ಕಣ್ಮುಚ್ಚಿ ಕುಳಿತ ಕೇರಳಂ ಸರ್ಕಾರ; ನೇಮಕಾತಿ ವಿಳಂಬ ಖಂಡಿಸಿ ಹುಲ್ಲು ತಿಂದು ಪ್ರತಿಭಟನೆ ನಡೆಸಿದ ರ್‍ಯಾಂಕ್ ವಿಜೇತ ಉದ್ಯೋಗಾರ್ಥಿಗಳು: ಸಿಜೆಪಿ ನಾಯಕರು ಎಲ್ಲಿ ಹೋದ್ರು ಎಂದು ಪ್ರಶ್ನಿಸಿದ ನೆಟ್ಟಿಗರು
Kerala Public Service Commission: ನೇಮಕಾತಿ ಆದೇಶ ನೀಡಲು ವಿಳಂಬ ಮಾಡುತ್ತಿರುವ ಕೇರಳಂ ಸರ್ಕಾರದ ಧೋರಣೆಯನ್ನು ಖಂಡಿಸಿ, ಎಲ್‌ಪಿ ಶಾಲಾ ಶಿಕ್ಷಕ ಪರೀಕ್ಷೆಯ ರ್‍ಯಾಂಕ್ ಅಭ್ಯರ್ಥಿಗಳು ತಿರುವನಂತಪುರಂನಲ್ಲಿ ಶನಿವಾರ ಹುಲ್ಲು ತಿನ್ನುವ ಮೂಲಕ ವಿನೂತನ ಪ್ರತಿಭಟನೆ ನಡೆಸಿದರು. ಇವರ ಪ್ರತಿಭಟನೆ 34ನೇ ದಿನಕ್ಕೆ ಕಾಲಿಟ್ಟಿದ್ದು, ಕೂಡಲೇ ಕೌನ್ಸಿಲಿಂಗ್ ನಡೆಸಿ ನೇಮಕಾತಿ ಆದೇಶ ನೀಡಬೇಕು ಎಂದು ಆಗ್ರಹಿಸಿದ್ದಾರೆ.
ತಿರುವನಂತಪುರಂನಲ್ಲಿ ಹುಲ್ಲು ತಿಂದು ಪ್ರತಿಭಟನೆ ನಡೆಸಿದ ಉದ್ಯೋಗಾರ್ಥಿಗಳು -
ತಿರುವನಂತಪುರಂ, ಆ. 9: ಉದ್ಯೋಗ ಆದೇಶ ನೀಡಲು ವಿಳಂಬ ಮಾಡುತ್ತಿರುವ ರಾಜ್ಯ ಸರ್ಕಾರದ ಧೋರಣೆಯನ್ನು ಖಂಡಿಸಿ ಕೇರಳಂ ಕಿರಿಯ ಪ್ರಾಥಮಿಕ ಶಾಲಾ ಶಿಕ್ಷಕ ಪರೀಕ್ಷೆಯ ರ್‍ಯಾಂಕ್ ವಿಜೇತರು ಶನಿವಾರ (ಆಗಸ್ಟ್ 8) ಸಚಿವಾಲಯದ ಎದುರು ಸಾಂಕೇತಿಕವಾಗಿ ಹುಲ್ಲು ತಿನ್ನುವ ಮೂಲಕ ವಿನೂತನ ಪ್ರತಿಭಟನೆ ನಡೆಸಿದ್ದಾರೆ. ಸರ್ಕಾರದ ನಿರ್ಲಕ್ಷ್ಯದ ವಿರುದ್ಧ ನಡೆಯುತ್ತಿರುವ ಈ ಸುದೀರ್ಘ ಹೋರಾಟವು ಇದೀಗ 34ನೇ ದಿನಕ್ಕೆ ಕಾಲಿಟ್ಟಿದೆ.
ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರುವ ವಿಡಿಯೊದಲ್ಲಿ ಪ್ರತಿಭಟನಾಕಾರರು ಸಾಲಾಗಿ ಕುಳಿತು ತಮ್ಮೆದುರಿನ ಕಾಗದದ ಮೇಲಿಟ್ಟಿದ್ದ ಹುಲ್ಲಿನ ಎಸಳುಗಳನ್ನು ತಿನ್ನುತ್ತಿರುವುದು ಕಂಡುಬಂದಿದೆ. ಕೇರಳ ಪಬ್ಲಿಕ್ ಸರ್ವಿಸ್ ಕಮಿಷನ್ ಕಳೆದ ವರ್ಷ ಮೇ 31ರಂದು ರ್‍ಯಾಂಕ್ ಪಟ್ಟಿಯನ್ನು ಪ್ರಕಟಿಸಿದ್ದರೂ, ಅರ್ಹ ಅಭ್ಯರ್ಥಿಗಳಿಗೆ ಇನ್ನೂ ನೇಮಕಾತಿ ಆದೇಶ ನೀಡಲಾಗಿಲ್ಲ.
ಹುಲ್ಲು ತಿಂದು ಪ್ರತಿಭಟನೆ ನಡೆಸಿದ ಯುವ ಜನತೆ:
#WATCH | Thiruvananthapuram, Keralam: Lower Primary School Teacher (LPST) rank holders symbolically eat grass as part of their protest outside the Secretariat, alleging that they have not received appointment orders despite being included in the PSC rank list. pic.twitter.com/tL8SIzWPMi
— ANI (@ANI) August 8, 2026
ಮಾಧ್ಯಮಗಳೊಂದಿಗೆ ಮಾತನಾಡಿದ ಪ್ರತಿಭಟನಾಕಾರರೊಬ್ಬರು, "ನಾವು ಎಲ್‌ಪಿಎಸ್‌ಟಿ ರ್‍ಯಾಂಕ್ ಹೋಲ್ಡರ್‌ಗಳು. 34 ದಿನಗಳಿಂದ ಸತತ ಪ್ರತಿಭಟನೆ ನಡೆಸುತ್ತಿದ್ದರೂ ಸರ್ಕಾರದಿಂದ ಯಾವುದೇ ಸಕಾರಾತ್ಮಕ ಪ್ರತಿಕ್ರಿಯೆ ಸಿಕ್ಕಿಲ್ಲ. ನೇಮಕಾತಿ ಆದೇಶ ನೀಡಲು ಅಧಿಕಾರಿಗಳು ಎರಡು ತಿಂಗಳ ಕಾಲಾವಕಾಶ ಕೇಳುತ್ತಿದ್ದಾರೆ. ಆದರೆ ಆ ವಿಳಂಬಕ್ಕೆ ನಿಖರ ಕಾರಣ ತಿಳಿಸುತ್ತಿಲ್ಲ. ವಿಧವಿಧದ ಪ್ರತಿಭಟನೆಗಳಿಗೂ ಸರ್ಕಾರ ಕಣ್ಣು ಮುಚ್ಚಿ ಕುಳಿತಿದ್ದು, ನಮ್ಮನ್ನು ಸಂಪೂರ್ಣವಾಗಿ ನಿರ್ಲಕ್ಷಿಸುತ್ತಿದೆ" ಎಂದು ತಮ್ಮ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಬಿಸಿಲು, ಮಳೆಯನ್ನೂ ಲೆಕ್ಕಿಸದೆ ತಿಂಗಳಿನಿಂದ ಬೀದಿಯಲ್ಲಿ ಕುಳಿತಿರುವ ಈ ಯುವ ಜನತೆ, ಉದ್ಯೋಗ ಸಿಗದೆ ತೀವ್ರ ಆರ್ಥಿಕ ಹಾಗೂ ಮಾನಸಿಕ ಸಂಕಷ್ಟ ಎದುರಿಸುತ್ತಿದ್ದಾರೆ. ಕಷ್ಟಪಟ್ಟು ಪರೀಕ್ಷೆ ಬರೆದು ರ್‍ಯಾಂಕ್ ಪಟ್ಟಿಯಲ್ಲಿ ಜಾಗ ಪಡೆದರೂ ಉದ್ಯೋಗಕ್ಕಾಗಿ ಮತ್ತೆ ಹೋರಾಟ ಮಾಡುವ ಪರಿಸ್ಥಿತಿ ಬಂದಿರುವುದು ಅತ್ಯಂತ ಶೋಚನೀಯ ಸಂಗತಿ ಎಂದು ಪ್ರತಿಭಟನಾನಿರತರು ಹೇಳಿದ್ದಾರೆ. ಯುವಕರ ಈ ಹೋರಾಟಕ್ಕೆ ದೇಶಾದ್ಯಂತ ವ್ಯಾಪಕ ಬೆಂಬಲ ವ್ಯಕ್ತವಾಗುತ್ತಿದೆ.
ಎಸ್‌ಐಟಿ ತನಿಖೆಗೆ ಆದೇಶ
ಇದೇ ವೇಳೆ, ಕೇರಳಂ ಪಿಸಿಎಸ್ ಪರೀಕ್ಷಾ ಮೌಲ್ಯಮಾಪನದಲ್ಲಿ ನಡೆದಿದೆ ಎನ್ನಲಾದ ಅಕ್ರಮಗಳ ಕುರಿತು ತನಿಖೆ ನಡೆಸಲು ಪೊಲೀಸರು ವಿಶೇಷ ತನಿಖಾ ತಂಡವನ್ನು ರಚಿಸಿದ್ದಾರೆ. ಐಜಿಪಿ ಎಸ್. ಅಜಿತಾ ಬೇಗಂ ನೇತೃತ್ವದಲ್ಲಿ ಈ ಎಸ್‌ಐಟಿ ತಂಡ ರಚನೆಯಾಗಿದ್ದು, ಆರ್ಥಿಕ ಅಪರಾಧಗಳ ತಡೆ ವಿಭಾಗದ ಅಡಿಯಲ್ಲಿ ಪರೀಕ್ಷಾ ಅಕ್ರಮಗಳ ಬಗ್ಗೆ ಸಮಗ್ರ ತನಿಖೆ ನಡೆಸಲಿದೆ ಎಂದು ಪೊಲೀಸ್ ಇಲಾಖೆ ತಿಳಿಸಿದೆ.
ಅಕ್ರಮಗಳ ತನಿಖೆಯ ನೆಪದಲ್ಲಿ ಅರ್ಹ ಅಭ್ಯರ್ಥಿಗಳ ನೇಮಕಾತಿಯನ್ನು ಅನಿರ್ದಿಷ್ಟಾವಧಿಗೆ ಮುಂದೂಡಬಾರದು, ಕೂಡಲೇ ಕೌನ್ಸಿಲಿಂಗ್ ನಡೆಸಿ ಆದೇಶ ಪತ್ರ ನೀಡಬೇಕು ಎಂಬುದು ಪ್ರತಿಭಟನಾಕಾರರ ಮುಖ್ಯ ಬೇಡಿಕೆ.