Pahalgam Attack: ಪಹಲ್ಗಾಮ್ ದಾಳಿ ವೇಳೆ ಭಯೋತ್ಪಾದಕರಿಗೆ ನೆರವಾಗಿದ್ದ ಕಾಶ್ಮೀರಿ ವ್ಯಕ್ತಿಯ ಬಂಧನ
Jammu Kashmir: ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ ಏಪ್ರಿಲ್ 22ರಂದು ನಡೆದ ಉಗ್ರರ ದಾಳಿಗೆ ನೆರವಾದ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತನನ್ನು ದಕ್ಷಿಣ ಕಾಶ್ಮೀರದ ನಿವಾಸಿ, ಲಷ್ಕರ್-ಎ-ತೈಬಾ (ಟಿಆರ್‌ಎಫ್) ಭಯೋತ್ಪಾದಕ ಸಂಘಟನೆಯ ಕಾರ್ಯಕರ್ತ ಮೊಹಮ್ಮದ್ ಯೂಸುಫ್ ಕಟಾರಿ ಎಂದು ಗುರುತಿಸಲಾಗಿದೆ.

-

ಶ್ರೀನಗರ: ಮಹತ್ವದ ಬೆಳವಣಿಗೆಯೊಂದರಲ್ಲಿ ಬುಧವಾರ (ಸೆಪ್ಟೆಂಬರ್ 24) ಜಮ್ಮು ಮತ್ತು ಕಾಶ್ಮೀರ ಪೊಲೀಸರು ಪಹಲ್ಗಾಮ್‌ನಲ್ಲಿ ಏಪ್ರಿಲ್ 22ರಂದು ನಡೆದ ಉಗ್ರರ ದಾಳಿಗೆ ನೆರವಾದ ವ್ಯಕ್ತಿಯನ್ನು ಬಂಧಿಸಿದ್ದಾರೆ (Pahalgam Attack). ಬಂಧಿತನನ್ನು ದಕ್ಷಿಣ ಕಾಶ್ಮೀರದ ನಿವಾಸಿ, ಲಷ್ಕರ್-ಎ-ತೈಬಾ (ಟಿಆರ್‌ಎಫ್) ಭಯೋತ್ಪಾದಕ ಸಂಘಟನೆಯ ಕಾರ್ಯಕರ್ತ ಮೊಹಮ್ಮದ್ ಯೂಸುಫ್ ಕಟಾರಿ (26) (Mohammad Katari) ಎಂದು ಗುರುತಿಸಲಾಗಿದೆ. ಈತ ಲಷ್ಕರ್-ಎ-ತೈಬಾ ಭಯೋತ್ಪಾದಕರು ಭಾರತದ ಒಳನುಸುಳಲು ಸಹಾಯ ಮಾಡಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪದಕ ದಾಳಿಯಲ್ಲಿ 26 ಮಂದಿ ಪ್ರವಾಸಿಗರು ಅಸುನೀಗಿದ್ದರು. ಜುಲೈಯಲ್ಲಿ ನಡೆದ ಆಪರೇಷನ್ ಮಹಾದೇವ್ ಕಾರ್ಯಾಚರಣೆಯ ವೇಳೆ ವಶಪಡಿಸಿಕೊಳ್ಳಲಾದ ಶಸ್ತ್ರಾಸ್ತ್ರಗಳ ಪರೀಕ್ಷೆಯ ಬಳಿಕ ಯೂಸುಫ್ ಕಟಾರಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
🟥Big Breakthrough in #PahalgamTerrorAttack : J&K Police arrest Mohammad Kataria, key Lashkar-e-Taiba (TRF) operative who gave logistical support to terrorists that killed 26. Arrest after analysis of weapons seized in Op Mahadev. pic.twitter.com/X3zw7qnOwX
— IDU (@defencealerts) September 24, 2025
ಈ ಸುದ್ದಿಯನ್ನೂ ಓದಿ: Jammu and Kashmir Encounter: ಪಹಲ್ಗಾಮ್ ದಾಳಿ ನಡೆಸಿದ್ದ ಮತ್ತಿಬ್ಬರು ಉಗ್ರರು ಎನ್‌ಕೌಂಟರ್‌ನಲ್ಲಿ ಫಿನೀಶ್
ʼʼಪಹಲ್ಗಾಮ್ ದಾಳಿಯ ಮೂವರು ಬಂದೂಕುಧಾರಿಗಳನ್ನು ಭದ್ರತಾ ಪಡೆಗಳು ಜುಲೈಯಲ್ಲಿ ನಡೆದ ಆಪರೇಷನ್ ಮಹಾದೇವ್ ಕಾರ್ಯಾಚರಣೆಯ ವೇಳೆ ಹೊಡೆದುರುಳಿಸಿದ್ದರು. ಈ ವೇಳೆ ವಶಪಡಿಸಿಕೊಂಡ ಶಸ್ತ್ರಾಸ್ತ್ರಗಳು ಮತ್ತು ಉಪಕರಣಗಳ ವಿಧಿವಿಜ್ಞಾನ ಪರೀಕ್ಷೆಯ ನಂತರ ಮೊಹಮ್ಮದ್ ಕಟಾರಿಯನ್ನು ಬಂಧಿಸಲಾಯಿತುʼʼ ಎಂದು ಅಧಿಕಾರಿಗಳು ವಿವರಿಸಿದ್ದಾರೆ. ಕಟಾರಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ಆಪರೇಷನ್ ಮಹಾದೇವ್ ಕಾರ್ಯಾಚರಣೆಯ ಬಳಿಕ ನಡೆದ ಮಹತ್ವದ ಬೆಳವಣಿಗೆ ಇದಾಗಿದೆ. ಪಹಲ್ಗಾಮ್ ದಾಳಿಗೆ ಕಾರಣರಾದ ಎಲ್ಲರನ್ನು ಪತ್ತೆಹಚ್ಚಲು ಕೇಂದ್ರ ಸರ್ಕಾರ ನಿರಂತರವಾಗಿ ಕಾರ್ಯ ನಿರ್ವಹಿಸುತ್ತಿದೆ. ಪಾಕಿಸ್ತಾನ ಮೂಲದ ಲಷ್ಕರ್-ಎ-ತೈಬಾದ ಬಣ ಟಿಆರ್‌ಎಫ್ ಪಹಲ್ಗಾಮ್ ದಾಳಿಯ ಹೊಣೆಯನ್ನು ಹೊತ್ತುಕೊಂಡಿದೆ.
ಶ್ರೀನಗರ ಬಳಿಯ ಡಚಿಗಮ್‌ನಲ್ಲಿ ಭಯೋತ್ಪಾದಕರು ಅಡಗಿರುವ ಬಗ್ಗೆ ಭದ್ರತಾ ಪಡೆಗಳಿಗೆ ಗುಪ್ತಚರ ಮಾಹಿತಿ ದೊರೆತ ಬಳಿಕ ಮೇ 22ರಂದು ಆಪರೇಷನ್ ಮಹಾದೇವ್ ಕಾರ್ಯಾಚರಣೆಗೆ ಮುನ್ನುಡಿ ಬರೆಯಲಾಯಿತು. ಜುಲೈ 28ರಂದು ದಾಳಿಯನ್ನು ಪ್ರಾರಂಭಿಸಲಾಯಿತು. ಈ ವೇಳೆ ಪಹಲ್ಗಾಮ್ ದಾಳಿಯ ಮಾಸ್ಟರ್ ಮೈಂಡ್ ಎಂದು ಹೇಳಲಾಗುವ ಸುಲೇಮಾನ್ ಶಾ ಆಲಿಯಾಸ್ ಹಾಶಿಮ್ ಮೂಸಾ ಸೇರಿದಂತೆ ಆತನ ಇಬ್ಬರು ಸಹಚರರನ್ನು ಭದ್ರತಾ ಪಡೆ ಹೊಡೆದುರುಳಿಸಿತು. ಮೃತ ಸುಲೇಮಾನ್ ಶಾ ಪಾಕಿಸ್ತಾನ ಸೇನೆಯ ವಿಶೇಷ ಸೇವಾ ಗುಂಪಿನ ಮಾಜಿ ಕಮಾಂಡೋ ಆಗಿದ್ದ. ನಂತರ ಆತ ಭಯೋತ್ಪಾದಕ ಚಟುವಟಿಕೆಗೆ ಆರಂಭಿಸಿದ್ದ.
ʼʼಸುಲೇಮಾನ್ ಶಾ ಮೊದಲು 2023ರಲ್ಲಿ ಭಾರತಕ್ಕೆ ನುಸುಳಿದ್ದ. 2024ರ ಅಕ್ಟೋಬರ್‌ನಲ್ಲಿ ಆತ ದಾಳಿ ನಡೆಸಿ 7 ನಾಗರಿಕರ ಸಾವಿಗೆ ಕಾರಣವಾಗಿದ್ದ. ಬಾರಾಮುಲ್ಲಾದಲ್ಲಿ ನಾಲ್ವರು ಭದ್ರತಾ ಸಿಬ್ಬಂದಿ ಹುತಾತ್ಮರಾದ ದಾಳಿಯಲ್ಲಿಯೂ ಆತ ಭಾಗಿಯಾಗಿದ್ದʼʼ ಎಂದು ಅದಿಕಾರಿಗಳು ತಿಳಿಸಿದ್ದಾರೆ.
ಏಪ್ರಿಲ್ 22ರಂದು ಪಹಲ್ಗಾಮ್‌ನ ಬೈಸರನ್ ಕಣಿವೆಗೆ ದಾಳಿ ನಡೆಸಿದ ಭಯೋತ್ಪಾದಕರು ಪ್ರವಾಸಿಗರ ಧರ್ಮ ಕೇಳಿ ಮುಸ್ಲಿಮೇತರರನ್ನು ಕೊಲೆ ಮಾಡಿದರು. ಪತ್ನಿಯರ ಎದುರೇ ಪತಿಯಂದಿರ ಮೇಲೆ ಗುಂಡಿನ ದಾಳಿ ನಡೆಸಿದರು. ಈ ದಾಳಿಯು ಪಾಕಿಸ್ತಾನದೊಂದಿಗೆ ತೀವ್ರ ರಾಜತಾಂತ್ರಿಕ ಬಿಕ್ಕಟ್ಟನ್ನು ಹುಟ್ಟುಹಾಕಿತು. ಪಾಕಿಸ್ತಾನವು ಗಡಿಯಾಚೆಗಿನ ಭಯೋತ್ಪಾದಕ ದಾಳಿಗಳನ್ನು ಬೆಂಬಲಿಸುತ್ತಿದೆ ಎಂದು ಪದೇ ಪದೆ ಹೇಳುತ್ತಲೇ ಬಂದಿದ್ದ ಭಾರತ ಮತ್ತೆ ಇದನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಾಬೀತುಪಡಿಸಿತು. ಜತೆಗೆ ಪಾಕಿಸ್ತಾನದ ಅರ್ಧಕ್ಕಿಂತ ಹೆಚ್ಚು ಭಾಗದ ಕೃಷಿಗೆ ನೀರಾವರಿ ಒದಗಿಸುವ ನಿರ್ಣಾಯಕ ಸಿಂಧೂ ಜಲ ಒಪ್ಪಂದವನ್ನು ಸ್ಥಗಿತಗೊಳಿಸಿತು. ಅಲ್ಲದೆ ಮೇ ಆರಂಭದಲ್ಲಿ ಆಪರೇಷನ್ ಸಿಂದೂರ್ ಕಾರ್ಯಾಚರಣೆ ನಡೆಸಿ ಭಯೋತ್ಪಾಕ ತಾಣಗಳನ್ನು ನಾಶಪಡಿಸಿತು.