ಉತ್ತರಾಖಂಡದಲ್ಲಿ ಜಲವಿದ್ಯುತ್ ಸುರಂಗ ಕುಸಿತ: 16 ಕಾರ್ಮಿಕರ ರಕ್ಷಣೆ, ಇನ್ನೂ ಕೆಲವರು ಸಿಲುಕಿರುವ ಶಂಕೆ
ಉತ್ತರಾಖಂಡದ ಚಮೋಲಿ ಜಿಲ್ಲೆಯ ಮಾಯಾಪುರ ಪ್ರದೇಶದಲ್ಲಿ ನಿರ್ಮಾಣ ಹಂತದಲ್ಲಿದ್ದ ಟಿಹೆಚ್‌ಡಿಸಿ ಜಲವಿದ್ಯುತ್ ಯೋಜನೆಯ ಸುರಂಗದಲ್ಲಿ ಮಣ್ಣು, ಕಲ್ಲು ಮತ್ತು ನೀರು ನುಗ್ಗಿ ಅವಘಡ ಸಂಭವಿಸಿದೆ. ಸುರಂಗದಲ್ಲಿದ್ದ 16 ಕಾರ್ಮಿಕರನ್ನು ರಕ್ಷಿಸಲಾಗಿದ್ದು, ಇನ್ನೂ ಇಬ್ಬರು-ಮೂವರು ಕಾರ್ಮಿಕರು ಸಿಲುಕಿರುವ ಶಂಕೆ ಇದೆ. ಎನ್‌ಡಿಆರ್‌ಎಫ್, ಎಸ್‌ಡಿಆರ್‌ಎಫ್, ಸೇನೆ, ಐಟಿಬಿಪಿ, ಸಿಐಎಸ್‌ಎಫ್ ಹಾಗೂ ಸ್ಥಳೀಯ ರಕ್ಷಣಾ ತಂಡಗಳು ಕಾರ್ಯಾಚರಣೆ ಮುಂದುವರಿಸಿವೆ. ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಪರಿಸ್ಥಿತಿಯನ್ನು ನಿಗಾ ವಹಿಸಿದ್ದು, ಸಿಲುಕಿರುವವರನ್ನು ಸುರಕ್ಷಿತವಾಗಿ ರಕ್ಷಿಸುವುದು ಸರ್ಕಾರದ ಮೊದಲ ಆದ್ಯತೆ ಎಂದಿದ್ದಾರೆ.
ಉತ್ತರಾಖಂಡದ ಚಮೋಲಿ ಜಿಲ್ಲೆಯಲ್ಲಿ ಸುರಂಗ ಕುಸಿತ -
ಡೆಹ್ರಾಡೂನ್, ಆ. 13: ಉತ್ತರಾಖಂಡದ ಚಮೋಲಿ ಜಿಲ್ಲೆಯ ಮಾಯಾಪುರ (ಪಿಪಲಕೋಟಿ) ಪ್ರದೇಶದಲ್ಲಿ ಗುರುವಾರ ಸಂಜೆ ಭಾರೀ ಅನಾಹುತ ಸಂಭವಿಸಿದೆ. ನಿರ್ಮಾಣ ಹಂತದಲ್ಲಿದ್ದ ಟಿಎಚ್‌ಡಿಸಿ ಜಲವಿದ್ಯುತ್ ಯೋಜನೆಯ ಪ್ರಮುಖ ಸುರಂಗದೊಳಗೆ ಇದ್ದಕ್ಕಿದ್ದಂತೆ ಅಪಾರ ಪ್ರಮಾಣದ ಮಣ್ಣು, ಕಲ್ಲುಗಳ ಅವಶೇಷಗಳು ಮತ್ತು ನೀರು ನುಗ್ಗಿದ ಪರಿಣಾಮವಾಗಿ ಕಾರ್ಮಿಕರು ಒಳಗಡೆಯೇ ಸಿಲುಕಿಕೊಂಡಿದ್ದಾರೆ. ಈ ಘಟನೆ ತಿಳಿಯುತ್ತಿದ್ದಂತೆ ರಕ್ಷಣಾ ಪಡೆಗಳು ತಕ್ಷಣವೇ ಕಾರ್ಯಾಚರಣೆಗೆ ಇಳಿದು ಇದುವರೆಗೆ 16 ಜನರನ್ನು ರಕ್ಷಿಸುವಲ್ಲಿ ಯಶಸ್ವಿಯಾಗಿವೆ. ಸುರಂಗದೊಳಗೆ ಇನ್ನು ಉಳಿದಿರುವ ಕಾರ್ಮಿಕರನ್ನು ರಕ್ಷಿಸಲು ಕಾರ್ಯಾಚರಣೆಯನ್ನು ನಡೆಸಲಾಗುತ್ತಿದೆ.
ಅಧಿಕಾರಿಗಳು ನೀಡಿದ ಪ್ರಾಥಮಿಕ ಮಾಹಿತಿಯ ಪ್ರಕಾರ, ಎಚ್‌ಸಿಸಿ ಕಂಪನಿಯು ನಿರ್ಮಿಸುತ್ತಿದ್ದ ಈ ಸುರಂಗದಲ್ಲಿ ಸಂಜೆ ಸುಮಾರು 7:05ರ ವೇಳೆಗೆ ಈ ದುರಂತ ಸಂಭವಿಸಿದೆ. ಅಪಘಾತದ ಸಮಯದಲ್ಲಿ ಸುರಂಗದೊಳಗೆ ಸುಮಾರು 18-19 ಕಾರ್ಮಿಕರು ಕಾರ್ಯನಿರ್ವಹಿಸುತ್ತಿದ್ದರೆಂದು ತಿಳಿದುಬಂದಿದೆ. ಘಟನೆ ನಡೆದ ತಕ್ಷಣವೇ ಸ್ಥಳಕ್ಕೆ ಧಾವಿಸಿದ ತುರ್ತು ಸೇವೆಗಳು ಶೋಧ ಹಾಗೂ ರಕ್ಷಣಾ ಕಾರ್ಯಾಚರಣೆಯನ್ನು ತೀವ್ರಗೊಳಿಸಿದವು.
ಉತ್ತರಾಖಂಡದ ಚಮೋಲಿಯಲ್ಲಿನ ರಕ್ಷಣಾ ಕಾರ್ಯಾಚರಣೆ:
#WATCH | Chamoli, Uttarakhand: Rescue operation underway to rescue trapped workers after a sudden inflow of debris and water into THDC's under-construction tunnel in the Mayapur-Pipalkoti area of Chamoli district. pic.twitter.com/vlUvCm2rwA
— ANI (@ANI) August 13, 2026
ಚಮೋಲಿ ಜಿಲ್ಲಾಧಿಕಾರಿ ಗೌರವ್ ಕುಮಾರ್ ಮಾತನಾಡಿ, "ಇದು ಟಿಎಚ್‌ಡಿಸಿ ಜಲವಿದ್ಯುತ್ ಯೋಜನೆಗಾಗಿ ನಿರ್ಮಿಸಲಾಗುತ್ತಿರುವ ಸುರಂಗ. ಸಂಜೆ ಸುಮಾರು 6:30ರಿಂದ 6:45ರ ನಡುವೆ ಸುರಂಗದೊಳಗೆ ಹಠಾತ್ತಾಗಿ ಹೆಚ್ಚಿನ ಪ್ರಮಾಣದ ಕಲ್ಲು-ಮಣ್ಣಿನ ಅವಶೇಷಗಳು ಮತ್ತು ನೀರು ನುಗ್ಗಿದೆ. ಇದರಿಂದಾಗಿ ಆ ಸಮಯದಲ್ಲಿ ಕರ್ತವ್ಯದಲ್ಲಿದ್ದ ಶಿಫ್ಟ್‌ನ ಕಾರ್ಮಿಕರು ಒಳಗೆ ಸಿಲುಕಿಕೊಂಡರು. ಪ್ರಸ್ತುತ ಎನ್‌ಡಿಆರ್‌ಎಫ್ ಮತ್ತು ಎಸ್‌ಡಿಆರ್‌ಎಫ್ ತಂಡಗಳು ಅಗತ್ಯ ಯಂತ್ರೋಪಕರಣಗಳೊಂದಿಗೆ ರಕ್ಷಣಾ ಕಾರ್ಯಾಚರಣೆಯಲ್ಲಿ ನಿರತವಾಗಿವೆ. ಮುಂದಿನ ಕೆಲವು ಗಂಟೆಗಳಲ್ಲಿ ಉಳಿದ ಕಾರ್ಮಿಕರನ್ನೂ ಸುರಕ್ಷಿತವಾಗಿ ಹೊರತರುವ ಭರವಸೆಯಿದೆ" ಎಂದು ತಿಳಿಸಿದ್ದಾರೆ.
ಪರಿಸ್ಥಿತಿಯ ಗಂಭೀರತೆಯನ್ನು ಪರಿಗಣಿಸಿ, ಭಾರತೀಯ ಸೇನೆ, ಇಂಡೋ-ಟಿಬೆಟಿಯನ್ ಬೋರ್ಡರ್ ಪೊಲೀಸ್ (ಐಟಿಬಿಪಿ), ಎನ್‌ಡಿಆರ್‌ಎಫ್ ಮತ್ತು ಎಸ್‌ಡಿಆರ್‌ಎಫ್ ತಂಡಗಳು ಸ್ಥಳಕ್ಕೆ ಧಾವಿಸಿವೆ. ಇದರೊಂದಿಗೆ ಜಿಲ್ಲಾ ಘಟನಾ ಸ್ಪಂದನಾ ಪಡೆ, ಸ್ಥಳೀಯ ಪೊಲೀಸರು ಮತ್ತು ಕೇಂದ್ರೀಯ ಕೈಗಾರಿಕಾ ಭದ್ರತಾ ಪಡೆ (ಸಿಐಎಸ್‌ಎಫ್) ಸಿಬ್ಬಂದಿ ಸಹ ಸ್ಥಳದಲ್ಲಿದ್ದು ಜಂಟಿಯಾಗಿ ರಕ್ಷಣಾ ಕಾರ್ಯಾಚರಣೆಯ ಮೇಲ್ವಿಚಾರಣೆ ನಿರ್ವಹಿಸುತ್ತಿದ್ದಾರೆ.
ಎಐಯ ಕರಾಳ ಮುಖ ಡೀಪ್‌ಫೇಕ್: ಬಲಿಯಾಗದಿರಲು ಈ ಟಿಪ್ಸ್ ಫಾಲೋ ಮಾಡಿ
ಮುಖ್ಯಮಂತ್ರಿಯಿಂದ ರಕ್ಷಣಾ ಕಾರ್ಯಾಚರಣೆಯ ಪರಿಶೀಲನೆ
ದುರಂತದ ಸುದ್ದಿ ತಿಳಿಯುತ್ತಿದ್ದಂತೆಯೇ ಉತ್ತರಾಖಂಡ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಆಘಾತ ವ್ಯಕ್ತಪಡಿಸಿದ್ದು, ರಕ್ಷಣಾ ಕಾರ್ಯಾಚರಣೆಯನ್ನು ಯುದ್ಧೋಪಾದಿಯಲ್ಲಿ ಕೈಗೊಳ್ಳುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಎಲ್ಲಾ ಇಲಾಖೆಗಳು ಮತ್ತು ಜಿಲ್ಲಾಡಳಿತವು ಪರಸ್ಪರ ಸಮನ್ವಯದಿಂದ ಕಾರ್ಯನಿರ್ವಹಿಸಿ, ರಕ್ಷಣಾ ಕಾರ್ಯವನ್ನು ವೇಗಗೊಳಿಸಬೇಕೆಂದು ಅವರು ನಿರ್ದೇಶಿಸಿದ್ದಾರೆ.
ಮುಖ್ಯಮಂತ್ರಿ ತಾವು ವೈಯಕ್ತಿಕವಾಗಿ ಪರಿಸ್ಥಿತಿಯನ್ನು ನಿಕಟವಾಗಿ ಮೇಲ್ವಿಚಾರಣೆ ಮಾಡುತ್ತಿರುವುದಾಗಿ ಮತ್ತು ಹಿರಿಯ ಅಧಿಕಾರಿಗಳೊಂದಿಗೆ ನಿರಂತರ ಸಂಪರ್ಕದಲ್ಲಿದ್ದು ಮಾಹಿತಿಯನ್ನು ಪಡೆಯುತ್ತಿರುವುದಾಗಿ ತಿಳಿಸಿದ್ದಾರೆ. "ಸುರಂಗದಲ್ಲಿ ಸಿಲುಕಿರುವ ಪ್ರತಿಯೊಬ್ಬ ವ್ಯಕ್ತಿಯನ್ನು ಸುರಕ್ಷಿತವಾಗಿ ತೆರವುಗೊಳಿಸುವುದೇ ಸರ್ಕಾರದ ಮೊದಲ ಆದ್ಯತೆಯಾಗಿದೆ. ಇದಕ್ಕಾಗಿ ಅಗತ್ಯವಿರುವ ಎಲ್ಲಾ ಸಂಪನ್ಮೂಲಗಳನ್ನು ನಿಯೋಜಿಸಲಾಗಿದೆ" ಎಂದು ಅವರು ಹೇಳಿದ್ದಾರೆ. ಅಲ್ಲದೆ, ಯಾವುದೇ ರೀತಿಯ ವಿಳಂಬ ಅಥವಾ ಲೋಪವಾಗದಂತೆ ನೋಡಿಕೊಳ್ಳಲು ಮತ್ತು ಸಂತ್ರಸ್ತ ಕುಟುಂಬಗಳಿಗೆ ಅಗತ್ಯವಿರುವ ಎಲ್ಲ ನೆರವು ನೀಡಲು ತಿಳಿಸಿದ್ದಾರೆ.
ವರದಿ ಸಿದ್ಧವಾಗುವವರೆಗೂ ಕಾರ್ಯಾಚರಣೆ ಮುಂದುವರಿದಿದ್ದು, ತುರ್ತು ತಂಡಗಳು ಅವಶೇಷ ತೆರವುಗೊಳಿಸುತ್ತಿವೆ. ಸುರಂಗ ಕುಸಿತಕ್ಕೆ ನಿಖರ ಕಾರಣ ಇನ್ನೂ ತಿಳಿದುಬಂದಿಲ್ಲ.