ʼʼತ್ವಿಶಾ ಶರ್ಮಾ ಡ್ರಗ್ಸ್ ಸೇವಿಸುತ್ತಿದ್ದಳುʼʼ: ಅತ್ತೆಯಿಂದ ಗಂಭೀರ ಆರೋಪ; ಪೋಷಕರ ವಿರುದ್ಧವೂ ವಾಗ್ದಾಳಿ
Crime News: ಭೋಪಾಲ್‌ನಲ್ಲಿ ನಡೆದಿರುವ 33 ವರ್ಷದ ತ್ವಿಶಾ ಶರ್ಮಾ ಅವರ ಸಾವಿನ ಪ್ರಕರಣವನ್ನು ಪೊಲೀಸರು ವರದಕ್ಷಿಣೆ ಕಿರುಕುಳದ ಶಂಕೆ ಮೇರೆಗೆ ತನಿಖೆ ನಡೆಸುತ್ತಿದ್ದಾರೆ. ಈ ಮಧ್ಯೆ, ತ್ವಿಶಾ ಮಾದಕ ವಸ್ತು ಬಳಸುತ್ತಿದ್ದಳು, ಮಾನಸಿಕ ಆರೋಗ್ಯ ಸಮಸ್ಯೆ ಎದುರಿಸುತ್ತಿದ್ದಳು ಎಂದು ಅತ್ತೆ ಗಿರಿಬಾಲಾ ಸಿಂಗ್ ಸಾಲು ಸಾಲು ಆರೋಪ ಮಾಡಿದ್ದಾರೆ.
ತಾಯಿ ಗಿರಿಬಾಲಾ ಸಿಂಗ್ ಜತೆ ಸಮರ್ಥ್ ಮತ್ತು ತ್ವಿಶಾ ಶರ್ಮಾ (ಸಂಗ್ರಹ ಚಿತ್ರ) -
ಭೋಪಾಲ್, ಮೇ 19: ಮಧ್ಯ ಪ್ರದೇಶದ ಭೋಪಾಲ್‌ನಲ್ಲಿ (Bhopal) ನಡೆದಿರುವ 33 ವರ್ಷದ ತ್ವಿಶಾ ಶರ್ಮಾ ಅವರ ಸಾವಿನ ಪ್ರಕರಣವನ್ನು ಪೊಲೀಸರು ವರದಕ್ಷಿಣೆ ಕಿರುಕುಳದ ಶಂಕೆ ಮೇರೆಗೆ ತನಿಖೆ ನಡೆಸುತ್ತಿದ್ದಾರೆ. ಈ ಮಧ್ಯೆ ತ್ವಿಶಾ ಅವರ ಮಾದಕ ವಸ್ತು ಬಳಕೆ, ಮಾನಸಿಕ ಆರೋಗ್ಯ ಮತ್ತು ಕೌಟುಂಬಿಕ ಹಿನ್ನೆಲೆಯ ಬಗ್ಗೆ ಆಕೆಯ ಅತ್ತೆ ಗಿರಿಬಾಲಾ ಸಿಂಗ್ ಸಾಲು ಸಾಲು ಆರೋಪ ಹೊರಿಸಿದ್ದಾರೆ (Crime News).
ನಿವೃತ್ತ ನ್ಯಾಯಾಧೀಶರಾಗಿರುವ ಗಿರಿಬಾಲಾ ಸಿಂಗ್ ಇದೀಗ ಸೊಸೆಯ ವಿರುದ್ಧ, ಅವರ ಮನೆಯವರ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ʼʼಗರ್ಭಿಣಿಯಾಗಿದ್ದ ತ್ವಿಶಾ ಗಾಂಜಾ ಸೇವಿಸುತ್ತಿದ್ದಳು. ಮಾನಸಿಕ ಸಮಸ್ಯೆಗೆ ಚಿಕಿತ್ಸೆ ಪಡೆಯುತ್ತಿದ್ದಳು ಮತ್ತು ಆಕೆಯ ಪೋಷಕರು ತಿಂಗಳುಗಟ್ಟಲೆ ದೂರವಿದ್ದರುʼʼ ಎಂದು ಆರೋಪಿಸಿದ್ದಾರೆ. ಸಂತ್ರಸ್ತೆಯ ತಂದೆ ಈಗಾಗಲೇ ಅಳಿಯನ ಮನೆಯವರ ವಿರುದ್ಧ ಗಂಭೀರ ಆರೋಪಗಳನ್ನು ಮಾಡಿರುವ ಬೆನ್ನಲ್ಲೇ ಅತ್ತೆ ಈ ಹೇಳಿಕೆ ನೀಡಿದ್ದಾರೆ. ತ್ವಿಶಾ ಅವರ ತಂದೆ ನವನಿಧಿ ಶರ್ಮಾ ವರದಕ್ಷಿಣೆಗಾಗಿ ಒತ್ತಡ ಮತ್ತು ಕಿರುಕುಳ ನೀಡಲಾಗುತ್ತಿತ್ತು ಎಂದು ಆರೋಪಿಸಿದ್ದು, ಮದುವೆಯಾದ ಕೆಲವೇ ದಿನಗಳಲ್ಲಿ ಪರೋಕ್ಷವಾಗಿ ಬೇಡಿಕೆಯನ್ನಿಟ್ಟಿದ್ದರು ಎಂದು ದೂರಿದ್ದಾರೆ.
ಪುತ್ರಿಯ ಪತಿ ಸಮರ್ಥ್ ಹಾಗೂ ತಾಯಿ ಗಿರಿಬಾಲಾ ಸಿಂಗ್ ವಿರುದ್ಧ ಕೊಲೆ ಮತ್ತು ವರದಕ್ಷಿಣೆ ಕಿರುಕುಳದ ಆರೋಪ ಹೊರಿಸಲಾಗಿದೆ. ಮೇ 12ರಂದು ಭೋಪಾಲ್‌ನ ತನ್ನ ಪತಿಯ ಮನೆಯಲ್ಲಿ ತ್ವಿಶಾ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದರು.
ತ್ವಿಶಾ ಶರ್ಮಾ ಆತ್ಮಹತ್ಯೆ ಪ್ರಕರಣ: ತನಿಖೆಗೆ ಎಸ್ಐಟಿ ತಂಡ ರಚನೆ
ಅತ್ತೆ ಗಿರಿಬಾಲಾ ಸಿಂಗ್ ಇದೀಗ ತ್ವಿಶಾ ಪೋಷಕರ ವಿರುದ್ಧ ಆರೋಪ ಹೊರಿಸಿದ್ದಾರೆ. ʼʼಐದು ತಿಂಗಳಿನಿಂದ ತ್ವಿಶಾ ಪೋಷಕರು ಆಕೆಯನ್ನು ನೋಡಲು ಬಂದಿಲ್ಲ. ಅವಳ ರೂಪವನ್ನು ಬಳಸಿಕೊಂಡು ಅವರು ಹಣ ಸಂಪಾದಿಸುತ್ತಿದ್ದರು. ಈಗ ಆಕೆಯ ಅಂತ್ಯಸಂಸ್ಕಾರ ಮಾಡಲು ಬಿಡುತ್ತಿಲ್ಲ. ನನಗೆ ತನಿಖಾ ಸಂಸ್ಥೆಗಳ ಮೇಲೆ ಮತ್ತು ಸತ್ಯದ ಮೇಲೆ ನಂಬಿಕೆಯಿದೆʼʼ ಎಂದು ಗಿರಿಬಾಲಾ ಸಿಂಗ್ ಹೇಳಿದ್ದಾರೆ.
ʼʼತ್ವಿಶಾ ಪೋಷಕರು ಆಕೆಯ ವೃತ್ತಿಜೀವನವನ್ನು ನಿಯಂತ್ರಿಸುತ್ತಿದ್ದರು. ನಂತರ ಅವಳೊಂದಿಗಿನ ಸಂಬಂಧವನ್ನು ಕಡಿತಗೊಳಿಸಿಸಿದ್ದರು. ತ್ವಿಶಾ ಪೋಷಕರು ಆಕೆಯನ್ನು ಚಿಕ್ಕ ವಯಸ್ಸಿನಲ್ಲೇ ಗ್ಲಾಮರ್ ಜಗತ್ತಿಗೆ ತಳ್ಳಿದರು. ನಂತರ ಆಕೆಯನ್ನು ಕೈಬಿಟ್ಟರುʼʼ ಎಂಬುದು ಅತ್ತೆಯ ಆರೋಪ. ʼʼಅಲ್ಲದೆ, ಗರ್ಭ ಧರಿಸಿದ್ದಾಗ ಹೆಚ್ಚಿನ ಪ್ರಮಾಣದಲ್ಲಿ ಗಾಂಜಾ ಸೇವಿಸಿದ್ದಾಗಿ ತ್ವಿಶಾ ಒಪ್ಪಿಕೊಂಡಿದ್ದಾಳೆʼʼ ಎಂದು ಸಿಂಗ್ ಗಂಭೀರ ಆರೋಪ ಮಾಡಿದ್ದಾರೆ.
ʼʼಇದು ನಮಗೆ ತುಂಬಲಾರದ ನಷ್ಟ. ಪರಿಸ್ಥಿತಿ ಏನೇ ಇದ್ದರೂ, ಅವಳು ನಮ್ಮ ಕುಟುಂಬದ ಭಾಗವಾಗಿದ್ದಳು. ಅವಳು ಕೌನ್ಸೆಲಿಂಗ್‌ಗೂ ಹೋಗಿದ್ದಳು. ಆಕೆಗೆ ಸ್ಕಿಜೋಫ್ರೇನಿಯಾ (ತೀವ್ರ ಮಾನಸಿಕ ಅಸ್ವಸ್ಥತೆ) ರೋಗಿಗಳಿಗೆ ನೀಡುವ ಔಷಧಿಗಳನ್ನು ಸೂಚಿಸಲಾಗಿತ್ತು. ಅವಳು ಒಂದು ದಿನದ ಮಟ್ಟಿಗೆ ಸ್ಥಿರವಾಗಿರುತ್ತಿದ್ದಳು. ಆದರೆ ನಂತರ ಮತ್ತೆ ಅವಳ ಸ್ಥಿತಿಯಲ್ಲಿ ಸ್ವಲ್ಪ ಬದಲಾವಣೆಯಾಗುತ್ತಿತ್ತು. ನಾವು ಕೆಲವು ದೈಹಿಕ ಲಕ್ಷಣಗಳನ್ನು ಗಮನಿಸಿದ್ದೆವು. ಅವಳ ಕೈಗಳಲ್ಲಿ ಸ್ವಲ್ಪ ನಡುಕವಿರುತ್ತಿತ್ತು. ಇದು ಸಾಮಾನ್ಯವಾಗಿ ಮಾದಕವಸ್ತು ವ್ಯಸನ ಮುಕ್ತವಾಗುವಾಗ ಕಂಡುಬರುವ ಲಕ್ಷಣʼʼ ಎಂದು ಹೇಳಿದ್ದಾರೆ.
ತಂದೆಯ ವಾದವೇನು?
ಇತ್ತ ತ್ವಿಶಾ ತಂದೆ, ಮಗಳು ವರದಕ್ಷಿಣೆ ಕಿರುಕುಳಕ್ಕೆ ಬಲಿಯಾಗಿದ್ದಾಗಿ ತಿಳಿಸಿದ್ದಾರೆ. ʼʼಡೇಟಿಂಗ್ ಆ್ಯಪ್‌ನಲ್ಲಿ ಪರಿಚಯವಾದ ಇಬ್ಬರೂ, ಕೊನೆಗೆ ಮನೆಯವರಿಗೆ ವಿಚಾರ ತಿಳಿಸಿದರು. ಎಲ್ಲರೂ ಒಪ್ಪಿ ಮದುವೆ ಮಾಡಿದೆವು. ವಿವಾಹವಾದ ಹೊಸತರಲ್ಲಿ ಪರೋಕ್ಷವಾಗಿ ಅತ್ತೆ ಮನೆಯವರು ವರದಕ್ಷಿಣೆಗೆ ಬೇಡಿಕೆ ಇಟ್ಟಿದ್ದರು. ಕೊನೆಗೆ ಆಕೆಯನ್ನು ಅಪಹಾಸ್ಯ, ವ್ಯಂಗ್ಯ ಮಾಡಲಾಯಿತುʼʼ ಎಂದು ಅವರು ಆರೋಪಿಸಿದ್ದಾರೆ.