ಫೋಟೋ ಗ್ಯಾಲರಿ ಆಪರೇಷನ್​ ಸಿಂಧೂರ ಐಪಿಎಲ್​ ಅಕ್ಷಯ ತೃತೀಯ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

JeM Terrorist: ಸೇನೆ ಬರಲಿ ನೋಡಿಕೊಳ್ತೇನೆ; ಎನ್‌ಕೌಂಟರ್‌ನಲ್ಲಿ ಹತನಾಗುವ ಮುನ್ನ ಉಗ್ರ ಅಮೀರ್‌ ತಾಯಿಯೊಂದಿಗೆ ನಡೆಸಿದ ವಿಡಿಯೊ ಕರೆ ವೈರಲ್‌

Amir Nazir Wani: ಜಮ್ಮು ಮತ್ತು ಕಾಶ್ಮೀರದ ಪುಲ್ವಾಮಾದಲ್ಲಿ ನಡೆದ ಎನ್‌ಕೌಂಟರ್‌ನಲ್ಲಿ ಹತನಾದ ಜೈಶ್‌-ಎ-ಮೊಹಮ್ಮದ್‌ ಸಂಘಟನೆಯ ಉಗ್ರ ಅಮೀರ್‌ ನಜೀರ್‌ ವಾನಿ ತನ್ನ ತಾಯಿಯೊಂದಿಗೆ ಕೊನೆಯ ಬಾರಿ ಮೊಬೈಲ್‌ನಲ್ಲಿ ಮಾತನಾಡುತ್ತಿರುವ ವಿಡಿಯೊ ಇದೀಗ ವೈರಲ್‌ ಆಗಿದೆ.

ಕೊನೆಯ ಬಾರಿ ತಾಯಿಯೊಂದಿಗೆ  ಉಗ್ರ ನಡೆಸಿದ ವಿಡಿಯೊ ಕರೆ ವೈರಲ್‌

ಅಮೀರ್‌ ನಜೀರ್‌ ವಾನಿ.

Profile Ramesh B May 15, 2025 9:05 PM

ಶ್ರೀನಗರ: ಜಮ್ಮು ಮತ್ತು ಕಾಶ್ಮೀರದಲ್ಲಿ ಭದ್ರತಾ ಪಡೆಗಳೊಂದಿಗೆ ಗುರುವಾರ (ಮೇ 15) ನಡೆದ ಎನ್‌ಕೌಂಟರ್‌ನಲ್ಲಿ ಹತನಾದ ಜೈಶ್‌-ಎ-ಮೊಹಮ್ಮದ್‌ (Jaish-e-Mohammed) ಸಂಘಟನೆಯ ಉಗ್ರ ಅಮೀರ್‌ ನಜೀರ್‌ ವಾನಿ (Amir Nazir Wani) ತನ್ನ ತಾಯಿಯೊಂದಿಗೆ ಕೊನೆಯ ಬಾರಿ ಮೊಬೈಲ್‌ನಲ್ಲಿ ಮಾತನಾಡುತ್ತಿರುವ ವಿಡಿಯೊ ಇದೀಗ ವೈರಲ್‌ ಆಗಿದೆ. ವಿಡಿಯೊ ಕರೆ ವೇಳೆ ಆತನ ತಾಯಿ ಶರಣಾಗುವಂತೆ ಆಗ್ರಹಿಸಿದ್ದಾರೆ (JeM Terrorist). ಆದರೆ ಅಮೀರ್‌ ನಜೀರ್‌ ವಾನಿ ಇದಕ್ಕೆ ನಿರಾಕಿಸಿದ್ದಾನೆ. ಜಮ್ಮು ಮತ್ತು ಕಾಶ್ಮೀರದ ಪುಲ್ವಾಮಾ ಜಿಲ್ಲೆಯಲ್ಲಿ ನಡೆದ ಎನ್‌ಕೌಂಟರ್‌ನಲ್ಲಿ ಹತನಾಗುವ ಕೆಲವೇ ಗಂಟೆಗಳ ಮೊದಲು ಈ ಸಂಭಾಷಣೆ ನಡೆದಿದೆ.

ವೈರಲ್‌ ಆಗಿರುವ ವಿಡಿಯೊದಲ್ಲಿ ತಾಯಿಯೊಂದಿಗೆ ಮಾತನಾಡುತ್ತಿರುವ ವಾನಿ ಕೈಯಲ್ಲಿ ಎಕೆ- 47 ಗನ್‌ ಹಿಡಿದುಕೊಂಡಿರುವುದು ಕಂಡು ಬಂದಿದೆ. ಇದು ಅವರ ಕೊನೆಯ ಸಂಭಾಷಣೆ ಎಂದು ಮೂಲಗಳು ತಿಳಿಸಿವೆ.

ʼʼದಯವಿಟ್ಟು ಶರಣಾಗುʼʼ ಎಂದು ತಾಯಿ ಗೋಗರೆಯುತ್ತಿರುವುದು ವಿಡಿಯೊದಲ್ಲಿ ಕಂಡು ಬಂದಿದೆ. ಆದರೆ ವಾನಿ ಶರಣಾಗಲು ನಿರಾಕರಿಸಿ, ʼʼಸೇನೆ ಮುಂದೆ ಬರಲಿ. ಆಗ ನೋಡಿಕೊಳ್ಳುತ್ತೇನೆʼʼ ಎಂದು ಧಿಮಾಕಿನಿಂತ ಉತ್ತರಿಸಿದ್ದಾನೆ.



ಈ ಸುದ್ದಿಯನ್ನೂ ಓದಿ: Terrorist Killed: ಭಾರೀ ಗುಂಡಿನ ಚಕಮಕಿ- ಮೂವರು ಜೈಶ್‌ ಉಗ್ರರನ್ನು ಹೊಡೆದುರುಳಿಸಿದ ಸೇನೆ

ಗುಂಡಿನ ಚಕಮಕಿ ನಡೆಯುವ ಮೊದಲು ವಾನಿ ಅಡಗಿಕೊಂಡಿದ್ದ ಮನೆಯಿಂದ ಈ ವಿಡಿಯೊ ಕರೆ ಮಾಡಲಾಗಿತ್ತು. ತಾಯಿಯ ಜತೆಗೆ ವಾನಿಯ ಸಹೋದರಿಯೂ ಈ ವೇಳೆ ಮಾತನಾಡಿದ್ದಳು. ಜತೆಗೆ ಅದೇ ಎನ್‌ಕೌಂಟರ್‌ನಲ್ಲಿ ಕೊಲ್ಲಲ್ಪಟ್ಟ ಮತ್ತೊಬ್ಬ ಭಯೋತ್ಪಾದಕ ಆಸಿಫ್ ಅಹ್ಮದ್ ಶೇಖ್‌ನ ಸಹೋದರಿಯೊಂದಿಗೂ ವಾನಿ ಸಂಭಾಷಣೆ ನಡೆಸಿದ್ದ.

ಗುರುವಾರ ಪುಲ್ಯಾಮಾ ಜಿಲ್ಲೆಯ ಟ್ರಾಲ್‌ ಪ್ರದೇಶದ ನಾದಿರ್‌ ಗ್ರಾಮದಲ್ಲಿ ಭದ್ರತಾ ಪಡೆಗಳೊಂದಿಗೆ ನಡೆದ ಗುಂಡಿನ ಚಕಮಕಿಯಲ್ಲಿ ಜೈಶ್‌-ಎ-ಮೊಹಮ್ಮದ್‌ ಸಂಘಟನೆಯ ವಾನಿ, ಆಸಿಫ್‌ ಅಹ್ಮದ್‌ ಶೇಖ್‌ ಮತ್ತು ಯಾವರ್‌ ಅಹ್ಮದ್‌ ಭಟ್‌ ಹತರಾಗಿದ್ದರು. ಈ ಮೂವರೂ ಪುಲ್ವಾಮಾ ಜಿಲ್ಲೆಯ ನಿವಾಸಿಗಳು.

ಈ ಪ್ರದೇಶದಲ್ಲಿ ಭಯೋತ್ಪಾದಕರ ಅಡಗಿಕೊಂಡಿರುವ ಬಗ್ಗೆ ಗುಪ್ತಚರ ಮಾಹಿತಿಯ ಮೇರೆಗೆ ಭದ್ರತಾ ಪಡೆಗಳು ಕಾರ್ಯಾಚರಣೆ ನಡೆಸಿದವು. ಎನ್‌ಕೌಂಟರ್ ನಂತರ ಮಾತನಾಡಿದ ಜಮ್ಮು ಕಾಶ್ಮೀರದ ಇನ್ಸ್‌ಪೆಕ್ಟರ್ ಜನರಲ್ ಆಫ್ ಪೊಲೀಸ್ ವಿಕೆ ಬರ್ಡಿ, ʼʼಏ. 22ರಂದು ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಯಲ್ಲಿ ಹತ್ಯೆಗೀಡಾದ ಭಯೋತ್ಪಾದಕರು ಭಾಗಿಯಾಗಿದ್ದಾರೆಯೇ ಎನ್ನುವುದನ್ನು ತನಿಖೆ ನಡೆಸಲಾಗುತ್ತಿದೆʼʼ ಎಂದು ತಿಳಿಸಿದರು.

2ನೇ ಸೇನಾ ಕಾರ್ಯಾಚರಣೆ

ಕಳೆದ 48 ಗಂಟೆಗಳಲ್ಲಿ ನಡೆದ 2ನೇ ಸೇನಾ ಕಾರ್ಯಾಚರಣೆ ಇದಾಗಿದ್ದು, ಈವರೆಗೆ ಒಟ್ಟು 6 ಉಗ್ರರು ಹತರಾಗಿದ್ದಾರೆ. ಇನ್ನೂ ಕೆಲವು ಉಗ್ರರು ಅವಿತಿರುವ ಬಗ್ಗೆ ಮಾಹಿತಿ ಇದ್ದು, ಶೋಧ ಕಾರ್ಯ ಮುಂದುವರಿದಿದೆ. ಮೇ 13ರಂದು ಜಮ್ಮು ಮತ್ತು ಕಾಶ್ಮೀರದ ಶೋಪಿಯಾನ್‌ನಲ್ಲಿ ಭದ್ರತಾ ಪಡೆಗಳೊಂದಿಗೆ ನಡೆದ ಗುಂಡಿನ ಚಕಮಕಿಯಲ್ಲಿ ಮೂವರು ಭಯೋತ್ಪಾದಕರು ಸತ್ತಿದ್ದರು. ಈ ಚಕಮಕಿ ಮೊದಲಿಗೆ ಕುಲ್ಗಾಮ್‌ನಲ್ಲಿ ಆರಂಭವಾಗಿ, ಬಳಿಕ ಶೋಪಿಯಾನ್‌ನ ಕಾಡು ಪ್ರದೇಶದಲ್ಲೂ ಮುಂದುವರಿದಿತ್ತು. ಗುಪ್ತಚರ ಮಾಹಿತಿಯ ಆಧಾರದಲ್ಲಿ ಭದ್ರತಾ ಪಡೆಗಳು ಭಯೋತ್ಪಾದಕರನ್ನು ಸುತ್ತುವರಿದಿದ್ದವು.