ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

May Day: ಕಾರ್ಮಿಕರ ದಿನಾಚರಣೆ: ಹಕ್ಕುಗಳಿಗಾಗಿ ನಡೆದ ಹೋರಾಟದ ಕಥೆ ಇದು !

ಮೇ ದಿನವನ್ನು ಅಂತಾರಾಷ್ಟ್ರೀಯ ಕಾರ್ಮಿಕರ ದಿನವೆಂದು ಕರೆಯಲಾಗುತ್ತದೆ. ಶ್ರಮಜೀವಿಗಳ ಕೊಡುಗೆಯನ್ನು ಗೌರವಿಸುವುದಕ್ಕೂ, ಕಠಿಣ ಹಾಗೂ ಅಸುರಕ್ಷಿತ ಪರಿಸ್ಥಿತಿಯಲ್ಲಿ ದುಡಿಯುವ ಕಾರ್ಮಿಕರ ಸಂಕಷ್ಟಗಳನ್ನು ಸ್ಮರಿಸುವುದಕ್ಕೂ ಈ ದಿನವನ್ನು ವಿಶ್ವದಾದ್ಯಂತ ಆಚರಿಸಲಾಗುತ್ತದೆ. ಈ ದಿನದ ಇತಿಹಾಸ, ಮಹತ್ವದ ಬಗ್ಗೆ ಇಲ್ಲಿದೆ ಮಾಹಿತಿ

ಕಾರ್ಮಿಕರ ದಿನಾಚರಣೆಯ ಇತಿಹಾಸ ಹಾಗೂ ಮಹತ್ವ ಇಲ್ಲಿದೆ.

ಕಾರ್ಮಿಕರ ದಿನಾಚರಣೆ -

Profile
Sushmitha Jain May 1, 2026 8:42 AM

ಬೆಂಗಳೂರು: ಮೇ 1ರಂದು ಜಗತ್ತಿನಾದ್ಯಂತ ಆಚರಿಸಲಾಗುವ ‘ಅಂತಾರಾಷ್ಟ್ರೀಯ ಕಾರ್ಮಿಕರ ದಿನವು (International Labour Day) ಶ್ರಮಜೀವಿಗಳ ಪರಿಶ್ರಮ, ತ್ಯಾಗ ಮತ್ತು ಸಮಾಜ ನಿರ್ಮಾಣದಲ್ಲಿನ ಅವರ ಮಹತ್ವದ ಪಾತ್ರವನ್ನು ಗೌರವಿಸುವ ವಿಶೇಷ ದಿನವಾಗಿದೆ. ಈ ದಿನವನ್ನು ಮೇ ಡೇ (May Day) ಲೇಬರ್ ಡೇ ಅಥವಾ ವರ್ಕರ್ಸ್ ಡೇ ಎಂದೂ ಕರೆಯಲಾಗುತ್ತದೆ. ಕಾರ್ಮಿಕರ ಹಕ್ಕುಗಳ ಬಗ್ಗೆ ಜಾಗೃತಿ ಮೂಡಿಸುವುದು, ಅವರ ಮೇಲೆ ನಡೆಯುವ ಶೋಷಣೆಯನ್ನು ತಡೆಯುವುದು ಮತ್ತು ಸಮಾನ ಹಕ್ಕುಗಳನ್ನು ಒದಗಿಸುವ ಅಗತ್ಯವನ್ನು ಒತ್ತಿ ಹೇಳುವುದು ಈ ದಿನದ ಪ್ರಮುಖ ಉದ್ದೇಶವಾಗಿದೆ.

ಹಾಗಾದ್ರೆ ಬನ್ನಿ ಈ ದಿನ ಪ್ರಾರಂಭವಾಗಿದ್ದು ಹೇಗೆ..? ಇತಿಹಾಸ ಏನು..? ಮಹತ್ವ ಏನು..? ಎಂಬುದನ್ನು ತಿಳಿದುಕೊಳ್ಳೋಣ ಬನ್ನಿ

ಇತಿಹಾಸ

ಈ ದಿನದ ಇತಿಹಾಸ 19ನೇ ಶತಮಾನಕ್ಕೆ ಸೇರಿದ ಅಮೆರಿಕದ ಕಾರ್ಮಿಕ ಚಳವಳಿಗಳಲ್ಲಿ ಆರಂಭವಾಗುತ್ತದೆ. ಆ ಕಾಲದಲ್ಲಿ ಕಾರ್ಮಿಕರನ್ನು ದಿನಕ್ಕೆ 10ರಿಂದ 14 ಗಂಟೆಗಳವರೆಗೆ ದುಡಿಸಲಾಗುತ್ತಿತ್ತು. ಇದಕ್ಕೆ ವಿರೋಧವಾಗಿ 8 ಗಂಟೆಗಳ ಕೆಲಸದ ಅವಧಿಯನ್ನು ನಿಗದಿಪಡಿಸಬೇಕು ಎಂಬ ಬೇಡಿಕೆಯಿಂದ 1886ರ ಮೇ 1ರಂದು ಭಾರೀ ಮಟ್ಟದಲ್ಲಿ ಪ್ರತಿಭಟನೆಗಳು ನಡೆದವು. ವಿಶೇಷವಾಗಿ ಶಿಕಾಗೋ ನಗರದಲ್ಲಿ ನಡೆದ ಹೋರಾಟಗಳು ಇತಿಹಾಸ ಪ್ರಸಿದ್ಧವಾಗಿದ್ದು, ಈ ಚಳವಳಿಯ ವೇಳೆ ಅನೇಕ ಕಾರ್ಮಿಕರು ತಮ್ಮ ಜೀವ ತ್ಯಾಗ ಮಾಡಿದರು. ಈ ಬಲಿದಾನಗಳ ನೆನಪಿಗಾಗಿ ಮೇ 1 ಅನ್ನು ಕಾರ್ಮಿಕರ ದಿನವಾಗಿ ಆಚರಿಸಲಾಗುತ್ತಿದೆ.

Bagepally News: ಅಡಿಗೆ ಕಾರ್ಮಿಕರಿಗೆ ಕಾರ್ಮಿಕ ಇಲಾಖೆ ವತಿಯಿಂದ 200 ಕಾರ್ಡ್ ವಿತರಣೆ

ಈ ಹೋರಾಟದ ಪರಿಣಾಮವಾಗಿ ನಂತರ ಹಲವು ದೇಶಗಳಲ್ಲಿ 8 ಗಂಟೆಗಳ ಕೆಲಸದ ನಿಯಮ ಜಾರಿಗೆ ಬಂತು. ಕಾರ್ಮಿಕರ ಜೀವನಮಟ್ಟ ಸುಧಾರಿಸಲು ಮತ್ತು ಅವರ ಹಕ್ಕುಗಳನ್ನು ಕಾಪಾಡಲು ವಿವಿಧ ಕಾನೂನುಗಳು ರೂಪುಗೊಂಡವು. ಹೀಗಾಗಿ, ಕಾರ್ಮಿಕರ ದಿನವು ಕೇವಲ ಆಚರಣೆ ಮಾತ್ರವಲ್ಲ, ನ್ಯಾಯಯುತ ಕೆಲಸದ ಪರಿಸರಕ್ಕಾಗಿ ನಡೆದ ಹೋರಾಟಗಳ ಸಂಕೇತವಾಗಿದೆ.

ಮೊದಲು ಆಚರಣೆ ಮಾಡಿದ್ದು ಎಲ್ಲಿ?

ಭಾರತದಲ್ಲಿ ಕಾರ್ಮಿಕರ ದಿನವನ್ನು ಮೊದಲ ಬಾರಿಗೆ 1923ರ ಮೇ 1ರಂದು ಮದ್ರಾಸಿನಲ್ಲಿ ಆಚರಿಸಲಾಯಿತು. ಕಾಮ್ರೇಡ್ ಸಿಂಗರವೇಲರ್ ಅವರ ನೇತೃತ್ವದಲ್ಲಿ ಲೇಬರ್ ಕಿಸಾನ್ ಪಾರ್ಟಿ ಆಫ್ ಹಿಂದೂಸ್ತಾನ್ ಈ ಆಚರಣೆಯನ್ನು ಆರಂಭಿಸಿತು. ಅಂದಿನಿಂದ ದೇಶದಾದ್ಯಂತ ಈ ದಿನವನ್ನು ರಾಷ್ಟ್ರೀಯ ರಜೆಯಾಗಿ ಆಚರಿಸಲಾಗುತ್ತಿದೆ.

ಭಾರತದ ವಿವಿಧ ರಾಜ್ಯಗಳಲ್ಲಿ ಈ ದಿನವನ್ನು ವಿಭಿನ್ನ ಹೆಸರುಗಳಿಂದ ಕರೆಯಲಾಗುತ್ತದೆ—ಹಿಂದಿಯಲ್ಲಿ ‘ಅಂತಾರಾಷ್ಟ್ರೀಯ ಶ್ರಮಿಕ್ ದಿವಸ್’, ಕನ್ನಡದಲ್ಲಿ ‘ಕಾರ್ಮಿಕ ದಿನಾಚರಣೆ’, ತೆಲುಗಿನಲ್ಲಿ ‘ಕಾರ್ಮಿಕ ದಿನೋತ್ಸವಮ್’, ತಮಿಳಿನಲ್ಲಿ ‘ಉಜೈಪಾಲರ್ ದೀನಂ’, ಮಲಯಾಳದಲ್ಲಿ ‘ತೊಝಿಲಾಲಿ ದಿನಂ’, ಮರಾಠಿಯಲ್ಲಿ ‘ಕಮ್‌ಗರ್ ದಿವಸ್’ ಮತ್ತು ಬಂಗಾಳಿಯಲ್ಲಿ ‘ಶ್ರೋಮಿಕ್ ದಿಬೋಶ್’ ಎಂದು ಕರೆಯುತ್ತಾರೆ.

ಮೇ 1ರ ದಿನವು ಕಾರ್ಮಿಕರ ಅಪಾರ ಕೊಡುಗೆಯನ್ನು ಸ್ಮರಿಸುವುದರ ಜೊತೆಗೆ, ಅವರ ಹಕ್ಕುಗಳ ರಕ್ಷಣೆಗೆ ನಮ್ಮ ಬದ್ಧತೆಯನ್ನು ಮತ್ತಷ್ಟು ಬಲಪಡಿಸುವ ದಿನವಾಗಿದೆ. ಸಮಾಜದ ಅಭಿವೃದ್ಧಿ ಮತ್ತು ಆರ್ಥಿಕ ಪ್ರಗತಿಗೆ ಕಾರ್ಮಿಕರ ಶ್ರಮವೇ ಮೂಲಾಧಾರ ಎಂಬುದನ್ನು ಈ ದಿನ ನೆನಪಿಸುತ್ತದೆ.