Piyush Pandey: ‘ಅಬ್ ಕೀ ಬಾರ್ ಮೋದಿ ಸರ್ಕಾರ್ʼ ಖ್ಯಾತಿಯ ಪಿಯೂಷ್ ಪಾಂಡೆ ಇನ್ನಿಲ್ಲ
ಭಾರತೀಯ ಜಾಹೀರಾತು ಜಗತ್ತಿನ ಬಹುದೊಡ್ಡ ಲೇಖಕ, ಖ್ಯಾತ ಜಾಹೀರಾತು ಗುರು ಪಿಯೂಷ್ ಪಾಂಡೆ ಅವರು 70 ನೇ ವಯಸ್ಸಿನಲ್ಲಿ ಮುಂಬೈನಲ್ಲಿಇಂದು ಇಹಲೋಕ ತ್ಯಜಿಸಿದ್ದಾರೆ. ಫೆವಿಕಾಲ್ ಹಾಗೂ ವೊಡಾಫೋನ್ ಜಾಹೀರಾತುಗಳಿಗೆ ಹೆಸರುವಾಸಿಯಾದ ಪಾಂಡೆ ಅವರು ಭಾರತದ ಜಾಹೀರಾತು ಕ್ಷೇತ್ರದಲ್ಲಿ ತಮ್ಮದೇ ಛಾಪು ಮೂಡಿಸಿದ್ದರು. ಅವರು ಧ್ವನಿಯಾಗಿದ್ದ ಜಾಹೀರಾತುಗಳ ಮಾಹಿತಿ ಇಲ್ಲಿದೆ.
ಪಿಯೂಷ್ ಪಾಂಡೆ -
ನವದೆಹಲಿ: ಭಾರತದ ಜಾಹೀರಾತು(Advertising) ಕ್ಷೇತ್ರದ ದಿಗ್ಗಜ, ಕ್ರಿಯೇಟಿವಿಟಿಗೆ ಹೆಸರಾಗಿದ್ದ ಪಿಯೂಷ್ ಪಾಂಡೆ(Piyush Pandey) (70) ಅವರು ಅ.24ರ ಶುಕ್ರವಾರ ಬೆಳಿಗ್ಗೆ ನಿಧನರಾದರು ಎಂದು ಅವರ ಸಹೋದರಿ ಹಾಗೂ ನಟಿ ಇಲಾ ಅರುಣ್(Ila Arun) ದೃಢಪಡಿಸಿದ್ದಾರೆ. ಕಳೆದ ಕೆಲ ದಿನಗಳಿಂದ ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಆರೋಗ್ಯ ಚೇತರಿಸಿಕೊಳ್ಳದ ಹಿನ್ನಲೆ, ಇಂದು ಇಹಲೋಕ ತ್ಯಜಿಸಿದ್ದಾರೆ. ಅವರ ಅಂತ್ಯಕ್ರಿಯೆ ಮುಂಬೈನ ಶಿವಾಜಿ ಪಾರ್ಕ್‌ನಲ್ಲಿ ನೆರವೇರಲಿದೆ.
ಪಾಂಡೆ ಅವರು ನಾಲ್ಕು ದಶಕಗಳ ಕ್ರಿಯೇಟಿವ್ ಕರಿಯರ್‌ನಲ್ಲಿ ಭಾರತೀಯ ಜಾಹೀರಾತಿನ ಭಾಷೆ, ಶೈಲಿ ಮತ್ತು ದೃಶ್ಯ ರೂಪವನ್ನೇ ಸಂಪೂರ್ಣವಾಗಿ ಪರಿವರ್ತಿಸಿ, ದೇಶದ ಅತ್ಯಂತ ಸ್ಮರಣೀಯ ಕ್ಯಾಂಪೇನ್‌ಗಳ ಸೃಷ್ಟಿಸಿದ್ದಾರೆ.
ಇಲ್ಲಿವೆ ಅವರ ಕೆಲವು ಐಕಾನಿಕ್ ಕ್ಯಾಂಪೇನ್‌ಗಳ ವಿವರ
‘ಅಬ್ಕೀ ಬಾರ್ ಮೋದಿ ಸರ್ಕಾರ’ – ರಾಜಕೀಯ ಕ್ಯಾಂಪೇನ್‌ನ ಗೇಮ್‌ಚೇಂಜರ್
2014ರಲ್ಲಿ ಪಿಯೂಷ್ ಪಾಂಡೆ ಅವರು ರೂಪಿಸಿದ ಭಾರತೀಯ ಜನತಾ ಪಕ್ಷದ ಲೋಕಸಭಾ ಚುನಾವಣಾ ಘೋಷವಾಕ್ಯ “ಅಬ್ಕೀ ಬಾರ್ ಮೋದಿ ಸರ್ಕಾರ”, ಅತ್ಯಂತ ಪ್ರಭಾವಶಾಲಿಯಾಗಿ ಪಕ್ಷಕ್ಕೆ ಬಹುಮತ ತಂದುಕೊಡುವಲ್ಲಿ ಯಶಸ್ವಿಯಾಯಿತು. ಈ ಸರಳ ಮತ್ತು ತೀಕ್ಷ್ಣವಾದ ಘೋಷವಾಕ್ಯ ರಾಷ್ಟ್ರಮಟ್ಟದಲ್ಲಿ ಪ್ರತಿಧ್ವನಿಸಿತು.
ಈ ಸುದ್ದಿಯನ್ನು ಓದಿ: Viral Video: ರಸ್ತೆಬದಿಯಲ್ಲಿ ಮಕ್ಕಳೊಂದಿಗೆ ಪಟಾಕಿ ಸಿಡಿಸಿ ದೀಪಾವಳಿ ಆಚರಿಸಿದ ಮುಸ್ಲಿಂ ಕುಟುಂಬ; ಹೃದಯಸ್ಪರ್ಶಿ ವಿಡಿಯೊ ವೈರಲ್
'ಅಟೂಟ್ ಜೋಡ್‌ಕಾ ಸಂಕೇತ'- ಫೆವಿಕೋಲ್
ಫೆವಿಕೋಲ್‌ನೊಂದಿಗೆ ಪಾಂಡೆ ಅವರ ದೀರ್ಘಕಾಲದ ಸಹಯೋಗದಿಂದ “ಫೆವಿಕೋಲ್ ಬಸ್”, “ಫೆವಿಕೋಲ್ ಫಿಷ್”, “ಫೆವಿಕೋಲ್ ಸೋಫಾ” ಮುಂತಾದ ಐಕಾನಿಕ್ ಜಾಹೀರಾತುಗಳು ಹುಟ್ಟಿಕೊಂಡವು.
‘ತೋಡೋ ನಹೀ, ಜೊಡೋ’- ಫೆವಿಕ್ವಿಕ್
ಈ ಕ್ಯಾಂಪೇನ್‌ನಲ್ಲಿ ಪಾಂಡೆ ಅವರು ಸರಳತೆ, ಸಾಮಾಜಿಕ ಸಂದೇಶ ಮತ್ತು ಹಾಸ್ಯದ ಮಿಶ್ರಣದ ಮೂಲಕ ಪ್ರೇಕ್ಷಕರನ್ನು ಆಕರ್ಷಿಸಿದರು. ಇದು ಕೇವಲ ಉತ್ಪನ್ನದ ಪರಿಣಾಮಕಾರಿತ್ವವನ್ನೇ ಅಲ್ಲ, “ಒಡೆಯಬೇಡಿ – ಜೋಡಿಸಿ” ಎಂಬ ಸಂದೇಶವನ್ನೂ ನೀಡಿತು.
‘ಕುಛ್ ಖಾಸ್ ಹೈ’- ಕ್ಯಾಡ್‌ಬರಿ ಡೈರಿ ಮಿಲ್ಕ್
ಒಬ್ಬ ಯುವತಿ ಕ್ರಿಕೆಟ್ ಮೈದಾನದಲ್ಲಿ ನೃತ್ಯಮಾಡುವ ಪ್ರಸಿದ್ಧ ದೃಶ್ಯ ಹೊಂದಿರುವ ಈ ಕ್ಯಾಂಪೇನ್ ಭಾರತೀಯ ಜಾಹೀರಾತಿನ ಚರಿತ್ರೆಯಲ್ಲಿ ಅಜರಾಮರವಾದುದು. ಇದರಿಂದ ಚಾಕೊಲೇಟ್ ಕೇವಲ ಮಕ್ಕಳಿಗೆ ಮಾತ್ರವಲ್ಲ, ಪ್ರತಿಯೊಬ್ಬರ ಸಂಭ್ರಮದ ಪ್ರತೀಕ ಎಂಬ ಹೊಸ ಭಾವನೆ ಹುಟ್ಟಿತು.
ವೊಡಾಫೋನ್ – 'ಪಗ್ ಮತ್ತು ಜೂಜೂಸ್'
ವೊಡಾಫೋನ್‌ಗಾಗಿ ಪಾಂಡೆ ಅವರು ಎರಡು ಸ್ಮರಣೀಯ ಕ್ಯಾಂಪೇನ್‌ಗಳನ್ನು ನೀಡಿದರು – “ಪಗ್” ಜಾಹೀರಾತುಗಳು ನಿಷ್ಠೆಯ ಸಂಕೇತವಾಗಿದ್ದರೆ, ಜೂಜೂಸ್ IPL ಸಮಯದಲ್ಲಿ ಸಾಂಸ್ಕೃತಿಕ ಕ್ರೇಜ್ ಆಗಿ ಮೂಡಿಬಂದವು.
ಬಜಾಜ್ – ‘ಹಮಾರಾ ಬಜಾಜ್’
1990ರ ದಶಕದಲ್ಲಿ ಭಾರತದ ಮಧ್ಯಮ ವರ್ಗದ ಆತ್ಮವಿಶ್ವಾಸ ಮತ್ತು ಪ್ರಗತಿಯನ್ನು ಪ್ರತಿಬಿಂಬಿಸಿದ ಈ ಕ್ಯಾಂಪೇನ್ ರಾಷ್ಟ್ರಭಾವನೆಯ ಗೀತೆಯಂತಿತ್ತು. “ಹಮಾರಾ ಬಜಾಜ್” ಕೇವಲ ಒಂದು ಜಾಹೀರಾತು ಆಗಿರಲಿಲ್ಲ, ಅದು ಬದಲಾದ ಭಾರತದ ಕನಸು ಮತ್ತು ಹೆಮ್ಮೆಯ ಪ್ರತೀಕವಾಗಿತ್ತು.
ಬ್ರ್ಯಾಂಡ್‌ಗಳಿಗಿಂತ ಮೀರಿದ ಪರಂಪರೆ
ಈ ಪ್ರಮುಖ ಕ್ಯಾಂಪೇನ್‌ಗಳ ಹೊರತಾಗಿಯೂ ಪಿಯೂಷ್ ಪಾಂಡೆ ಅವರ ಸೃಜನಶೀಲ ಗುರುತು ಪಾಂಡ್ಸ್ ಪೌಡರ್‌ನ “ಗೂಗ್ಲಿ ವೂಗ್ಲಿ ಊಶ್”, ಚಲ್ ಮೇರಿ ಲೂನಾ, ಬೆಲ್ ಬಜಾವೋ, ಅಮಿತಾಭ್ ಬಚ್ಚನ್‌ನೊಂದಿಗೆ ಪೊಲಿಯೋ ಅಭಿಯಾನ, ಫಾರ್ಚೂನ್ ಆಯಿಲ್, ಗೂಗಲ್ ರಿಯೂನಿಯನ್ ಸೇರಿದಂತೆ ಅನೇಕ ಕ್ಷೇತ್ರಗಳಲ್ಲಿ ವಿಶಿಷ್ಟ ಕ್ಯಾಂಪೇನ್‌ಗಳ ಮೂಲಕ ಜಾಹೀರಾತು ಜಗತ್ತಿನಲ್ಲಿ ಛಾಪು ಮೂಡಿಸಿದರು.
1955ರಲ್ಲಿ ಜೈಪುರ್‌ನಲ್ಲಿ ಜನಿಸಿದ ಅವರು 1982ರಲ್ಲಿ ಒಗಿಲ್ವಿ ಇಂಡಿಯಾಗೆ ಸೇರಿದರು. 1994ರಲ್ಲಿ ಅವರು ಒಗಿಲ್ವಿ ಬೋರ್ಡ್ ಆಫ್ ಡೈರೆಕ್ಟರ್ಸ್‌ನ ಸದಸ್ಯರಾದರು, ಸಂಸ್ಥೆಯನ್ನು ಭಾರತದ ಅತ್ಯಂತ ಶ್ರೇಷ್ಠ ಜಾಹೀರಾತು ಸಂಸ್ಥೆಯನ್ನಾಗಿ ಬೆಳೆಸಲು ಪ್ರಮುಖ ಪಾತ್ರವಹಿಸಿದರು. ಅಲ್ಲದೇ ಅವರಿಗೆ ಪದ್ಮಶ್ರೀ ಪ್ರಶಸ್ತಿ ಹಾಗೂ LIA ಲೆಜೆಂಡ್ ಅವಾರ್ಡ್ ಲಭಿಸಿದೆ.