ಅಯೋಧ್ಯೆ ರಾಮ ಮಂದಿರ ಪ್ರಾಣ ಪ್ರತಿಷ್ಠೆಯ ದ್ವಿತೀಯ ವಾರ್ಷಿಕೋತ್ಸವಕ್ಕೆ ಮುಹೂರ್ತ ಫಿಕ್ಸ್; ಈ ವರ್ಷವೇ ನಡೆಯಲಿದೆ ಐತಿಹಾಸಿಕ ಆಚರಣೆ
Ram Mandir 2nd Anniversary: ಅಯೋಧ್ಯೆ ರಾಮ ಮಂದಿರದಲ್ಲಿ ನಡೆದ ಬಾಲಕ ರಾಮನ ವಿಗ್ರಹದ ಪ್ರಾಣ ಪ್ರತಿಷ್ಠೆಯ ದ್ವಿತೀಯ ವಾರ್ಷಿಕೋತ್ಸವಕ್ಕೆ ದಿನಾಂಕ ನಿಗದಿಯಾಗಿದೆ. ಈ ವರ್ಷದ ಡಿಸೆಂಬರ್ 31ರಂದು ವಾರ್ಷಿಕೋತ್ಸವ ಆಯೋಜಿಸಲಾಗಿದ್ದು, ರಕ್ಷಣಾ ಸಚಿವ ರಾಜನಾಥ್ ಸಿಂಗ್, ಯೋಗಿ ಆದಿತ್ಯನಾಥ್ ಮತ್ತಿತರರು ಪಾಲ್ಗೊಳ್ಳಲಿದ್ದಾರೆ.
ಅಯೋಧ್ಯೆಯ ಬಾಲಕ ರಾಮ (ಸಂಗ್ರಹ ಚಿತ್ರ) -
ಲಖನೌ, ಡಿ. 13: ಉತ್ತರ ಪ್ರದೇಶದ ಅಯೋಧ್ಯೆ ರಾಮ ಮಂದಿರದಲ್ಲಿ (Ayodhya Ram Mandir) ಪ್ರಾಣ ಪ್ರತಿಷ್ಠೆಯ 2ನೇ ವಾರ್ಷಿಕೋತ್ಸವ ಡಿಸೆಂಬರ್ 31ರಂದು ನಡೆಯಲಿದೆ ಎಂದು ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ತಿಳಿಸಿದೆ. 51 ಇಂಚು ಎತ್ತರದ ಬಾಲಕ ರಾಮನ ವಿಗ್ರಹವನ್ನು ಅಯೋಧ್ಯೆ ರಾಮ ಮಂದರದಲ್ಲಿ ಸ್ಥಾಪಿಸಿ 2024ರ ಜನವರಿ 22ರಂದು ಪ್ರಾಣ ಪ್ರತಿಷ್ಠೆ ಕೈಗೊಳ್ಳುವ ಮೂಲಕ ಹಿಂದೂಗಳ ಶತಮಾನಗಳ ಕನಸು ನನಸುಗೊಳಿಸಲಾಯಿತು. ಇದೀಗ ಈ ಐತಿಹಾಸಿಕ ಸಮಾರಂಭಕ್ಕೆ 2 ವರ್ಷ (Ram Mandir 2nd Anniversary) ತುಂಬುತ್ತಿದ್ದು, ವಿವಿಧ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ 2ನೇ ವಾರ್ಷಿಕೋತ್ಸವ ನೆರವೇರಿಸಲಾಗುತ್ತದೆ.
ಪ್ರಾಣ ಪ್ರತಿಷ್ಠೆ ಜನವರಿ 22ರಂದು ನಡೆದಿದ್ದರೂ ಹಿಂದೂ ಕ್ಯಾಲಂಡರ್ ಪ್ರಕಾರ ಈ ಬಾರಿ ಡಿಸೆಂಬರ್ 31ರಂದು ವಾರ್ಷಿಕೋತ್ಸವ ನಡೆಯಲಿದೆ. ಪ್ರಾಣ ಪ್ರತಿಷ್ಠೆಯ ಮೊದಲ ವಾರ್ಷಿಕೋತ್ಸವ ಈ ವರ್ಷದ ಜನವರಿ 11ರಂದು ನಡೆಯಿತು. 2025 ಆ ಮೂಲಕ 2 ವಾರಷಿಕೋತ್ಸವಕ್ಕೆ ಸಾಕ್ಷಿಯಾಗುತ್ತಿದೆ.
ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ನ ಎಕ್ಸ್ ಪೋಸ್ಟ್:
पूज्य श्री महंत नृत्यगोपाल दास की अध्यक्षता में आज श्रीराम जन्मभूमि तीर्थ क्षेत्र न्यास की एक बैठक हुई जिसमें प्रतिष्ठा द्वादशी पर प्रस्तावित कार्यक्रमों सहित विभिन्न विषयों पर चर्चा हुई।
— Shri Ram Janmbhoomi Teerth Kshetra (@ShriRamTeerth) December 13, 2025
न्यास ने यह निर्णय लिया है कि प्राण प्रतिष्ठा से पूर्व जिस स्थान पर प्रभु श्रीरामलला अनुजों… pic.twitter.com/vAyVgTag9N
ಹಿಂದೂ ಕ್ಯಾಲಂಡರ್ ಪ್ರಕಾರ ಆಚರಣೆ
ಹಿಂದೂ ಕ್ಯಾಲಂಡರ್ ಪ್ರಕಾರ ರಾಮನ ಪ್ರಾಣ ಪ್ರತಿಷ್ಠೆಯನ್ನು ಪೌಷ ಮಾಸದ ಶುಕ್ಲ ಪಕ್ಷದ ಕೂರ್ಮ ದ್ವಾದಶಿಯಂದು ನೆರವೇರಿಸಲಾಗಿದೆ. ಅದರಂತೆ ವಿಶೇಷ ಈ ದಿನ 2025ರ ಜನವರಿ 11 ಮತ್ತು ಡಿಸೆಂಬರ್ 31ರಂದು ಬಂದಿರುವುದರಿಂದ ಅಂದೇ ವಾರ್ಷಿಕೋತ್ಸವ ಆಚರಿಸಲಾಗುತ್ತಿದೆ ಎಂದು ಮೂಲಗಳು ತಿಳಿಸಿವೆ. ವಾರ್ಷಿಕೋತ್ಸವ ಹಿನ್ನೆಲೆಯಲ್ಲಿ ರಾಮ ಮಂದಿರದ ಸಂಕೀರ್ಣದಲ್ಲಿರುವ ಶಿವ, ಸೂರ್ಯ, ಗಣಪತಿ, ಹನುಮಂತ, ಭಗವತಿ, ಅನ್ನಪೂರ್ಣ ಮತ್ತು ಶೇಷವತಾರ ದೇವಸ್ಥಾನಗಳಲ್ಲೂ ಧಾರ್ಮಿಕ ಚಟುವಟಿಕೆ ನಡೆಯಲಿದೆ.
500 ವರ್ಷಗಳ ಕನಸು ನನಸು... ರಾಮಮಂದಿರದ ಶಿಖರದ ಮೇಲೆ ಹಾರಾಡಿದ ಧರ್ಮ ಧ್ವಜ-ಮೋದಿಯಿಂದ ವಿಶೇಷ ಪೂಜೆ
ಅಧಿಕಾರಿಗಳ ಪ್ರಕಾರ, ರಕ್ಷಣಾ ಸಚಿವ ರಾಜನಾಥ್ ಸಿಂಗ್, ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಮತ್ತಿತರರು ಡಿಸೆಂಬರ್ 31ರಂದು ನಡೆಯುವ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ. ಇವರು ಧ್ವಜಾರೋಹಣ ವೇಳೆ ಉಪಸ್ಥಿತರಿರಲಿದ್ದಾರೆ. ಡಿಸೆಂಬರ್ 27ರಂದೇ ಧಾರ್ಮಿಕ ಆಚರಣೆ ಆರಂಭವಾಗಲಿದೆ. ಧ್ವಜವನ್ನು ಈಗಾಗಲೇ ಸಿದ್ಧಪಡಿಸಲಾಗುತ್ತಿದೆ.
ವಿವಿಧ ಕಾರ್ಯಕ್ರಮ
ಡಿಸೆಂಬರ್ 31ರಂದು ನಡೆಯುವ ಪ್ರತಿಷ್ಠಾ ದ್ವಾದಶಿಯ ಪ್ರಯುಕ್ತ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಎಲ್ಲ ಕಾರ್ಯಕ್ರಮಗಳನ್ನು ಅಂಗದ್ ತಿಲಾದಲ್ಲಿ ನಡೆಸಲು ನಿರ್ಧರಿಸಲಾಗಿದೆ. ಡಿಸೆಂಬರ್ 27ರಿಂದ 31ರವರೆಗೆ ರಾಮ ಜನ್ಮಭೂಮಿ ದೇವಸ್ಥಾನದಲ್ಲಿ ಮಂಡಲ ಪೂಜೆ ಮತ್ತು ಸಂಗೀತ, ರಾಮಚರಿತ ಮಾನಸಗಳ ನಿರಂತರ ಪಠಣ, ರಾಮ ಕಥೆ ನಡೆಯಲಿದೆ.
ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಪ್ರಸಿದ್ಧ ಗಾಯಕರಾದ ಅನುಪ್ ಜಲೋಟಾ, ಸುರೇಶ್ ವಾಡ್ಕರ್ ಮತ್ತು ತೃಪ್ತಿ ಶಕ್ಯ ಅವರಿಂದ ಭಜನಾ ಸಂಧ್ಯಾಗಳು, ಕಥಕ್ ನೃತ್ಯ ನಾಟಕಗಳನ್ನು ಹಮ್ಮಿಕೊಳ್ಳಲಾಗಿದೆ. ಶ್ರೀರಾಮನನ್ನು ಸ್ತುತಿಸುವ ಶ್ಲೋಕಗಳನ್ನು ಪಠಿಸಲು ವ್ಯವಸ್ಥೆ ಮಾಡಲಾಗಿದೆ.
ಶತಮಾನಗಳ ವೇದನೆಗೆ ಇಂದು ಪೂರ್ಣ ವಿರಾಮ- ಶ್ರೀರಾಮನ ನೆಲದಲ್ಲಿ ನಿಂತು ಅಬ್ಬರಿಸಿದ ಮೋದಿ
ಹುತಾತ್ಮರಿಗಾಗಿ ಸ್ಮಾರಕ
ಸುಮಾರು 500 ವರ್ಷಗಳ ಕಾಲ ರಾಮ ಮಂದಿರಕ್ಕಾಗಿ ಹೋರಾಡಿ ಪ್ರಾಣ ಕಳೆದುಕೊಂಡವರಿಗಾಗಿ ಸ್ಮಾರಕ ನಿರ್ಮಿಸುವುದಾಗಿ ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ಘೋಷಿಸಿದೆ. ಶನಿವಾರ (ಡಿಸೆಂಬರ್ 13) ನಡೆದ ಸಮಿತಿಯ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದೆ. ಹುತಾತ್ಮರ ಸ್ಮಾರಕವನ್ನು ದೇವಾಲಯದ ಪಕ್ಕದಲ್ಲಿ ನಿರ್ಮಿಸಲಾಗುವುದು ಎಂದು ಎಕ್ಸ್ ಪೋಸ್ಟ್‌ನಲ್ಲಿ ತಿಳಿಸಲಾಗಿದೆ. ರಾಮ ಮಂದಿರ ಟ್ರಸ್ಟ್‌ನ ಸದಸ್ಯರ ಪ್ರಕಾರ, ಈ ಸ್ಮಾರಕವು ರಾಮ ಜನ್ಮಭೂಮಿ ಚಳುವಳಿಯನ್ನು ತಲೆಮಾರುಗಳಿಂದ ಜೀವಂತವಾಗಿಟ್ಟ ಸಂತರು, ಋಷಿಗಳು, ಕರಸೇವಕರು ಮತ್ತು ಸಾಮಾನ್ಯ ಭಕ್ತರಿಗೆ ಗೌರವ ಸಲ್ಲಿಸುವ ಉದ್ದೇಶ ಹೊಂದಿದೆ.