ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Vantara: ಸುಪ್ರೀಂ ಕೋರ್ಟ್ ಆದೇಶದಂತೆ ಹೆಣ್ಣಾನೆ ಮಾಧುರಿಯ ಸ್ಥಳಾಂತರ; ವನತಾರಾ ನೀಡಿದ ಸ್ಪಷ್ಟನೆಯಲ್ಲಿ ಏನಿದೆ?

Madhuri: ಮಹಾರಾಷ್ಟ್ರದ ಕೊಲ್ಹಾಪುರದ ಜೈನ ಮಠದಿಂದ ಮಾಧುರಿ (ಮಹಾದೇವಿ) ಆನೆಯನ್ನು ಗುಜರಾತ್‌ನ ವನತಾರಾಕ್ಕೆ ಸ್ಥಳಾಂತರಿಸಿದ ಹಿನ್ನೆಲೆಯಲ್ಲಿ ವಿವಾದ ಭುಗಿಲೆದ್ದಿದೆ. ಈ ಹಿನ್ನೆಲೆಯಲ್ಲಿ ವನತಾರಾ ಸ್ಪಷ್ಟನೆ ನೀಡಿದ್ದು, ಸುಪ್ರೀಂ ಕೋರ್ಟ್ ಮತ್ತು ಬಾಂಬೆ ಹೈ ಕೋರ್ಟ್‌ನ ನಿರ್ದೇಶನದ ಮೇರೆಗೆ ಸ್ಥಳಾಂತರಿಸಿದ್ದೇ ಹೊರತು ಇದು ತಮ್ಮ ನಿರ್ಧಾರವಾಗಿರಲಿಲ್ಲ ಎಂದಿದೆ.

ಸುಪ್ರೀಂ ಕೋರ್ಟ್ ಆದೇಶದಂತೆ ಹೆಣ್ಣಾನೆ ಮಾಧುರಿಯ ಸ್ಥಳಾಂತರ; ವನತಾರಾ

Ramesh B Ramesh B Aug 6, 2025 7:45 PM

ಗಾಂಧಿನಗರ: ಮಹಾರಾಷ್ಟ್ರದ ಕೊಲ್ಹಾಪುರದ ಜೈನ ಮಠದಿಂದ ಮಾಧುರಿ (ಮಹಾದೇವಿ) ಆನೆಯನ್ನು ಸುಪ್ರೀಂ ಕೋರ್ಟ್ ಮತ್ತು ಬಾಂಬೆ ಹೈ ಕೋರ್ಟ್‌ನ ನಿರ್ದೇಶನದ ಮೇರೆಗೆ ಸ್ಥಳಾಂತರಿಸಿದ್ದೇ ಹೊರತು ಇದು ತಮ್ಮ ನಿರ್ಧಾರವಾಗಿರಲಿಲ್ಲ ಎಂದು ಅನಂತ್‌ ಅಂಬಾನಿ (Anant Ambani) ಮಾಲೀಕತ್ವದ ವನ್ಯಜೀವಿಗಳ ಚಿಕಿತ್ಸಾ ಹಾಗೂ ಮೂಲಸೌಕರ್ಯ ಕೇಂದ್ರ ವನತಾರಾ (Vantara) ಸ್ಪಷ್ಟಪಡಿಸಿದೆ. 36 ವರ್ಷದ ಹೆಣ್ಣಾನೆ ಮಾಧುರಿಯನ್ನು ವನತಾರಾಕ್ಕೆ ಕರೆದುಕೊಂಡ ಹೋದ ಹಿನ್ನೆಲೆಯಲ್ಲಿ ಕೊಲ್ಹಾಪುರದಲ್ಲಿ ಆಕ್ರೋಶ ಭುಗಿಲೆದ್ದ ಕಾರಣ ಈ ಸ್ಪಷ್ಪನೆ ನೀಡಲಾಗಿದೆ.

ಕರ್ನಾಟಕದಲ್ಲಿ ಹುಟ್ಟಿದ ಮಾಧುರಿ 33 ವರ್ಷಗಳ ಕಾಲ ಕೊಲ್ಹಾಪುರದ ಜೈನ ಮಠದಲ್ಲಿ ಕಳೆದಿತ್ತು. ಸ್ಥಳೀಯರ ಅಚ್ಚುಮೆಚ್ಚಿನ ಆನೆ ಇದಾಗಿತ್ತು. ಆದರೆ ಇತ್ತೀಚೆಗೆ ಅದರ ಆರೋಗ್ಯದಲ್ಲಿ ಏರುಪೇರು ಕಂಡುಬಂದ ಹಿನ್ನೆಲೆಯಲ್ಲಿ, ಸುಪ್ರೀಂ ಕೋರ್ಟ್ ನಿರ್ದೇಶನದ ಮೇರೆಗೆ ಜೈನ ಮಠದಿಂದ ಗುಜರಾತ್‌ನ ಜಾಮ್ ನಗರದಲ್ಲಿನ ವನತಾರಾಕ್ಕೆ ಸ್ಥಳಾಂತರಿಸಲಾಗಿತ್ತು. ಇದರ ಬೆನ್ನಲ್ಲೇ ಮಾಧುರಿಯನ್ನು ಬಲವಂತವಾಗಿ ಕರೆದೊಯ್ಯಲಾಗಿದೆ ಎಂದು ಆರೋಪಿಸಿ ಸ್ಥಳೀಯರು ವನತಾರಾ ಮತ್ತು ಹಾಗೂ ರಿಲಯನ್ಸ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದರು. ಬೃಹತ್‌ ಪ್ರತಿಭಟನೆಯನ್ನೂ ಆಯೋಜಿಸಲಾಗಿತ್ತು.

ಈ ಸುದ್ದಿಯನ್ನೂ ಓದಿ: Narendra Modi: ವನ್ಯಜೀವಿ ಸಂರಕ್ಷಣೆಯ ವಂತಾರಾ ಕೇಂದ್ರ ಉದ್ಘಾಟನೆ ಮಾಡಿದ ಪ್ರಧಾನಿ; ಸಿಂಹದ ಮರಿಗೆ ತುತ್ತಿಟ್ಟ ಮೋದಿ

ಯಾಕಾಗಿ ಸ್ಥಳಾಂತರ?

ಮಾಧುರಿ ಆರೋಗ್ಯ ಚೆನ್ನಾಗಿಲ್ಲ ಎಂದು ’ಪೆಟಾ’ದಿಂದ ದೂರು ನೀಡಲಾಗಿತ್ತು. ಈ ಹಿನ್ನೆಲೆಯಲ್ಲಿ ಬಾಂಬೆ ಹೈಕೋರ್ಟ್ ಮಾಧುರಿಗೆ ಪುನರ್ವಸತಿ ಕಲ್ಪಿಸುವಂತೆ ಆದೇಶ ನೀಡಿತ್ತು. ಬಳಿಕ ಸುಪ್ರೀಂ ಕೋರ್ಟ್ ಸಹ ಈ ತೀರ್ಮಾನವನ್ನು ಎತ್ತಿ ಹಿಡಿದಿತ್ತು. ಸದ್ಯ ಜಾಮ್ ನಗರದ ರಾಧೆಕೃಷ್ಣ ದೇಗುಲ ಆನೆ ಕಲ್ಯಾಣ ಟ್ರಸ್ಟ್‌ನಲ್ಲಿ ವನತಾರಾದ ಸಹಯೋಗದಲ್ಲಿ ಮಾಧುರಿಯ ಆರೈಕೆ ಮಾಡಲಾಗುತ್ತಿದೆ.

ವನತಾರಾ ನೀಡಿದ ಸ್ಪಷ್ಟನೆಯಲ್ಲಿ ಏನಿದೆ?

ʼʼಮಾಧುರಿಯ ಬಗ್ಗೆ ಇರುವಂತಹ ಆಳವಾದ ಧಾರ್ಮಿಕ ಹಾಗೂ ಸಾಂಸ್ಕೃತಿಕ ನಂಟನ್ನು ವನತಾರಾ ಗೌರವಿಸುತ್ತದೆ. ಮಾಧುರಿಯನ್ನು ಜೈನ ಮಠಕ್ಕೆ ಹಿಂದಿರುಗಿಸಲು ಅಗತ್ಯವಾದ ಯಾವುದೇ ಕಾನೂನಿಗೆ ಸಂಬಂಧಿಸಿದ ಅರ್ಜಿಗಳನ್ನು ಸಲ್ಲಿಸುವುದಕ್ಕೆ ಬೆಂಬಲ ನೀಡುತ್ತೇವೆʼʼ ಎಂದು ತಿಳಿಸಿದೆ.

“ಯಾವುದೇ ಹಂತದಲ್ಲೂ ನಮ್ಮ ಸುಪರ್ದಿಗೆ ಮಾಧುರಿಯನ್ನು ಒಪ್ಪಿಸುವಂತೆ ಮನವಿ ಸಲ್ಲಿಸಿರಲಿಲ್ಲ. ಧಾರ್ಮಿಕ ಆಚರಣೆ ಅಥವಾ ಭಾವನೆಗೆ ಅಡ್ಡಿಪಡಿಸುವ ಯಾವುದೇ ಉದ್ದೇಶವೂ ಇಲ್ಲ” ಎಂದು ಸ್ಪಷ್ಟಪಡಿಸಿದೆ.

ಕೊಲ್ಹಾಪುರದ ನಾಂದಣಿ ಪ್ರದೇಶದಲ್ಲಿ ಮಾಧುರಿಗಾಗಿ ಸ್ಯಾಟ್‌ಲೈಟ್ ಪುನರ್ವಸತಿ ಕೇಂದ್ರವನ್ನು ನಿರ್ಮಿಸುವ ಪ್ರಸ್ತಾವನೆಯನ್ನು ಸಹ ಹೇಳಿಕೆಯಲ್ಲಿ ಉಲ್ಲೇಖಿಸಲಾಗಿದೆ. ಪ್ರಸ್ತಾವಿತ ಸೌಲಭ್ಯವು ಸರಪಳಿ-ಮುಕ್ತ ಆವರಣ, ಜಲಚಿಕಿತ್ಸಾ ಪೂಲ್‌, ಪಶುವೈದ್ಯಕೀಯ ಆರೈಕೆ ಮತ್ತು ಮಾಧುರಿಯ ದೀರ್ಘಕಾಲೀನ ಯೋಗಕ್ಷೇಮಕ್ಕಾಗಿ ವಿನ್ಯಾಸಗೊಳಿಸಲಾದ ಸ್ಥಳಗಳನ್ನು ಒಳಗೊಂಡಿದೆ. ಈ ಯೋಜನೆಗೆ ಅನುಮೋದನೆ ದೊರೆತರೆ ಸೌಲಭ್ಯವನ್ನು ಅಭಿವೃದ್ಧಿಪಡಿಸಲು ಜೈನ ಮಠ ಮತ್ತು ಮಹಾರಾಷ್ಟ್ರ ಸರ್ಕಾರದೊಂದಿಗೆ ನಿಕಟವಾಗಿ ಕೆಲಸ ಮಾಡುವುದಾಗಿ ವನತಾರಾ ಹೇಳಿದೆ.

"ಕಾನೂನು ಸೂಚನೆಗಳ ಅಡಿಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದೇವೆ. ಜೈನ ಸಮುದಾಯ ಅಥವಾ ಕೊಲ್ಹಾಪುರದ ಜನರಿಗೆ ಯಾವುದೇ ತೊಂದರೆ ಉಂಟು ಮಾಡಿದ್ದರೆ ನಾವು ಪ್ರಾಮಾಣಿಕವಾಗಿ ವಿಷಾದವನ್ನು ವ್ಯಕ್ತಪಡಿಸುತ್ತೇವೆ. ತಿಳಿದೋ, ತಿಳಿಯದೆಯೋ ಯಾವುದೇ ನೋವು ಉಂಟಾಗಿದ್ದರೆ, ನಾವು ನಿಮ್ಮ ಕ್ಷಮೆಯನ್ನು ಕೋರುತ್ತೇವ” ಎಂದು ವನತಾರಾ ತಿಳಿಸಿದೆ. ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಬುಧವಾರ (ಆಗಸ್ಟ್‌ 6) ಮುಂಬೈಯಲ್ಲಿ ವನತಾರಾ ತಂಡವನ್ನು ಭೇಟಿಯಾಗಿ ಸಮಾಲೋಚನೆ ನಡೆಸಿದರು.