ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ʼʼಭಾರತ ಬ್ರೋಕರ್‌ ಕೆಲಸ ಮಾಡುವುದಿಲ್ಲʼʼ: ಇರಾನ್‌-ಅಮೆರಿಕ ಮಧ್ಯೆ ಪಾಕಿಸ್ತಾನದ ಮಧ್ಯಸ್ಥಿಕೆ ಬಗ್ಗೆ ಎಸ್. ಜೈಶಂಕರ್ ಹೇಳಿದ್ದೇನು?

ಪಶ್ಚಿಮ ಏಷ್ಯಾ ಬಿಕ್ಕಟ್ಟಿನ ಕುರಿತು ನಡೆದ ಸರ್ವಪಕ್ಷ ಸಭೆಯಲ್ಲಿ ವಿದೇಶಾಂಗ ಸಚಿವ ಎಸ್. ಜೈಶಂಕರ್ ಭಾರತವು ಜಾಗತಿಕ ರಾಜಕೀಯದಲ್ಲಿ ‘ಮಧ್ಯವರ್ತಿ ರಾಷ್ಟ್ರ’ವಾಗಿ ಕಾರ್ಯನಿರ್ವಹಿಸಲು ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿದರು. ಅಮೆರಿಕ–ಇರಾನ್ ಸಂಧಾನದಲ್ಲಿ ಪಾಕಿಸ್ತಾನದ ಪಾತ್ರದ ಬಗ್ಗೆ ವಿರೋಧ ಪಕ್ಷಗಳು ಕಳವಳ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ಅವರು ಈ ಹೇಳಿಕೆ ನೀಡಿದರು. ಸರ್ಕಾರದ ಪ್ರಕಾರ, ಪಾಕಿಸ್ತಾನದ ಈ ಪಾತ್ರ ಹೊಸದೇನಲ್ಲ ಮತ್ತು 1981ರಿಂದಲೂ ನಡೆಯುತ್ತಿದೆ. ಗಲ್ಫ್ ರಾಷ್ಟ್ರಗಳಲ್ಲಿ ಇರುವ ಭಾರತೀಯರ ಸುರಕ್ಷತೆ ಮತ್ತು ಇಂಧನ ಭದ್ರತೆ ಸರ್ಕಾರದ ಪ್ರಮುಖ ಆದ್ಯತೆ.

ಅಮೆರಿಕ–ಇರಾನ್ ಸಂಧಾನ ವಿವಾದಕ್ಕೆ ಜೈಶಂಕರ್ ಪ್ರತಿಕ್ರಿಯೆ

ವಿದೇಶಾಂಗ ಸಚಿವ ಎಸ್. ಜೈಶಂಕರ್ (ಸಂಗ್ರಹ ಚಿತ್ರ) -

Profile
Sushmitha Jain Mar 26, 2026 6:22 PM

ನವದೆಹಲಿ, ಮಾ. 26: ಜಾಗತಿಕ ಭೂ-ರಾಜಕೀಯದಲ್ಲಿ ಭಾರತವು ದಲಾಲ್ ರಾಷ್ಟ್ರ (ಮಧ್ಯವರ್ತಿ ಅಥವಾ ಬ್ರೋಕರ್) ಆಗಿ ಕಾರ್ಯನಿರ್ವಹಿಸಲು ಸಾಧ್ಯವಿಲ್ಲ ಎಂದು ವಿದೇಶಾಂಗ ಸಚಿವ ಎಸ್. ಜೈಶಂಕರ್ (S Jaishankar) ಬುಧವಾರ ನಡೆದ ಸರ್ವಪಕ್ಷ ಸಭೆಯಲ್ಲಿ ಕಡಕ್ಕಾಗಿ ಹೇಳಿದ್ದಾರೆ. ಪಶ್ಚಿಮ ಏಷ್ಯಾ ಬಿಕ್ಕಟ್ಟಿನ (West Asia crisis) ಕುರಿತು ಚರ್ಚಿಸಲು ಕರೆದಿದ್ದ ಈ ಸಭೆಯಲ್ಲಿ ಅಮೆರಿಕ ಮತ್ತು ಇರಾನ್ ನಡುವಿನ ಸಂಧಾನದಲ್ಲಿ ಪಾಕಿಸ್ತಾನ ವಹಿಸುತ್ತಿರುವ ಪಾತ್ರದ ಕುರಿತು ವಿರೋಧ ಪಕ್ಷಗಳು ಕಳವಳ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ಜೈಶಂಕರ್ ಈ ಪ್ರತಿಕ್ರಿಯೆ ನೀಡಿದ್ದಾರೆ. ಅಮೆರಿಕ ಮತ್ತು ಇರಾನ್ ನಡುವೆ ಪಾಕಿಸ್ತಾನವು ಸಂಪರ್ಕ ಸೇತುವೆಯಾಗಿ ಕೆಲಸ ಮಾಡುತ್ತಿರುವುದು ಹೊಸದೇನಲ್ಲ, ಇದು 1981ರಿಂದಲೂ ನಡೆದುಕೊಂಡು ಬರುತ್ತಿದೆ ಎಂದು ಸರ್ಕಾರ ವಿರೋಧ ಪಕ್ಷಗಳಿಗೆ ತಿಳಿಸಿದೆ.

ರಕ್ಷಣಾ ಸಚಿವ ರಾಜನಾಥ್ ಸಿಂಗ್ ನೇತೃತ್ವದಲ್ಲಿ ನಡೆದ ಈ ಸಭೆಯಲ್ಲಿ ಅಮಿತ್ ಶಾ, ನಿರ್ಮಲಾ ಸೀತಾರಾಮನ್ ಮತ್ತು ಹರ್ದೀಪ್ ಸಿಂಗ್ ಪುರಿ ಸೇರಿದಂತೆ ಹಿರಿಯ ಸಚಿವರು ಭಾಗವಹಿಸಿದ್ದರು. ಪಶ್ಚಿಮ ಏಷ್ಯಾದ ಯುದ್ಧವು ಎಲ್ಲ ಕಡೆಯವರಿಗೂ ಹಾನಿ ಉಂಟು ಮಾಡುತ್ತಿದೆ. ಆದ್ದರಿಂದ ಇದನ್ನು ಕೂಡಲೇ ನಿಲ್ಲಿಸಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರಿಗೆ ತಿಳಿಸಿದ್ದಾರೆ ಎಂದು ಸಭೆಯಲ್ಲಿ ವಿವರಿಸಲಾಯಿತು. ಕಾಂಗ್ರೆಸ್, ಸಮಾಜವಾದಿ ಪಕ್ಷ ಮತ್ತು ಸಿಪಿಐ(ಎಂ) ನಾಯಕರು ಈ ವೇಳೆ ಹಾಜರಿದ್ದರು.

ಸಂಧಾನಕ್ಕೆ ಮುಂದಾದ ಟ್ರಂಪ್‌, ಯುದ್ಧ ವಿರಾಮಕ್ಕೆ ಪ್ರಸ್ತಾವನೆ, ಇರಾನ್‌ ಮುಂದೆ 15 ಅಂಶಗಳ ಯೋಜನೆ

ಸಂಧಾನಕ್ಕೆ ಪಾಕಿಸ್ತಾನದ ಆಫರ್

ಪಾಕಿಸ್ತಾನದ ಪ್ರಧಾನಿ ಶೆಹಬಾಜ್ ಷರೀಫ್ ಇತ್ತೀಚೆಗೆ ಅಮೆರಿಕ ಮತ್ತು ಇರಾನ್ ನಡುವಿನ ಮಾತುಕತೆಗೆ ಆತಿಥ್ಯ ವಹಿಸಲು ಸಿದ್ಧರಿರುವುದಾಗಿ ಘೋಷಿಸಿದ್ದರು. ಈ ಪ್ರಸ್ತಾಪವನ್ನು ಡೊನಾಲ್ಡ್ ಟ್ರಂಪ್ ತಮ್ಮ 'ಟ್ರುತ್ ಸೋಶಿಯಲ್' ಖಾತೆಯಲ್ಲಿ ಹಂಚಿಕೊಳ್ಳುವ ಮೂಲಕ ಗಮನ ಸೆಳೆದಿದ್ದರು. ಈ ಬೆಳವಣಿಗೆಯನ್ನು ಪ್ರಸ್ತಾಪಿಸಿದ ವಿರೋಧ ಪಕ್ಷಗಳು, ಪಾಕಿಸ್ತಾನವು ಮಧ್ಯಸ್ಥಿಕೆ ವಹಿಸುತ್ತಿದ್ದರೆ ಭಾರತವು ಕೇವಲ 'ಮೂಕ ಪ್ರೇಕ್ಷಕ'ನಾಗಿ ಉಳಿದಿದೆ ಎಂದು ಟೀಕಿಸಿದವು. ಇದಕ್ಕೆ ಉತ್ತರಿಸಿದ ಸರ್ಕಾರ, ಭಾರತವು ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸುತ್ತಿದೆ ಮತ್ತು ಸೂಕ್ತವಾಗಿ ಸ್ಪಂದಿಸುತ್ತಿದೆ ಎಂದು ಸಮರ್ಥಿಸಿಕೊಂಡಿದೆ.

ಸರ್ಕಾರದ ಪ್ರಕಾರ, ಗಲ್ಫ್ ರಾಷ್ಟ್ರಗಳಲ್ಲಿರುವ ಭಾರತೀಯರ ಸುರಕ್ಷತೆ ಮತ್ತು ಇಂಧನ ಪೂರೈಕೆಯನ್ನು ಖಚಿತಪಡಿಸಿಕೊಳ್ಳುವುದು ಸದ್ಯದ ಪ್ರಮುಖ ಆದ್ಯತೆ. ಆದರೆ ಸರ್ಕಾರದ ಉತ್ತರದಿಂದ ತೃಪ್ತರಾಗದ ವಿರೋಧ ಪಕ್ಷದ ನಾಯಕರು, ಈ ವಿಷಯದ ಬಗ್ಗೆ ಸಂಸತ್ತಿನಲ್ಲಿ ಸುದೀರ್ಘ ಚರ್ಚೆಯಾಗಬೇಕು ಎಂದು ಒತ್ತಾಯಿಸಿದ್ದಾರೆ.