ಸ್ವಾತಂತ್ರ್ಯೋತ್ಸವ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Mumbai Monorail Stuck: ಮುಂಬೈಯಲ್ಲಿ ಭಾರಿ ಮಳೆ; ವಿದ್ಯುತ್‌ ಕೂಟ್ಟು ಮಧ್ಯದಲ್ಲೇ ನಿಂತ ಮೋನೋರೈಲು: ಕಿಟಕಿ ಒಡೆದು ಪ್ರಯಾಣಿಕರ ರಕ್ಷಣೆ

Mumbai Rain: ಮಂಗಳವಾರ (ಆಗಸ್ಟ್‌ 19) ಮುಂಬೈಯಲ್ಲಿ ಮೋನೋರೈಲು ಕೆಟ್ಟು ನಿಂತು ಕೆಲವು ಗಂಟೆಗಳ ಕಾಲ ಅತಂಕದ ವಾತಾವರಣ ನಿರ್ಮಾಣವಾಯ್ತು. ಬಳಿಕ ಅಗ್ನಿ ಶಾಮಕ ದಳದ ಸಿಬ್ಬಂದಿ ಆಗಮಿಸಿ ಗಾಜಿನ ಕಿಟಕಿ ಒಡೆದು ಪ್ರಯಾಣಿಕರನ್ನು ರಕ್ಷಿಸಿದರು.

ವಿದ್ಯುತ್‌ ಕೂಟ್ಟು ಮಧ್ಯದಲ್ಲೇ ನಿಂತ ಮೋನೋರೈಲು: ಪ್ರಯಾಣಿಕರ ರಕ್ಷಣೆ

Ramesh B Ramesh B Aug 19, 2025 9:37 PM

ಮುಂಬೈ: ಮಹಾರಾಷ್ಟ್ರದಲ್ಲಿ ಧಾರಾಕಾರ ಮಳೆಯಾಗುತ್ತಿದ್ದು (Mumbai Rain), ಮಂಗಳವಾರ (ಆಗಸ್ಟ್‌ 19) ಮುಂಬೈಯಲ್ಲಿ ಮೋನೋರೈಲು ಕೆಟ್ಟು (Mumbai Monorail Stuck) ನಿಂತು ಕೆಲವು ಗಂಟೆಗಳ ಕಾಲ ಅತಂಕದ ವಾತಾವರಣ ನಿರ್ಮಾಣವಾಯ್ತು. ವಿದ್ಯುತ್‌ ಸರಬರಾಜು ವ್ಯತ್ಯಯದಿಂದ ಮೋನೋರೈಲು ಅರ್ಧದಲ್ಲೇ ಬಾಕಿಯಾಗಿದ್ದು, ಸುಮಾರು 200 ಪ್ರಯಾಣಿಕರು ಅದರೊಳಗೆ ಸಿಲುಕಿಕೊಂಡಿದ್ದರು. ಮಾನೋರೈಲು ಎತ್ತರದ ಕಾರಿಡಾರ್‌ನಲ್ಲಿ ಸಿಲುಕಿಕೊಂಡಿದ್ದರಿಂದ, ಅಗ್ನಿಶಾಮಕ ದಳದ ಸಿಬ್ಬಂದಿ 3 ಹೈಡ್ರಾಲಿಕ್ ಏಣಿಗಳನ್ನು ಬಳಸಿ, ಕಿಟಕಿಗಳನ್ನು ಒಡೆದು ಪರಯಾಣಿಕರನ್ನು ರಕ್ಷಿಸಿದ್ದಾರೆ. ಸದ್ಯ ಕಾರ್ಯಾಚರಣೆ ಮುಂದುವರಿದಿದೆ.

ಮಧ್ಯ ಮುಂಬೈಯ ಚೆಂಬೂರ್ ಮತ್ತು ಭಕ್ತಿ ಪಾರ್ಕ್ ನಿಲ್ದಾಣಗಳ ನಡುವೆ ಸಂಜೆ 6.15ಕ್ಕೆ ಮೋನೋರೈಲು ಸಿಕ್ಕಿಹಾಕಿಕೊಂಡಿತು. ಸರಿಯಾಗಿ ಗಾಳಿಯಾಡದ ಹಿನ್ನೆಲೆಯಲ್ಲಿ ಪ್ರಯಾಣಿಕರು ಗಾಜಿನ ಕಿಟಕಿಗಳನ್ನು ಒಡೆಯಲು ಪ್ರಯತ್ನಿಸುತ್ತಿರುವ ವಿಡಿಯೊ ಕೂಡ ಹರಿದಾಡುತ್ತಿದೆ.



ಈ ಸುದ್ದಿಯನ್ನೂ ಓದಿ: Voice President: ಉಪರಾಷ್ಟ್ರಪತಿ ಚುನಾವಣೆ; ಇಂಡಿಯಾ ಬ್ಲಾಕ್‌ನಿಂದ ಸುಪ್ರೀಂ ನಿವೃತ್ತ ನ್ಯಾಯಮೂರ್ತಿ ಸುದರ್ಶನ ರೆಡ್ಡಿ ಕಣಕ್ಕೆ



ಆಸ್ಪತ್ರೆಗೆ ದಾಖಲು

ಪ್ರಯಾಣಿಕರನ್ನು ರಕ್ಷಿಸಿದ ಅಗ್ನಿ ಶಾಮಕ ದಳದ ಸಿಬ್ಬಂದಿ ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದ ಕೆಲವು ಪ್ರಯಾಣಿಕರನ್ನು ಆಂಬ್ಯುಲೆನ್ಸ್‌ಗಳಲ್ಲಿ ಚಿಕಿತ್ಸೆಗಾಗಿ ಆಸ್ಪತ್ರೆಗಳಿಗೆ ಕರೆದೊಯ್ದಿದ್ದಾರೆ ಎಂದು ಮೂಲಗಳು ತಿಳಿಸಿವೆ. ರಕ್ಷಣಾ ಕಾರ್ಯಾಚರಣೆಯ ವಿಡಿಯೊದಲ್ಲಿ ಸಿಬ್ಬಂದಿ ಮುರಿದ ಕಿಟಕಿಗಳ ಮೂಲಕ ಹತ್ತಿ ಪ್ರಯಾಣಿಕರನ್ನು ಸುರಕ್ಷಿತವಾಗಿ ಕೆಳಗಿಳಿಸುತ್ತಿರುವುದು ಕಂಡು ಬಂದಿದೆ.

ಘಟನೆ ಬಗ್ಗೆ ಮಾಧ್ಯಮಗಳ ಜತೆ ಮಾತನಾಡಿದ ಉಪಮುಖ್ಯಮಂತ್ರಿ ಏಕನಾಥ್ ಶಿಂಧೆ, ಎಲ್ಲ ಪ್ರಯಾಣಿಕರು ಅಪಾಯದಿಂದ ಪಾರಾಗಿದ್ದು, ಆತಂಕಗೊಳ್ಳುವ ಅಗತ್ಯವಿಲ್ಲ ಎಂದಿದ್ದಾರೆ. "150ಕ್ಕೂ ಹೆಚ್ಚು ಪ್ರಯಾಣಿಕರನ್ನು ರಕ್ಷಿಸಲಾಗಿದೆ. ಭಾರಿ ಮಳೆಯಿಂದಾಗಿ ಹಾರ್ಬರ್ ಮಾರ್ಗವು ಮುಚ್ಚಲ್ಪಟ್ಟಿದ್ದರಿಂದ ಮೋನೋರೈಲಿನಲ್ಲಿ ಅದರ ಸಾಮರ್ಥ್ಯಕ್ಕಿಂತ ಹೆಚ್ಚಿನ ಪ್ರಯಾಣಿಕರು ತುಂಬಿದ್ದರು. ಇದರಿಂದ ರೇಕ್ ಸ್ವಲ್ಪ ಜರುಗಿ ವಿದ್ಯುತ್ ಸರಬರಾಜು ಸ್ಥಗಿತಗೊಂಡಿತು. ಹೀಗಾಗಿ ರೈಲು ಸ್ಥಗಿತಗೊಂಡಿತು. ಪ್ರಯಾಣಿಕರ ರಕ್ಷಣೆ ನಮ್ಮ ಆದ್ಯತೆʼʼ ಎಂದು ತಿಳಿಸಿದ್ದಾರೆ.

"ಪ್ರಯಾಣಿಕರಿಗೆ ಅಗತ್ಯ ವೈದ್ಯಕೀಯ ನೆರವು ನೀಡಲಾಗುತ್ತಿದೆ ಮತ್ತು ಆಂಬ್ಯುಲೆನ್ಸ್‌ಗಳು ಸಹ ಸ್ಥಳದಲ್ಲಿವೆ. ಪ್ರಯಾಣಿಕರಲ್ಲಿ ಭಯಭೀತರಾಗಬೇಡಿ ಮತ್ತು ತಾಳ್ಮೆಯಿಂದಿರಿ ಎಂದು ನಾನು ಮನವಿ ಮಾಡುತ್ತೇನೆ. ಮೊದಲೇ ಹೇಳಿದಂತೆ ನಮ್ಮ ಆದ್ಯತೆ ಎಲ್ಲರನ್ನೂ ರಕ್ಷಿಸುವುದು" ಎಂದು ಅವರು ಹೇಳಿದ್ದಾರೆ.

ಇನ್ನು ರೈಲಿನೊಳೆ ಸಿಲುಕಿಕೊಂಡ ಪ್ರಯಾಣಿಕರು ಸೋಶಿಯಲ್‌ ಮೀಡಿಯಾ ಮೂಲಕ ತಮ್ಮ ಆತಂಕ ವ್ಯಕ್ತಪಡಿಸಿದ್ದಾರೆ. ಏಸಿ ವ್ಯವಸ್ಥೆ ಬಂದ್‌ ಆಗಿದ್ದರಿಂದ ಉಸಿರುಗಟ್ಟುವ ವಾತಾವರಣ ನಿರ್ಮಾಣವಾಗಿದೆ ಎಂದು ಕೆಲವರು ತಿಳಿಸಿದ್ದರು.

ʼʼನಾನು ಮೋನೋರೈಲಿನೊಳಗೆ ಸಿಲುಕಿ ಸುಮಾರು 1 ಗಂಟೆ 45 ನಿಮಿಷವಾಗಿದೆ. ಅಧಿಕಾರಿಗಳಿಂದ ಯಾವುದೇ ಸ್ಪಂದನೆ ದೊರೆಯದ ಹಿನ್ನೆಲೆಯಲ್ಲಿ ಪ್ರಯಾಣಿಕರು ಆತಂಕಗೊಂಡಿದ್ದಾರೆ. ಕೆಲವರು ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದು, ಗಾಜಿನ ಕಿಟಕಿ ಒಡೆಯಲು ಪ್ರಯತ್ನಿಸುತ್ತಿದ್ದಾರೆʼʼ ಎಂದು ಪ್ರಯಾಣಿಕರೊಬ್ಬರು ಅಲ್ಲಿನ ಪರಿಸ್ಥಿತಿನ್ನು ವಿವರಿಸಿದ್ದರು. ಒಳಗೆ ಏಸಿಯಾಗಲಿ, ವಿದ್ಯುತ್‌ ಸಂಪರ್ಕವಾಗಲೀ ಇರಲಿಲ್ಲ ಎಂದು ಮಹಿಳೆಯೊಬ್ಬರು ದೂರಿದ್ದರು. ಕೂಡಲೇ ಸ್ಪಂದಿಸಿದ ಮುಖ್ಯಮಂತ್ರಿ ದೇವೇಂದ್ರ ಫಢ್ನವೀಸ್‌ ಪ್ರಯಾಣಿಕರನ್ನು ಸುರಕ್ಷಿತವಾಗಿ ಕೆಳಗಿಳಿಸುವುದಾಗಿ ಭರವಸೆ ನೀಡಿದ್ದರು. ಜತೆಗೆ ಇದೀಗ ಘಟನೆಯ ತನಿಖೆಗೆ ಆದೇಶ ಹೊರಡಿಸಿದ್ದಾರೆ. ಮಹಾರಾಷ್ಟ್ರದಲ್ಲಿ ಕೆಲವು ದಿನಗಳಿಂದ ಭಾರಿ ಮಳೆಯಾಗುತ್ತಿದ್ದು, ಸೋಮವಾರ ಒಂದೇ ದಿನ ಮುಂಬೈಯಲ್ಲಿ 170 ಮಿಮೀ ಸುರಿದಿದೆ.