2035ರ ವೇಳೆಗೆ ವಿಶ್ವದ ಅತಿದೊಡ್ಡ ಧರ್ಮವಾಗಲಿದೆ ಇಸ್ಲಾಂ: ರಿಸರ್ಚ್ನಲ್ಲಿ ಬಯಲಾಯಿತು ಅಚ್ಚರಿಯ ಅಂಶ!
Pew Research America: ಶತಮಾನಗಳಿಂದ ವಿಶ್ವದ ಅತಿದೊಡ್ಡ ಧರ್ಮವಾಗಿ ಗುರುತಿಸಿಕೊಂಡಿರುವ ಕ್ರಿಶ್ಚಿಯನ್ ಧರ್ಮವನ್ನು ಹಿಂದಿಕ್ಕಿ, 2035ರ ವೇಳೆಗೆ ಇಸ್ಲಾಂ ಜಗತ್ತಿನ ಅತಿದೊಡ್ಡ ಧರ್ಮವಾಗಲಿದೆ ಎಂದು ಅಮೆರಿಕದ ಖ್ಯಾತ ಸಂಶೋಧನಾ ಸಂಸ್ಥೆ ಪ್ಯೂ ರಿಸರ್ಚ್ ಸೆಂಟರ್ ತನ್ನ ಹೊಸ ವರದಿಯಲ್ಲಿ ತಿಳಿಸಿದೆ. 2020ರಿಂದ 2070ರವರೆಗಿನ ಜಾಗತಿಕ ಧಾರ್ಮಿಕ ಜನಸಂಖ್ಯೆಯ ಬದಲಾವಣೆ ಕುರಿತು ನಡೆದ ಈ ಮಹತ್ವದ ಅಧ್ಯಯನದಲ್ಲಿ ಹಲವು ಅಚ್ಚರಿಯ ಅಂಶಗಳು ಬಯಲಾಗಿವೆ. ಇಲ್ಲಿದೆ ನೋಡಿ ಕಂಪ್ಲೀಟ್ ಸ್ಟೋರಿ.
ಸಂಗ್ರಹ ಚಿತ್ರ -
ಬೆಂಗಳೂರು, ನ.19: ಪ್ರಸ್ತುತ ಜಗತ್ತಿನ ಅತಿದೊಡ್ಡ ಧರ್ಮವಾಗಿರುವ ಕ್ರಿಶ್ಚಿಯನ್ (Christian) ಧರ್ಮವನ್ನು 2035ರ ವೇಳೆಗೆ ಇಸ್ಲಾಂ (Islam) ಧರ್ಮ ಹಿಂದಿಕ್ಕಲಿದ್ದು, ವಿಶ್ವದ ಅತಿದೊಡ್ಡ ಧರ್ಮವಾಗಿ ಹೊರಹೊಮ್ಮಲಿದೆ ಎಂದು ಅಮೆರಿಕದ ಪ್ರತಿಷ್ಠಿತ ಪ್ಯೂ ರಿಸರ್ಚ್ ಸೆಂಟರ್ (Pew Research Center) ತನ್ನ ನೂತನ ಅಧ್ಯಯನ ವರದಿಯಲ್ಲಿ ಅಂದಾಜಿಸಿದೆ. "ದಿ ಫ್ಯೂಚರ್ ಆಫ್ ವರ್ಲ್ಡ್ ರಿಲಿಜನ್ಸ್: ಪಾಪ್ಯುಲೇಷನ್ ಗ್ರೋತ್ ಪ್ರೊಜೆಕ್ಷನ್ಸ್, 2020-2070" ಶೀರ್ಷಿಕೆಯಡಿ ಬಿಡುಗಡೆಯಾಗಿರುವ ಈ ವರದಿಯ ಪ್ರಕಾರ, ಮುಂದಿನ ದಶಕಗಳಲ್ಲಿ ಕ್ರಿಶ್ಚಿಯನ್ ಮತ್ತು ಮುಸ್ಲಿಂ ಎರಡೂ ಸಮುದಾಯಗಳ ಜನಸಂಖ್ಯೆ ಹೆಚ್ಚಾಗಲಿದೆಯಾದರೂ, ಮುಸ್ಲಿಂ ಜನಸಂಖ್ಯೆಯ ಬೆಳವಣಿಗೆಯ ವೇಗವು ಇತರ ಎಲ್ಲಾ ಧರ್ಮಗಳಿಗಿಂತ ಅತಿ ಹೆಚ್ಚಾಗಿದೆ.
2020ರಿಂದ 2070ರ ಅವಧಿಯಲ್ಲಿ ಜಗತ್ತಿನ ಒಟ್ಟು ಜನಸಂಖ್ಯೆ ಶೇ. 29ರಷ್ಟು ಹೆಚ್ಚಾಗಲಿದ್ದು, ಇದೇ ಅವಧಿಯಲ್ಲಿ ಮುಸ್ಲಿಮರ ಜನಸಂಖ್ಯೆ ಬರೋಬ್ಬರಿ ಶೇ. 80ರಷ್ಟು ಮತ್ತು ಕ್ರಿಶ್ಚಿಯನ್ನರ ಜನಸಂಖ್ಯೆ ಶೇ. 30ರಷ್ಟು ಬೆಳವಣಿಗೆ ಕಾಣಲಿದೆ ಎಂದು ವರದಿ ಹೇಳಿದೆ.
ಪೋಸ್ಟ್ ನೋಡಿ
We project Muslims will be the largest religious group by 2035. Both Muslims and Christians will grow in number in the coming decades, but Muslims will grow at a faster pace. (2/11) https://t.co/GRbONeYys7
— Pew Research Center (@pewresearch) November 18, 2026
ಮುಸ್ಲಿಂ ಜನಸಂಖ್ಯೆಯ ವೇಗವಾಗಿ ಬೆಳೆಯಲು ಕಾರಣವೇನು?
ಇಸ್ಲಾಂ ಜನಸಂಖ್ಯೆಯ ಈ ಭಾರಿ ಹೆಚ್ಚಳಕ್ಕೆ ಮತಾಂತರ ಕಾರಣವಲ್ಲ ಎಂದು ಸಂಶೋಧಕರು ಸ್ಪಷ್ಟಪಡಿಸಿದ್ದಾರೆ. ವಾಸ್ತವವಾಗಿ, ಕ್ರಿಶ್ಚಿಯನ್ ಧರ್ಮದಿಂದ ಇಸ್ಲಾಂಗೆ ಮತಾಂತರಗೊಳ್ಳುವವರಿಗಿಂತ, ಇಸ್ಲಾಂನಿಂದ ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರಗೊಳ್ಳುವವರ ಸಂಖ್ಯೆಯೇ ತುಸು ಹೆಚ್ಚಿದೆ. ಹಾಗಾಗಿ, ಹೆಚ್ಚಿನ ಜನನ ದರ ಮತ್ತು ಯುವ ಜನಸಂಖ್ಯೆಯೇ ಮುಸ್ಲಿಂ ಜನಸಂಖ್ಯೆ ವೇಗವಾಗಿ ಬೆಳೆಯಲು ಮುಖ್ಯ ಕಾರಣವಾಗಿದೆ.
ಜಾಗತಿಕವಾಗಿ ಮುಸ್ಲಿಂ ಮಹಿಳೆಯರ ಸರಾಸರಿ ಫಲವತ್ತತೆ ದರ 3.1 ಮಕ್ಕಳಾಗಿದ್ದರೆ, ಮುಸ್ಲಿಮೇತರ ಮಹಿಳೆಯರ ಸರಾಸರಿ ದರ 2.0 ಆಗಿದೆ. ಅಲ್ಲದೆ, ಮುಸ್ಲಿಂ ಸಮುದಾಯದ ಸರಾಸರಿ ವಯಸ್ಸು ಕೇವಲ 24 ವರ್ಷಗಳಾಗಿದ್ದರೆ, ಮುಸ್ಲಿಮೇತರರ ಸರಾಸರಿ ವಯಸ್ಸು 33 ಆಗಿದೆ. ಹೆಚ್ಚಿನ ಸಂಖ್ಯೆಯಲ್ಲಿ ಯುವ ಜನಸಂಖ್ಯೆ ಇರುವುದರಿಂದ ಸಂತಾನೋತ್ಪತ್ತಿ ಪ್ರಮಾಣ ಸಹಜವಾಗಿಯೇ ಹೆಚ್ಚಿದ್ದು, 2020ರಿಂದ 2070ರ ನಡುವೆ ನೈಸರ್ಗಿಕ ಜನಸಂಖ್ಯಾ ಬೆಳವಣಿಗೆಯ ಮೂಲಕ ಮುಸ್ಲಿಂ ಸಮುದಾಯಕ್ಕೆ ಸುಮಾರು 160 ಕೋಟಿ ಜನರು ಸೇರ್ಪಡೆಯಾಗಲಿದ್ದಾರೆ.
2070ರ ವೇಳೆಗೆ ವಿಶ್ವದ ಧರ್ಮದ ಚಿತ್ರಣ ಹೇಗಿರಲಿದೆ?
ವರದಿಯ ಅಂದಾಜಿನಂತೆ, 2070ರ ವೇಳೆಗೆ ವಿಶ್ವದ ಒಟ್ಟು ಜನಸಂಖ್ಯೆಯಲ್ಲಿ ಮುಸ್ಲಿಮರ ಪಾಲು ಶೇ. 35.8ಕ್ಕೆ ಏರಿಕೆಯಾಗಲಿದ್ದು, ಕ್ರಿಶ್ಚಿಯನ್ನರ ಪಾಲು ಶೇ. 29.1ರ ಆಸುಪಾಸಿನಲ್ಲಿಯೇ ಸ್ಥಿರವಾಗಿರಲಿದೆ. ಇನ್ನು ಯಾವುದೇ ಧರ್ಮಕ್ಕೆ ಸೇರದವರ ಪ್ರಮಾಣವು 2020ರಲ್ಲಿ ಶೇ. 24ರಷ್ಟಿದ್ದು, 2070ರ ವೇಳೆಗೆ ಶೇ. 17ಕ್ಕೆ ಇಳಿಕೆಯಾಗಲಿದೆ. ಚೀನಾದಲ್ಲಿ ಜನಸಂಖ್ಯೆ ಸುಮಾರು 40 ಕೋಟಿಯಷ್ಟು ಕುಸಿಯಲಿರುವ ಬೌದ್ಧರು ಮತ್ತು ಯಾವುದೇ ಧರ್ಮಕ್ಕೆ ಸೇರದವರ ಒಟ್ಟು ಸಂಖ್ಯೆಯ ಮೇಲೆ ದೊಡ್ಡ ಪರಿಣಾಮ ಬೀರಲಿದೆ. ಅಲ್ಲದೆ, 2070ರ ಹೊತ್ತಿಗೆ ಅಮೆರಿಕ, ಕೆನಡಾ, ಬ್ರಿಟನ್ ಮತ್ತು ಫ್ರಾನ್ಸ್ನಂತಹ ದೇಶಗಳಲ್ಲಿ ಕ್ರಿಶ್ಚಿಯನ್ನರು ಬಹುಮತ ಕಳೆದುಕೊಳ್ಳಲಿದ್ದು, ಯುರೋಪ್ನಲ್ಲಿ ಮುಸ್ಲಿಮರ ಜನಸಂಖ್ಯೆಯ ಪಾಲು ಶೇ. 6ರಿಂದ ಶೇ. 13ಕ್ಕೆ ದ್ವಿಗುಣಗೊಳ್ಳಲಿದೆ ಎಂದು ವರದಿ ವಿಶ್ಲೇಷಿಸಿದೆ.
ಹಿಂದೂ ಜನಸಂಖ್ಯೆಯ ಸ್ಥಿತಿಗತಿ ಏನು?
ಜಾಗತಿಕವಾಗಿ ಹಿಂದೂಗಳ ಒಟ್ಟು ಜನಸಂಖ್ಯೆ ಹೆಚ್ಚಾಗುತ್ತಿದ್ದರೂ, ವಿಶ್ವದ ಒಟ್ಟು ಜನಸಂಖ್ಯೆಯಲ್ಲಿ ಹಿಂದೂಗಳ ಶೇಕಡಾವಾರು ಪಾಲು ತುಸು ಕಡಿಮೆಯಾಗಲಿದ್ದು, 2070ರ ವೇಳೆಗೆ ಶೇ. 13.6ರಷ್ಟಿರಲಿದೆ. ಇದೇ ವೇಳೆ, ವಿಶ್ವದಲ್ಲೇ ಅತಿ ಹೆಚ್ಚು ಮುಸ್ಲಿಂ ಜನಸಂಖ್ಯೆ ಹೊಂದಿರುವ ದೇಶಗಳ ಪಟ್ಟಿಯಲ್ಲೂ ದೊಡ್ಡ ಬದಲಾವಣೆಯಾಗಲಿದೆ. ಪ್ರಸ್ತುತ ಮೊದಲ ಸ್ಥಾನದಲ್ಲಿರುವ ಇಂಡೋನೇಷ್ಯಾವನ್ನು ಹಿಂದಿಕ್ಕಿ, 2070ರ ವೇಳೆಗೆ ಪಾಕಿಸ್ತಾನವು ವಿಶ್ವದ ಅತಿ ಹೆಚ್ಚು ಮುಸ್ಲಿಂ ಜನಸಂಖ್ಯೆ 46.1 ಕೋಟಿ, ಹೊಂದಿರುವ ದೇಶವಾಗಿ ಹೊರಹೊಮ್ಮಲಿದೆ.
ನಂತರದ ಸ್ಥಾನಗಳಲ್ಲಿ ಭಾರತ 33.4 ಕೋಟಿ, ಮುಸ್ಲಿಮರು ಎರಡನೇ ಸ್ಥಾನದಲ್ಲಿದ್ದರೆ, ನೈಜೀರಿಯಾ 28.2 ಕೋಟಿ, ಮೂರನೇ ಸ್ಥಾನದಲ್ಲಿ ಹಾಗೂ ಇಂಡೋನೇಷ್ಯಾ 27.4 ಕೋಟಿ, ನಾಲ್ಕನೇ ಸ್ಥಾನದಲ್ಲಿರಲಿದೆ. ಪಾಕಿಸ್ತಾನದಲ್ಲಿ ಹಿಂದೂಗಳ ಜನಸಂಖ್ಯೆ 50 ಲಕ್ಷದಿಂದ 1.03 ಕೋಟಿಗೆ ಮತ್ತು ಅಮೆರಿಕದಲ್ಲಿ 30 ಲಕ್ಷದಿಂದ 74 ಲಕ್ಷಕ್ಕೆ ಏರಿಕೆಯಾಗಲಿದೆ ಎಂದು ಪ್ಯೂ ರಿಸರ್ಚ್ ವರದಿ ವಿವರಿಸಿದೆ.