ಭಾರತ-ಅಮೆರಿಕ ವ್ಯಾಪಾರ ಒಪ್ಪಂದ ಅಂತಿಮ ಹಂತದಲ್ಲಿ; ಮೋದಿ-ಟ್ರಂಪ್ ಸೂಚನೆ
ಭಾರತ ಮತ್ತು ಅಮೆರಿಕ ನಡುವಿನ ಮಧ್ಯಂತರ ದ್ವಿಪಕ್ಷೀಯ ವ್ಯಾಪಾರ ಒಪ್ಪಂದ ಅಂತಿಮ ಹಂತ ತಲುಪಿದೆ. ಜಿ7 ಶೃಂಗಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಹಾಗೂ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಈ ವಿಷಯದ ಕುರಿತು ಚರ್ಚೆ ನಡೆಸಿ, ಒಪ್ಪಂದವನ್ನು ಶೀಘ್ರದಲ್ಲೇ ಪೂರ್ಣಗೊಳಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಮುಂದಿನ ವಾರ ಅಮೆರಿಕದ ವ್ಯಾಪಾರ ಪ್ರತಿನಿಧಿ ಭಾರತಕ್ಕೆ ಭೇಟಿ ನೀಡಲಿದ್ದು, ಒಪ್ಪಂದಕ್ಕೆ ಅಂತಿಮ ರೂಪ ನೀಡುವ ಸಾಧ್ಯತೆಯಿದೆ.
ನರೇಂದ್ರ ಮೋದಿ - ಡೊನಾಲ್ಡ್ ಟ್ರಂಪ್ -
ನವದೆಹಲಿ, ಜೂನ್ 19: ಭಾರತ ಮತ್ತು ಅಮೆರಿಕ ನಡುವಿನ ಮಧ್ಯಂತರ ದ್ವಿಪಕ್ಷೀಯ ವ್ಯಾಪಾರ ಒಪ್ಪಂದ ಅಂತಿಮ ಹಂತ ತಲುಪಿದ್ದು, ಒಪ್ಪಂದವನ್ನು ಶೀಘ್ರದಲ್ಲೇ ಪೂರ್ಣಗೊಳಿಸುವಂತೆ ಪ್ರಧಾನಿ ನರೇಂದ್ರ ಮೋದಿ (Narendra Modi) ಹಾಗೂ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ( (US President Donald Trump) ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ ಎಂದು ವಿದೇಶಾಂಗ ಕಾರ್ಯದರ್ಶಿ ವಿಕ್ರಮ್ ಮಿಸ್ರಿ ತಿಳಿಸಿದ್ದಾರೆ.
ಫ್ರಾನ್ಸ್‌ನ ಎವಿಯನ್‌ನಲ್ಲಿ ನಡೆದ ಜಿ7 ಶೃಂಗಸಭೆಯಲ್ಲಿ ಪ್ರಧಾನಿ ಮೋದಿ ಅವರ ಭೇಟಿಯ ಬಳಿಕ ಮಾಧ್ಯಮಗಳಿಗೆ ಮಾಹಿತಿ ನೀಡಿದ ಮಿಸ್ರಿ, ಉಭಯ ರಾಷ್ಟ್ರಗಳ ನಡುವಿನ ಮಾತುಕತೆಯಲ್ಲಿ ಮಹತ್ವದ ಪ್ರಗತಿ ಸಾಧಿಸಲಾಗಿದೆ ಎಂದು ಹೇಳಿದರು.
"ಭಾರತ ಮತ್ತು ಅಮೆರಿಕ ನಡುವಿನ ಮಧ್ಯಂತರ ಮುಕ್ತ ವ್ಯಾಪಾರ ಒಪ್ಪಂದದ ಕುರಿತ ಮಾತುಕತೆಗಳು ಅಂತಿಮ ಹಂತದಲ್ಲಿವೆ. ಒಪ್ಪಂದದ ಕರಡು ರೂಪಿಸುವ ಕಾರ್ಯದಲ್ಲಿ ಗಮನಾರ್ಹ ಪ್ರಗತಿ ಸಾಧಿಸಲಾಗಿದೆ" ಎಂದು ಅವರು ತಿಳಿಸಿದರು.
ಮುಂದಿನ ವಾರ ಭಾರತಕ್ಕೆ ಅಮೆರಿಕ ವ್ಯಾಪಾರ ಪ್ರತಿನಿಧಿ
ಅಮೆರಿಕದ ವ್ಯಾಪಾರ ಪ್ರತಿನಿಧಿ ಜೇಮಿಸನ್ ಗ್ರೀರ್ ಜೂನ್ 22ರಂದು ಭಾರತಕ್ಕೆ ಭೇಟಿ ನೀಡಲಿದ್ದು, ಜೂನ್ 23 ಮತ್ತು 24ರಂದು ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಸಚಿವರೊಂದಿಗೆ ಮಾತುಕತೆ ನಡೆಸಲಿದ್ದಾರೆ.
ಈ ಸಭೆಯಲ್ಲಿ ಮಧ್ಯಂತರ ವ್ಯಾಪಾರ ಒಪ್ಪಂದಕ್ಕೆ ಅಂತಿಮ ರೂಪ ನೀಡುವ ಜೊತೆಗೆ, ದೀರ್ಘಾವಧಿಯ ದ್ವಿಪಕ್ಷೀಯ ವ್ಯಾಪಾರ ಒಪ್ಪಂದ ಕುರಿತ ಚರ್ಚೆಗಳಿಗೂ ವೇಗ ನೀಡಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಮೋದಿ-ಟ್ರಂಪ್ ಮಾತುಕತೆಯಲ್ಲಿ ಪ್ರಮುಖ ವಿಷಯ
ಜಿ7 ಶೃಂಗಸಭೆಯ ವೇಳೆ ಪ್ರಧಾನಿ ಮೋದಿ ಮತ್ತು ಡೊನಾಲ್ಡ್ ಟ್ರಂಪ್ ನಡುವಿನ ದ್ವಿಪಕ್ಷೀಯ ಸಭೆಯಲ್ಲಿ ವ್ಯಾಪಾರ ಒಪ್ಪಂದ ಪ್ರಮುಖ ಚರ್ಚಾ ವಿಷಯವಾಗಿತ್ತು.
"ಭಾರತದೊಂದಿಗೆ ವ್ಯಾಪಾರ ಒಪ್ಪಂದಕ್ಕೆ ನಾವು ತುಂಬಾ ಸಮೀಪದಲ್ಲಿದ್ದೇವೆ. ಉಭಯ ದೇಶಗಳ ನಡುವೆ ಹಲವು ಮಹತ್ವದ ಬೆಳವಣಿಗೆಗಳು ನಡೆಯುತ್ತಿವೆ" ಎಂದು ಟ್ರಂಪ್ ಹೇಳಿದ್ದಾರೆ.ಇದೇ ವೇಳೆ ಅಮೆರಿಕದಲ್ಲಿ ಹೂಡಿಕೆಗಳನ್ನು ಉತ್ತೇಜಿಸುತ್ತಿರುವ ಪ್ರಧಾನಿ ಮೋದಿ ಅವರ ಪಾತ್ರವನ್ನು ಟ್ರಂಪ್ ಶ್ಲಾಘಿಸಿದರು. "ಪ್ರಧಾನಿ ಮೋದಿ ಅಮೆರಿಕದಲ್ಲಿ ಸಾಕಷ್ಟು ಹೂಡಿಕೆಗಳನ್ನು ಮಾಡುತ್ತಿದ್ದಾರೆ. ಇದಕ್ಕಾಗಿ ನಾವು ಅವರನ್ನು ಅಭಿನಂದಿಸುತ್ತೇವೆ" ಎಂದು ಟ್ರಂಪ್ ಹೇಳಿದರು.
ಪ್ರಧಾನಿ ಮೋದಿಯನ್ನು ಹಿಂದಿಯಲ್ಲೇ ಬೀಳ್ಕೊಟ್ಟ ಫ್ರಾನ್ಸ್ ಅಧ್ಯಕ್ಷ; ಜೈ ಹಿಂದ್ ಎಂದ ವಿಡಿಯೋ ವೈರಲ್
ಸುಂಕ ಮತ್ತು ವ್ಯಾಪಾರ ವಿವಾದಗಳಿಗೂ ಪರಿಹಾರ?
ವಾಣಿಜ್ಯ ಕಾರ್ಯದರ್ಶಿ ರಾಜೇಶ್ ಅಗರ್ವಾಲ್ ಅವರ ಪ್ರಕಾರ, ಪ್ರಸ್ತಾವಿತ ಒಪ್ಪಂದವು ಭಾರತ-ಅಮೆರಿಕ ನಡುವಿನ ಸಂಪೂರ್ಣ ವ್ಯಾಪಾರ ಸಂಬಂಧವನ್ನು ಒಳಗೊಂಡಿರಲಿದೆ. ಅಮೆರಿಕದ ಸೆಕ್ಷನ್ 301 ತನಿಖೆಗಳು, ಸುಂಕ ವಿವಾದಗಳು ಸೇರಿದಂತೆ ಹಲವು ವಿಷಯಗಳಿಗೆ ಸ್ಪಷ್ಟ ಪರಿಹಾರ ಒದಗಿಸುವ ಸಾಧ್ಯತೆಯಿದೆ.
ರಕ್ಷಣಾ, ತಂತ್ರಜ್ಞಾನ ಮತ್ತು ಇಂಧನ ಕ್ಷೇತ್ರಗಳಲ್ಲೂ ಸಹಕಾರ
ವ್ಯಾಪಾರದ ಹೊರತಾಗಿ, ಭಾರತ-ಅಮೆರಿಕ COMPACT (Catalysing Opportunities for Military Partnership, Accelerated Commerce and Technology) ಯೋಜನೆಯ ಪ್ರಗತಿಯನ್ನೂ ಮೋದಿ ಮತ್ತು ಟ್ರಂಪ್ ಪರಿಶೀಲಿಸಿದರು.
ರಕ್ಷಣಾ ಸಹಕಾರ, ತಂತ್ರಜ್ಞಾನ ಅಭಿವೃದ್ಧಿ, ಇಂಧನ ಭದ್ರತೆ ಹಾಗೂ ದ್ವಿಪಕ್ಷೀಯ ವ್ಯಾಪಾರ ವೃದ್ಧಿ ಕುರಿತ ಬೆಳವಣಿಗೆಗಳನ್ನು ಉಭಯ ನಾಯಕರು ಸ್ವಾಗತಿಸಿದರು. ಉಭಯ ದೇಶಗಳ ನಡುವಿನ ಸಮಗ್ರ ಜಾಗತಿಕ ಕಾರ್ಯತಂತ್ರದ ಪಾಲುದಾರಿಕೆಯನ್ನು ಮತ್ತಷ್ಟು ಬಲಪಡಿಸುವ ಬದ್ಧತೆಯನ್ನು ಮೋದಿ ಮತ್ತು ಟ್ರಂಪ್ ಪುನರುಚ್ಚರಿಸಿದ್ದಾರೆ.