ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Chikkabalalpur News: ಭೂಮಿ ವಿವಾದದಲ್ಲಿ ಹಲ್ಲೆ, ಗುಡಿಸಲು ತೆರವು ಆರೋಪ: ಸಂತ್ರಸ್ತರಿಗೆ ರಕ್ಷಣೆ ನೀಡುವಂತೆ ಅಂಬೇಡ್ಕರ್ ಸೇನೆ ಆಗ್ರಹ

ಭೂಮಿಗೆ ಸಂಬಂಧಿಸಿದ ವಿವಾದ ನ್ಯಾಯಾಲಯದಲ್ಲಿ ವಿಚಾರಣೆಯಲ್ಲಿರುವಾಗಲೇ ತಮ್ಮ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿ, ಗುಡಿಸಲಿನಲ್ಲಿದ್ದ ಪಾತ್ರೆ-ಪಗಡೆಗಳನ್ನು ಬಾವಿಗೆ ಎಸೆದು ತಮ್ಮನ್ನು ನಿರ್ಗತಿಕರನ್ನಾಗಿಸಲಾಗಿದೆ ಎಂದು ಕೊಳವನಹಳ್ಳಿ ಗ್ರಾಮದ ಲೇಟ್ ದೊಡ್ಡ ವೆಂಕಟರಾಯಪ್ಪ ಅವರ ಮಕ್ಕಳು ಆರೋಪಿಸಿದ್ದಾರೆ.

ನ್ಯಾಯಕ್ಕಾಗಿ ಅಲೆದಾಡುತ್ತಿರುವ ವೃದ್ಧ ರೈತನ ಕುಟುಂಬ

-

Profile
Ashok Nayak Oct 23, 2026 4:37 PM

ಚಿಕ್ಕಬಳ್ಳಾಪುರ: ಬದುಕಿನ ಆಸರೆಯಾಗಿದ್ದ ಅಲ್ಪಸ್ವಲ್ಪ ಜಮೀನನ್ನು ಉಳಿಸಿಕೊಳ್ಳಲು ನ್ಯಾಯಾಲಯದ ಮೆಟ್ಟಿಲೇರಿದ ಕುಟುಂಬವೊಂದು, ಇಂದು ಜೀವಭಯದ ನಡುವೆ ನ್ಯಾಯಕ್ಕಾಗಿ ಅಂಗಲಾಚುವ ಪರಿಸ್ಥಿತಿ ಎದುರಾಗಿದೆ. 

ಭೂಮಿಗೆ ಸಂಬಂಧಿಸಿದ ವಿವಾದ ನ್ಯಾಯಾಲಯದಲ್ಲಿ ವಿಚಾರಣೆಯಲ್ಲಿರುವಾಗಲೇ ತಮ್ಮ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿ, ಗುಡಿಸಲಿನಲ್ಲಿದ್ದ ಪಾತ್ರೆ-ಪಗಡೆಗಳನ್ನು ಬಾವಿಗೆ ಎಸೆದು ತಮ್ಮನ್ನು ನಿರ್ಗತಿಕರನ್ನಾಗಿಸಲಾಗಿದೆ ಎಂದು ಕೊಳವನಹಳ್ಳಿ ಗ್ರಾಮದ ಲೇಟ್ ದೊಡ್ಡ ವೆಂಕಟರಾಯಪ್ಪ ಅವರ ಮಕ್ಕಳು ಆರೋಪಿಸಿದ್ದಾರೆ.

ನಗರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ತಮ್ಮ ಅಳಲು ತೋಡಿಕೊಂಡ ಸಂತ್ರಸ್ತರು, ದಶಕಗಳಿಂದ ಸಾಗಿಸಿಕೊಂಡು ಬಂದಿರುವ ಜಮೀನಿನ ವಿಚಾರದಲ್ಲಿ ತಮಗೆ ನ್ಯಾಯ ಒದಗಿಸುವಂತೆ ಮನವಿ ಮಾಡಿದರು.

ಏನಿದು ಕಥೆ?

ದೊಡ್ಡ ವೆಂಕಟರಾಯಪ್ಪ ಅವರಿಗೆ 1975-76ರಲ್ಲಿ 2 ಎಕರೆ 15 ಗುಂಟೆ ಜಮೀನಿಗೆ ಸಾಗುವಳಿ ಚೀಟಿ ನೀಡಲಾಗಿತ್ತು ಎಂದು ಕುಟುಂಬದವರು ತಿಳಿಸಿದ್ದಾರೆ. ಬಾವಿ ತೋಡಿಸಲು ಪಿಎಲ್‌ಡಿ ಬ್ಯಾಂಕ್‌ನಲ್ಲಿ 60 ಸಾವಿರ ಸಾಲ ಪಡೆದಿದ್ದ ಅವರು, ಸಾಲ ಮರುಪಾವತಿಗೆ ಸಂಬಂಧಿಸಿದಂತೆ ಬ್ಯಾಂಕ್‌ನಿಂದ ನೋಟಿಸ್ ಬಂದ ಹಿನ್ನೆಲೆಯಲ್ಲಿ ಬೆಟ್ಟಕೋಟೆ ಮುನಿಯಪ್ಪ ಅವರಿಂದ ಹಣ ಪಡೆದು ಜಮೀನನ್ನು ಅವರ ಪತ್ನಿ ತಾಯಮ್ಮ ಅವರ ಹೆಸರಿಗೆ ಕ್ರಯ ಮಾಡಿಕೊಟ್ಟಿದ್ದರು. 

ಇದನ್ನೂ ಓದಿ: Chikkaballapur News: ದತ್ತಾತ್ರೇಯ ಮಂದಿರದಲ್ಲಿ ಲೋಕಕಲ್ಯಾಣಾರ್ಥ ಚಂಡಿಕಾಹೋಮ

ಅನಕ್ಷರಸ್ಥರಾಗಿದ್ದ ದೊಡ್ಡ ವೆಂಕಟರಾಯಪ್ಪ ಅವರಿಗೆ ತಿಳಿಯದಂತೆ ಈ ವ್ಯವಹಾರ ನಡೆದಿದೆ ಎಂಬುದು ಕುಟುಂಬದ ಆರೋಪವಾಗಿದೆ.

ಸಾಲ ಪಡೆದ ಆರು ವರ್ಷಗಳ ಬಳಿಕ 40 ಸಾವಿರ ಮರು ಪಾವತಿಸಿದ್ದು, ಇನ್ನೂ 20 ಸಾವಿರ ಬಾಕಿ ಉಳಿದಿತ್ತು. ಅಷ್ಟರಲ್ಲಾಗಲೇ ಬೆಟ್ಟಕೋಟೆ ಮುನಿಯಪ್ಪ ಮೃತಪಟ್ಟಿದ್ದರು. 

ಬಳಿಕ ಅವರ ಪತ್ನಿ ತಾಯಮ್ಮ ಅವರನ್ನು ಸಂಪರ್ಕಿಸಿ, ಬಾಕಿ ಹಣವನ್ನು ಹಿಂದಿರುಗಿಸಿ ಜಮೀನಿನ ಖಾತೆಯನ್ನು ತಮ್ಮ ಹೆಸರಿಗೆ ಮಾಡಿಕೊಡುವಂತೆ ಮನವಿ ಮಾಡಿದರೂ ಒಪ್ಪಲಿಲ್ಲ. ಬದಲಾಗಿ, ಏನು ಬೇಕಾದರೂ ಮಾಡಿಕೊಳ್ಳಿ ಎಂದು ಬೆದರಿಕೆ ಹಾಕಿದ್ದಾರೆ ಎಂದು ಸಂತ್ರಸ್ತರು ದೂರಿದ್ದಾರೆ.

ಈ ಸಂಬಂಧ ದೊಡ್ಡ ವೆಂಕಟರಾಯಪ್ಪ ಅವರ ಮಕ್ಕಳಾದ ಮುನಿರತ್ನಮ್ಮ, ಮುನಿ ವೆಂಕಟಮ್ಮ, ಚಿಕ್ಕ ಮುನಿಯಮ್ಮ, ದೊಡ್ಡ ಮುನಿಯಮ್ಮ, ಸಾಕಮ್ಮ ಹಾಗೂ ಗಂಗಮ್ಮ ಅವರು 2007-08ರಲ್ಲಿ ಎಂ.ಸಿ. ನ್ಯಾಯಾಲಯದಲ್ಲಿ ಮೇಲ್ಮನವಿ ಸಲ್ಲಿಸಿದ್ದರು. 

ವಿಚಾರಣೆ ನಡೆಸಿದ ನ್ಯಾಯಾಲಯ 2015-16ರಲ್ಲಿ ಜಮೀನು ದೊಡ್ಡ ವೆಂಕಟರಾಯಪ್ಪ ಅವರಿಗೆ ಸೇರಿದ್ದು ಎಂದು ಆದೇಶ ನೀಡಿತ್ತು ಎಂದು ಕುಟುಂಬದವರು ತಿಳಿಸಿದ್ದಾರೆ. 

ಈ ಆದೇಶವನ್ನು ಪ್ರಶ್ನಿಸಿ ತಾಯಮ್ಮ ಡಿ.ಸಿ. ನ್ಯಾಯಾಲಯಕ್ಕೆ ಮೇಲ್ಮನವಿ ಸಲ್ಲಿಸಿದ್ದು, 2024-25ರಲ್ಲಿ ಹಿಂದಿನ ಆದೇಶವನ್ನು ರದ್ದುಗೊಳಿಸಲಾಗಿದೆ ಎಂದು ಅವರು ಹೇಳಿದ್ದಾರೆ.

ಇದನ್ನು ಪ್ರಶ್ನಿಸಿ ದೊಡ್ಡ ವೆಂಕಟರಾಯಪ್ಪ ಅವರ ಮಕ್ಕಳು ಹೈಕೋರ್ಟ್ ಮೊರೆ ಹೋಗಿದ್ದು, ನ್ಯಾಯಾಲಯ ತಡೆಯಾಜ್ಞೆ ನೀಡಿದೆ ಎಂದು  ಸಂತ್ರಸ್ತರು ತಿಳಿಸಿದ್ದಾರೆ. 

ಆದರೂ ತಾಯಮ್ಮ ಹಾಗೂ ಅವರ ಮಕ್ಕಳಾದ ರಮೇಶ್ ಸೇರಿದಂತೆ ಕೆಲವರು ಗುಂಪಾಗಿ ಬಂದು ತಮ್ಮ ಮೇಲೆ ಹಲ್ಲೆ ನಡೆಸಿ, ಗುಡಿಸಲಿನಲ್ಲಿದ್ದ ವಸ್ತುಗಳನ್ನು ಬಾವಿಗೆ ಎಸೆದು ವಾಸದ ಆಸರೆಯನ್ನೇ ಕಸಿದುಕೊಂಡಿದ್ದಾರೆ ಎಂಬುದು ಅವರ ಆರೋಪವಾಗಿದೆ.

ಈ ಕುರಿತು ನಂದಿ ಗಿರಿಧಾಮ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರೂ ನ್ಯಾಯ ದೊರೆತಿಲ್ಲ. ಬದಲಾಗಿ ದೂರುದಾರರನ್ನೇ ಠಾಣೆಗೆ ಕರೆಸಿ ಬೆದರಿಕೆ ಹಾಕಲಾಗುತ್ತಿದೆ ಎಂದು ಸಂತ್ರಸ್ತರು ದೂರಿದ್ದಾರೆ. ವಯಸ್ಸಾದ ತಂದೆಯ ಜಮೀನಿನ ಹಕ್ಕಿಗಾಗಿ ಹೋರಾಡುತ್ತಿರುವ ಕುಟುಂಬಕ್ಕೆ ರಕ್ಷಣೆ ನೀಡಬೇಕು ಹಾಗೂ ಹಲ್ಲೆ ನಡೆಸಿದವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಅವರು ಮನವಿ ಮಾಡಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅಂಬೇಡ್ಕರ್ ಸೇನೆಯ ಕಾರ್ಯದರ್ಶಿ ಸಾದಲಿ ಮಂಜುನಾಥ್, “ಪ್ರಕರಣ ನ್ಯಾಯಾಲಯದಲ್ಲಿರುವಾಗ ಸಂತ್ರಸ್ತರಿಗೆ ಪ್ರಾಣ ಬೆದರಿಕೆ ಹಾಕುವುದು ಸರಿಯಲ್ಲ. ದೂರು ನೀಡಿದವರ ಪರವಾಗಿ ನಿಲ್ಲಬೇಕಾದ ಪೊಲೀಸರು ಬಲಾಢ್ಯರ ಪರವಾಗಿ ವರ್ತಿಸುವುದು ಖಂಡನೀಯ. ಸಂತ್ರಸ್ತರಿಗೆ ನ್ಯಾಯ ಮತ್ತು ರಕ್ಷಣೆ ಒದಗಿಸದಿದ್ದರೆ ನಂದಿ ಗಿರಿಧಾಮ ಪೊಲೀಸ್ ಠಾಣೆ ಎದುರು ಪ್ರತಿಭಟನೆ ನಡೆಸಲಾಗುವುದು” ಎಂದು ಎಚ್ಚರಿಸಿದರು.

ಸುದ್ದಿಗೋಷ್ಠಿಯಲ್ಲಿ ಲಕ್ಷ್ಮಿ ನರಸಿಂಹಪ್ಪ, ನರಸಿಂಹಪ್ಪ, ಮುನಿರತ್ನಮ್ಮ, ಮುನಿ ವೆಂಕಟಮ್ಮ, ಚಿಕ್ಕ ಮುನಿಯಮ್ಮ, ಸಾಕಮ್ಮ, ಗಂಗಮ್ಮ, ದೊಡ್ಡ ಮುನಿಯಮ್ಮ ಸೇರಿದಂತೆ ಇತರರು ಉಪಸ್ಥಿತ ರಿದ್ದರು.