ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

“ಭಾರತದ ಜ್ಞಾನ ನಿಧಿ ಜಗತ್ತಿಗೆ ಬೇಕು, ಧರ್ಮ-ರಾಷ್ಟ್ರ ಬೇರ್ಪಡಿಸಲಾಗದು'': ಮೋಹನ್ ಭಾಗವತ್

Mohan Bhagwat: ಮುಂಬೈಯಲ್ಲಿ ಜೈನ ಯುವಕರ ಸೇವಾ ಸಂಘಟನೆ ಅಖಿಲ ಭಾರತ ವಿಹಾರ ಸೇವಾ ಸಮೂಹದ 14ನೇ ಸಮ್ಮೇಳನವನ್ನು ಉದ್ದೇಶಿಸಿ ಮಾತನಾಡಿದ ಭಾಗವತ್‌, ಭಾರತದ ರಾಷ್ಟ್ರ ಪರಿಕಲ್ಪನೆಯನ್ನು ಧರ್ಮದಿಂದ ಪ್ರತ್ಯೇಕಿಸಲು ಸಾಧ್ಯವಿಲ್ಲ. ಜಗತ್ತು ಹಲವು ರೀತಿಯ ಸಂಘರ್ಷಗಳನ್ನು ಎದುರಿಸುತ್ತಿದೆ ಎಂದು ಹೇಳಿದರು.

ಧರ್ಮ-ರಾಷ್ಟ್ರ ಬೇರ್ಪಡಿಸಲಾಗದು ಎಂದ ಮೋಹನ್ ಭಾಗವತ್

ಆರ್‌ಎಸ್‌ಎಸ್‌ ಮುಖ್ಯಸ್ಥ ಮೋಹನ್ ಭಾಗವತ್‌ (ಸಂಗ್ರಹ ಚಿತ್ರ) -

Priyanka P
Priyanka P Oct 2, 2026 6:48 PM

ಮುಂಬೈ, ಅ. 2: ಭಾರತದ ರಾಷ್ಟ್ರದ ಪರಿಕಲ್ಪನೆಯನ್ನು ಧರ್ಮದಿಂದ ಪ್ರತ್ಯೇಕಿಸಲು ಸಾಧ್ಯವಿಲ್ಲ ಎಂದು ಆರ್‌ಎಸ್‌ಎಸ್‌ (RSS) ಮುಖ್ಯಸ್ಥ ಮೋಹನ್ ಭಾಗವತ್‌ (Mohan Bhagwat) ಹೇಳಿದರು. ಜಗತ್ತು ಎದುರಿಸುತ್ತಿರುವ ಕೆಲವು ಸವಾಲುಗಳಿಗೆ ಭಾರತದ ಪ್ರಾಚೀನ ಜ್ಞಾನ ಪರಂಪರೆಗಳು ಪರಿಹಾರ ನೀಡಬಲ್ಲವು ಎಂದು ಅವರು ಅಭಿಪ್ರಾಯಪಟ್ಟರು. ಮುಂಬೈಯಲ್ಲಿ ಜೈನ ಯುವಕರ ಸೇವಾ ಸಂಘಟನೆ ಅಖಿಲ ಭಾರತ ವಿಹಾರ ಸೇವಾ ಸಮೂಹದ 14ನೇ ಸಮ್ಮೇಳನವನ್ನುದ್ದೇಶಿಸಿ ಮಾತನಾಡಿದ ಅವರು, ಜಗತ್ತು ಹಲವು ರೀತಿಯ ಸಂಘರ್ಷಗಳನ್ನು ಎದುರಿಸುತ್ತಿದೆ ಎಂದು ಹೇಳಿದರು. ಅಭಿವೃದ್ಧಿ ಮತ್ತು ಪರಿಸರ ಸಂರಕ್ಷಣೆ, ವೈಯಕ್ತಿಕ ಸ್ವಾತಂತ್ರ್ಯ ಮತ್ತು ಕುಟುಂಬ ಜೀವನ, ಧಾರ್ಮಿಕ ನಂಬಿಕೆ ಮತ್ತು ಸಂಘರ್ಷದ ನಡುವೆ ಒತ್ತಡ ಉಂಟಾಗಿದೆ ಎಂದು ತಿಳಿಸಿದರು.

“ಅಭಿವೃದ್ಧಿ ಹೆಚ್ಚಾದಂತೆ ಪರಿಸರಕ್ಕೆ ಹಾನಿಯಾಗುತ್ತದೆ. ಮತ್ತೊಂದೆಡೆ, ಪರಿಸರವನ್ನು ರಕ್ಷಿಸಬೇಕಾದರೆ ಅಭಿವೃದ್ಧಿ ಸಾಧ್ಯವಾಗುವುದಿಲ್ಲ. ವೈಯಕ್ತಿಕ ಸ್ವಾತಂತ್ರ್ಯ ಹೆಚ್ಚಾದಂತೆ ಕುಟುಂಬಗಳು ಒಡೆದು ಹೋಗುತ್ತಿವೆ. ಇದರಿಂದ ಸಮಾಜದಲ್ಲಿಯೂ ಬಿರುಕು ಉಂಟಾಗುತ್ತಿದೆ” ಎಂದು ಹೇಳಿದರು.

ಇಂತಹ ವೈರುಧ್ಯಗಳ ಪೈಕಿ ಒಂದು ಬದಿಯನ್ನು ಆಯ್ಕೆ ಮಾಡುವ ಮೂಲಕ ಪರಿಹರಿಸಲು ಸಾಧ್ಯವಿಲ್ಲ ಎಂದು ಭಾಗವತ್ ಹೇಳಿದರು. ಇತರ ರಾಷ್ಟ್ರಗಳನ್ನು ವಶಪಡಿಸಿಕೊಳ್ಳದೆ ಅಥವಾ ಜನರನ್ನು ಮತಾಂತರಿಸದೆ ಜ್ಞಾನವನ್ನು ಹಂಚಿಕೊಳ್ಳುವ ಭಾರತದ ದೀರ್ಘ ಸಂಪ್ರದಾಯವನ್ನು ಅವರು ಎತ್ತಿ ತೋರಿಸಿದರು. “ಈ ಸಮಸ್ಯೆಗಳಿಗೆ ಪರಿಹಾರದ ಮಾರ್ಗ ಭಾರತದಿಂದಲೇ ಬರಲಿದೆ ಎಂಬುದು ಜಗತ್ತಿಗೆ ತಿಳಿದಿದೆ” ಎಂದು ಅವರು ಹೇಳಿದರು.

ʼʼಅಹಂಕಾರಿಗಳಿಂದ ದೂರವಿರಿʼʼ: ರಾಹುಲ್‌ ಗಾಂಧಿ ಭೇಟಿಗೂ ಮುನ್ನ ಮೋಹನ್‌ ಭಾಗವತ್‌ ಕರೆ

ವೇದಗಳು, ಉಪನಿಷತ್ತುಗಳು, ರಾಮಾಯಣ, ಮಹಾಭಾರತ, ಗೀತೆ, ಜೈನ ಆಗಮಗಳು, ತ್ರಿಪಿಟಕ, ಗುರು ಗ್ರಂಥ ಸಾಹಿಬ್ ಮತ್ತು ಸಂತರ ಬೋಧನೆಗಳನ್ನು ಭಾರತದ ವಿಶಾಲ ಜ್ಞಾನ ಪರಂಪರೆಯ ಭಾಗವೆಂದು ಭಾಗವತ್ ಪಟ್ಟಿ ಮಾಡಿದರು. “ನಮ್ಮ ದೇಶವು ಇಂದು ಜಗತ್ತಿಗೆ ಅಗತ್ಯವಿರುವ ಜ್ಞಾನದ ಅಪಾರ ನಿಧಿಯನ್ನು ಹೊಂದಿದೆ” ಎಂದು ಅವರು ಹೇಳಿದರು.

“ನಮ್ಮ ರಾಷ್ಟ್ರ ಮತ್ತು ಧರ್ಮ ಬೇರೆ ಬೇರೆ ಅಲ್ಲ. ರಾಷ್ಟ್ರದ ಉದ್ದೇಶವೇ ಧರ್ಮ ಹಾಗೂ ಧರ್ಮವು ರಾಷ್ಟ್ರವನ್ನು ಉಳಿಸಿಕೊಳ್ಳಲು ಸಹಾಯ ಮಾಡುತ್ತದೆ. ಇವೆರಡೂ ಪರಸ್ಪರ ಅವಲಂಬಿತವಾಗಿವೆ. ಒಂದಿದ್ದರೆ ಮತ್ತೊಂದೂ ಇರುತ್ತದೆ, ಒಂದಿಲ್ಲದಿದ್ದರೆ ಮತ್ತೊಂದೂ ಇರುವುದಿಲ್ಲ” ಎಂದರು.

ಭಾರತದ ದೃಷ್ಟಿಕೋನವು ಯಾವುದೇ ಒಂದು ನಿರ್ದಿಷ್ಟ ಸಮುದಾಯದ ಹಿತಕ್ಕಿಂತ ಎಲ್ಲರ ಕಲ್ಯಾಣದ ಮೇಲೆ ಕೇಂದ್ರೀಕೃತವಾಗಿದೆ ಎಂದು ಅವರು ಹೇಳಿದರು. ಜೈನ ಆಧ್ಯಾತ್ಮಿಕ ಸಂಪ್ರದಾಯಗಳನ್ನು ಸಂರಕ್ಷಿಸುವುದು ಸಮುದಾಯವನ್ನು ಮೀರಿ ಮಹತ್ವದ್ದಾಗಿದೆ ಎಂದು ಭಾಗವತ್ ಕರೆ ನೀಡಿದರು. “ನೀವು ಕೇವಲ ಒಂದು ಜೀವವನ್ನು ರಕ್ಷಿಸುತ್ತಿಲ್ಲ. ನೀವು ಇಡೀ ಮಾನವ ಜನಾಂಗದ ಸುರಕ್ಷಿತ ಭವಿಷ್ಯವನ್ನು ರಕ್ಷಿಸುತ್ತಿದ್ದೀರಿ” ಎಂದರು.