ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಇರಾನ್-ಅಮೆರಿಕ ಯುದ್ಧದಲ್ಲಿ ಪಾಕಿಸ್ತಾನ ಮಧ್ಯಸ್ಥಿಕೆ: ನರೇಂದ್ರ ಮೋದಿ ಸರ್ಕಾರಕ್ಕೆ ರಾಜತಾಂತ್ರಿಕ ಹಿನ್ನಡೆ ಎಂದ ರಾಹುಲ್ ಗಾಂಧಿ

Rahul Gandhi: ಇರಾನ್-ಅಮೆರಿಕ ಸಂಘರ್ಷದಲ್ಲಿ ಪಾಕಿಸ್ತಾನ ಮಧ್ಯಸ್ಥಿಕೆ ವಹಿಸಿರುವುದನ್ನು ಉಲ್ಲೇಖಿಸಿ, ಮೋದಿ ಸರ್ಕಾರದ ವಿದೇಶಾಂಗ ನೀತಿ ವಿಫಲವಾಗಿದೆ ಎಂದು ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಆರೋಪಿಸಿದ್ದಾರೆ. ಭಾರತಕ್ಕೆ ಜಾಗತಿಕ ಮಟ್ಟದಲ್ಲಿ ಶಾಂತಿ ಸ್ಥಾಪಿಸುವ ಅವಕಾಶವಿದ್ದರೂ ಅದನ್ನು ಕಳೆದುಕೊಂಡಿದೆ ಎಂದು ಅವರು ಟೀಕಿಸಿದ್ದಾರೆ. ಚೀನಾ ಗಡಿ ವಿವಾದ, ಜಿಎಸ್‌ಟಿ, ನೋಟು ರದ್ದತಿ ಹಾಗೂ ಕೇಂದ್ರ ಸರ್ಕಾರದ ಆಂತರಿಕ ನೀತಿಗಳ ಬಗ್ಗೆಯೂ ರಾಹುಲ್ ಗಾಂಧಿ ವಾಗ್ದಾಳಿ ನಡೆಸಿದ್ದಾರೆ.

ಇರಾನ್-ಅಮೆರಿಕ ಸಂಘರ್ಷದಲ್ಲಿ ಪಾಕಿಸ್ತಾನ ಮಧ್ಯಸ್ಥಿಕೆ

ರಾಹುಲ್ ಗಾಂಧಿ (ಸಂಗ್ರಹ ಚಿತ್ರ) -

Profile
Sushmitha Jain Aug 13, 2026 10:58 PM

ನವದೆಹಲಿ, ಆ. 13: ಅಮೆರಿಕ ಮತ್ತು ಇಸ್ರೇಲ್ (US-Israel) ಪಡೆಗಳು ಇರಾನ್ (Iran) ಮೇಲೆ ಫೆಬ್ರವರಿ 28ರಂದು ನಡೆಸಿದ ಮಿಲಿಟರಿ ದಾಳಿಯ ನಂತರ ಪಶ್ಚಿಮ ಏಷ್ಯಾದಲ್ಲಿ ತೀವ್ರ ಸ್ವರೂಪದ ಸಮರದ ವಾತಾವರಣ ನಿರ್ಮಾಣವಾಗಿ, ಆಯಕಟ್ಟಿನ ಹೊರ್ಮುಜ್ ಜಲಸಂಧಿಯಲ್ಲಿ ಹಡಗುಗಳ ಸಂಚಾರದ ಮೇಲೆ ಸಂಪೂರ್ಣ ಪರಿಣಾಮ ಬೀರಿದೆ ಎಂದು ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಹೇಳಿದ್ದಾರೆ. ನವದೆಹಲಿಯ 'ರಚನಾತ್ಮಕ ಕಾಂಗ್ರೆಸ್' ರಾಷ್ಟ್ರೀಯ ಸಮಾವೇಶದಲ್ಲಿ ಗುರುವಾರ ಮಾತನಾಡಿದ ಅವರು, ಕೇಂದ್ರ ಸರ್ಕಾರದ ಜಾಗತಿಕ ರಾಜತಾಂತ್ರಿಕ ನೀತಿ ಸಂಪೂರ್ಣ ವಿಫಲವಾಗಿದೆ ಎಂದು ಆರೋಪಿಸಿದ್ದಾರೆ.

ಏಪ್ರಿಲ್‌ನಲ್ಲಿ ಉಭಯ ದೇಶಗಳ ನಡುವೆ ತಾತ್ಕಾಲಿಕ ಯುದ್ಧ ವಿರಾಮ ತರಲು ನೆರೆ ರಾಷ್ಟ್ರ ಪಾಕಿಸ್ತಾನವೇ ಪ್ರಮುಖ ಮಧ್ಯಸ್ಥಿಕೆ ವಹಿಸುತ್ತಿದ್ದರೂ, ಪ್ರಧಾನಿ ನರೇಂದ್ರ ಮೋದಿ ಬರಿ ಮೂಕ ಪ್ರೇಕ್ಷಕರಾಗಿ ನೋಡುತ್ತ ಕುಳಿತಿದ್ದಾರೆ ಎಂದು ದೂರಿದ್ದಾರೆ. ಭಾರತವು ತನ್ನ ಹಳೆಯ ಮಿತ್ರರಾಷ್ಟ್ರ ಇರಾನ್ ಹಾಗೂ ಅಮೆರಿಕ ಮತ್ತು ರಷ್ಯಾದೊಂದಿಗಿನ ದೀರ್ಘಕಾಲದ ನಿಕಟ ರಾಜತಾಂತ್ರಿಕ ಸಂಬಂಧಗಳನ್ನು ಬಳಸಿಕೊಂಡು ಜಾಗತಿಕ ಮಟ್ಟದಲ್ಲಿ ಮಧ್ಯಸ್ಥಿಕೆ ವಹಿಸಿ ಶಾಂತಿ ಸ್ಥಾಪಿಸುವ ಐತಿಹಾಸಿಕ ಅವಕಾಶವನ್ನು ಕಳೆದುಕೊಂಡಿದೆ ಎಂದು ಅವರು ತೀವ್ರ ಕಳವಳ ವ್ಯಕ್ತಪಡಿಸಿದ್ದಾರೆ.

ಇಂದಿರಾ ಗಾಂಧಿ ಅವರಂತಹ ದೃಢ ನಾಯಕತ್ವ ದೇಶದಲ್ಲಿದ್ದರೆ ಭಾರತ ತನ್ನ ಜಾಗತಿಕ ಶಕ್ತಿಯನ್ನು ಪ್ರದರ್ಶಿಸಿ ಬಿಕ್ಕಟ್ಟು ಪರಿಹರಿಸುತ್ತಿತ್ತು. ಆದರೆ ಮೋದಿ ಸರ್ಕಾರದ ರಾಜತಾಂತ್ರಿಕ ವೈಫಲ್ಯದಿಂದಾಗಿ ಆ ಸ್ಥಾನವನ್ನು ಪಾಕಿಸ್ತಾನ ಪಡೆದುಕೊಂಡಿದೆ ಎಂದು ರಾಹುಲ್ ಗಾಂಧಿ ಲೇವಡಿ ಮಾಡಿದರು.

ಕೇರಳ ಪಿಎಸ್‌ಸಿಯಲ್ಲಿ ಗಂಭೀರ ಅಕ್ರಮ: ತನಿಖೆಯ ನಂತರ ಸೂಕ್ತ ಕ್ರಮದ ಎಚ್ಚರಿಕೆ ನೀಡಿದ ಸಿಎಂ ಸತೀಶನ್

ಚೀನಾ ಗಡಿ ವಿವಾದ ಮತ್ತು ಮೋದಿ ಸರ್ಕಾರಕ್ಕೆ ಕಟು ಟೀಕೆ

ಚೀನಾ ಗಡಿ ವಿಚಾರದಲ್ಲೂ ಕೇಂದ್ರ ಸರ್ಕಾರದ ಧೋರಣೆಯನ್ನು ಟೀಕಿಸಿದ ಅವರು, ಅರುಣಾಚಲ ಪ್ರದೇಶದ ಗಸ್ತು ಪ್ರದೇಶಗಳಲ್ಲಿ ಭಾರತೀಯ ಯೋಧರು ಗಸ್ತು ತಿರುಗಲು ಚೀನಾ ಪಡೆಗಳು ತಡೆಯೊಡ್ಡುತ್ತಿವೆ ಎಂದು ದೂರಿದ್ದಾರೆ. ಗಲ್ವಾನ್ ಸಂಘರ್ಷದ ನಂತರ ಭಾರತದ ಒಂದಿಂಚು ಜಾಗವೂ ಕೈತಪ್ಪಿಲ್ಲ ಎಂಬ ಪ್ರಧಾನಿ ಮೋದಿ ಅವರ ಹೇಳಿಕೆಯನ್ನು ಚೀನಾದ ರಾಜತಾಂತ್ರಿಕರು ನಮ್ಮ ವಿರುದ್ಧವೇ ಅಸ್ತ್ರವಾಗಿ ಬಳಸಿಕೊಳ್ಳುತ್ತಿದ್ದಾರೆ ಎಂದು ಪ್ರತಿಪಾದಿಸಿದರು.

ಇದರೊಂದಿಗೆ ದೇಶದ ಆಂತರಿಕ ಮತ್ತು ವಿದೇಶಾಂಗ ನೀತಿಯನ್ನು ಸಂಪೂರ್ಣವಾಗಿ ಹಾಳುಗೆಡವಲಾಗಿದೆ ಎಂದ ಅವರು, ಪ್ರಧಾನಿ ಮೋದಿ ಹಾಗೂ ಗೃಹ ಸಚಿವ ಅಮಿತ್ ಶಾ ದೇಶದಲ್ಲಿ ಹೆಚ್ಚುತ್ತಿರುವ ಜನರ ಧ್ವನಿ ಕಂಡು ಭೀತಿಗೊಂಡಿದ್ದು ನೆಮ್ಮದಿಯ ನಿದ್ರೆ ಕಳೆದುಕೊಂಡಿದ್ದಾರೆ ಎಂದು ಟೀಕಿಸಿದ್ದಾರೆ. ಮಳೆಗಾಲದ ಸಂಸತ್ ಅಧಿವೇಶನದಲ್ಲಿ ಅಮಿತ್ ಶಾ 20 ದಿನಗಳ ಕಾಲ ಸಂಸತ್ತಿಗೆ ಬರದೆ ಎಲ್ಲಿ ಮಾಯವಾಗಿದ್ದರು ಎಂದು ಪ್ರಶ್ನಿಸಿದ್ದಾರೆ. ಅಲ್ಲದೆ, ನೋಟು ರದ್ದತಿ ಮತ್ತು ಜಿಎಸ್‌ಟಿಯಿಂದಾಗಿ ತೊಂದರೆಗೊಳಗಾದ ಸಣ್ಣ ವ್ಯಾಪಾರಿಗಳನ್ನು ನಿರ್ಲಕ್ಷಿಸಿರುವ ರಾಷ್ಟ್ರೀಯ ಸ್ವಯಂಸೇವಕ ಸಂಘವು (ಆರ್‌ಎಸ್‌ಎಸ್), ಇಂದು ಅದಾನಿಯಂತಹ ಬೃಹತ್ ಬಂಡವಾಳಶಾಹಿಗಳ ಕೈಗೊಂಬೆಯಾಗಿ ಬದಲಾಗಿದೆ ಎಂದು ಕಾಂಗ್ರೆಸ್ ನಾಯಕ ತೀವ್ರವಾಗಿ ಆಕ್ಷೇಪಿಸಿದ್ದಾರೆ.