ಕೇಂದ್ರದಿಂದ ಮನರೇಗಾ ಯೋಜನೆಗೆ ಮರುನಾಮಕರಣ; ಕೆಲಸದ ಅವಧಿಯಲ್ಲೂ ಹೆಚ್ಚಳ: ಕನಿಷ್ಠ ವೇತನವೂ ಅಧಿಕ
MGNREGA: ಮಹಾತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಕಾಯ್ದೆಯ ಹೆಸರು ಬದಲಾಯಿಸಲಾಗಿದೆ. ಈ ಯೋಜನೆಯ ಇನ್ಮುಂದೆ ಪೂಜ್ಯ ಬಾಪು ಗ್ರಾಮೀಣ ರೋಜ್‌ಗಾರ್ ಯೋಜನೆಯಾಗಿ ಗುರುತಿಸ್ಪಡಲಿದೆ. ಡಿಸೆಂಬರ್ 12ರಂದು ನಡೆದ ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ಮರುನಾಮಕರಣಕ್ಕೆ ಒಪ್ಪಿಗೆ ನೀಡಲಾಯಿತು. ಈ ಯೋಜನೆಯಡಿ ಒದಗಿಸುವ ಕೆಲಸದ ದಿನಗಳ ಸಂಖ್ಯೆಯನ್ನು 100 ದಿನಗಳಿಂದ 125 ದಿನಗಳಿಗೆ ಹೆಚ್ಚಿಸಲಾಗಿದೆ.
ಮನರೇಗಾ ಯೋಜನೆ (ಸಾಂದರ್ಭಿಕ ಚಿತ್ರ) -
ದೆಹಲಿ, ಡಿ. 13: ಕೋಟ್ಯಂತರ ಭಾರತೀಯರ ಪಾಲಿಗೆ ಆಶಾ ಕಿರಣವಾಗಿರುವ, 2005ರಲ್ಲಿ ಅಂದಿನ ಯುಪಿಎ ಸರ್ಕಾರ ಜಾರಿಗೆ ತಂದ ಮಹಾತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಕಾಯ್ದೆಯ (Mahatma Gandhi Rural Employment Guarantee Scheme-MGNREGS) ಹೆಸರು ಬದಲಾಯಿಸಲಾಗಿದೆ. ಈ ಯೋಜನೆಯ ಹೆಸರನ್ನು ಇದೀಗ ಪೂಜ್ಯ ಬಾಪು ಗ್ರಾಮೀಣ ರೋಜ್‌ಗಾರ್ ಯೋಜನೆ (Pujya Bapu Grameen Rozgar Yojana) ಎಂದು ಬದಲಾಯಿಸಲಾಗಿದೆ. ಡಿಸೆಂಬರ್ 12ರಂದು ನಡೆದ ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ಮರುನಾಮಕರಣಕ್ಕೆ ಒಪ್ಪಿಗೆ ನೀಡಲಾಯಿತು. ಜತೆಗೆ ಉದ್ಯೋಗ ನಿಯಮಗಳಲ್ಲಿ ಕೆಲವು ಬದಲಾವಣೆ ಮಾಡಲಾಗಿದೆ.
ಈ ಯೋಜನೆಯಡಿ ಒದಗಿಸುವ ಕೆಲಸದ ದಿನಗಳ ಸಂಖ್ಯೆಯನ್ನು 100 ದಿನಗಳಿಂದ 125 ದಿನಗಳಿಗೆ ಹೆಚ್ಚಿಸಲಾಗಿದೆ. ಈ ನಿರ್ಧಾರವು ಗ್ರಾಮೀಣ ಕಾರ್ಮಿಕರ ಜೀವನೋಪಾಯದ ಭದ್ರತೆಯನ್ನು ಗಣನೀಯವಾಗಿ ಹೆಚ್ಚಿಸುವ ನಿರೀಕ್ಷೆಯಿದೆ. ಇನ್ನು ಕಾರ್ಮಿಕರಿಗೆ ದೊರೆಯುವ ಕನಿಷ್ಠ ವೇತನವನ್ನು 240 ರೂ.ಗೆ ಹೆಚ್ಚಿಸಲಾಗಿದೆ. ಅದು ಬಿಟ್ಟು ಯೋಜನೆ ಮೊದಲಿನಂತೆಯೇ ಕಾರ್ಯ ನಿರ್ವಹಿಸಲಿದೆ ಎಂದು ಸರ್ಕಾರದ ಮೂಲಗಳು ತಿಳಿಸಿವೆ.
ಮನರೇಗಾ ಯೋಜನೆಯ ಹೆಸರು ಬದಲಾವಣೆಯ ಬಗ್ಗೆ ಮಾಹಿತಿ:
COMING SOON...
— Rahul Shivshankar (@RShivshankar) December 13, 2025
NEW NAME, NEW TERMS
The Mahatma Gandhi National Rural Employment Guarantee Act (MGNREGA) 2005 will be renamed as Pujya Bapu Grameen Rozgar Guarantee Bill 2025. pic.twitter.com/GZSetJ6jtb
2ನೇ ಬಾರಿ ಹೆಸರು ಬದಲಾವಣೆ
ಹಾಗೆ ನೋಡಿದರೆ ಈ ಯೋಜನೆಯ ಹೆಸರು ಬದಲಾಯಿಸುತ್ತಿರುವುದು ಇದು 2ನೇ ಬಾರಿ. 2005ರಲ್ಲಿ ಅಂದಿನ ಯುಪಿಎ ಸರ್ಕಾರ ಈ ಯೋಜನೆಯನ್ನು ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಕಾಯ್ದೆ (ನರೇಗಾ) ಎಂಬ ಹೆಸರಿನಲ್ಲಿ ಪ್ರಾರಂಭಿಸಿತು. ನಂತರ 2009ರಲ್ಲಿ ರಾಷ್ಟ್ರಪಿತ ಮಹಾತ್ಮಾ ಗಾಂಧಿ ಅವರ ಗೌರವಾರ್ಥ ಇದನ್ನು ಮಹಾತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಕಾಯ್ದೆ(ಮನರೇಗಾ) ಎಂದು ಮರುನಾಮಕರಣ ಮಾಡಲಾಯಿತು. 2024-25ರಲ್ಲಿ ಮನರೇಗಾ ಅಡಿಯಲ್ಲಿ ಪ್ರತಿ ಮನೆಗೆ ಒದಗಿಸಲಾದ ಸರಾಸರಿ ಉದ್ಯೋಗ ದಿನಗಳ ಸಂಖ್ಯೆ 50.24 ಎಂದು ಕೇಂದ್ರ ತಿಳಿಸಿದೆ.
ಡ್ರೋನ್ ಬಳಸಿ ನರೇಗಾ ಮಹಿಳಾ ಕೂಲಿ ಕಾರ್ಮಿಕರ ಶೌಚ ದೃಶ್ಯ ಸೆರೆ ಹಿಡಿದ ದುಷ್ಕರ್ಮಿಗಳು
ಯಾಕಾಗಿ ಹೆಸರು ಬದಲಾವಣೆ?
ಮರುನಾಮಕರಣವು ಯೋಜನೆಯ ಕಾನೂನು ಚೌಕಟ್ಟನ್ನು ನವೀಕರಿಸುವ ಮತ್ತು ಗ್ರಾಮೀಣ ಉದ್ಯೋಗಗಳಲ್ಲಿ ಏಕರೂಪತೆಯನ್ನು ತರುವ ಪ್ರಯತ್ನದ ಭಾಗ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಜತೆಗೆ ಇದರ ಹಿಂದಿನ ಪ್ರಮುಖ ಉದ್ದೇಶ ರಾಷ್ಟ್ರಪಿತ ಮಹಾತ್ಮಾ ಗಾಂಧೀಜಿ ಅವರಿಗೆ ಮತ್ತಷ್ಟು ಗೌರವ ಸಮರ್ಪಿಸುವುದು ಎಂದಿದ್ದಾರೆ. ಪೂಜ್ಯ ಬಾಪು ಎಂಬ ಪದವು ಹೆಚ್ಚು ಆತ್ಮೀಯತೆ ಮತ್ತು ಪೂಜ್ಯನೀಯ ಭಾವವನ್ನು ವ್ಯಕ್ತಪಡಿಸುತ್ತದೆ ಎಂಬುದು ಸರ್ಕಾರದ ವಾದ.
ಈ ಹೆಸರು ಬದಲಾವಣೆಯು ಕೇವಲ ನಾಮಮಾತ್ರಕ್ಕೆ ಸೀಮಿತವಾಗಲಿದ್ದು, ಯೋಜನೆಯ ಮೂಲ ಉದ್ದೇಶ, ನಿಯಮಗಳು, ಅನುಷ್ಠಾನದ ರೀತಿ, ಫಲಾನಫಲಾನುಭವಿಗಳ ಆಯ್ಕೆ, ಅನುದಾನ ಹಂಚಿಕೆಯಲ್ಲಿ ಯಾವುದೇ ರೀತಿಯ ಬದಲಾವಣೆ ಇರುವುದಿಲ್ಲ ಎಂದು ಕೇಂದ್ರ ಸ್ಪಷ್ಟಪಡಿಸಿದೆ. ಈ ಯೋಜನೆಗಾಗಿ ಸರ್ಕಾರ 1.51 ಲಕ್ಷ ಕೋಟಿ ರೂ. ಹಂಚಿಕೆ ಮಾಡಲಿದೆ. ಅದಾಗ್ಯೂ ಕಾಂಗ್ರೆಸ್ ಈ ಹೆಸರು ಬದಲಾವಣೆಯನ್ನು ವಿರೋಧಿಸಿದೆ.
ಯಾವೆಲ್ಲ ಕೆಲಸಗಳಿಗೆ ಅವಕಾಶವಿದೆ?
ಈ ಯೋಜನೆಯಡಿ ರಸ್ತೆ ನಿರ್ಮಾಣ, ಕೃಷಿ ಚಟುವಟಿಕೆ, ಜಲ ಸಂರಕ್ಷಣಾ ಚಟುವಟಿಕೆ, ಕೆರೆ ಅಗೆಯುವುದು, ಸಮುದಾಯ ಅಭಿವೃದ್ಧಿಗೆ ಸಂಬಂಧಿಸಿದ ಶ್ರಮದಾಯಕ ಕೆಲಸಗಳಿಗೆ ಅವಕಾಶವಿದೆ. ಫಲಾನುಭವಿಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರಿದ್ದಾರೆ.