ಕಾಂಪೌಂಡ್ ಆರ್ಚರಿಯಲ್ಲಿ ಚಿನ್ನದ ಹ್ಯಾಟ್ರಿಕ್; ಭಾರತದ ಪದಕಗಳ ಸಂಖ್ಯೆ 59ಕ್ಕೆ ಏರಿಕೆ
Asian Games 2026: ಕುಶಲ್ ತಮ್ಮ 13ನೇ ವಯಸ್ಸಿನಲ್ಲಿ ಮೊದಲ ಬಾರಿಗೆ ಬಿಲ್ಲು-ಬಾಣವನ್ನು ಹಿಡಿದರು. ಅಂತರರಾಷ್ಟ್ರೀಯ ಮಟ್ಟದಲ್ಲಿ ತಮ್ಮ ಛಾಪು ಮೂಡಿಸಲು ಅವರಿಗೆ ಹೆಚ್ಚು ಸಮಯ ಹಿಡಿಯಲಿಲ್ಲ. 2021ರ ವಿಶ್ವ ಯುವ ಚಾಂಪಿಯನ್‌ಶಿಪ್‌ನಲ್ಲಿ ಚಿನ್ನದ ಪದಕ ಗೆದ್ದ 18 ವರ್ಷದೊಳಗಿನವರ ಪುರುಷರ ತಂಡದಲ್ಲಿ ಅವರು ಸದಸ್ಯರಾಗಿದ್ದರು. ಒಂದು ವರ್ಷದ ನಂತರ, ಅವರು ಹಿರಿಯರ ತಂಡಕ್ಕೆ ಆಯ್ಕೆಯಾದರು.
India archery men’s compound team -
ನಗೋಯಾ, ಸೆ.30: ಜಪಾನ್‌ನ ಐಚಿ-ನಗೋಯಾದಲ್ಲಿ ನಡೆಯುತ್ತಿರುವ 2026ರ ಏಷ್ಯನ್ ಗೇಮ್ಸ್‌ನಲ್ಲಿ, ಬುಧವಾರ ಭಾರತವು ಕಾಂಪೌಂಡ್ ವಿಭಾಗದಲ್ಲಿ ಚಿನ್ನದ ಪದಕಗಳ ಹ್ಯಾಟ್ರಿಕ್ ಪೂರೈಸಿತು. ಪುರುಷರ ತಂಡದ ಫೈನಲ್‌ನಲ್ಲಿ ಚೀನಾ ವಿರುದ್ಧ 238-237 ಅಂತರದ ಗೆಲುವು ಸಾಧಿಸುವ ಮೂಲಕ ಮೂರನೇ ಪದಕ ತಂದುಕೊಟ್ಟಿತು. ಇದಕ್ಕೂ ಮುನ್ನ ಭಾರತದ ಮಹಿಳಾ ಮತ್ತು ಮಿಶ್ರ ಕಾಂಪೌಂಡ್ ತಂಡಗಳು ಚಿನ್ನ ಗೆದ್ದಿತ್ತು.
ಕುಶಲ್ ದಲಾಲ್, ಸಾಹಿಲ್ ಜಾಧವ್ ಮತ್ತು ಗಣೇಶ್ ತಿರುಮುರು ಅವರನ್ನೊಳಗೊಂಡ ಭಾರತೀಯ ತಂಡವು, ಆರಂಭಿಕ ಹಿನ್ನಡೆಯಿಂದ ಚೇತರಿಸಿಕೊಂಡು ಅಗ್ರ ಪ್ರಶಸ್ತಿಯನ್ನು ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಯಿತು. ಫೈನಲ್‌ನಲ್ಲಿ, ಮೊದಲ ಎರಡು 'ಎಂಡ್'ಗಳ ನಂತರ ಭಾರತೀಯ ತಂಡವು ಚೀನೀ ತಂಡಕ್ಕಿಂತ ಎರಡು ಅಂಕಗಳ ಹಿನ್ನಡೆಯನ್ನು ಹೊಂದಿತ್ತು. ಮೂರನೇ ಅವಧಿಯ ಅಂತ್ಯದ ವೇಳೆಗೆ ಅಂತರವನ್ನು ಒಂದು ಅಂಕದಷ್ಟು ಕಡಿಮೆ ಮಾಡಿಕೊಂಡಿತು.
ನಂತರ, ಚೀನಾದ ಜಿಯಾಹಾವೊ ಲಿಯಾವೊ ನಾಲ್ಕನೇ ಹಾಗೂ ಅಂತಿಮ ಸುತ್ತಿನಲ್ಲಿ 'ಎಂಟು' ಅಂಕಗಳನ್ನು ಗಳಿಸಿದರು. ಆದರೆ ಭಾರತೀಯರು 'ಹತ್ತು' ಅಂಕಗಳನ್ನು ಗಳಿಸುವ ಮೂಲಕ, ಚೀನಾದ ಇನ್ನೂ ಮೂರು ಪ್ರಯತ್ನಗಳು ಬಾಕಿ ಇರುವಂತೆಯೇ ಚಿನ್ನದ ಪದಕವನ್ನು ಖಚಿತಪಡಿಸಿಕೊಂಡರು. ಇದಕ್ಕೂ ಮುನ್ನ, ಸೆಮಿಫೈನಲ್‌ನಲ್ಲಿ ಭಾರತವು ದಕ್ಷಿಣ ಕೊರಿಯಾವನ್ನು 234-233 ಅಂತರದಿಂದ ಸೋಲಿಸಿತ್ತು.
ಕುಶಲ್ ತಮ್ಮ 13ನೇ ವಯಸ್ಸಿನಲ್ಲಿ ಮೊದಲ ಬಾರಿಗೆ ಬಿಲ್ಲು-ಬಾಣವನ್ನು ಹಿಡಿದರು. ಅಂತರರಾಷ್ಟ್ರೀಯ ಮಟ್ಟದಲ್ಲಿ ತಮ್ಮ ಛಾಪು ಮೂಡಿಸಲು ಅವರಿಗೆ ಹೆಚ್ಚು ಸಮಯ ಹಿಡಿಯಲಿಲ್ಲ. 2021ರ ವಿಶ್ವ ಯುವ ಚಾಂಪಿಯನ್‌ಶಿಪ್‌ನಲ್ಲಿ ಚಿನ್ನದ ಪದಕ ಗೆದ್ದ 18 ವರ್ಷದೊಳಗಿನವರ ಪುರುಷರ ತಂಡದಲ್ಲಿ ಅವರು ಸದಸ್ಯರಾಗಿದ್ದರು. ಒಂದು ವರ್ಷದ ನಂತರ, ಅವರು ಹಿರಿಯರ ತಂಡಕ್ಕೆ ಆಯ್ಕೆಯಾದರು.
2025ರ ವಿಶ್ವ ವಿಶ್ವವಿದ್ಯಾಲಯ ಕ್ರೀಡಾಕೂಟದಲ್ಲಿ, ಅವರು ಪರ್ನೀತ್ ಅವರೊಂದಿಗೆ ಮಿಶ್ರ ತಂಡ ವಿಭಾಗದಲ್ಲಿ ಚಿನ್ನದ ಪದಕವನ್ನೂ, ಸಾಹಿಲ್ ಮತ್ತು ಹೃತಿಕ್ ಶರ್ಮಾ ಅವರೊಂದಿಗೆ ಪುರುಷರ ತಂಡ ವಿಭಾಗದಲ್ಲಿ ಬೆಳ್ಳಿ ಪದಕವನ್ನೂ ಗೆದ್ದರು. 21 ವರ್ಷದ ಕುಶಲ್ ಅಂತಿಮವಾಗಿ ವಿಶ್ವಕಪ್‌ಗೆ ಪದಾರ್ಪಣೆ ಮಾಡಿದರು.
ಹ್ಯಾಟ್ರಿಕ್ ಪದಕ ಗೆದ್ದ ನೀರೂ ಧಂಡಾ; ಟ್ರ್ಯಾಪ್ ಮಿಶ್ರ ತಂಡ ಸ್ಪರ್ಧೆಯಲ್ಲಿ ಚಿನ್ನ
ಗಣೇಶ್‌ಗೆ ತನ್ನ 10ನೇ ವಯಸ್ಸಿನಲ್ಲಿ ಬಿಲ್ಲುಗಾರಿಕೆಯ ಜಗತ್ತನ್ನು ಪರಿಚಯಿಸಿದ್ದು ಅವರ ತಂದೆ. 2024ರಲ್ಲಿ ಅವರು ಜೂನಿಯರ್ ಏಷ್ಯನ್ ಚಾಂಪಿಯನ್ ಆದರು ಮತ್ತು ಇದೇ ಮೊದಲ ಬಾರಿಗೆ ಹಿರಿಯರ ತಂಡಕ್ಕೂ ಆಯ್ಕೆಯಾದರು. ಕಳೆದ ವರ್ಷ ಕೆನಡಾದಲ್ಲಿ ಅವರು ಜೂನಿಯರ್ ವಿಶ್ವ ಚಾಂಪಿಯನ್ ಕಿರೀಟವನ್ನು ಮುಡಿಗೇರಿಸಿಕೊಂಡರು.
ಸಾಹಿಲ್ ಅವರ ವಿಷಯಕ್ಕೆ ಬಂದರೆ, ಕಳೆದ ವರ್ಷ ನಡೆದ 'ವರ್ಲ್ಡ್ ಯೂನಿವರ್ಸಿಟಿ ಗೇಮ್ಸ್'ನಲ್ಲಿ ವೈಯಕ್ತಿಕ ವಿಭಾಗದ ಚಿನ್ನದ ಪದಕವನ್ನು ಗೆದ್ದುಕೊಂಡಾಗ ಅವರು ಮೊದಲ ಬಾರಿಗೆ ವ್ಯಾಪಕ ಗಮನ ಸೆಳೆದರು. ನಂತರ ಢಾಕಾದಲ್ಲಿ ನಡೆದ ಏಷ್ಯನ್ ಚಾಂಪಿಯನ್‌ಶಿಪ್‌ಗಾಗಿ ಹಿರಿಯರ ರಾಷ್ಟ್ರೀಯ ತಂಡಕ್ಕೆ ಆಯ್ಕೆಯಾದ ಅವರು, ಪುರುಷರ ತಂಡದ ವಿಭಾಗದಲ್ಲಿ ಬೆಳ್ಳಿ ಪದಕವನ್ನು ತಮ್ಮದಾಗಿಸಿಕೊಂಡರು. ಈ ಯಶಸ್ಸು ಅವರಿಗೆ ದೊಡ್ಡ ಉತ್ತೇಜನ ನೀಡಿತು. ಪರಿಣಾಮವಾಗಿ, ಈ ವರ್ಷದ ವಿಶ್ವಕಪ್‌ನ ಮೊದಲ ಹಂತ (ಮೆಕ್ಸಿಕೋ) ಮತ್ತು ಎರಡನೇ ಹಂತದ (ಚೀನಾ) ಸ್ಪರ್ಧೆಗಳಿಗಾಗಿ ಜನವರಿಯಲ್ಲಿ ನಡೆದ ಆಯ್ಕೆ ಪ್ರಕ್ರಿಯೆಯಲ್ಲಿ ಅವರು ಪ್ರಥಮ ಸ್ಥಾನವನ್ನು ಪಡೆದರು.