ಆರ್‌ಎಸ್‌ಎಸ್ ಸ್ಥಾಪನೆ, ಅಹ್ಮದ್ ಪಟೇಲ್ ನಿಧನದ ಬಗ್ಗೆ ತಪ್ಪು ಮಾಹಿತಿ: ಸೋನಿಯಾ ಗಾಂಧಿ ಆತ್ಮಕಥೆಯಲ್ಲಿ ಸಾಲು ಸಾಲು ದೋಷ
Sonia Gandhi's Memoir: ಸೋನಿಯಾ ಗಾಂಧಿ ಅವರ ಆತ್ಮಚರಿತ್ರೆ ಅಧಿಕೃತವಾಗಿ ಬಿಡುಗಡೆಯಾಗಿದ್ದು, ತಮ್ಮ ಜೀವನದ ಪ್ರಮುಖ ಘಟನೆಗಳ ಕುರಿತು ಅವರು ಪುಸ್ತಕದಲ್ಲಿ ವಿವರಿಸಿದ್ದಾರೆ. ಆದರೆ ಆತ್ಮಕಥೆಯಲ್ಲಿ ಪ್ರಮುಖ ಘಟನೆಗಳ ಕುರಿತ ವರ್ಷ ಮತ್ತು ದಿನಾಂಕಗಳನ್ನು ತಪ್ಪಾಗಿ ಉಲ್ಲೇಖಿಸಲಾಗಿದೆ ಎಂಬ ಆರೋಪ ಕೇಳಿಬಂದಿದ್ದು, ದೇಶಾದ್ಯಂತ ಭಾರಿ ಚರ್ಚೆಗೆ ಗ್ರಾಸವಾಗಿದೆ. ಈ ದೋಷಗಳು ಪುಸ್ತಕದ ವಿಶ್ವಾಸಾರ್ಹತೆಯ ಬಗ್ಗೆ ಪ್ರಶ್ನೆ ಮೂಡಿಸಿದೆ.
ಸೋನಿಯಾ ಗಾಂಧಿ ಮತ್ತು ಅಹ್ಮದ್ ಪಟೇಲ್ (ಸಂಗ್ರಹ ಚಿತ್ರ) -
ದೆಹಲಿ, ನ. 11: ಕಾಂಗ್ರೆಸ್‌ನ ಹಿರಿಯ ನಾಯಕಿ ಸೋನಿಯಾ ಗಾಂಧಿ ಅವರ ಆತ್ಮಚರಿತ್ರೆ 'ಬಿಲಾಂಗಿಂಗ್: ಎ ಜರ್ನಿ ಆಫ್ ಲವ್' ಬಿಡುಗಡೆಯಾಗಿದ್ದು, ಹಲವು ಚರ್ಚೆಗಳಿಗೆ ನಾಂದಿ ಹಾಡಿದೆ. ಸೋನಿಯಾ ಗಾಂಧಿ ಅವರ ವೈಯಕ್ತಿಕ ಮತ್ತು ರಾಜಕೀಯ ಜೀವನದ ಹಲವು ಘಟನೆಗಳನ್ನು ಹಾಗೂ ಅನುಭವಗಳನ್ನು ಒಳಗೊಂಡಿರುವ ಈ ಪುಸ್ತಕದಲ್ಲಿ ಪ್ರಮುಖ ಐತಿಹಾಸಿಕ ಘಟನೆಗಳ ದಿನಾಂಕ ಮತ್ತು ವರ್ಷಗಳನ್ನು ತಪ್ಪಾಗಿ ಉಲ್ಲೇಖಿಸಲಾಗಿದೆ ಎಂಬ ಆರೋಪ ಕೇಳಿಬಂದಿದೆ.
ನವೆಂಬರ್ 10ರಂದು ಬಿಡುಗಡೆಯಾಗಿರುವ ಈ ಪುಸ್ತಕವು ಭಾರಿ ಕುತೂಹಲ ಮೂಡಿಸಿದೆ. ಮಾರುಕಟ್ಟೆಗೆ ಬಂದ ನಂತರ ಪುಸ್ತಕವನ್ನು ವಿಮರ್ಶಿಸಿರುವ ಓದುಗರು ಸಾಲು ಸಾಲು ತಪ್ಪುಗಳನ್ನು ಉಲ್ಲೇಖಿಸಿದ್ದಾರೆ. ಇದು ಪುಸ್ತಕದ ವಿಶ್ವಾಸಾರ್ಹತೆಯ ಕುರಿತು ಪ್ರಶ್ನೆ ಮೂಡಿಸಿದೆ.
ಅಣ್ಣಾ ಹಜಾರೆ ಚಳುವಳಿ ವರ್ಷದಲ್ಲಿ ತಪ್ಪು
ಆತ್ಮಕಥೆಯ 33ನೇ ಅಧ್ಯಾಯದ 461ನೇ ಪುಟದಲ್ಲಿ ದೇಶಾದ್ಯಂತ ಭ್ರಷ್ಟಾಚಾರದ ವಿರುದ್ಧ ತೀವ್ರ ಸಂಚಲನ ಮೂಡಿಸಿದ್ದ, ಯುಪಿಎ ಸರ್ಕಾರದ ಬುನಾದಿಯನ್ನೇ ಅಲ್ಲಾಡಿಸಿದ್ದ ಅಣ್ಣಾ ಹಜಾರೆ ಅವರ ಐತಿಹಾಸಿಕ ಉಪವಾಸ ಸತ್ಯಾಗ್ರಹ ಮತ್ತು ಲೋಕಪಾಲ್ ಚಳುವಳಿ ನಡೆದಿದ್ದು 2011ರಲ್ಲಿ. ಆದರೆ ಪುಸ್ತಕದಲ್ಲಿ ಈ ಚಳುವಳಿಯ ವರ್ಷ ಹಾಗೂ ಅದು ನಡೆದ ಕಾಲಾವಧಿಯ ದಿನಾಂಕಗಳನ್ನು 2012 ಎಂದು ತಪ್ಪಾಗಿ ದಾಖಲಿಸಲಾಗಿದೆ.
ಅಹ್ಮದ್ ಪಟೇಲ್ ನಿಧನ ವರ್ಷ ತಪ್ಪು
ಸೋನಿಯಾ ಗಾಂಧಿ ಅವರಿಗೆ ಆಪ್ತರಾಗಿದ್ದ ಹಾಗೂ ರಾಜಕೀಯ ಕಾರ್ಯದರ್ಶಿಯಾಗಿದ್ದ ಹಿರಿಯ ಕಾಂಗ್ರೆಸ್ ನಾಯಕ ಅಹ್ಮದ್ ಪಟೇಲ್ ಅವರ ನಿಧನದ ವರ್ಷವನ್ನು ಪುಸ್ತಕದಲ್ಲಿ ತಪ್ಪಾಗಿ ಬರೆಯಲಾಗಿದೆ. ಆತ್ಮಕಥೆಯ 29ನೇ ಅಧ್ಯಾಯದ 401ನೇ ಪುಟದಲ್ಲಿ ಅಹ್ಮದ್ ಪಟೇಲ್ 2022ರಲ್ಲಿ ನಿಧನರಾದರು ಎಂದು ಬರೆಯಲಾಗಿದೆ. ಆದರೆ ಅಹ್ಮದ್ ಪಟೇಲ್ 2020ರಲ್ಲಿ ಕೋವಿಡ್ ಸೋಂಕಿನಿಂದ ಚಿಕಿತ್ಸೆ ಫಲಿಸದೆ ಅಂಗಾಂಗ ವೈಫಲ್ಯದಿಂದ ಮೃತಪಟ್ಟಿದ್ದರು.
ಆರ್‌ಎಸ್‌ಎಸ್ ಸ್ಥಾಪನೆ ವರ್ಷದಲ್ಲಿ ತಪ್ಪು
ಪುಸ್ತಕದ 24ನೇ ಅಧ್ಯಾಯದ 338ನೇ ಪುಟದಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘ 1921ರಲ್ಲಿ ಸ್ಥಾಪನೆಯಾಯಿತು ಎಂದು ಉಲ್ಲೇಖಿಸಲಾಗಿದೆ. ಆದರೆ ಆರ್‌ಎಸ್‌ಎಸ್ ಸ್ಥಾಪನೆಯಾಗಿದ್ದು 1925ರ ಸೆಪ್ಟೆಂಬರ್ 27ರಂದು. ಜತೆಗೆ ಆರ್‌ಎಸ್‌ಎಸ್‌ನ ಸಿದ್ಧಾಂತ ಮತ್ತು ರಾಜಕೀಯ ನಿಲುವುಗಳ ಕುರಿತು ಸೋನಿಯಾ ಗಾಂಧಿ ತಮ್ಮ ಪುಸ್ತಕದಲ್ಲಿ ಟೀಕಿಸಿದ್ದಾರೆ.
ಗುಜರಾತ್ ರಾಜಧಾನಿ ಹೆಸರು ತಪ್ಪು
2002ರಲ್ಲಿ ಗುಜರಾತಿನಲ್ಲಿ ನಡೆದ ಗಲಭೆ ಕುರಿತು ಬರೆದಿರುವ ಭಾಗದಲ್ಲಿ ರಾಜ್ಯದ ರಾಜಧಾನಿ ಹೆಸರನ್ನು ಅಹಮದಾಬಾದ್ ಎಂದು ಉಲ್ಲೇಖಿಸಲಾಗಿದೆ. ಆದರೆ ಗುಜರಾತ್‌ನ ರಾಜಧಾನಿ ಗಾಂಧಿನಗರ. 1970ರಿಂದ ಗಾಂಧಿನಗರವೇ ರಾಜ್ಯದ ರಾಜಧಾನಿಯಾಗಿದೆ. ಅಹಮದಾಬಾದ್ ಗುಜರಾತ್‌ನ ಪ್ರಮುಖ ನಗರವಾಗಿದ್ದರೂ ರಾಜಧಾನಿಯಲ್ಲ.
ಪುಸ್ತಕದ ವಿಶ್ವಾಸಾರ್ಹತೆ ಕುರಿತು ಪ್ರಶ್ನೆ
ಸೋನಿಯಾ ಗಾಂಧಿ ಅವರ ಆತ್ಮಚರಿತ್ರೆ 544 ಪುಟಗಳನ್ನು ಒಳಗೊಂಡಿದೆ. ಇದರಲ್ಲಿ ಸೋನಿಯಾ ಗಾಂಧಿ ನೆಹರೂ-ಗಾಂಧಿ ಕುಟುಂಬದ ಅನುಭವಗಳ ಕುರಿತು, ರಾಜೀವ್ ಗಾಂಧಿ ಅವರೊಂದಿಗಿನ ಬದುಕು, ಪ್ರಮುಖ ರಾಜಕೀಯ ಜೀವನದ ಕುರಿತು ಅಭಿಪ್ರಾಯವನ್ನು ಬರೆದಿದ್ದಾರೆ. ಆದರೆ ಇದೀಗ ಪುಸ್ತಕದಲ್ಲಿ ಪ್ರಮುಖ ಘಟನೆಗಳ ವರ್ಷ ಮತ್ತು ದಿನಾಂಕಗಳನ್ನು ತಪ್ಪಾಗಿ ಉಲ್ಲೇಖಿಸಿರುವ ಕಾರಣ ಪುಸ್ತಕದ ನಿಖರತೆ ಮತ್ತು ವಿಶ್ವಾಸಾರ್ಹತೆ ಕುರಿತು ಪ್ರಶ್ನೆ ಎದ್ದಿವೆ.