Omar Abdullah: ರಾಜ್ಯ ಸ್ಥಾನಮಾನಕ್ಕಾಗಿ ಆಗ್ರಹಿಸುವುದಿಲ್ಲ; ಪೆಹಲ್ಗಾಮ್ ದಾಳಿ ಬಳಿಕ ಯುಟರ್ನ್ ಹೊಡೆದ್ರಾ ಜಮ್ಮು ಕಾಶ್ಮೀರ ಮುಖ್ಯಮಂತ್ರಿ ಉಮರ್ ಅಬ್ದುಲ್ಲಾ?
Pahalgam Attack: ಕಾಶ್ಮೀರದ ಪಹಲ್ಗಾಮ್‌ನ ಬೈಸರನ್ ಕಣಿವೆಯಲ್ಲಿ ಏ. 22ರಂದು ಉಗ್ರರು ದಾಳಿ ನಡೆಸಿ 26 ಪ್ರವಾಸಿಗರನ್ನು ಹತ್ಯೆ ನಡೆಸಿದ ಹಿನ್ನೆಲೆಯಲ್ಲಿ ಸೋಮವಾರ (ಏ. 28) ಜಮ್ಮು ಮತ್ತು ಕಾಶ್ಮೀರ ವಿಧಾನಸಭೆಯಲ್ಲಿ 1 ದಿನದ ವಿಶೇಷ ಅಧಿವೇಶನ ಆಯೋಜಿಸಿ ಮೃತರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಈ ವೇಳೆ ಮಾತನಾಡಿದ ಮುಖ್ಯಮಂತ್ರಿ ಉಮರ್ ಅಬ್ದುಲ್ಲಾ 26 ಪ್ರವಾಸಿಗರನ್ನು ಹತ್ಯೆ ಮಾಡಲಾಗಿದ್ದು, ಈ ದುಃಖದ ಸಂದರ್ಭದಲ್ಲಿ ರಾಜ್ಯ ಸ್ಥಾನಮಾನಕ್ಕೆ ಆಗ್ರಹಿಸುವುದಿಲ್ಲ ಎಂದು ಹೇಳಿದರು.

ಜಮ್ಮು ಕಾಶ್ಮೀರ ಮುಖ್ಯಮಂತ್ರಿ ಉಮರ್ ಅಬ್ದುಲ್ಲಾ.

ಶ್ರೀನಗರ: ಕಾಶ್ಮೀರದ ಪಹಲ್ಗಾಮ್‌ನ ಬೈಸರನ್ ಕಣಿವೆಯಲ್ಲಿ ಏ. 22ರಂದು ಉಗ್ರರು ದಾಳಿ ನಡೆಸಿ (Pahalgam Attack) 26 ಪ್ರವಾಸಿಗರನ್ನು ಹತ್ಯೆ ನಡೆಸಿದ ಹಿನ್ನೆಲೆಯಲ್ಲಿ ಸೋಮವಾರ (ಏ. 28) ಜಮ್ಮು ಮತ್ತು ಕಾಶ್ಮೀರ ವಿಧಾನಸಭೆಯಲ್ಲಿ (Jammu and Kashmir Assembly) 1 ದಿನದ ವಿಶೇಷ ಅಧಿವೇಶನ ಆಯೋಜಿಸಿ ಮೃತರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಈ ವೇಳೆ ಮಾತನಾಡಿದ ಮುಖ್ಯಮಂತ್ರಿ ಉಮರ್ ಅಬ್ದುಲ್ಲಾ (Omar Abdullah), 26 ಪ್ರವಾಸಿಗರನ್ನು ಹತ್ಯೆ ಮಾಡಲಾಗಿದ್ದು, ಈ ದುಃಖದ ಸಂದರ್ಭದಲ್ಲಿ ರಾಜ್ಯ ಸ್ಥಾನಮಾನಕ್ಕೆ ಆಗ್ರಹಿಸುವುದಿಲ್ಲ ಎಂದು ಹೇಳಿದರು. ಅದಾಗ್ಯೂ ಕೇಂದ್ರಾಡಳಿತ ಪ್ರದೇಶದಿಂದ ರಾಜ್ಯ ಸ್ಥಾನಮಾನ ಒದಗಿಸಬೇಕೆಂಬ ಬೇಡಿಕೆಯಿಂದ ಹಿಂದೆ ಸರಿಯುವುದಿಲ್ಲ. ಸದ್ಯಕ್ಕಂತೂ ಈ ವಿಚಾರ ಪ್ರಸ್ತಾವಿಸುವುದಿಲ್ಲ ಎಂದು ಹೇಳಿದರು.
ʼʼನ್ಯಾಶನಲ್ ಕಾನ್ಫರೆನ್ಸ್ ಸರ್ಕಾರ ಜಮ್ಮು ಮತ್ತು ಕಾಶ್ಮೀರಕ್ಕೆ ರಾಜ್ಯ ಸ್ಥಾನಮಾನ ನೀಡಬೇಕೆಂಬ ಬೇಡಿಕೆಯಿಂದ ಹಿಂದೆ ಸರಿಯುವುದಿಲ್ಲ. ದೇಶ ಈಗ 26 ಪ್ರವಾಸಿಗರು ಉಗ್ರರಿಂದ ಹತರಾದ ದುಃಖದಲಲಿ ಮುಳುಗಿದೆ. ಹೀಗಾಗಿ ಸದ್ಯ ಈ ಬೇಡಿಕೆಯನ್ನು ಮುಂದಿಡುವುದಿಲ್ಲʼʼ ಎಂದು ಅವರು ವಿವರಿಸಿದರು.
ಉಮರ್ ಅಬ್ದುಲ್ಲಾ ಅವರ ಹೇಳಿಕೆ ವಿಡಿಯೊ ಇಲ್ಲಿದೆ:
#PahalgamTerrorAttack | J&K CM Omar Abdullah says, "I will not use this moment to demand statehood. After Pahalgam, with what face can I ask for statehood for Jammu and Kashmir? Meri kya itni sasti siyasat hai? We have talked about statehood in the past and will do so in the… pic.twitter.com/kZqXSRxLmY
— ANI (@ANI) April 28, 2025
ಉಮರ್ ಅಬ್ದುಲ್ಲಾ ಹೇಳಿದ್ದೇನು?
ʼʼಜಮ್ಮು ಮತ್ತು ಕಾಶ್ಮೀರದ ಭದ್ರತೆಯ ಜವಾಬ್ದಾರಿ ಸದ್ಯ ರಾಜ್ಯ ಸರ್ಕಾರದ ಕೈಯಲ್ಲಿಲ್ಲ. ಆದರೆ ಈ ಸಂದರ್ಭವನ್ನು ನಾನು ರಾಜ್ಯ ಸ್ಥಾನಮಾನಕ್ಕೆ ಆಗ್ರಹಿಸಲು ಬಳಸಿಕೊಳ್ಳುವುದಿಲ್ಲ. ಪಹಲ್ಗಾಮ್ ಹತ್ಯಾಕಾಂಡದ ಬಳಿಕ ನಾನು ಜಮ್ಮು ಮತ್ತು ಕಾಶ್ಮೀರಕ್ಕೆ ರಾಜ್ಯ ಸ್ಥಾನಮಾನ ನೀಡಲು ಆಗ್ರಹಿಸುವುದಾದರೂ ಹೇಗೆ? ಆ 26 ಜನರ ಜೀವ ನನಗೆ ಮುಖ್ಯ. ನಾವು ಈ ಹಿಂದೆ ರಾಜ್ಯ ಸ್ಥಾನಮಾನದ ಬಗ್ಗೆ ಮಾತನಾಡಿದ್ದೇವೆ ಮತ್ತು ಭವಿಷ್ಯದಲ್ಲಿಯೂ ಆ ಬಗ್ಗೆ ಪಟ್ಟು ಹಿಡಿಯುತ್ತೇವೆ. ಆದರೆ ನಾನು ಈಗ ಹೋಗಿ 26 ಜನರು ಸಾವನ್ನಪ್ಪಿದ್ದಾರೆ, ನಮಗೆ ರಾಜ್ಯ ಸ್ಥಾನಮಾನ ನೀಡಿ ಎಂದು ಕೇಂದ್ರ ಸರ್ಕಾರವನ್ನು ಆಗ್ರಹಿಸುವುದು ನಾಚಿಕೆಗೇಡಿನ ಸಂಗತಿʼʼ ಎಂದು ಉಮರ್ ಅಬ್ದುಲ್ಲಾ ಹೇಳಿದರು.
ಈ ಸುದ್ದಿಯನ್ನೂ ಓದಿ: Pahalgam terror attack: ಭಾರತದಲ್ಲಿ ಶೋಯೆಬ್ ಅಖ್ತರ್ ಯೂಟ್ಯೂಬ್ ಚಾನೆಲ್ ಬ್ಯಾನ್
ಜಮ್ಮು ಮತ್ತು ಕಾಶ್ಮೀರ ವಿಧಾನಸಭೆಯ 1 ದಿನದ ವಿಶೇಷ ಅಧಿವೇಶನದಲ್ಲಿ ಪೆಹಲ್ಗಾಮ್ ದಾಳಿಯಲ್ಲಿ ಮಡಿದವರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಈ ವೇಳೆ ಭಾವುಕರಾದ ಉಮರ್ ಅಬ್ದುಲ್ಲಾ, ದಾಳಿಯಲ್ಲಿ ಮಡಿದವರ ಕುಟುಂಬಕ್ಕೆ ಯಾವ ರೀತಿ ಕ್ಷಮೆ ಕೋರಬೇಕು ಎನ್ನುವುದು ತಿಳಿಯುತ್ತಿಲ್ಲ ಎಂದರು. ʼʼಅತಿಥಿಗಳ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳುವುದು ನನ್ನ ಕರ್ತವ್ಯ. ಆದರೆ ಇದನ್ನು ಸಮರ್ಪಕವಾಗಿ ನಿರ್ವಹಿಸಲು ನನ್ನಿಂದ ಸಾಧ್ಯವಾಗಿಲ್ಲ. ಮೃತಪಟ್ಟವರ ಕುಟುಂಬದವರ ಬಳಿ ಕ್ಷಮೆ ಕೋರಲು ನನ್ನ ಬಳಿ ಪದಗಳಿಲ್ಲ. ತಂದೆಯನ್ನು ಕಳೆದುಕೊಂಡ ಮಕ್ಕಳು, ಕೆಲವೇ ದಿನಗಳ ಹಿಂದೆ ಮದುವೆಯಾಗಿ ಪತಿಯನ್ನು ಕಳೆದುಕೊಂಡ ಪತ್ನಿಯ ಬಳಿ ಹೇಗೆ ಮಾತನಾಡಲಿ? ಪ್ರವಾಸಕ್ಕಾಗಿ ಬಂದ ನಾವು ಮಾಡಿರುವ ತಪ್ಪಾದರೂ ಏನು? ಎಂದು ಪ್ರಶ್ನಿಸಿದರೆ ಏನಂತ ಉತ್ತರಿಸುವುದು? ಈ ದಾಳಿಕೋರರು ನಮಗಾಗಿ ಇದನ್ನು ಮಾಡಲಾಗಿದೆ ಎಂದು ಹೇಳುತ್ತಾರೆ. ಆದರೆ ನಾವು ಅದನ್ನು ಅನುಮೋದಿಸಿಲ್ಲ. ಇದನ್ನು ಮಾಡಲು ನಾವು ಅವರಿಗೆ ಹೇಳಿಲ್ಲ. ನಾವು ಈ ದಾಳಿಯನ್ನು ಬೆಂಬಲಿಸುವುದಿಲ್ಲ" ಎಂದು ಅವರು ಹೇಳಿದರು.