ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಇಂದೇ ಚುನಾವಣೆ ನಡೆದರೆ ಎನ್‌ಡಿಎಗೆ 326 ಸ್ಥಾನ: ಪ್ರಧಾನಿ ನರೇಂದ್ರ ಮೋದಿಗೆ ಜನಾಶೀರ್ವಾದ ಅಬಾಧಿತ ಎಂದ ಇಂಡಿಯಾ ಟುಡೇ-ಸಿವೋಟರ್ ಸಮೀಕ್ಷೆ

India Today-CVoter MOTN: ಇಂದೇ ಲೋಕಸಭಾ ಚುನಾವಣೆ ನಡೆದರೆ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ ಮೈತ್ರಿಕೂಟ 326 ಸ್ಥಾನಗಳನ್ನು ಗೆದ್ದು ಅಧಿಕಾರ ಉಳಿಸಿಕೊಳ್ಳಲಿದೆ ಎಂದು ಇಂಡಿಯಾ ಟುಡೇ-ಸಿವೋಟರ್ ಮೂಡ್ ಆಫ್ ದಿ ನೇಷನ್ ಸಮೀಕ್ಷೆ ಅಂದಾಜಿಸಿದೆ. ಬಿಜೆಪಿಗೆ 261 ಮತ್ತು ಕಾಂಗ್ರೆಸ್‌ಗೆ 106 ಸ್ಥಾನಗಳು ಸಿಗುವ ಸಾಧ್ಯತೆ ಇದೆ. ಎನ್‌ಡಿಎ ಶೇ. 45.1 ಹಾಗೂ ಇಂಡಿಯಾ ಬ್ಲಾಕ್ ಶೇ. 39.1 ಮತ ಪಡೆಯಲಿದೆ ಎಂದು ಸಮೀಕ್ಷೆ ತಿಳಿಸಿದೆ.

ಇಂದೇ ಲೋಕಸಭಾ ಚುನಾವಣೆ ನಡೆದರೆ ಎನ್‌ಡಿಎಗೆ ಸ್ಪಷ್ಟ ಬಹುಮತ

ನರೇಂದ್ರ ಮೋದಿ (ಸಂಗ್ರಹ ಚಿತ್ರ) -

Profile
Sushmitha Jain Aug 27, 2026 9:37 PM

ನವದೆಹಲಿ, ಆ. 27: ಇಂದೇ ಲೋಕಸಭಾ ಚುನಾವಣೆ (Lok Sabha Election) ನಡೆದರೆ ಪ್ರಧಾನಿ ನರೇಂದ್ರ ಮೋದಿ (Narendra Modi) ನೇತೃತ್ವದ ಭಾರತೀಯ ಜನತಾ ಪಾರ್ಟಿ (BJP) ಮುಂಚೂಣಿಯಲ್ಲಿರುವ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟ (NDA) ಸ್ಪಷ್ಟ ಬಹುಮತದೊಂದಿಗೆ ಸುಲಭವಾಗಿ ಅಧಿಕಾರ ಉಳಿಸಿಕೊಳ್ಳಲಿದೆ ಎಂದು 'ಇಂಡಿಯಾ ಟುಡೇ-ಸಿವೋಟರ್ ಮೂಡ್ ಆಫ್ ದಿ ನೇಷನ್' (India Today-CVoter Mood of the Nation) ಸಮೀಕ್ಷೆ ತಿಳಿಸಿದೆ. ಆದಾಗ್ಯೂ, ಜನವರಿಗೆ ಹೋಲಿಸಿದರೆ ಆಡಳಿತಾರೂಢ ಮೈತ್ರಿಕೂಟದ ಜನಪ್ರಿಯತೆಯಲ್ಲಿ ಸಣ್ಣ ಪ್ರಮಾಣದ ಇಳಿಕೆ ಕಂಡುಬಂದಿದೆ.

ಸಮೀಕ್ಷೆಯ ವರದಿಯ ಪ್ರಕಾರ, ಈಗ ಚುನಾವಣೆ ನಡೆದರೆ ಎನ್‌ಡಿಎ ಮೈತ್ರಿಕೂಟವು 326 ಸ್ಥಾನಗಳನ್ನು ಗೆಲ್ಲುವ ಸಾಧ್ಯತೆಯಿದೆ. ಜನವರಿಯಲ್ಲಿ ನಡೆದ ಹಿಂದಿನ MOTN ಸಮೀಕ್ಷೆಯಲ್ಲಿ ಭವಿಷ್ಯ ನುಡಿದಿದ್ದ 352 ಸ್ಥಾನಗಳಿಗೆ ಹೋಲಿಸಿದರೆ ಇದು 26 ಸ್ಥಾನಗಳ ಇಳಿಕೆಯಾಗಿದೆ. 2024ರ ಚುನಾವಣೆಯಲ್ಲಿ ನೀಡಲಾಗಿದ್ದ '400' ಗುರಿಯಿಂದ ಇದು ದೂರವಿದ್ದರೂ, 2029ರ ಸಾರ್ವತ್ರಿಕ ಚುನಾವಣೆಯ ಮುನ್ನ ದೇಶದ ಮತದಾರರ ವಿಶ್ವಾಸವು ಎನ್‌ಡಿಎ ಪರವಾಗಿಯೇ ಗಟ್ಟಿಯಾಗಿದೆ ಎಂಬುದನ್ನು ಈ ಸಮೀಕ್ಷೆಯ ಫಲಿತಾಂಶಗಳು ದೃಢಪಡಿಸಿವೆ. ಮತ್ತೊಂದೆಡೆ, ಕಾಂಗ್ರೆಸ್ ನೇತೃತ್ವದ ವಿರೋಧ ಪಕ್ಷಗಳ 'ಇಂಡಿಯಾ' (INDIA) ಬ್ಲಾಕ್ ಒಕ್ಕೂಟವು 185 ಸ್ಥಾನಗಳನ್ನು ಗಳಿಸುವ ನಿರೀಕ್ಷೆಯಿದ್ದು, ಜನವರಿಯ ಅಂದಾಜಿಗಿಂತ (182 ಸ್ಥಾನ) ಕೇವಲ ಅಲ್ಪ ಏರಿಕೆ ಕಂಡಿದೆ.

ಇಂಡಿಯಾ ಟುಡೇ-ಸಿವೋಟರ್ ಮೂಡ್ ಆಫ್ ದಿ ನೇಷನ್ ವರದಿ:



ಪಕ್ಷವಾರು ಲೆಕ್ಕಾಚಾರಗಳನ್ನು ಗಮನಿಸಿದರೆ, ಬಿಜೆಪಿಯು ಸ್ವತಂತ್ರವಾಗಿ 261 ಸ್ಥಾನಗಳನ್ನು ಗೆಲ್ಲುವ ಸಾಧ್ಯತೆಯಿದೆ. ಆರು ತಿಂಗಳ ಹಿಂದೆ ಇದೇ ಸಮೀಕ್ಷೆಯು ಬಿಜೆಪಿಗೆ 287 ಸ್ಥಾನಗಳನ್ನು ಭವಿಷ್ಯ ನುಡಿಯಲಾಗಿತ್ತು. ಪ್ರಶ್ನೆ ಪತ್ರಿಕೆ ಸೋರಿಕೆ, ಶಿಕ್ಷಣ ವ್ಯವಸ್ಥೆಯ ಅಕ್ರಮಗಳ ವಿರುದ್ಧ ಯುವಜನತೆ ನಡೆಸಿದ ದೆಹಲಿ ಜಂತರ್ ಮಂತರ್ ಪ್ರತಿಭಟನೆಗಳು ಹಾಗೂ ಶಿಕ್ಷಣ ಸಚಿವರ ರಾಜೀನಾಮೆಯಂತಹ ವಿದ್ಯಮಾನಗಳು ಬಿಜೆಪಿಯ ಯುವ ಬೆಂಬಲದಲ್ಲಿ ಸ್ವಲ್ಪ ಕುಸಿತ ತಂದಿವೆ ಎಂದು ವಿಶ್ಲೇಷಿಸಲಾಗಿದೆ.

ಉ.ಪ್ರ. ಕ್ಕೆ ಮೋದಿ-ಶಾ ಆಪ್ತರ ಅಧಿಕೃತ ಪ್ರವೇಶ

ಕಾಂಗ್ರೆಸ್ ವಿಚಾರದಲ್ಲಿ ರಾಹುಲ್ ಗಾಂಧಿ ಅವರ ನೂತನ ರಾಜಕೀಯ ಕಾರ್ಯತಂತ್ರ ಫಲ ನೀಡುತ್ತಿದ್ದು, ಪಕ್ಷದ ಸ್ಥಾನಗಳು ಗಣನೀಯವಾಗಿ ಏರಿಕೆ ಕಾಣಲಿವೆ. ಜನವರಿಯ ಸಮೀಕ್ಷೆಯಲ್ಲಿ 80 ಸ್ಥಾನಗಳ ಭವಿಷ್ಯ ನುಡಿಯಲಾಗಿದ್ದರೆ, ಪ್ರಸ್ತುತ ಸಮೀಕ್ಷೆಯಲ್ಲಿ ಕಾಂಗ್ರೆಸ್ 106 ಸ್ಥಾನಗಳನ್ನು ಗೆಲ್ಲಬಹುದು ಎಂದು ಅಂದಾಜಿಸಲಾಗಿದೆ. ವಿದ್ಯಾರ್ಥಿಗಳ ಪ್ರತಿಭಟನೆ ಮೇಲಿನ ಕ್ರಮ ಹಾಗೂ ಮಹಿಳಾ ಮೀಸಲಾತಿಯಂತಹ ಪ್ರಮುಖ ರಾಷ್ಟ್ರೀಯ ವಿಷಯಗಳನ್ನು ಮುನ್ನೆಲೆಗೆ ತಂದು ಹೋರಾಡುತ್ತಿರುವುದು ಕಾಂಗ್ರೆಸ್ ನೆಲೆಯನ್ನು ಬಲಪಡಿಸಿದೆ.

ಮತ ಹಂಚಿಕೆ ವಿವರ

ಎನ್‌ಡಿಎ ಶೇ. 45.1ರಷ್ಟು ಮತಗಳನ್ನು ಪಡೆಯುವ ಸಾಧ್ಯತೆಯಿದ್ದು, ಜನವರಿ ಸಮೀಕ್ಷೆಯ ಶೇ. 47ಕ್ಕೆ ಹೋಲಿಸಿದರೆ ಅಲ್ಪ ಕುಸಿತ ದಾಖಲಿಸಿದೆ. ಇನ್ನು ಇಂಡಿಯಾ ಬ್ಲಾಕ್ ಒಕ್ಕೂಟವು ಶೇ. 39.1ರಷ್ಟು ಮತ ಹಂಚಿಕೆಯನ್ನು ಗಳಿಸಿಕೊಳ್ಳಲಿದೆ ಎಂದು ವರದಿ ಹೇಳಿದೆ. ಜುಲೈ 1ರಿಂದ ಆಗಸ್ಟ್ 25ರವರೆಗೆ ದೇಶಾದ್ಯಂತ ಲಕ್ಷಕ್ಕೂ ಅಧಿಕ ನಾಗರಿಕರ ಅಭಿಪ್ರಾಯ ಸಂಗ್ರಹಿಸಿ ಈ ಸಮೀಕ್ಷಾ ವರದಿಯನ್ನು ಸಿದ್ಧಪಡಿಸಲಾಗಿದೆ.