ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ಇಂಡಿಗೋ ಗ್ರಾಹಕರಿಗೆ ನಾಳೆಯೊಳಗೆ ಹಣ ರಿಫಂಡ್‌ ಮಾಡುವಂತೆ ಕೇಂದ್ರದ ಸೂಚನೆ; ಬೆಲೆ ಹೆಚ್ಚಳ ಮಾಡದಂತೆ ಇತರ ಏರ್‌ಲೈನ್ಸ್‌ಗೆ ಎಚ್ಚರಿಕೆ

Ministry of civil aviation directs IndiGo: ಇಂಡಿಗೋ ವಿಮಾನಗಳ ರದ್ದು ಮತ್ತು ವ್ಯತ್ಯಯದ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಪ್ರಮುಖ ನಿರ್ಧಾರವನ್ನು ಕೈಗೊಂಡಿದೆ. ಗ್ರಾಹಕರ ಹಣ ಮರುಪಾವತಿ ಹಾಗೂ ಲಗೇಜ್ ನಿರ್ವಹಣೆ ಕುರಿತು ಇಂಡಿಗೋಗೆ ಸ್ಪಷ್ಟ ಆದೇಶ ನೀಡಲಾಗಿದ್ದು, ಇತರೆ ಏರ್‌ಲೈನ್ಸ್‌ಗಳಿಗೆ ತಾತ್ಕಾಲಿಕ ಬೆಲೆ ಹೆಚ್ಚಳ ಮಾಡುವುದನ್ನು ತಪ್ಪಿಸುವಂತೆ ಸೂಚಿಸಿದೆ.

ಮರುಪಾವತಿ, ಲಗೇಜ್ ನಿರ್ವಹಣೆ ಕುರಿತು ಇಂಡಿಗೋಗೆ ಆದೇಶ

ಇಂಡಿಗೋ (ಸಂಗ್ರಹ ಚಿತ್ರ) -

Priyanka P
Priyanka P Dec 6, 2025 6:54 PM

ನವದೆಹಲಿ, ಡಿ. 7: ಕೆಲವು ದಿನಗಳಿಂದ ಭಾರತದ ಅತಿದೊಡ್ಡ ವಿಮಾನಯಾನ ಸಂಸ್ಥೆ ಇಂಡಿಗೋ (Indigo) ಕಾರ್ಯಾಚರಣೆಯ ಅಡಚಣೆಗಳಿಂದ ಉಂಟಾದ ಬೃಹತ್ ಟ್ರಿಪ್‌ ರದ್ದು ಮತ್ತು ವಿಳಂಬದಿಂದ ಅನೇಕ ಪ್ರಯಾಣಿಕರು ತೊಂದರೆಗೊಳಗಾಗಿದ್ದಾರೆ. ಹೀಗಾಗಿ ಗ್ರಾಹಕರಿಗೆ ಡಿಸೆಂಬರ್ 7ರೊಳಗೆ ಹಣ ಮರುಪಾವತಿ ಮಾಡುವಂತೆ ನಾಗರಿಕ ವಿಮಾನಯಾನ ಸಚಿವಾಲಯ (Ministry of civil aviation) ಇಂಡಿಗೋ ವಿಮಾನಯಾನ ಸಂಸ್ಥೆಗೆ ನಿರ್ದೇಶನ ನೀಡಿದೆ.

ರದ್ದುಗೊಂಡ ಅಥವಾ ವ್ಯತ್ಯಯಗೊಂಡ ಎಲ್ಲ ವಿಮಾನಗಳ ಮರುಪಾವತಿ ಪ್ರಕ್ರಿಯೆಯನ್ನು ಡಿಸೆಂಬರ್ 7ರ ರಾತ್ರಿ 8 ಗಂಟೆಯೊಳಗೆ ಪೂರ್ಣಗೊಳಿಸುವಂತೆ ಸಚಿವಾಲಯ ಆದೇಶಿಸಿದೆ. ರದ್ದತಿಯಿಂದ ಪ್ರಯಾಣ ಯೋಜನೆಗಳ ಮೇಲೆ ಪರಿಣಾಮ ಬೀರಿದ ಪ್ರಯಾಣಿಕರಿಗೆ ಯಾವುದೇ ಮರುಯೋಜನೆ ಶುಲ್ಕ ವಿಧಿಸಬಾರೆಯೆಂದು ಏರ್‌ಲೈನ್‌ಗಳಿಗೆ ಸೂಚಿಸಲಾಗಿದೆ ಎಂದು ಸಚಿವಾಲಯ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ. ಮರುಪಾವತಿ ಪ್ರಕ್ರಿಯೆಯಲ್ಲಿ ಯಾವುದೇ ವಿಳಂಬ ಅಥವಾ ನಿಯಮ ಪಾಲಿಸದಿದ್ದರೆ ತಕ್ಷಣ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದೆ.

ನಾಗರಿಕ ವಿಮಾನಯಾನ ಸಚಿವಾಲಯದ ಪ್ರಕಟಣೆ:



ಇನ್ನು ಇಂಡಿಗೋ ಪ್ರಯಾಣಿಕರ ಸಂಕಷ್ಟ ಶನಿವಾರವೂ ಮುಂದುವರಿದಿದ್ದು, 500ಕ್ಕೂ ಹೆಚ್ಚು ವಿಮಾನಗಳ ಹಾರಾಟ ರದ್ದಾಯಿತು. ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಹೆಚ್ಚು ಪ್ರಭಾವ ಬೀರಿತು.

ನಾಗರಿಕ ವಿಮಾನಯಾನ ಸಚಿವಾಲಯವು ಪ್ರಸ್ತಾಪಿಸಿರುವ ಇತರ ಪರಿಹಾರ ಕಾರ್ಯ ವಿಧಾನಗಳು

  • ಇಂಡಿಗೋ ವಿಮಾನಯಾನ ಸಂಸ್ಥೆಯು ಸಂತ್ರಸ್ತ ಪ್ರಯಾಣಿಕರನ್ನು ಸಂಪರ್ಕಿಸಲು ಮತ್ತು ಅವರಿಗೆ ಮರುಪಾವತಿ ಸೌಲಭ್ಯ ಒದಗಿಸಲು ಮತ್ತು ಮರುಪಾವತಿ ಸೌಲಭ್ಯ ಕೇಂದ್ರಗಳನ್ನು ತೆರೆಯುವಂತೆ ನಿರ್ದೇಶಿಸಲಾಗಿದೆ. ಈ ಕೇಂದ್ರಗಳು ತ್ವರಿತವಾಗಿ ಪ್ರಯಾಣಿಕರ ಸಮಸ್ಯೆಗೆ ಸ್ಪಂದಿಸುವಂತೆ, ಮರುಪಾವತಿ ಮತ್ತು ಪರ್ಯಾಯ ಪ್ರಯಾಣ ವ್ಯವಸ್ಥೆಗಳನ್ನು ತ್ವರಿತವಾಗಿ ಪ್ರಕ್ರಿಯೆಗೊಳಿಸುವುದನ್ನು ಖಚಿತಪಡಿಸುತ್ತವೆ ಎಂದು ಸಚಿವಾಲಯ ತಿಳಿಸಿದೆ.
  • ವಿಮಾನಗಳ ರದ್ದತಿ ಅಥವಾ ವಿಳಂಬದಿಂದಾಗಿ ಪ್ರಯಾಣಿಕರಿಂದ ಬೇರ್ಪಟ್ಟ ಎಲ್ಲ ಸಾಮಗ್ರಿಗಳನ್ನು ಮುಂದಿನ 48 ಗಂಟೆಗಳ ಒಳಗೆ ಪತ್ತೆಹಚ್ಚಿ, ಪ್ರಯಾಣಿಕರ ನಿವಾಸ ಅಥವಾ ಅವರು ಆಯ್ಕೆ ಮಾಡಿದ ವಿಳಾಸಕ್ಕೆ ತಲುಪಿಸುವುದನ್ನು ಖಚಿತಪಡಿಸಿಕೊಳ್ಳುವಂತೆ ಇಂಡಿಗೋಗೆ ನಾಗರಿಕ ವಿಮಾನಯಾನ ಸಚಿವಾಲಯ ಸೂಚಿಸಿದೆ. ಟ್ರ್ಯಾಕಿಂಗ್ ಮತ್ತು ವಿತರಣಾ ಸಮಯಕ್ಕೆ ಸಂಬಂಧಿಸಿದಂತೆ ಪ್ರಯಾಣಿಕರೊಂದಿಗೆ ಸ್ಪಷ್ಟ ಸಂವಹನವನ್ನು ಕಾಯ್ದುಕೊಳ್ಳಲು ಮತ್ತು ಅಸ್ತಿತ್ವದಲ್ಲಿರುವ ಪ್ರಯಾಣಿಕರ ಹಕ್ಕುಗಳ ನಿಯಮಗಳ ಅಡಿಯಲ್ಲಿ ಅಗತ್ಯವಿರುವ ಪರಿಹಾರವನ್ನು ಒದಗಿಸಲು ವಿಮಾನಯಾನ ಸಂಸ್ಥೆಗಳಿಗೆ ತಿಳಿಸಲಾಗಿದೆ ಎಂದು ಅದು ಹೇಳಿದೆ.
  • ಈ ಅಡಚಣೆಯ ಅವಧಿಯಲ್ಲಿ ಪ್ರಯಾಣಿಕರ ಹಕ್ಕುಗಳನ್ನು ಸಂಪೂರ್ಣವಾಗಿ ರಕ್ಷಿಸಲಾಗಿದೆಯೇ ಎಂದು ಖಚಿತಪಡಿಸಿಕೊಳ್ಳಲು ವಿಮಾನಯಾನ ಸಂಸ್ಥೆಗಳು, ವಿಮಾನ ನಿಲ್ದಾಣಗಳು, ಭದ್ರತಾ ಸಂಸ್ಥೆಗಳು ಮತ್ತು ಎಲ್ಲ ಕಾರ್ಯಾಚರಣಾ ಪಾಲುದಾರರೊಂದಿಗೆ ಸಂಪರ್ಕದಲ್ಲಿದೆ ಎಂದು ಸಚಿವಾಲಯವು ಹೇಳಿದೆ. ಹಿರಿಯ ನಾಗರಿಕರು, ಭಿನ್ನ ಸಾಮರ್ಥ್ಯದ ಪ್ರಯಾಣಿಕರು, ವಿದ್ಯಾರ್ಥಿಗಳು, ರೋಗಿಗಳು ಮತ್ತು ತುರ್ತು ಪ್ರಯಾಣದ ಅಗತ್ಯವಿರುವ ಎಲ್ಲರಿಗೂ ಸರಿಯಾದ ಸೌಲಭ್ಯವನ್ನು ಖಾತರಿಪಡಿಸಲು ಮೇಲ್ವಿಚಾರಣಾ ಕಾರ್ಯವಿಧಾನಗಳನ್ನು ಬಲಪಡಿಸಲಾಗಿದೆ ಎಂದು ತಿಳಿಸಿದೆ. ಈ ಪ್ರಕ್ರಿಯೆಯನ್ನು ನಿರಂತರವಾಗಿ ಮೇಲ್ವಿಚಾರಣೆ ಮಾಡಲಾಗುತ್ತಿದೆ ಎಂದು ಸ್ಪಷ್ಟಪಡಿಸಿದೆ.
  • ಇಂಡಿಗೋ ವಿಮಾನ ಹಾರಾಟ ವ್ಯತ್ಯಯ; ಪ್ರಯಾಣಿಕರು ಮರುಪಾವತಿ ಪಡೆಯುವುದು ಹೇಗೆ?

ಕ್ಯಾನ್ಸ್‌ಲ್‌ ಆದ ಟಿಕೆಟ್‌ನ ಹಣ ಮರುಪಾವತಿ ಕುರಿತು ಸರ್ಕಾರ ಆದೇಶ ಹೊರಡಿಸಿದ ನಂತರ, ಡಿಸೆಂಬರ್ 5 ಮತ್ತು ಡಿಸೆಂಬರ್ 15ರ ನಡುವೆ ರದ್ದಾದ ಎಲ್ಲ ಬುಕಿಂಗ್‌ಗಳನ್ನು ಸಂಪೂರ್ಣವಾಗಿ ಮರುಪಾವತಿಸುವುದಾಗಿ ಇಂಡಿಗೋ ಘೋಷಿಸಿದೆ. ಇಂಡಿಗೋ ಅವ್ಯವಸ್ಥೆಯ ನಂತರ ವಿಮಾನ ದರಗಳಲ್ಲಿ ಭಾರಿ ಏರಿಕೆ ಕಂಡುಬಂದಿರುವುದನ್ನು ಸರ್ಕಾರ ಗಮನಿಸಿದೆ. ನಾಗರಿಕ ವಿಮಾನಯಾನ ಇಲಾಖೆ ತನ್ನ ನಿಯಂತ್ರಣಾಧಿಕಾರವನ್ನು ಬಳಸಿಕೊಂಡು, ಎಲ್ಲ ಪ್ರಮುಖ ಮಾರ್ಗಗಳಲ್ಲಿ ನ್ಯಾಯ ಸಮ್ಮತ ಮತ್ತು ಸಮಂಜಸ ದರಗಳನ್ನು ಖಚಿತಪಡಿಸಲು ಕ್ರಮ ಕೈಗೊಂಡಿದೆ. ಪ್ರಯಾಣಿಕರನ್ನು ಯಾವುದೇ ರೀತಿಯ ಅವಕಾಶವಾದಿ ಬೆಲೆ ನಿಗದಿಯಿಂದ ರಕ್ಷಿಸಲು ಮುಂದಾಗಿದೆ.

ಎಲ್ಲ ವಿಮಾನಯಾನ ಸಂಸ್ಥೆಗಳಿಗೆ ಅಧಿಕೃತ ನಿರ್ದೇಶನವನ್ನು ಹೊರಡಿಸಲಾಗಿದ್ದು, ಈಗ ನಿಗದಿಪಡಿಸಿರುವ ಶುಲ್ಕ ಮಿತಿಗಳನ್ನು ಕಟ್ಟುನಿಟ್ಟಾಗಿ ಪಾಲಿಸುವುದು ಕಡ್ಡಾಯ. ಪರಿಸ್ಥಿತಿ ಸಂಪೂರ್ಣವಾಗಿ ಸ್ಥಿರವಾಗುವವರೆಗೆ ಈ ಮಿತಿಗಳು ಜಾರಿಯಲ್ಲಿರುತ್ತವೆ. ಮಾರುಕಟ್ಟೆಯಲ್ಲಿ ಬೆಲೆ ಶಿಸ್ತನ್ನು ಕಾಯ್ದುಕೊಳ್ಳುವುದು, ಸಂಕಷ್ಟದಲ್ಲಿರುವ ಪ್ರಯಾಣಿಕರ ಶೋಷಣೆಯನ್ನು ತಡೆಗಟ್ಟುವುದು ಮತ್ತು ಹಿರಿಯ ನಾಗರಿಕರು, ವಿದ್ಯಾರ್ಥಿಗಳು ಮತ್ತು ರೋಗಿಗಳು ಸೇರಿದಂತೆ ತುರ್ತಾಗಿ ಪ್ರಯಾಣಿಸಬೇಕಾದ ನಾಗರಿಕರು ಈ ಅವಧಿಯಲ್ಲಿ ಆರ್ಥಿಕ ಸಂಕಷ್ಟಕ್ಕೆ ಒಳಗಾಗದಂತೆ ನೋಡಿಕೊಳ್ಳುವುದು ಈ ನಿರ್ದೇಶನದ ಉದ್ದೇಶ ಎಂದು ಸಚಿವಾಲಯ ತಿಳಿಸಿದೆ.