದೆ ಎಂದು ಅದಿಕಾರಿಗಳು ತಿಳಿಸಿದ್ದಾರೆ. ಗೆದ್ದಲು ತಿಂದು ಹಾಳಾದ ಮಂಗಿಲಾಲ್ ಅವರ 5 ಲಕ್ಷ ರುಪಾಯಿ ಪ್ರಕರಣದಲ್ಲಿಯೂ, ನೋಟುಗಳ ನಿಖರ ಸ್ಥಿತಿಯನ್ನು ಪರಿಶೀಲಿಸಿದ ಬಳಿಕವೇ ಅವುಗಳಿಗೆ ಎಷ್ಟು ಮೌಲ್ಯ ಸಿಗಬಹುದು ಎಂಬುದು ನಿರ್ಧಾರವಾಗಲಿದೆ.