ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಯುನೆಸ್ಕೋ ವಿಶ್ವ ಪರಂಪರೆ ತಾತ್ಕಾಲಿಕ ಪಟ್ಟಿಗೆ ಭಾರತದ 5 ಹೊಸ ತಾಣಗಳ ಸೇರ್ಪಡೆ

ಮಧ್ಯ ಪ್ರದೇಶದ ಉದಯಗಿರಿ ಸೇರಿದಂತೆ ಭಾರತದ ಐದು ತಾಣಗಳನ್ನು ಯುನೆಸ್ಕೋ ವಿಶ್ವ ಪರಂಪರೆಯ ತಾತ್ಕಾಲಿಕ ಪಟ್ಟಿಗೆ ಸೇರಿಸಲಾಗಿದೆ. ಈ ಐದು ತಾಣಗಳ ಸೇರ್ಪಡೆ ಮೂಲಕ ಈಗ ಯುನೆಸ್ಕೋ ತಾತ್ಕಾಲಿಕ ಪಟ್ಟಿಯಲ್ಲಿ ಭಾರತದ ಒಟ್ಟು 78 ತಾಣಗಳು ಸ್ಥಾನ ಪಡೆದಿವೆ. ಇದು ಭಾರತದ ಶ್ರೀಮಂತ ಪರಂಪರೆಗೆ ಒಂದು ಹೆಮ್ಮೆಯ ಮೈಲಿಗಲ್ಲು ಎಂದು ಪತ್ರಿಕಾ ಮಾಹಿತಿ ಕಾರ್ಯಾಲಯ ಸಾಂಸ್ಕೃತಿಕ ವಿಭಾಗ ಹೇಳಿದೆ.

ಯುನೆಸ್ಕೋ ವಿಶ್ವ ಪರಂಪರೆ ಪಟ್ಟಿಗೆ ಭಾರತದ 5 ತಾಣಗಳ ಸೇರ್ಪಡೆ

ಸಂಗ್ರಹ ಚಿತ್ರ -

ನವದೆಹಲಿ: ಉದಯಗಿರಿಯ ಗುಹೆಗಳು (Udaigiri hill), ಬಾಗ್ ಗುಹೆ ವರ್ಣಚಿತ್ರಗಳು (Bagh Cave Paintings), ಚಂಬಲ್ ಕಣಿವೆಯ (Chambal Valley) ದೇವಾಲಯಗಳ ಸಮೂಹ, ಗಿನ್ನೋರ್‌ಗಢ್ (Ginnorgarh) ಮತ್ತು ಭಾರತ- ದಕ್ಷಿಣ ಆಫ್ರಿಕಾದ ಸತ್ಯಾಗ್ರಹದ ತಾಣಗಳು (Sites of Satyagraha) ಈಗ ಯುನೆಸ್ಕೋ ವಿಶ್ವ ಪರಂಪರೆಯ ತಾತ್ಕಾಲಿಕ ಪಟ್ಟಿಗೆ ಸೇರ್ಪಡೆಯಾಗಿದೆ. ಈ ಮೂಲಕ ಭಾರತದ ಒಟ್ಟು 78 ತಾಣಗಳು ಯುನೆಸ್ಕೋ ತಾತ್ಕಾಲಿಕ ಪಟ್ಟಿಯಲ್ಲಿ (World Heritage site) ಸ್ಥಾನ ಪಡೆದಿವೆ ಎಂದು ಪತ್ರಿಕಾ ಮಾಹಿತಿ ಕಾರ್ಯಾಲಯದ ಸಾಂಸ್ಕೃತಿಕ ವಿಭಾಗದ ಅಧಿಕಾರಿಗಳು ಮಂಗಳವಾರ ತಿಳಿಸಿದ್ದಾರೆ.

ಮಧ್ಯಪ್ರದೇಶದ ಉದಯಗಿರಿ ಬೆಟ್ಟವು 4ನೇ ಶತಮಾನದ ಅಂತ್ಯ ಮತ್ತು 5ನೇ ಶತಮಾನದ ಆರಂಭದಲ್ಲಿ ಗುಪ್ತ ಸಾಮ್ರಾಜ್ಯದ ಆಶ್ರಯದಲ್ಲಿ ನಿರ್ಮಿಸಲಾಗಿದೆ. ಬಂಡೆಯನ್ನು ಕೊರೆದು ಇದನ್ನು ಮಾಡಲಾಗಿದೆ ಎಂದು ಯುನೆಸ್ಕೋ ವೆಬ್‌ಸೈಟ್ ಮಾಹಿತಿ ತಿಳಿಸಿದೆ.

ಚುನಾವಣಾ ಆಯುಕ್ತರ ರಾಜಿನಾಮೆ ಸೇರಿ ಮೂರು ಬೇಡಿಕೆ: ಚುನಾವಣಾ ಆಯೋಗಕ್ಕೆ ಸಿಜೆಪಿ ಖಡಕ್ ಎಚ್ಚರಿಕೆ

ಮಧ್ಯಪ್ರದೇಶದ ಉದಯಗಿರಿ ಗುಹೆಗಳು ಸೇರಿದಂತೆ ನಾಲ್ಕು ತಾಣಗಳು ಮತ್ತು ಭಾರತ ಹಾಗೂ ದಕ್ಷಿಣ ಆಫ್ರಿಕಾ ಎರಡರಲ್ಲೂ ಇರುವ ಸತ್ಯಾಗ್ರಹಕ್ಕೆ ಸಂಬಂಧಿಸಿದ ಸ್ಥಳಗಳು ಹೀಗೆ ಭಾರತದ ಒಟ್ಟು ಐದು ಹೊಸ ತಾಣಗಳನ್ನು ಯುನೆಸ್ಕೋ ವಿಶ್ವ ಪರಂಪರೆಯ ತಾತ್ಕಾಲಿಕ ಪಟ್ಟಿಗೆ ಸೇರಿಸಲಾಗಿದೆ.

ಈ ಕುರಿತು ಪತ್ರಿಕಾ ಮಾಹಿತಿ ಕಾರ್ಯಾಲಯದ ಸಾಂಸ್ಕೃತಿಕ ವಿಭಾಗವು ಸಾಮಾಜಿಕ ಮಾಧ್ಯಮದ ಎಕ್ಸ್ ಖಾತೆಯಲ್ಲಿ ಪೋಸ್ಟ್ ಮಾಡಿದ್ದು, ಬಾಗ್ ಗುಹೆ ವರ್ಣಚಿತ್ರಗಳು, ಚಂಬಲ್ ಕಣಿವೆಯ ದೇವಾಲಯಗಳ ಸಮೂಹ, ಉದಯಗಿರಿ ಗುಹೆಗಳು, ಗಿನ್ನೋರ್‌ಗಢ್ ಮತ್ತು ಭಾರತ-ದಕ್ಷಿಣ ಆಫ್ರಿಕಾದ ಸತ್ಯಾಗ್ರಹದ ತಾಣಗಳು ಯುನೆಸ್ಕೋ ತಾತ್ಕಾಲಿಕ ಪಟ್ಟಿಯಲ್ಲಿ ಸೇರ್ಪಡೆಗೊಂಡಿರುವುದು ದೇಶದ ಪರಂಪರೆಗೆ ಸಂಬಂಧಿಸಿ ಪ್ರಮುಖ ಮೈಲುಗಲ್ಲು. ಯುನೆಸ್ಕೋ ತಾತ್ಕಾಲಿಕ ಪಟ್ಟಿಯಲ್ಲಿ ಭಾರತದ ಐದು ಹೊಸ ತಾಣಗಳ ಸೇರ್ಪಡೆಯೊಂದಿಗೆ ಈಗ ಒಟ್ಟು 78 ತಾಣಗಳು ಸೇರಿಕೊಂಡಿವೆ ಎಂದು ಹೇಳಿದೆ.



ಉದಯಗಿರಿ ಬೆಟ್ಟವು ಇಪ್ಪತ್ತು ಗುಹೆಗಳು, ಶಿಲ್ಪಕಲಾ ಫಲಕಗಳು, ಶಾಸನಗಳು, ಸಂಚಾರ ಮಾರ್ಗಗಳು, ಆರಂಭಿಕ ಗುರುತುಗಳು ಮತ್ತು ಶಾಸನಗಳು, ಬಂಡೆಯ ಮೇಲ್ಮೈ, ಭೌಗೋಳಿಕ ಮತ್ತು ಜಲವಿಜ್ಞಾನದ ವೈಶಿಷ್ಟ್ಯಗಳನ್ನು ಒಳಗೊಂಡಿದೆ. ಇದು ಒಂದು ಸಮಗ್ರ ಧಾರ್ಮಿಕ ಆಚರಣೆಯ ಭೂದೃಶ್ಯವಾಗಿದೆ.

ಪಶ್ಚಿಮ ಮಧ್ಯಪ್ರದೇಶದ ಬಾಗ್ನಿ ನದಿಯ ದಡದಲ್ಲಿರುವ ವಿಂಧ್ಯಾ ಪರ್ವತ ಶ್ರೇಣಿಯ ದಕ್ಷಿಣ ಇಳಿಜಾರಿನಲ್ಲಿರುವ ಒಂಬತ್ತು ಬಂಡೆ ಕೊರೆದ ಬೌದ್ಧ ಗುಹೆಗಳ ಸಮೂಹವೇ 'ಬಾಗ್ ಗುಹೆಗಳು'. ಬೆಸಾಲ್ಟ್ ಶಿಲೆಗಳಿಂದ ಕೂಡಿದ ಈ ಪ್ರದೇಶ ಮರಳುಗಲ್ಲಿನ ರಚನೆ ಹೊಂದಿರುವ ಏಕೈಕ ತಾಣವಾಗಿದೆ.

ರಾಜ್ ಗೊಂಡ್ ಆಡಳಿತಗಾರರ ಪ್ರಮುಖ ಕೋಟೆ, ರಾಜಧಾನಿಯಾಗಿದ್ದ ಗಿನ್ನೋರ್‌ಗಢ್ ಕೋಟೆ ಮತ್ತು ಮಧ್ಯಪ್ರದೇಶದ ಚಂಬಲ್ ಕಣಿವೆಯ ದೇವಾಲಯಗಳ ಸಮೂಹಗಳಾದ ಬಟೇಶ್ವರ್, ಪಡಾವಲಿ ಹಾಗೂ ಕಕರ್ಮಠ್ ಕೂಡ ಯುನೆಸ್ಕೊ ಪಟ್ಟಿಗೆ ಸೇರ್ಪಡೆಗೊಂಡಿವೆ. ಇನ್ನೊಂದು ಮಹಾತ್ಮ ಗಾಂಧಿಯವರ ಸತ್ಯಾಗ್ರಹದ ಪರಿಕಲ್ಪನೆಯ ವಿಕಾಸವನ್ನು ಬಿಂಬಿಸುವ ಪ್ರಸ್ತಾವಿತ 'ಸರಣಿ ಅಂತಾರಾಷ್ಟ್ರೀಯ ಆಸ್ತಿ'.

52ರ ವಯಸ್ಸಿನಲ್ಲೂ ಯುವಕರನ್ನೇ ನಾಚಿಸುವ ಫಿಟ್‌ನೆಸ್‌; ಸಿಎಂ ವಿಜಯ್‌ ಡಯಟ್‌ ಹೇಗಿರುತ್ತೆ ಗೊತ್ತಾ?

ಇದು ದಕ್ಷಿಣ ಆಫ್ರಿಕಾದಲ್ಲಿ ಸತ್ಯಾಗ್ರಹದ ಪರಿಕಲ್ಪನೆಯ ಉದಯದಿಂದ ಪ್ರಾರಂಭವಾಗಿ ಭಾರತದಲ್ಲಿ ಅದರ ಪ್ರಯೋಗ, ಕ್ರೋಢೀಕರಣ ಮತ್ತು ಸಾಂಸ್ಥಿಕರಣದ ಹಂತಗಳವರೆಗೆ ಸಾಗುವ ಪ್ರಕ್ರಿಯೆಯನ್ನು ಒಳಗೊಂಡಿದೆ. ಈ ತಾಣವು ಒಟ್ಟು ಒಂಬತ್ತು ಘಟಕಗಳನ್ನು ಒಳಗೊಂಡಿರಲಿದೆ. ಇವುಗಳಲ್ಲಿ ಎರಡು ದಕ್ಷಿಣ ಆಫ್ರಿಕಾದಲ್ಲಿದ್ದು, ಏಳು ಭಾರತದಲ್ಲಿವೆ. ಅವುಗಳೆಂದರೆ ದಕ್ಷಿಣ ಆಫ್ರಿಕಾದ ಪೀಟರ್‌ಮರಿಟ್ಸ್‌ಬರ್ಗ್ ನಿಲ್ದಾಣ, ಫೀನಿಕ್ಸ್ ಸೆಟಲ್‌ಮೆಂಟ್, ಭಾರತದ ಮಹಾತ್ಮ ಗಾಂಧಿ ಸತ್ಯಾಗ್ರಹ ಸ್ಮಾರಕ, ಸಾಬರಮತಿ ಆಶ್ರಮ, ಮಣಿ ಭವನ ಸಂಕೀರ್ಣ, ಹರಿಜನ ಸೇವಕ ಸಂಘದ ಸಂಕೀರ್ಣ, ಸೇವಾಗ್ರಾಮ ಆಶ್ರಮ, ಆಗಾ ಖಾನ್ ಅರಮನೆ ಮತ್ತು ಗಾಂಧಿ ಸ್ಮೃತಿ ನಿವಾಸ.

ಒಂದು ತಾಣವನ್ನು ವಿಶ್ವ ಪರಂಪರೆಯ ತಾಣವಾಗಿ ಮಾನ್ಯತೆಗಾಗಿ ಪರಿಗಣಿಸುವ ಮೊದಲು ಅದನ್ನು ಯುನೆಸ್ಕೋದ ತಾತ್ಕಾಲಿಕ ಪಟ್ಟಿಯಲ್ಲಿ ಗುರುತಿಸಲಾಗುತ್ತದೆ.