Sadguru Sri Madhusudan Sai: ರೈತರಿಗೆ ಸತ್ಯ ಸಾಯಿ ವಿವಿ ಕೌಶಲ್ಯ ಪ್ರಮಾಣ ಪತ್ರ: ಸದ್ಗುರು ಶ್ರೀ ಮಧುಸೂದನ ಸಾಯಿ ಘೋಷಣೆ
Sathya sai grama: ಚಿಕ್ಕಬಳ್ಳಾಪುರದ ಮುದ್ದೇನಹಳ್ಳಿಯ ಸತ್ಯ ಸಾಯಿ ಗ್ರಾಮದಲ್ಲಿ ನಡೆಯುತ್ತಿರುವ 'ಒಂದು ಜಗತ್ತು ಒಂದು ಕುಟುಂಬ ವಿಶ್ವ ಸಾಂಸ್ಕೃತಿಕ ಮಹೋತ್ಸವ'ದ 76ನೇ ದಿನವಾದ ಗುರುವಾರ ಆಶೀರ್ವಚನ ನೀಡಿದ ಸದ್ಗುರು ಶ್ರೀ ಮಧುಸೂದನ ಸಾಯಿ, ʼʼಸತ್ಯ ಸಾಯಿ ವಿಶ್ವವಿದ್ಯಾಲಯದಿಂದ ರೈತರಿಗಾಗಿ ಕೌಶಲ್ಯ ಪ್ರಮಾಣೀಕರಣ ಪತ್ರ ನೀಡುವ ಹೊಸ ಕಾರ್ಯಕ್ರಮವನ್ನು ಜಾರಿ ಮಾಡುತ್ತಿದ್ದೇವೆ. ರೈತರಿಗೆ ತಮ್ಮ ಕೌಶಲ್ಯ ಹಾಗೂ ಜ್ಞಾನವನ್ನು ಗುರುತಿಸಿ, ಗೌರವಿಸುವ ಯಾವುದೇ ಪ್ರಮಾಣ ಪತ್ರಗಳು ಇಲ್ಲ. ಹೀಗಾಗಿ ಈ ಕಾರ್ಯಕ್ರಮನ್ನು ರೂಪಿಸುತ್ತಿದ್ದೇವೆʼʼ ಎಂದು ತಿಳಿಸಿದ್ದಾರೆ.
-
ಚಿಕ್ಕಬಳ್ಳಾಪುರ, ಅ. 30: ಸತ್ಯ ಸಾಯಿ ವಿಶ್ವವಿದ್ಯಾಲಯದಿಂದ ರೈತರಿಗಾಗಿ ಕೌಶಲ್ಯ ಪ್ರಮಾಣೀಕರಣ ಪತ್ರ ನೀಡುವ ಹೊಸ ಕಾರ್ಯಕ್ರಮವನ್ನು ಜಾರಿ ಮಾಡುತ್ತಿದ್ದೇವೆ ಎಂದು ಸದ್ಗುರು ಶ್ರೀ ಮಧುಸೂದನ ಸಾಯಿ (Sadguru Sri Madhusudan Sai) ಘೋಷಿಸಿದರು. ಮುದ್ದೇನಹಳ್ಳಿಯ ಸತ್ಯ ಸಾಯಿ ಗ್ರಾಮದಲ್ಲಿ (Sathya sai grama) ನಡೆಯುತ್ತಿರುವ 'ಒಂದು ಜಗತ್ತು ಒಂದು ಕುಟುಂಬ ವಿಶ್ವ ಸಾಂಸ್ಕೃತಿಕ ಮಹೋತ್ಸವ' ದ 76ನೇ ದಿನವಾದ ಗುರುವಾರ ಆಶೀರ್ವಚನ ನೀಡಿದ ಸದ್ಗುರು, ʼʼರೈತರಿಗೆ ತಮ್ಮ ಕೌಶಲ್ಯ ಹಾಗೂ ಜ್ಞಾನವನ್ನು ಗುರುತಿಸಿ, ಗೌರವಿಸುವ ಯಾವುದೇ ಪ್ರಮಾಣ ಪತ್ರಗಳು ಇಲ್ಲ. ಹೀಗಾಗಿ ಈ ಕಾರ್ಯಕ್ರಮನ್ನು ರೂಪಿಸುತ್ತಿದ್ದೇವೆʼʼ ಎಂದು ತಿಳಿಸಿದರು.
ʼʼರೈತರಿಗೆ ರಾಗಿ ಬೆಳೆಯುವುದು ಹೇಗೆ, ಭತ್ತ ಬೆಳೆಯುವುದು ಹೇಗೆ ಎಂಬುದು ಗೊತ್ತು. ಆದರೆ ಅದನ್ನು ಸಮರ್ಪಕವಾಗಿ ದಾಖಲಿಸಿ, ಪ್ರಮಾಣೀಕರಿಸಲಾಗಿಲ್ಲ. ಈ ಹಿನ್ನೆಲೆಯಲ್ಲಿಯೇ ನಾವು ನಮ್ಮ ವಿಶ್ವವಿದ್ಯಾಲಯದಲ್ಲಿ ಇಂಥ ಕಾರ್ಯಕ್ರಮವನ್ನು ಜಾರಿ ಮಾಡುತ್ತಿದ್ದೇವೆ. ರೈತರ ಕೌಶಲ್ಯ, ಜ್ಞಾನವನ್ನು ನಿರ್ಣಯಿಸಿದ ನಂತರ ಪ್ರಮಾಣ ಪತ್ರಗಳನ್ನು ನೀಡುತ್ತೇವೆʼʼ ಎಂದು ವಿವರಿಸಿದರು.
ಅತಿಥಿ ದೇಶಗಳಾದ ಸೆಬ್ರಿಯಾ ಮತ್ತು ಮಾಂಟೆನೆಗ್ರೊ ಬಗ್ಗೆ ಮಾತನಾಡಿದ ಸದ್ಗುರು, ʼʼಕ್ರೊವೇಷಿಯಾಗೆ ಈ ಎರಡೂ ದೇಶಗಳು ತುಂಬಾ ಹತ್ತಿರದಲ್ಲಿದೆ. ನಾನು ಅಲ್ಲಿಗೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಅಲ್ಲಿನ ಸಾವಿರಾರು ಭಕ್ತರು ನನ್ನನ್ನು ಭೇಟಿಯಾಗಿದ್ದರು. ನಾವು ಮಾಡುವ ಯಾವುದೇ ಧಾರ್ಮಿಕ ಕೆಲಸಗಳನ್ನು ಇವರು ತುಂಬಾ ಆರಾಮದಾಯಕವಾಗಿ ಮಾಡುತ್ತಾರೆ. ವೇದ, ಉಪನಿಷತ್ತುಗಳನ್ನು ಸುಲಭವಾಗಿ ಅರ್ಥ ಮಾಡಿಕೊಳ್ಳುತ್ತಾರೆʼʼ ಎಂದರು.
ಈ ಸುದ್ದಿಯನ್ನೂ ಓದಿ | Sadguru Sri Madhusudan Sai: ಕಡಿಮೆ ವೆಚ್ಚದಲ್ಲಿ ಎಲ್ಲರಿಗೂ ಗುಣಮಟ್ಟದ ಆರೋಗ್ಯ ಸೇವೆ ಲಭ್ಯವಾಗಬೇಕು: ಶ್ರೀ ಮಧುಸೂದನ ಸಾಯಿ
ಸಚಿವ ವಿ. ಸೋಮಣ್ಣ ಮಾತನಾಡಿ, ʼʼವಿಶ್ವದ ಭೂಪಟದಲ್ಲಿ ಮುದ್ದೇನಹಳ್ಳಿಯ ಸತ್ಯ ಸಾಯಿ ಗ್ರಾಮ ಗುರುತಿಸಿಕೊಂಡಿದೆ. ಸತ್ಯ ಸಾಯಿ ಬಾಬಾ ಅವರ ಮತ್ತೊಂದು ಅವತಾರವಾಗಿ ಸದ್ಗುರು ಶ್ರೀ ಮಧುಸೂದನ ಸಾಯಿ ಅವರು ಸೇವೆಗಳ ಮೂಲಕ ನಮ್ಮೆಲ್ಲರಿಗೂ ಆಶಿರ್ವಾದವನ್ನು ಮಾಡುತ್ತಿದ್ದಾರೆ. ಅವರ ಆಶೀರ್ವಾದ ಸದಾ ಹೀಗೆಯೇ ಮುಂದುವರಿಯಲಿ. ದೇಶದ ವ್ಯವಸ್ಥೆಯಲ್ಲಿ ಐಕ್ಯತೆ ಮತ್ತು ಅಖಂಡತೆಗಾಗಿ ಸದ್ಗುರುಗಳು ದೂರದೃಷ್ಟಿಯನ್ನು ಹೊಂದಿದ್ದಾರೆʼʼ ಎಂದು ಹೇಳಿದರು.
ಕರ್ನಾಟಕ ಸರ್ಕಾರದ ದೆಹಲಿ ವಿಶೇಷ ಪ್ರತಿನಿಧಿ, ʼʼಶಾಸಕ ಟಿ.ಬಿ. ಜಯಚಂದ್ರ ಮಾತನಾಡಿ, ದಶಕದ ಹಿಂದೆ ನಾನು ಇಲ್ಲಿಗೆ ಬಂದಾಗ ಏನೇನು ಇರಲಿಲ್ಲ. ಇಂದು ಸತ್ಯ ಸಾಯಿ ಗ್ರಾಮವನ್ನು ನೋಡಿದರೆ ಏನಿಲ್ಲ? ಇಲ್ಲಿ ಈಗ ಎಲ್ಲವೂ ಇದೆ. ನಾನು ಮತ್ತು ಸಚಿವ ಸೋಮಣ್ಣ ಅವರು ಜನಸೇವಕರು, ಆದರೆ ನಿಸ್ವಾರ್ಥ ಸೇವೆಯನ್ನು ಅರ್ಥ ಮಾಡಿಕೊಳ್ಳಬೇಕಾದರೆ ಮುದ್ದೇನಹಳ್ಳಿಗೆ ಬಂದು ಸದ್ಗುರು ಶ್ರೀ ಮಧುಸೂದನ ಸಾಯಿ ಅವರ ಕಾರ್ಯವಿಧಾನ ಗಮನಿಸಬೇಕುʼʼ ಎಂದರು.
ʼʼದೇವರು ಎಲ್ಲಿದ್ದಾನೆ ಅಂತ ಕೇಳಿದರೆ, ಸೃಷ್ಟಿಕರ್ತ ಎಲ್ಲೋ ಇದ್ದಾನೆ. ಅವನಿಗೆ ರೂಪ ಇಲ್ಲ, ಯಾರಿಗೂ ಗೊತ್ತಿಲ್ಲ, ನಾವ್ಯಾರು ನೋಡೋಕೆ ಆಗಿಲ್ಲ. ಆದರೆ ದೇವರು ಎಲ್ಲೆಡೆಯೂ ಇದ್ದಾನೆ ಎನ್ನುವುದನ್ನು ಸೇವೆಯ ಮೂಲಕ ಸದ್ಗುರು ಶ್ರೀ ಮಧುಸೂದನ ಸಾಯಿ ಅವರು ತೋರಿಸುವ ಕೆಲಸ ಮಾಡುತ್ತಿದ್ದಾರೆʼʼ ಎಂದು ಶ್ಲಾಘಿಸಿದರು.
ದಾನಿಗಳು, ಸಾಧಕರನ್ನು ಪುರಸ್ಕರಿಸಿದ ಸದ್ಗುರು
ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ ಕಂಪನಿಯ ಮಾಜಿ ಸಿಇಒ ಮತ್ತು 'ಮಿಷನ್ ಕರ್ಮಯೋಗಿ ಭಾರತ್' ಅಧ್ಯಕ್ಷ, ಪದ್ಮಭೂಷಣ ಪುರಸ್ಕೃತ ಸುಬ್ರಹ್ಮಣ್ಯನ್ ರಾಮದೊರೈ ಅವರಿಗೆ 'ಒಂದು ಜಗತ್ತು ಒಂದು ಕುಟುಂಬ ಜಾಗತಿಕ ನಾಯಕತ್ವ ಪುರಸ್ಕಾರ' ನೀಡಲಾಯಿತು. ಆರೋಗ್ಯ ಕ್ಷೇತ್ರ ಮತ್ತು ಅನ್ನಪೂರ್ಣ ಬೆಳಿಗ್ಗಿನ ಪೌಷ್ಟಿಕ ಆಹಾರ ಕಾರ್ಯಕ್ರಮಕ್ಕೆ ಬೆಂಬಲ ನೀಡುತ್ತಿರುವ 'ಮೂಗ್ ಇಂಡಿಯಾ ಟೆಕ್ನಾಲಜಿ ಸೆಂಟರ್'ಗೆ 'ಸಿಎಸ್ಆರ್ ಸರ್ಕಲ್ ಆಫ್ ಹಾರನ್ ಪುರಸ್ಕಾರ' ಪ್ರದಾನ ಮಾಡಲಾಯಿತು. ಕಂಪನಿಯ ವ್ಯವಸ್ಥಾಪಕ ನಿರ್ದೇಶಕ ಶ್ಯಾಮ್ ಕರಿಗಿರಿ ಪ್ರಶಸ್ತಿ ಸ್ವೀಕರಿಸಿದರು. 'ಶ್ರೀ ಮಧುಸೂದನ ಸಾಯಿ ವೈದ್ಯಕೀಯ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆ'ಗೆ ಬೆಂಬಲ ನೀಡುತ್ತಿರುವ 'ಎಲ್ಸಿಯಾ ಟ್ರಸ್ಟ್'ಗೆ 'ಸಿಎಸ್ಆರ್ ಸರ್ಕಲ್ ಆಫ್ ಹಾರನ್ ಪುರಸ್ಕಾರ' ನೀಡಲಾಯಿತು. ಟ್ರಸ್ಟ್‌ನ ಅಧ್ಯಕ್ಷ ಭಾವೇಶ್ ಕುಮಾರ್, ಟ್ರಸ್ಟಿ ವಿ. ಶ್ರೀರಾಮ್ ಕುಮಾರ್ ಪ್ರಶಸ್ತಿ ಸ್ವೀಕರಿಸಿದರು.
ಸರ್ಬಿಯಾದಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣಕ್ಕಾಗಿ ಶ್ರಮಿಸುತ್ತಿರುವ ದೇವಿ ಮೋಹನ್ ಅವರಿಗೆ 'ಒಂದು ಜಗತ್ತು ಒಂದು ಕುಟುಂಬ ಜಾಗತಿಕ ಮಾನವೀಯ ಪುರಸ್ಕಾರ' ನೀಡಲಾಯಿತು. ಸರ್ಬಿಯಾದ ಪ್ರತಿನಿಧಿ ಸಂದ್ರಾ ಮಿಲಿಸಾವಾಕ್ (Sandra Milisavac) ಮತ್ತು ಮಾಂಟೆನೆಗ್ರೊ ದೇಶದ ಪ್ರತಿನಿಧಿ ಆಂಡ್ರಿಜಾನಾ ಮಿಕಾನೊವಿಕ್ (Andrijana Micanovic) ತಮ್ಮ ದೇಶಗಳ ಭಾಷೆ, ಕಲೆ, ಸಂಸ್ಕೃತಿ, ಸಂಗೀತ, ಪಾರಂಪರಿಕ ತಾಣಗಳು, ಖಾದ್ಯಗಳು, ಸಾಂಪ್ರದಾಯಿಕ ಉಡುಪು ಸೇರಿದಂತೆ ಹಲವು ವಿಷಯಗಳ ಬಗ್ಗೆ ಮಾಹಿತಿ ನೀಡಿದರು. ಮಾಂಟೆನೆಗ್ರೊ ದೇಶದ ಪ್ರತಿನಿಧಿ ಜೆಲೆನಾ ವುಜಿಸಿಕ್ (Jelena Vujicic) ತಮ್ಮ ಜೀವನದಲ್ಲಿನ ಅಧ್ಯಾತ್ಮಿಕ ಬದಲಾವಣೆಯ ಅನುಭವವನ್ನು ಹಂಚಿಕೊಂಡರು.
ಪ್ರಶಾಂತಿ ಬಾಲಮಂದಿರ ಟ್ರಸ್ಟ್‌ಗೆ ನ್ಯೂಸ್ 18 ಹೆಲ್ತ್ ಕೇರ್ ಪುರಸ್ಕಾರ
ಅತ್ಯುತ್ತಮ ಚಾರಿಟೇಬಲ್ ಟ್ರಸ್ಟ್ ವಿಭಾಗದಲ್ಲಿ 'ಪ್ರಶಾಂತಿ ಬಾಲಮಂದಿರ ಟ್ರಸ್ಟ್'ಗೆ 'ದಿ ನ್ಯೂಸ್ 18 ಹೆಲ್ತ್ ಕೇರ್ ಪುರಸ್ಕಾರ' ನೀಡಲಾಯಿತು. ಸದ್ಗುರು ಶ್ರೀ ಮಧುಸೂದನ ಸಾಯಿ ಅವರಿಗೆ ನ್ಯೂಸ್ 18 ಸಮೂಹದ ದಕ್ಷಿಣ ವಿಭಾಗದ ಎಡಿಟೋರಿಯಲ್ ಅಡ್ವೈಸರ್ ಡಿ.ಪಿ. ಸತೀಶ್ ಮತ್ತು ಸಂಪಾದಕ ಎ. ಹರಿಪ್ರಸಾದ ಪ್ರಶಸ್ತಿ ವಿತರಿಸಿದರು. ಬಳಿಕ ಮಾತನಾಡಿದ ಡಿ.ಪಿ. ಸತೀಶ್, ʼʼಇದು ಒಂದು ದೊಡ್ಡ ಗೌರವ ಮತ್ತು ಸವಲತ್ತು. ಏಕೆಂದರೆ ನೀವು ಮಾನವ ಕುಲಕ್ಕೆ ಉತ್ತಮ ಸೇವೆಯನ್ನು ಮಾಡುತ್ತಿದ್ದೀರಿʼʼ ಎಂದರು.
ಈ ಸುದ್ದಿಯನ್ನೂ ಓದಿ | Sadguru Sri Madhusudan Sai: ಜಗತ್ತಿನಲ್ಲಿ ಅತ್ಯಂತ ದುರ್ಬಲ ಸಮುದಾಯಗಳ ಮೇಲೆತ್ತುವುದೇ ನಮ್ಮ ಗುರಿ: ಸದ್ಗುರು ಶ್ರೀ ಮಧುಸೂದನ ಸಾಯಿ
ʼʼಮುದ್ದೇನಹಳ್ಳಿಯಲ್ಲಿ ಸದ್ಗುರು ಶ್ರೀ ಮಧುಸೂದನ ಸಾಯಿ ನಿರ್ವಹಿಸುತ್ತಿರುವ ಆಸ್ಪತ್ರೆಯು ಭಾರತದಲ್ಲಿ ಮಾತ್ರವಲ್ಲದೆ ವಿಶ್ವದ ಅತ್ಯುತ್ತಮ ದತ್ತಿ ಆಸ್ಪತ್ರೆಗಳಲ್ಲಿ ಒಂದಾಗಿದೆ. 'ದಿ ನ್ಯೂಸ್ 18 ಹೆಲ್ತ್ ಕೇರ್ ಅವಾರ್ಡ್ 2025' ನಮ್ಮ ವಾರ್ಷಿಕ ಪ್ರಶಸ್ತಿ. ಅತ್ಯುತ್ತಮ ಚಾರಿಟೇಬಲ್ ಆಸ್ಪತ್ರೆಗೆ ಈ ಪ್ರಶಸ್ತಿಯನ್ನು ನೀಡುತ್ತಿದ್ದೇವೆ. ಪ್ರಶಸ್ತಿಯನ್ನು ನೀಡಬೇಕಾದರೆ ಸಾಮಾನ್ಯವಾಗಿ ಸುದೀರ್ಘ ಚರ್ಚೆಗಳು ನಡೆಯುತ್ತವೆ. ತೀರ್ಪುಗಾರರು ಇರುತ್ತಾರೆ. ಆದರೆ ನಾನು ಈ ಆಸ್ಪತ್ರೆಯ ಹೆಸರು ಪ್ರಸ್ತಾಪಿಸಿದಾಗ ಯಾವುದೇ ರೀತಿಯ ಚರ್ಚೆಗಳು ಆಗಲಿಲ್ಲ. ಸರ್ವಾನುಮತದಿಂದ ಎಲ್ಲರೂ ಸಮ್ಮತಿ ಸೂಚಿಸಿದರು. ಕೇವಲ 30 ಸೆಕೆಂಡ್‌ಗಳಲ್ಲಿ ಎಲ್ಲವೂ ನಿರ್ಧಾರವಾಯಿತು. ಇದು ನೀವು ಏನು ಮಾಡುತ್ತಿದ್ದೀರಿ ಎಂಬುದನ್ನು ಹೇಳುತ್ತದೆʼʼ ಎಂದು ಹೇಳಿದರು.