ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ನರೇಂದ್ರ ಮೋದಿ ಕಣ್ಣಲ್ಲಿ ಕಣ್ಣಿಟ್ಟು ನೋಡುವುದಿಲ್ಲ: ಸೋನಿಯಾ ಗಾಂಧಿ ಆತ್ಮಕಥೆಯಲ್ಲಿ ಪ್ರಧಾನಿ ಕುರಿತು ಶಾಕಿಂಗ್‌ ಮಾಹಿತಿ

Belonging: A Journey of Love: ಕಾಂಗ್ರೆಸ್‌ ನಾಯಕಿ ಸೋನಿಯಾ ಗಾಂಧಿ ಅವರ 'ಬಿಲಾಂಗಿಂಗ್‌: ಎ ಜರ್ನಿ ಆಫ್ ಲವ್' ಪುಸ್ತಕ ಬಿಡುಗಡೆಯಾಗಿದ್ದು, ಅದರಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಬಗ್ಗೆ ಬರೆದಿರುವ ಭಾಗ ವೈರಲ್‌ ಆಗುತ್ತಿದೆ. ಪ್ರಧಾನಿ ತಮ್ಮ ಎದುರು ಬಂದಾಗ ಕಣ್ಣಲ್ಲಿ ಕಣ್ಣಿಟ್ಟು ನೋಡುವುದನ್ನು ತಪ್ಪಿಸುತ್ತಾರೆ ಎಂದು ಉಲ್ಲೇಖಿಸಿದ್ದಾರೆ.

ಆತ್ಮಕಥೆಯಲ್ಲಿ ನರೇಂದ್ರ ಮೋದಿ ಬಗ್ಗೆ ಸೋನಿಯಾ ಗಾಂಧಿ ಹೇಳಿದ್ದೇನು?

ನರೇಂದ್ರ ಮೋದಿ ಮತ್ತು ಸೋನಿಯಾ ಗಾಂಧಿ (ಸಂಗ್ರಹ ಚಿತ್ರ) -

Ramesh Ballamoole
Ramesh Ballamoole Nov 11, 2026 9:10 PM

ದೆಹಲಿ, ನ. 11: ಹಲವು ದಶಕಗಳಿಂದ ದೇಶದ ರಾಜಕೀಯ ಅಖಾಡದಲ್ಲಿ ಪರಸ್ಪರ ಎದುರಾಳಿಗಳಾಗಿರುವ ಪ್ರಧಾನಿ ನರೇಂದ್ರ ಮೋದಿ ಅವರ ಕುರಿತು ಸೋನಿಯಾ ಗಾಂಧಿ ತಮ್ಮ ಆತ್ಮ ಚರಿತ್ರೆಯಲ್ಲಿ ಬರೆದುಕೊಂಡಿದ್ದಾರೆ. ಸೋನಿಯಾ ಗಾಂಧಿ ಈ ಬಗ್ಗೆ ತಿಳಿಸಿದ್ದು, ನರೇಂದ್ರ ಮೋದಿ ಅವರೊಂದಿಗೆ ತಮ್ಮ ಸಂವಹನ ಅತ್ಯಂತ ಸೀಮಿತವಾಗಿದ್ದು, ಇಬ್ಬರೂ ಭಾರತದ ಬಗ್ಗೆ ಸಂಪೂರ್ಣವಾಗಿ ವಿಭಿನ್ನ ದೃಷ್ಟಿಕೋನಗಳನ್ನು ಹೊಂದಿರುವುದಾಗಿ ಹೇಳಿದ್ದಾರೆ. ಅಷ್ಟೇ ಅಲ್ಲದೆ, ತಾವಿಬ್ಬರೂ ಭೇಟಿಯಾದಾಗ ಮೋದಿ ತಮ್ಮ ಕಣ್ಣಿನಲ್ಲಿ ಕಣ್ಣಿಟ್ಟು ಮಾತನಾಡುವುದಿಲ್ಲ ಎಂದು ಉಲ್ಲೇಖಿಸಿದ್ದಾರೆ.

ನವೆಂಬರ್‌ 10ರಂದು ದೇಶಾದ್ಯಂತ ಸೋನಿಯಾ ಗಾಂಧಿ ಅವರ 544 ಪುಟಗಳ ಬಹುನಿರೀಕ್ಷಿತ ಆತ್ಮಕಥೆ 'ಬಿಲಾಂಗಿಂಗ್: ಎ ಜರ್ನಿ ಆಫ್ ಲವ್' ಬಿಡುಗಡೆಯಾಗಿದ್ದು, ಅದರಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ರಾಜಕೀಯ ಬೆಳವಣಿಗೆ, ಸೈದ್ಧಾಂತಿಕ ಸಂಘರ್ಷ ಹಾಗೂ ಇಬ್ಬರ ನಡುವಿನ ಸಮಾನ ಅಂಶಗಳ ಕುರಿತು ಹಲವು ಆಸಕ್ತಿಕರ ಸಂಗತಿಗಳನ್ನು ಹಂಚಿಕೊಳ್ಳಲಾಗಿದೆ.

ಮೋದಿ ಕಣ್ಣಲ್ಲಿ ಕಣ್ಣಿಟ್ಟು ನೋಡುವುದಿಲ್ಲ

ಪ್ರಧಾನಿ ನರೇಂದ್ರ ಮೋದಿ ಅವರೊಂದಿಗಿನ ಒಡನಾಟದ ಕುರಿತು ಬರೆದುಕೊಂಡಿರುವ ಸೋನಿಯಾ ಗಾಂಧಿ, "ಮೋದಿ ಅವರೊಂದಿಗೆ ನೇರವಾದ ಒಡನಾಟ ಬಹಳ ಕಡಿಮೆ. ಅಧಿಕೃತ ಸಭೆಗಳಲ್ಲಿ ಮಾತ್ರ ಭೇಟಿಯಾಗುತ್ತೇವೆ. ಎದುರು ಬಂದಾಗ ಒಬ್ಬರನ್ನೊಬ್ಬರು ಔಪಚಾರಿಕವಾಗಿ 'ನಮಸ್ಕಾರ'ದೊಂದಿಗೆ ಸ್ವಾಗತಿಸುತ್ತೇವೆ. ಈ ಹಿಂದೆ ಪಕ್ಷಭೇದ ಮರೆತು ವಿರೋಧ ಪಕ್ಷದ ನಾಯಕರು ಪರಸ್ಪರ ಸೌಹಾರ್ದತೆಯಿಂದ ಬೆರೆಯುತ್ತಿದ್ದರು. ಆದರೆ ಈ ವಾತಾವರಣ ಈಗ ಬದಲಾಗಿದೆ. ಸಣ್ಣ-ಪುಟ್ಟ ಮಾತುಕತೆ ಹೊರತುಪಡಿಸಿ, ನಾವು ಎಂದಿಗೂ ಸಂಭಾಷಣೆ ನಡೆಸಿಲ್ಲ. ಆದರೂ ಹುಟ್ಟುಹಬ್ಬ ಮತ್ತು ಹೊಸ ವರ್ಷದ ಶುಭಾಶಯಗಳನ್ನು ಔಪಚಾರಿಕವಾಗಿ ವಿನಿಮಯ ಮಾಡಿಕೊಂಡಿದ್ದೇವೆʼʼ ಎಂದು ಹೇಳಿದ್ದಾರೆ. ʼʼಅವರು ಮುಖಾಮುಖಿಯಾದಾಗ ನನ್ನ ಕಣ್ಣಲ್ಲಿ ಕಣ್ಣಿಟ್ಟು ನೋಡುವುದನ್ನು ತಪ್ಪಿಸಿ ಬೇರೆ ಕಡೆ ದೃಷ್ಟಿ ಹರಿಸುತ್ತಾರೆ" ಎಂದು ವಿವರಿಸಿದ್ದಾರೆ.

1999ರಲ್ಲಿ ಸರ್ಕಾರ ರಚಿಸಲು ಮುಂದಾಗಿ ಕೈ ಸುಟ್ಟುಕೊಂಡಿದ್ದ ಸೋನಿಯಾ ಗಾಂಧಿ; ʼಆತುರದʼ ಈ ನಿರ್ಧಾರಕ್ಕೆ ಕಾರಣವೇನಾಗಿತ್ತು?

ದೇಶದ ಭವಿಷ್ಯಕ್ಕಾಗಿ ಇಬ್ಬರ ಪೈಪೋಟಿ: ಸೋನಿಯಾ ಗಾಂಧಿ

ತಮ್ಮ ಹಾಗೂ ಪ್ರಧಾನಿ ಮೋದಿ ನಡುವಿನ ರಾಜಕೀಯ ಪೈಪೋಟಿಯು ದೇಶದ ಭವಿಷ್ಯದ ಬಗೆಗಿನ ದೃಷ್ಟಿಕೋನದ ಭಿನ್ನಾಭಿಪ್ರಾಯವೇ ಹೊರತು ಯಾವುದೇ ವೈಯಕ್ತಿಕ ದ್ವೇಷವಲ್ಲ ಎಂದು ಸೋನಿಯಾ ಸ್ಪಷ್ಟಪಡಿಸಿದ್ದಾರೆ. "ಅವರು ಭಾರತದ ಬಗೆಗಿನ ತಮ್ಮ ದೃಷ್ಟಿಕೋನಕ್ಕಾಗಿ ಹೋರಾಡುತ್ತಿದ್ದರು, ನಾನು ನನ್ನ ದೃಷ್ಟಿಕೋನಕ್ಕಾಗಿ ಹೋರಾಡುತ್ತಿದ್ದೆ. ನನ್ನ ಹೋರಾಟವು ಏಕಸ್ವಾಮ್ಯದ ಆಡಳಿತದ ವಿರುದ್ಧ, ಎಲ್ಲರನ್ನೂ ಒಳಗೊಳ್ಳುವಿಕೆ, ಜಾತ್ಯತೀತತೆ ಮತ್ತು ಸಾಮಾಜಿಕ ನ್ಯಾಯದ ಪರವಾದ ಭಾರತಕ್ಕಾಗಿ ಆಗಿತ್ತು" ಎಂದು ಅವರು ಬರೆದಿದ್ದಾರೆ.

ಜತೆಗೆ ನರೇಂದ್ರ ಮೋದಿ ಅತ್ಯಂತ ಸಾಮಾನ್ಯ ಮತ್ತು ಬಡ ಕುಟುಂಬದ ಹಿನ್ನೆಲೆಯಿಂದ ಬಂದು, ಆರ್‌ಎಸ್‌ಎಸ್ ಸಂಘಟನೆಯ ಮೂಲಕ ಹಂತ-ಹಂತವಾಗಿ ಮೇಲಕ್ಕೇರಿ ಅಧಿಕಾರದ ಉತ್ತುಂಗಕ್ಕೇರಿದ ನಾಯಕ ಎಂಬುದನ್ನು ಸೋನಿಯಾ ಗುರುತಿಸಿದ್ದಾರೆ. ಭಾರತದ ಮೊದಲ ಪ್ರಧಾನಿ ಜವಾಹರಲಾಲ್ ನೆಹರೂ ಅವರನ್ನು ಮೋದಿ ಪದೇ ಪದೆ ಟೀಕಿಸಲು, ಆರ್‌ಎಸ್‌ಎಸ್‌ನಲ್ಲಿ ಅವರು ಬೆಳೆದು ಬಂದ ಪರಿಸರ ಮತ್ತು ಅಲ್ಲಿ ಪಡೆದ ಸೈದ್ಧಾಂತಿಕ ತರಬೇತಿಯ ಪ್ರಭಾವವೇ ಕಾರಣ ಎಂದು ಸೋನಿಯಾ ಗಾಂಧಿ ತಮ್ಮ ಆತ್ಮಕಥೆಯಲ್ಲಿ ವಿಶ್ಲೇಷಿಸಿದ್ದಾರೆ.