ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ʻನೀವು ದೇಶದ ನಿಜವಾದ ಭವಿಷ್ಯ, ತಪ್ಪು ಹಾದಿ ತುಳಿಯಬೇಡಿʼ: ಜೆನ್‌ ಝೀ ಪ್ರತಿಭಟನಾಕಾರರಿಗೆ ಕಪಿಲ್‌ ದೇವ್‌ ಕಿವಿ ಮಾತು!

ದೇಶದ ಯುವಜನರು ಜವಾಬ್ದಾರಿಯಿಂದ ನಡೆದುಕೊಳ್ಳಬೇಕು ಮತ್ತು ಇತರರ ಮಾತುಗಳನ್ನು ಆಲಿಸಬೇಕು ಎಂದು 1983ರ ವಿಶ್ವಕಪ್ ವಿಜೇತ ಭಾರತ ತಂಡದ ನಾಯಕ ಕಪಿಲ್ ದೇವ್ ಸಲಹೆ ನೀಡಿದ್ದಾರೆ. SIR ಪರಿಷ್ಕರಣೆ ವಿವಾದ ಹಾಗೂ ಮುಖ್ಯ ಚುನಾವಣಾ ಆಯುಕ್ತರ ರಾಜೀನಾಮೆಗೆ ಆಗ್ರಹಿಸಿ ದೇಶಾದ್ಯಂತ ಪ್ರತಿಭಟನೆಗಳು ನಡೆಯುತ್ತಿರುವ ಸಂದರ್ಭದಲ್ಲಿ ಅವರ ಹೇಳಿಕೆ ಮಹತ್ವ ಪಡೆದಿದೆ.

ಜೆನ್‌ ಝೀ ಪ್ರತಿಭಟನಾಕಾರರಿಗೆ ಕಪಿಲ್‌ ದೇವ್‌ ಕಿವಿ ಮಾತು!

ಪ್ರತಿಭಟನಾ ನಿರತ ಜೆನ್‌ ಝೀ ಯುವಕರಿಗೆ ಕಪಿಲ್‌ ದೇವ್‌ ಸಲಹೆ. -

Profile
Ramesh Kote Oct 16, 2026 4:42 PM

ನವದೆಹಲಿ: ಭಾರತದಾದ್ಯಂತ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (SIR) ವಿಚಾರವಾಗಿ ಪ್ರತಿಭಟನೆಗಳು ನಡೆಯುತ್ತಿದ್ದು, ಮುಖ್ಯ ಚುನಾವಣಾ ಆಯುಕ್ತ (CEC) ಜ್ಞಾನೇಶ್ ಕುಮಾರ್ ಅವರ ರಾಜೀನಾಮೆಗೆ ಒತ್ತಾಯ ಕೇಳಿಬರುತ್ತಿದೆ. ಇದರ ನಡುವೆ, ಭಾರತದ 1983ರ ವಿಶ್ವಕಪ್ ವಿಜೇತ ತಂಡದ ನಾಯಕ ಕಪಿಲ್ ದೇವ್, ದೇಶದ ಯುವಜನರಿಗೆ ಮಹತ್ವದ ಸಂದೇಶ ನೀಡಿದ್ದಾರೆ. ಯುವಜನರು ಇತರರ ಮಾತುಗಳನ್ನು ಆಲಿಸಬೇಕು, ಜವಾಬ್ದಾರಿಯಿಂದ ವರ್ತಿಸಬೇಕು ಮತ್ತು ಯಾರದ್ದೇ ಪ್ರಭಾವಕ್ಕೆ ಒಳಗಾಗಿ ದಾರಿ ತಪ್ಪಬಾರದು ಎಂದು ಅವರು ಸಲಹೆ ನೀಡಿದ್ದಾರೆ.

ಟೈಮ್ಸ್ ನೌ ಜೊತೆ ಮಾತನಾಡಿದ 67ರ ವಯಸ್ಸಿನ ಮಾಜಿ ಆಲ್‌ರೌಂಡರ್ ಕಪಿಲ್ ದೇವ್, ಯುವಜನರು ದೇಶದ ಭವಿಷ್ಯವಾಗಿದ್ದು, ಅವರಿಗೆ ಸರಿಯಾದ ಮಾರ್ಗದರ್ಶನ ಅಗತ್ಯವಿದೆ ಎಂದು ಹೇಳಿದ್ದಾರೆ.

“ಯುವಜನರು ಇತರರ ಮಾತುಗಳನ್ನು ಆಲಿಸುವುದನ್ನು ಕಲಿಯಬೇಕು ಮತ್ತು ಹೆಚ್ಚು ಜವಾಬ್ದಾರಿಯಿಂದ ನಡೆದುಕೊಳ್ಳಬೇಕು. ಅವರೇ ದೇಶದ ಭವಿಷ್ಯ. ನಾವು ಅವರನ್ನು ದಾರಿ ತಪ್ಪಲು ಬಿಡಬಾರದು. ಅವರು ಯಾವಾಗಲೂ ಸರಿ ಎಂದು ಹೇಳಲಾಗುವುದಿಲ್ಲ. ನಮಗೆ ಅನುಭವವಿದೆ ಎಂಬುದನ್ನೂ ಅವರು ಪರಿಗಣಿಸಬೇಕು. ನಮ್ಮದು ಸುಂದರವಾದ ದೇಶ. ಅದು ತಪ್ಪು ದಿಕ್ಕಿನಲ್ಲಿ ಸಾಗಲು ನಾವು ಅವಕಾಶ ನೀಡಬಾರದು,” ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ಭಾರತ ತಂಡಕ್ಕೆ ಭುವನೇಶ್ವರ್‌ ಕುಮಾರ್‌ ಆಯ್ಕೆಯ ಬಗ್ಗೆ ಪ್ರತಿಕ್ರಿಯಿಸಿದ ಕಪಿಲ್‌ ದೇವ್‌!

SIR ಪರಿಷ್ಕರಣೆ ವಿರುದ್ಧ ದೇಶಾದ್ಯಂತ ಪ್ರತಿಭಟನೆ

ಮತದಾರರ ಪಟ್ಟಿಗಳ ವಿಶೇಷ ತೀವ್ರ ಪರಿಷ್ಕರಣೆ (Special Intensive Revision – SIR) ಪ್ರಕ್ರಿಯೆಯಲ್ಲಿ ಅಕ್ರಮಗಳು ನಡೆದಿವೆ ಎಂಬ ಆರೋಪಗಳ ಹಿನ್ನೆಲೆಯಲ್ಲಿ ಕಪಿಲ್ ದೇವ್ ಅವರ ಈ ಹೇಳಿಕೆಗಳು ಮಹತ್ವ ಪಡೆದಿವೆ.

31ರ ವಯಸ್ಸಿನ ಅಭಿಜೀತ್ ದೀಪ್ಕೆ ಸ್ಥಾಪಿಸಿರುವ ಕಾಕ್‌ರೋಚ್ ಜನತಾ ಪಾರ್ಟಿ (CJP) ಎಂಬ ಯುವಜನರ ಸಂಘಟನೆ, ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರನ್ನು ಹುದ್ದೆಯಿಂದ ತೆಗೆದುಹಾಕಬೇಕು ಹಾಗೂ ಅವರು ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿ ದೇಶದ ವಿವಿಧೆಡೆ ಪ್ರತಿಭಟನೆಗಳನ್ನು ನಡೆಸುತ್ತಿದೆ.

SIR ಪ್ರಕ್ರಿಯೆಯನ್ನು ಜ್ಞಾನೇಶ್ ಕುಮಾರ್ ಏಕಪಕ್ಷೀಯವಾಗಿ ನಿರ್ವಹಿಸಿದ್ದಾರೆ ಎಂಬ ಆರೋಪಕ್ಕೆ ಸಂಬಂಧಿಸಿದ ತನಿಖಾ ವರದಿಯ ಬಳಿಕ ಪ್ರತಿಭಟನೆಗಳು ತೀವ್ರಗೊಂಡಿವೆ. ವರದಿಯ ಪ್ರಕಾರ, SIR ಪ್ರಕ್ರಿಯೆ ಮತ್ತು ಹೊಸ ಮತದಾರರ ನೋಂದಣಿಗೆ ಬಳಸುವ ಫಾರ್ಮ್ 6ರಲ್ಲಿನ ಬದಲಾವಣೆಗಳ ಕುರಿತು ಚುನಾವಣಾ ಆಯುಕ್ತರಾದ ಸುಖ್ಬೀರ್ ಸಿಂಗ್ ಸಂಧು ಮತ್ತು ವಿವೇಕ್ ಜೋಶಿ ಅವರು 10 ತಿಂಗಳ ಅವಧಿಯಲ್ಲಿ 14 ಬಾರಿ ಜ್ಞಾನೇಶ್ ಕುಮಾರ್ ಅವರ ನಿರ್ಧಾರಗಳಿಗೆ ಔಪಚಾರಿಕವಾಗಿ ಆಕ್ಷೇಪ ವ್ಯಕ್ತಪಡಿಸಿದ್ದರು.‌

ಭಾರತ-ಪಾಕಿಸ್ತಾನ ಆಟಗಾರ್ತಿಯರ ಹ್ಯಾಂಡ್‌ ಶೇಕ್‌ ವಿವಾದದ ಬಗ್ಗೆ ಕಪಿಲ್‌ ದೇವ್‌ ಪ್ರತಿಕ್ರಿಯೆ!

ಅಕ್ಟೋಬರ್ 16ರಂದು ತಿರಂಗಾ ಮೆರವಣಿಗೆಗೆ ಕರೆ

ಜ್ಞಾನೇಶ್ ಕುಮಾರ್ ಅವರ ರಾಜೀನಾಮೆಗೆ ಆಗ್ರಹಿಸಿರುವ CJP, ಅಕ್ಟೋಬರ್ 16ರಂದು ದೇಶಾದ್ಯಂತ ತಿರಂಗಾ ಮೆರವಣಿಗೆ ನಡೆಸುವುದಾಗಿ ಘೋಷಿಸಿದೆ. ಇದಕ್ಕೂ ಮೊದಲು, ಅಕ್ಟೋಬರ್ 6ರಂದು ದೆಹಲಿಯ ಜಂತರ್ ಮಂತರ್‌ನಲ್ಲಿ ಪ್ರತಿಭಟನೆ ನಡೆಸಲು ಸಂಘಟನೆ ಕರೆ ನೀಡಿತ್ತು. ಆದರೆ, ಪ್ರತಿಭಟನಾಕಾರರು ಜಂತರ್ ಮಂತರ್ ಕಡೆಗೆ ಮೆರವಣಿಗೆ ನಡೆಸುವುದನ್ನು ದೆಹಲಿ ಪೊಲೀಸರು ಮತ್ತು ಕೇಂದ್ರ ಪಡೆಗಳು ತಡೆದಿದ್ದವು.

ನಂತರ ಅಕ್ಟೋಬರ್ 10ರಂದು ವಿರೋಧ ಪಕ್ಷಗಳ ರಾಜಕೀಯ ಒಕ್ಕೂಟವಾದ ಇಂಡಿಯಾ (INDIA) ಬಣವೂ ಪ್ರತಿಭಟನಾ ಮೆರವಣಿಗೆ ನಡೆಸಿತ್ತು. ಪ್ರತಿಭಟನಾ ಸ್ಥಳದ ಮಾನ್ಯತೆಯನ್ನು ರದ್ದುಗೊಳಿಸಿದ ಬಳಿಕ CJP ನಾಯಕರು ಜಂತರ್ ಮಂತರ್‌ಗೆ ಅಕ್ರಮವಾಗಿ ಪ್ರವೇಶಿಸಿದ್ದಾರೆ ಎಂಬ ಆರೋಪ ಕೇಳಿಬಂದಿತ್ತು. ಈ ಪ್ರಕರಣದಲ್ಲಿ ಸೌರವ್ ದಾಸ್ ಮತ್ತು ಆಶುತೋಷ್ ರಂಕಾ ಅವರನ್ನು ಐದು ದಿನಗಳ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿತ್ತು.