ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ನರೇಂದ್ರ ಮೋದಿ–ಗಣಪತಿ ಒಟ್ಟಿಗೆ ಟೀ ಕುಡಿಯುವ ಪ್ರತಿಮೆ; ಗಣೇಶೋತ್ಸವದಲ್ಲಿ ರಾಜಕೀಯ ವಾಕ್ಸಮರ

Narendra Modi: ಪಶ್ಚಿಮ ಬಂಗಾಳದ ಹೌರಾದ ಗಣೇಶ ಪೂಜಾ ಮಂಟಪದಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ಭಗವಾನ್ ಗಣಪತಿ ಜತೆಗೆ ಚಹಾ ಕುಡಿಯುತ್ತಿರುವ ರೀತಿಯಲ್ಲಿ ಪ್ರದರ್ಶಿಸಿದ ವಿಗ್ರಹ ವಿವಾದಕ್ಕೆ ಕಾರಣವಾಗಿದೆ. ‘ಹಿಂದೂ ರಾಷ್ಟ್ರ’ ಎಂಬ ಬರಹ ಹಾಗೂ ಕೇಸರಿ ಭಾರತದ ನಕ್ಷೆಯೂ ಥೀಮ್‌ನಲ್ಲಿದೆ. ಆಯೋಜಕ ಖೋಕನ್ ಕನ್ರಾ ಇದು ತಮ್ಮ ವೈಯಕ್ತಿಕ ಕಲ್ಪನೆ ಎಂದು ಸ್ಪಷ್ಟಪಡಿಸಿದ್ದು, ಯಾವುದೇ ಧರ್ಮಕ್ಕೆ ಧಕ್ಕೆ ತರುವ ಉದ್ದೇಶವಿಲ್ಲ ಎಂದಿದ್ದಾರೆ. ಈ ಕುರಿತು ತೃಣಮೂಲ ಕಾಂಗ್ರೆಸ್ ನಾಯಕ ಅರೂಪ್ ರಾಯ್ ಆಕ್ಷೇಪ ವ್ಯಕ್ತಪಡಿಸಿದ್ದು, ಬಿಜೆಪಿ ಜಿಲ್ಲಾ ಕಾರ್ಯದರ್ಶಿ ಓಂ ಪ್ರಕಾಶ್ ಸಿಂಗ್ ಥೀಮ್‌ನಲ್ಲಿ ತಪ್ಪೇನಿಲ್ಲ ಎಂದು ಸಮರರ್ಥಿಸಿಕೊಂಡಿದ್ದಾರೆ.

ಗಣೇಶೋತ್ಸವದಲ್ಲಿ ಮೋದಿ–ಗಣೇಶ ಥೀಮ್‌ಗೆ ಟಿಎಂಸಿ ವಿರೋಧ

ಹೌರಾ ಗಣೇಶೋತ್ಸವದಲ್ಲಿ ಮೋದಿ–ಗಣೇಶ ಥೀಮ್ -

Profile
Sushmitha Jain Sep 16, 2026 9:23 PM

ಕೋಲ್ಕತಾ, ಸೆ. 16: ಪಶ್ಚಿಮ ಬಂಗಾಳದ ಹೌರಾ ಜಿಲ್ಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ (Pm Narendra Modi) ಮತ್ತು ಭಗವಾನ್ ಗಣೇಶರನ್ನು ಒಳಗೊಂಡ ಗಣೇಶ ಪೂಜೆಯ ಥೀಮ್ ರಾಜಕೀಯ ವಿವಾದಕ್ಕೆ ಕಾರಣವಾಗಿದೆ. ಪೂಜಾ ಮಂಟಪದಲ್ಲಿ ಪ್ರಧಾನಿ ಮೋದಿ ಹಾಗೂ ಗಣೇಶರು ಚಹಾ ಕುಡಿಯುತ್ತಿರುವ ರೀತಿಯ ದೃಶ್ಯ, ಕೇಸರಿ ಬಣ್ಣದ ಭಾರತದ ನಕ್ಷೆ ಮತ್ತು ಅದರ ಮಧ್ಯದಲ್ಲಿ ‘ಓಂ’ ಚಿಹ್ನೆಯನ್ನು ಪ್ರದರ್ಶಿಸಲಾಗಿದೆ. ಹಿನ್ನಲೆಯಲ್ಲಿ ‘ಹಿಂದೂ ರಾಷ್ಟ್ರ’ ಎಂಬ ಪದಗಳನ್ನೂ ಬರೆಯಲಾಗಿದೆ.

ಪೂಜೆಯ ಆಯೋಜಕ ಹಾಗೂ ವೃತ್ತಿಯಲ್ಲಿ ಪ್ರಮೋಟರ್ ಆಗಿರುವ ಖೋಕನ್ ಕನ್ರಾ, ಇದು ತಮ್ಮ ವೈಯಕ್ತಿಕ ಪೂಜೆ ಎಂದು ಹೇಳಿದ್ದಾರೆ. ಹಲವು ವರ್ಷಗಳಿಂದ ಪೂಜೆ ಆಯೋಜಿಸುತ್ತಿದ್ದು, ಪ್ರತಿವರ್ಷ ವಿಭಿನ್ನ ಥೀಮ್‌ಗಳನ್ನು ಆಯ್ಕೆ ಮಾಡುತ್ತೇನೆ ಎಂದಿದ್ದಾರೆ. ಈ ವರ್ಷದ ಥೀಮ್ ಕೂಡ ತಮ್ಮದೇ ಕಲ್ಪನೆಯಾಗಿದ್ದು, ಜನರಿಂದ ಉತ್ತಮ ಪ್ರತಿಕ್ರಿಯೆ ದೊರೆತಿದೆ ಎಂದು ತಿಳಿಸಿದ್ದಾರೆ.

ಯಾವುದೇ ಧರ್ಮದ ಭಾವನೆಗಳಿಗೆ ಧಕ್ಕೆ ತರುವ ಉದ್ದೇಶ ತಮ್ಮದಲ್ಲ ಎಂದು ಖೋಕನ್ ಕನ್ರಾ ಹೇಳಿದ್ದಾರೆ. ಇತ್ತೀಚೆಗೆ ತಾವು ಬಿಜೆಪಿ ಸೇರಿರುವ ಕಾರಣದಿಂದ ಈ ಥೀಮ್ ಮಾಡಲಾಗಿದೆ ಎಂಬ ಆರೋಪವೂ ತಪ್ಪು. ಪ್ರಧಾನಿ ನರೇಂದ್ರ ಮೋದಿ ಅವರನ್ನು ರಾಷ್ಟ್ರದ ಸಂಕೇತವಾಗಿ ಹಾಗೂ ಭಗವಾನ್ ಗಣೇಶರನ್ನು ಧರ್ಮದ ಸಂಕೇತವಾಗಿ ಪರಿಗಣಿಸಿ ಈ ಥೀಮ್ ರೂಪಿಸಿದ್ದಾಗಿ ಅವರು ತಿಳಿಸಿದ್ದಾರೆ.

ನರೇಂದ್ರ ಮೋದಿ ಶಾಲಾ ಸಹಪಾಠಿಯ ಜಮೀನು ವಿವಾದ ಅಂತ್ಯ: ಪ್ರಧಾನಿ ಜತೆ ಮಾತುಕತೆ ಬೆನ್ನಲ್ಲೇ ಭೂಮಿ ವಾಪಸ್

ಈ ಕುರಿತು ಪ್ರತಿಕ್ರಿಯಿಸಿದ ತೃಣಮೂಲ ಕಾಂಗ್ರೆಸ್‌ನ ಬಂಡಾಯ ನಾಯಕ ಹಾಗೂ ಹೌರಾ ಮಧ್ಯ ಕ್ಷೇತ್ರದ ಶಾಸಕ ಅರೂಪ್ ರಾಯ್, ಇತ್ತೀಚೆಗೆ ಬಿಜೆಪಿಗೆ ಸೇರಿದ ಕೆಲವರು ಪಕ್ಷವನ್ನು ಮೆಚ್ಚಿಸಲು ಇಂತಹ ಪ್ರಯತ್ನ ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ. ಇಂತಹ ಪ್ರದರ್ಶನ ಮಾಡಬಾರದು ಎಂದು ಹೇಳಿದ ಅವರು, ಈ ಬಗ್ಗೆ ಜಿಲ್ಲಾ ಮತ್ತು ರಾಜ್ಯ ಬಿಜೆಪಿ ಕ್ರಮ ಕೈಗೊಳ್ಳಬೇಕು ಎಂದು ಹೇಳಿದ್ದಾರೆ.

ಇದಕ್ಕೆ ಪ್ರತಿಕ್ರಿಯಿಸಿದ ಹೌರಾ ಜಿಲ್ಲಾ ಬಿಜೆಪಿ ಕಾರ್ಯದರ್ಶಿ ಓಂ ಪ್ರಕಾಶ್ ಸಿಂಗ್, ಪೂಜೆಯನ್ನು ಯಾರು ಆಯೋಜಿಸಿದ್ದಾರೆ ಎಂಬುದು ತಮಗೆ ತಿಳಿದಿಲ್ಲವಾದರೂ, ಇದರಲ್ಲಿ ತಪ್ಪೇನಿದೆ ಎಂಬುದು ಅರ್ಥವಾಗುತ್ತಿಲ್ಲ ಎಂದಿದ್ದಾರೆ. ಪಶ್ಚಿಮ ಬಂಗಾಳದಲ್ಲಿ ವಿವಿಧ ರೀತಿಯ ಪೂಜೆಗಳು ಮತ್ತು ವಿಭಿನ್ನ ಥೀಮ್‌ಗಳು ನಡೆಯುತ್ತವೆ ಎಂದು ಅವರು ತಿಳಿಸಿದ್ದಾರೆ. ಈ ವಿಚಾರವನ್ನು ಜಿಲ್ಲಾ ಬಿಜೆಪಿ ಚರ್ಚಿಸಿ, ಅಗತ್ಯವಿದ್ದರೆ ಕ್ರಮ ಕೈಗೊಳ್ಳಲಿದೆ ಎಂದೂ ಹೇಳಿದ್ದಾರೆ.