ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ವಂತಾರಾದಲ್ಲಿ ಚಿಕಿತ್ಸೆ ಪಡೆದು ಕೊಲ್ಹಾಪುರಕ್ಕೆ ಮರಳಿದ ʼಮನೆ ಮಗಳುʼ ಮಾಧುರಿ ಆನೆ; ಸ್ಥಳೀಯರಿಂದ ಅದ್ಧೂರಿ ಸ್ವಾಗತ

Madhuri elephant: ಗುಜರಾತ್‌ನಲ್ಲಿ ಚಿಕಿತ್ಸೆ ಪಡೆದು ಮಹಾರಾಷ್ಟ್ರದ ಕೊಲ್ಹಾಪುರದ ಆನೆ ಮಾಧುರಿ ತವರಿಗೆ ಮರಳಿದ್ದು, ಅದ್ಧೂರಿ ಸ್ವಾಗತ ಸಿಕ್ಕಿದೆ. ಅದಾಗ್ಯೂ ಆನೆಯನ್ನು ಯಾವುದೇ ಧಾರ್ಮಿಕ ಮೆರವಣಿಗೆಗಳಲ್ಲಿ ಅಥವಾ ಇತರ ವಾಣಿಜ್ಯ ಉದ್ದೇಶಗಳಿಗಾಗಿ ಬಳಸುವುದನ್ನು ಕಡ್ಡಾಯವಾಗಿ ನಿಷೇಧಿಸಲಾಗಿದೆ. ಇದರೊಂದಿಗೆ ನಿರಂತರ ಆರೈಕೆಯನ್ನು ಒದಗಿಸಬೇಕು ಮತ್ತು ಪ್ರತಿ ಎರಡು ವಾರಗಳಿಗೊಮ್ಮೆ ಕಡ್ಡಾಯವಾಗಿ ವೈದ್ಯಕೀಯ ತಪಾಸಣೆಯನ್ನು ನಡೆಸಬೇಕು ಎಂಬ ನಿಯಮ ಮಾಡಲಾಗಿದೆ.

ಮಾಧುರಿ ಆನೆ ಯೋಗಕ್ಷೇಮಕ್ಕೆ ಮೊದಲ ಆದ್ಯತೆ ಎಂದ ವಂತರಾ

ಸಾಂದರ್ಭಿಕ ಚಿತ್ರ -

Priyanka P
Priyanka P Sep 12, 2026 8:16 PM

ಮುಂಬೈ, ಸೆ. 12: ಗುಜರಾತ್‌ನ (Gujarat) ಜಾಮ್‌ನಗರದಲ್ಲಿರುವ ವಂತಾರಾ (Vantara) ಆನೆ ಕೇಂದ್ರದಿಂದ ಮಹಾರಾಷ್ಟ್ರದ ಕೊಲ್ಹಾಪುರಕ್ಕೆ ಮಹಾದೇವಿ ಎಂದೂ ಕರೆಯಲ್ಪಡುವ 36 ವರ್ಷದ ಮಾಧುರಿ ಆನೆ (Madhuri elephant) ಮರಳಿದೆ. ಅದರ ಆರೋಗ್ಯ ಮತ್ತು ಯೋಗಕ್ಷೇಮವನ್ನು ನಿರಂತರವಾಗಿ ಮೇಲ್ವಿಚಾರಣೆ ಮಾಡುವುದನ್ನು ಮುಂದುವರಿಸುವುದಾಗಿ ವಂತಾರಾ ಸಂಸ್ಥೆ ತಿಳಿಸಿದೆ. ಇನ್ನು ಮಾಧುರೆಯ ಸ್ವಾಗತಕ್ಕೆ ಸಾವಿರಾರು ಮಂದಿ ರಸ್ತೆಯ ಇಕ್ಕೆಲೆಗಳಲ್ಲಿ ನೆರೆದಿದ್ದರು. ಆರತಿ ಎತ್ತಿ ಮನೆ ಮಗಳು ಮಾಧುರಿಯನ್ನು ಸ್ಥಳೀಯರು ಬರ ಮಾಡಿಕೊಂಡ ದೃಶ್ಯ ಹೃದಯ ಸ್ಪರ್ಶಿಯಾಗಿತ್ತು.

ವಂತಾರಾ ಸಂಸ್ಥೆಯ ಪ್ರಕಾರ, ಬಾಂಬೆ ಹೈಕೋರ್ಟ್ ಮತ್ತು ಸುಪ್ರೀಂ ಕೋರ್ಟ್ ಎತ್ತಿಹಿಡಿದ ಉನ್ನತಾಧಿಕಾರ ಸಮಿತಿಯ ನಿರ್ದೇಶನಗಳ ಬಳಿಕ, ಮಾಧುರಿ ಆನೆಯು 2025ರ ಜುಲೈ 30ರಂದು ಜಾಮ್‌ನಗರದಲ್ಲಿರುವ ರಾಧೆ ಕೃಷ್ಣ ಟೆಂಪಲ್ ಎಲಿಫೆಂಟ್ ವೆಲ್ಫೇರ್ ಟ್ರಸ್ಟ್‌ಗೆ ಬಂದಿಳಿದಿತ್ತು. ತಾವು ಆನೆಯ ಕಸ್ಟಡಿಯನ್ನು ಕೋರಿರಲಿಲ್ಲ. ಆದರೆ ಅದನ್ನು ಸ್ವೀಕರಿಸಲು ನಿರ್ದೇಶನ ಬಂದ ನಂತರ ಜವಾಬ್ದಾರಿಯನ್ನು ವಹಿಸಿಕೊಂಡಿದ್ದಾಗಿ ಸಂಸ್ಥೆ ತಿಳಿಸಿದೆ.

ಕೊಲ್ಹಾಪುರಕ್ಕೆ ಮರಳಿದ ಮಾಧುರಿ ಆನೆಗೆ ಅದ್ಧೂರಿ ಸ್ವಾಗತ:



ಈ ಆನೆಯ ಪ್ರಕರಣವು ಮಹಾರಾಷ್ಟ್ರದಲ್ಲಿ ವಿಶೇಷವಾಗಿ ಕೊಲ್ಹಾಪುರದಲ್ಲಿ ವಿಶೇಷವಾಗಿ ಗಮನ ಸೆಳೆದಿದೆ. ಆನೆ ಅಲ್ಲಿನ ನಂದನಿ ಜೈನ್ ಮಠದಲ್ಲಿ ದಶಕಗಳ ಕಾಲ ಕಳೆದಿತ್ತು. ಅದರ ಆರೋಗ್ಯದ ಬಗ್ಗೆ ಉಂಟಾದ ಕಳವಳಗಳು, ಪ್ರಾಣಿ ಕಲ್ಯಾಣ ಅಧಿಕಾರಿಗಳು ಮತ್ತು ಪೆಟಾ ಇಂಡಿಯಾ ಒಳಗೊಂಡ ಕಾನೂನು ಪ್ರಕ್ರಿಯೆಗಳ ನಂತರ ಆನೆಯನ್ನು ವಂತಾರಾಕ್ಕೆ ವರ್ಗಾಯಿಸಲಾಗಿತ್ತು.

ವಯನಾಡು ಹೆದ್ದಾರಿಯಲ್ಲಿ ಏಕಾಏಕಿ ಕಾಣಿಸಿಕೊಂಡ ಕಾಡಾನೆಗಳ ಹಿಂಡು: ಕೂದಲೆಳೆ ಅಂತರದಲ್ಲಿ ಪಾರಾದ ಕುಟುಂಬ

ಎಚ್‌ಪಿಸಿಯಿಂದ ಕೊಲ್ಹಾಪುರಕ್ಕೆ ಮರಳಲು ಅನುಮತಿ

ಸುಪ್ರೀಂ ಕೋರ್ಟ್ ನಂತರ ಈ ವಿವಾದದಲ್ಲಿ ಭಾಗಿಯಾಗಿರುವ ಎಲ್ಲ ಪಾಲುದಾರರಿಗೆ ತಮ್ಮ ತಮ್ಮ ವಾದಗಳನ್ನು ಉನ್ನತಾಧಿಕಾರ ಸಮಿತಿಯ (HPC) ಮುಂದೆ ಮಂಡಿಸುವಂತೆ ನಿರ್ದೇಶನ ನೀಡಿತ್ತು. ಎಲ್ಲ ಸಲ್ಲಿಕೆಗಳನ್ನು ಪರಿಗಣಿಸಿ, ವರದಿಗಳನ್ನು ಪರಿಶೀಲಿಸಿದ ಹಾಗೂ ನಂದನಿ ಜೈನ್ ಮಠದ ಸೌಲಭ್ಯಗಳನ್ನು ಖುದ್ದಾಗಿ ತಪಾಸಣೆ ನಡೆಸಿದ ನಂತರ, ಸಮಿತಿಯು 2026ರ ಸೆಪ್ಟೆಂಬರ್ 9ರಂದು ಮಾಧುರಿ ಆನೆಯು ಮರಳಿ ಕೊಲ್ಹಾಪುರಕ್ಕೆ ಹೋಗಲು ಅನುಮತಿ ನೀಡಿ ಆದೇಶ ಹೊರಡಿಸಿತು.

ಆನೆಯನ್ನು ರಕ್ಷಿಸುವ ಉದ್ದೇಶದಿಂದ ಹಲವು ಕಟ್ಟುನಿಟ್ಟಾದ ಷರತ್ತುಗಳೊಂದಿಗೆ ಈ ಅನುಮೋದನೆಯನ್ನು ನೀಡಲಾಗಿದೆ. ಈ ಷರತ್ತುಗಳಲ್ಲಿ ಮಾಧುರಿ ಆನೆಯನ್ನು ಯಾವುದೇ ಧಾರ್ಮಿಕ ಮೆರವಣಿಗೆಗಳಲ್ಲಿ ಅಥವಾ ಇತರ ವಾಣಿಜ್ಯ ಉದ್ದೇಶಗಳಿಗಾಗಿ ಬಳಸುವುದನ್ನು ಕಡ್ಡಾಯವಾಗಿ ನಿಷೇಧಿಸಲಾಗಿದೆ. ಇದರೊಂದಿಗೆ ನಿರಂತರ ಆರೈಕೆಯನ್ನು ಒದಗಿಸಬೇಕು ಮತ್ತು ಪ್ರತಿ ಎರಡು ವಾರಗಳಿಗೊಮ್ಮೆ ಕಡ್ಡಾಯವಾಗಿ ವೈದ್ಯಕೀಯ ತಪಾಸಣೆಯನ್ನು ನಡೆಸಬೇಕು ಎಂಬ ನಿಯಮಗಳು ಸೇರಿವೆ.

ಮಾಧುರಿ ಆನೆಯು ಇನ್ನು ಮುಂದೆ ಜಾಮ್‌ನಗರದಲ್ಲಿ ವಾಸಿಸದಿದ್ದರೂ ತನ್ನ ಒಡನಾಟ ಮತ್ತು ಕಾಳಜಿಯನ್ನು ಮುಂದುವರಿಸುವುದಾಗಿ ವಂತಾರಾ ಸಂಸ್ಥೆ ತಿಳಿಸಿದೆ. ಕೊಲ್ಹಾಪುರದ ನಂದನಿ ಜೈನ್ ಮಠದಲ್ಲಿ ಆನೆಗೆ ಸೂಕ್ತ ವಸತಿ ವ್ಯವಸ್ಥೆ, ಪಶುವೈದ್ಯಕೀಯ ಮೂಲಸೌಕರ್ಯ, ವೈದ್ಯಕೀಯ ಉಪಕರಣಗಳು, ಔಷಧಗಳು ಮತ್ತು ಇತರ ಅಗತ್ಯ ವಸ್ತುಗಳನ್ನು ಸಿದ್ಧಪಡಿಸುವ ಮೂಲಕ ಮರುಪ್ರಯಾಣದ ಸಿದ್ಧತೆಗಳಿಗೆ ಸಂಸ್ಥೆಯು ಪೂರ್ಣ ನೆರವು ನೀಡಿದೆ.

ಉನ್ನತಾಧಿಕಾರ ಸಮಿತಿಯ (HPC) ನಿರ್ದೇಶನಗಳಿಗೆ ಅನುಗುಣವಾಗಿ, ವಂತಾರಾ ಸಂಸ್ಥೆಯ ಪಶುವೈದ್ಯರ ತಂಡವು ಪ್ರತಿ ಹದಿನೈದು ದಿನಗಳಿಗೊಮ್ಮೆ ಕೊಲ್ಹಾಪುರಕ್ಕೆ ಪ್ರಯಾಣ ಬೆಳೆಸಿ ಮಾಧುರಿಯನ್ನು ಖುದ್ದಾಗಿ ಪರೀಕ್ಷಿಸಲಿದೆ. ಅಷ್ಟೇ ಅಲ್ಲದೆ ಅದರ ಆರೋಗ್ಯದ ಸಮಗ್ರ ವೈದ್ಯಕೀಯ ವರದಿಗಳನ್ನು ಸಂಬಂಧಪಟ್ಟ ಹಿರಿಯ ಅಧಿಕಾರಿಗಳಿಗೆ ನಿಯಮಿತವಾಗಿ ಸಲ್ಲಿಸಲಿದೆ.