ವಕೀಲರಿಗೆ ಶಾಂತಿಯುತ ಪ್ರತಿಭಟನೆಗಳಲ್ಲಿ ಭಾಗವಹಿಸುವ ಹಕ್ಕಿದೆ: ಸುಪ್ರೀಂ ಕೋರ್ಟ್
Supreme Court: ನಿಗದಿಪಡಿಸಿದ ಸ್ಥಳಗಳಲ್ಲಿ ನಡೆಯುವ ಶಾಂತಿಯುತ ಪ್ರತಿಭಟನೆಗಳಲ್ಲಿ ಭಾಗವಹಿಸುವ ಹಕ್ಕು ಪ್ರತಿಯೊಬ್ಬ ವಕೀಲರಿಗೂ ಇದೆ ಎಂದು ಭಾರತದ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಸೂರ್ಯ ಕಾಂತ್ ಹೇಳಿದ್ದಾರೆ. ಸುಪ್ರೀಂ ಕೋರ್ಟ್‌ನ ಗೌರವ, ಸ್ವತಂತ್ರತೆ ಮತ್ತು ನ್ಯಾಯಾಂಗದ ಜವಾಬ್ದಾರಿಗೆ ಧಕ್ಕೆ ತರುವಂತಹ ಘಟನೆಗಳಿಗೆ ನ್ಯಾಯಾಲಯವನ್ನು ವೇದಿಕೆಯಾಗಿ ಬಳಸಬಾರದು ಎಂದು ಅವರು ಹೇಳಿದರು.
ಸಾಂದರ್ಭಿಕ ಚಿತ್ರ -
ನವದೆಹಲಿ, ಅ.12: ನಿಗದಿಪಡಿಸಿದ ಸ್ಥಳಗಳಲ್ಲಿ ನಡೆಯುವ ಶಾಂತಿಯುತ ಪ್ರತಿಭಟನೆಗಳಲ್ಲಿ ಭಾಗವಹಿಸುವ ಹಕ್ಕು ಪ್ರತಿಯೊಬ್ಬ ವಕೀಲರಿಗೂ ಇದೆ ಎಂದು ಭಾರತದ ಮುಖ್ಯ ನ್ಯಾಯಮೂರ್ತಿ ಸೂರ್ಯ ಕಾಂತ್ (CJI Surya Kant) ಹೇಳಿದರು. ಮುಖ್ಯ ನ್ಯಾಯಮೂರ್ತಿ ಸೂರ್ಯ ಕಾಂತ್ ಮತ್ತು ನ್ಯಾಯಮೂರ್ತಿಗಳಾದ ಜಾಯ್‌ಮಾಲ್ಯ ಬಾಗ್ಚಿ ಹಾಗೂ ವಿ. ಮೋಹನಾ ಅವರನ್ನೊಳಗೊಂಡ ನ್ಯಾಯಪೀಠದ ಮುಂದೆ ಹಿರಿಯ ವಕೀಲ ಗೋಪಾಲ್ ಶಂಕರನಾರಾಯಣನ್ ಅವರು ಈ ವಿಷಯ ಪ್ರಸ್ತಾಪಿಸಿದರು. ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಮತ್ತು ಚುನಾವಣಾ ಆಯೋಗದ ವಿರುದ್ಧ ನಡೆದ ಪ್ರತಿಭಟನೆಗಳ ವೇಳೆ ವಕೀಲರನ್ನು ವಶಕ್ಕೆ ಪಡೆಯಲಾಗಿದ್ದು, ಪೊಲೀಸರು ಅತಿರೇಕದ ವರ್ತನೆ ತೋರಿದ ಘಟನೆಗಳೂ ನಡೆದಿವೆ ಎಂದು ಅವರು ನ್ಯಾಯಪೀಠಕ್ಕೆ ತಿಳಿಸಿದರು. ಈ ವಿಷಯದ ಬಗ್ಗೆ ಮಂಗಳವಾರ (ಅ.13) ವಿಚಾರಣೆ ನಡೆಸಲು ಸುಪ್ರೀಂ ಕೋರ್ಟ್ (Supreme Court) ಒಪ್ಪಿಕೊಂಡಿದೆ.
ವಕೀಲರ ವಿರುದ್ಧ ಪೊಲೀಸರು ಕ್ರಮ ಕೈಗೊಂಡಿದ್ದಾರೆ ಎಂಬ ಆರೋಪ ಮತ್ತು ಭಾರತೀಯ ನಾಗರಿಕ ಸುರಕ್ಷಾ ಸಂಹಿತೆಯ (BNSS) ಸೆಕ್ಷನ್ 163ರ ಅಡಿಯಲ್ಲಿ ಹೊರಡಿಸಲಾದ ಆದೇಶ ಸಾರ್ವಜನಿಕವಾಗಿ ಪಾಲನೆ ಆಗದಿರುವ ಬಗ್ಗೆ ಶಂಕರನಾರಾಯಣನ್ ಕಳವಳ ವ್ಯಕ್ತಪಡಿಸಿದರು. ನ್ಯಾಯಾಲಯ ಮಧ್ಯಪ್ರವೇಶಿಸುವಂತೆ ಮನವಿ ಮಾಡಿದ ಹಿರಿಯ ವಕೀಲರು, ಪ್ರತಿಭಟನೆಗಳ ಸಂದರ್ಭದಲ್ಲಿ ವಕೀಲರ ಮೇಲೆ ಬಲಪ್ರಯೋಗ ಮಾಡಲಾಗಿದೆ ಮತ್ತು ಅವರನ್ನು ವಶಕ್ಕೆ ಪಡೆಯಲಾಗಿದೆ ಎಂದು ಆರೋಪಿಸಿದರು. ಈ ಹಿನ್ನೆಲೆಯಲ್ಲಿ ಪೊಲೀಸರು ಸಂಯಮದಿಂದ ವರ್ತಿಸುವಂತೆ ಸೂಚಿಸಬೇಕೆಂದು ಅವರು ನ್ಯಾಯಾಲಯವನ್ನು ಒತ್ತಾಯಿಸಿದರು.
ಹಿರಿಯ ವಕೀಲ ಶದನ್ ಫರಾಸತ್ ಅವರನ್ನು ಬೀದಿಗಳಲ್ಲಿ ಎಳೆದೊಯ್ದಿದ್ದಾರೆ ಎಂದು ಆರೋಪಿಸಿದರು. ಈ ಘಟನೆಯನ್ನು ಅತ್ಯಂತ ಅಸಹ್ಯಕರ ಎಂದ ಹಿರಿಯ ವಕೀಲ ಗೋಪಾಲ್ ಶಂಕರನಾರಾಯಣನ್, ವಕೀಲರು ಸಂಯಮದಿಂದ ವರ್ತಿಸುವಂತೆ ಸುಪ್ರೀಂ ಕೋರ್ಟ್ ಹಲವು ಬಾರಿ ಮನವಿ ಮಾಡಿದೆ ಎಂದು ಹೇಳಿದರು. ಪೊಲೀಸರಿಗೂ ಇದೇ ರೀತಿಯ ಸಂದೇಶವನ್ನು ನ್ಯಾಯಾಲಯ ರವಾನಿಸಲಿದೆ ಎಂಬ ಭರವಸೆ ಇದೆ ಎಂದು ಅವರು ಹೇಳಿದರು.
ಪ್ರತಿಭಟನಾಕಾರರ ಮೇಲೆ ಖಾಸಗಿ ವ್ಯಕ್ತಿಗಳು ದಾಳಿ ನಡೆಸುತ್ತಿದ್ದಾರೆ. ಆದರೆ ಪೊಲೀಸರು ಮಧ್ಯಪ್ರವೇಶಿಸಲು ವಿಫಲರಾಗಿದ್ದಾರೆ ಎಂದು ಅವರು ಆರೋಪಿಸಿದರು. ಮಕ್ಕಳ ಮೇಲೆ ಲಾಠಿ ಪ್ರಹಾರ ನಡೆಸಲಾಗಿದೆ ಎಂಬ ವರದಿಗಳನ್ನು ಉಲ್ಲೇಖಿಸಿದ ಅವರು, ಆಪಾದಿತ ಘಟನೆಗಳ ವಿಡಿಯೊಗಳನ್ನು ಮಂಗಳವಾರ (ಅ.13) ನ್ಯಾಯಾಲಯದ ಮುಂದಿಡಲಾಗುವುದು ಎಂದು ಹೇಳಿದರು.
ಪೊಲೀಸ್ ದೌರ್ಜನ್ಯಕ್ಕೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಸುಪ್ರೀಂ ಕೋರ್ಟ್ ಮಧ್ಯಪ್ರವೇಶಿಸಿ, ಕಠಿಣ ಸಂದೇಶ ರವಾನಿಸಬೇಕು ಎಂದು ಅವರು ಒತ್ತಾಯಿಸಿದರು. ವಕೀಲರು ಮತ್ತು ನಾಗರಿಕರು ರಕ್ಷಣೆಯಿಲ್ಲದೆ ಉಳಿಯುವಂತಾಗಬಾರದು ಎಂದು ಅವರು ಹೇಳಿದರು.
ಸದ್ಯಕ್ಕೆ ನಾನು ಏನನ್ನೂ ಹೇಳಲು ಬಯಸುವುದಿಲ್ಲ ಎಂದು ಸಿಜೆಐ ಸೂರ್ಯ ಕಾಂತ್ ಹೇಳಿದರು. ಸುಪ್ರೀಂ ಕೋರ್ಟ್‌ನ ಗೌರವ, ಸ್ವತಂತ್ರತೆ ಮತ್ತು ನ್ಯಾಯಾಂಗದ ಜವಾಬ್ದಾರಿಗೆ ಧಕ್ಕೆ ತರುವಂತಹ ಘಟನೆಗಳಿಗೆ ನ್ಯಾಯಾಲಯವನ್ನು ವೇದಿಕೆಯಾಗಿ ಬಳಸಬಾರದು ಎಂದು ಅವರು ಹೇಳಿದರು. ಪ್ರತಿಯೊಬ್ಬ ವಕೀಲರು ಮತ್ತು ವಕೀಲರ ಸಂಘದ ಸದಸ್ಯರು ಗುರುತಿಸಲಾದ ಸ್ಥಳಗಳಲ್ಲಿ ನಡೆಯುವ ಶಾಂತಿಯುತ ಪ್ರತಿಭಟನೆಗಳಲ್ಲಿ ಭಾಗವಹಿಸುವ ಹಕ್ಕು ಹೊಂದಿದ್ದಾರೆ ಎಂದು ಅವರು ಪುನರುಚ್ಚರಿಸಿದರು.