ʼವಂದೇ ಮಾತರಂʼ ಮಸೂದೆಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅಂಕಿತ: ಇನ್ಮುಂದೆ ಸಿಗಲಿದೆ ಕಾನೂನು ರಕ್ಷಣೆ
President gives assent to Vande Mataram Bill: ರಾಷ್ಟ್ರಪತಿ ದ್ರೌಪದಿ ಮುರ್ಮು ವಂದೇ ಮಾತರಂ ಮಸೂದೆಗೆ ಒಪ್ಪಿಗೆ ನೀಡಿದ್ದು, ರಾಷ್ಟ್ರೀಯ ಗೀತೆಗೆ ರಾಷ್ಟ್ರಗೀತೆಯಂತೆಯೇ ಕಾನೂನು ರಕ್ಷಣೆ ಸಿಗಲಿದೆ. ರಾಷ್ಟ್ರಪತಿಗಳ ಅಂಕಿತದೊಂದಿಗೆ, ಮಸೂದೆಯು ಕಾನೂನಾಗಿ ಮಾರ್ಪಟ್ಟಿದೆ. ಈಗ ಉಲ್ಲಂಘನೆಯಂತಹ ಅಪರಾಧಗಳಿಗೆ ಮೂರು ವರ್ಷಗಳವರೆಗೆ ಜೈಲು ಶಿಕ್ಷೆ, ದಂಡ ಅಥವಾ ಎರಡನ್ನೂ ವಿಧಿಸಬಹುದಾಗಿದೆ.
ಎಐ ರಚಿತ ಚಿತ್ರ -
ನವದೆಹಲಿ, ಆ. 11: ರಾಷ್ಟ್ರಪತಿ ದ್ರೌಪದಿ ಮುರ್ಮು (President Droupadi Murmu) ವಂದೇ ಮಾತರಂ ಮಸೂದೆಗೆ ಒಪ್ಪಿಗೆ ನೀಡಿದ್ದು, ರಾಷ್ಟ್ರಗೀತೆಯಂತೆಯೇ ಕಾನೂನು ರಕ್ಷಣೆ ಸಿಗಲಿದೆ. ರಾಷ್ಟ್ರೀಯ ಗೌರವಕ್ಕೆ ಅವಮಾನಗಳ ತಡೆಗಟ್ಟುವಿಕೆ (ತಿದ್ದುಪಡಿ) ಮಸೂದೆ, 2026 ಅನ್ನು ಸಂಸತ್ತು ಕಳೆದ ತಿಂಗಳು ಅಂಗೀಕರಿಸಿತು. ಇದು ರಾಷ್ಟ್ರೀಯ ಗೌರವಕ್ಕೆ ಅವಮಾನಗಳ ತಡೆಗಟ್ಟುವಿಕೆ ಕಾಯ್ದೆ, 1971ಕ್ಕೆ ತಿದ್ದುಪಡಿ ತಂದಿದೆ. ಈ ಕಾನೂನು ವಂದೇ ಮಾತರಂಗೆ (Vande Mataram) ರಾಷ್ಟ್ರಗೀತೆಯಾದ ಜನ ಗಣ ಮನದಂತೆಯೇ ಶಾಸನಬದ್ಧ ರಕ್ಷಣೆಯನ್ನು ನೀಡಲಿದೆ.
ರಾಷ್ಟ್ರಪತಿ ಅಂಕಿತದೊಂದಿಗೆ, ಮಸೂದೆಯು ಕಾನೂನಾಗಿ ಮಾರ್ಪಟ್ಟಿದೆ. ಈಗ ಉಲ್ಲಂಘನೆಯಂತಹ ಅಪರಾಧಗಳಿಗೆ ಮೂರು ವರ್ಷಗಳವರೆಗೆ ಜೈಲು ಶಿಕ್ಷೆ, ದಂಡ ಅಥವಾ ಎರಡನ್ನೂ ವಿಧಿಸಬಹುದು. ಇದಕ್ಕೂ ಮೊದಲು, ರಾಷ್ಟ್ರೀಯ ಗೌರವಕ್ಕೆ ಅವಮಾನ ತಡೆ ಕಾಯ್ದೆಯು ರಾಷ್ಟ್ರಗೀತೆ ಜನ ಗಣ ಮನ ಹಾಡುವುದನ್ನು ಉದ್ದೇಶಪೂರ್ವಕವಾಗಿ ತಡೆಯುವುದನ್ನು ಅಥವಾ ಅಂತಹ ಗಾಯನದಲ್ಲಿ ತೊಡಗಿರುವ ಯಾವುದೇ ಸಭೆಗೆ ತೊಂದರೆ ಉಂಟು ಮಾಡುವುದನ್ನು ನಿಷೇಧಿಸಿತ್ತು.
ಈ ಅಪರಾಧಗಳಿಗೆ ಮೂರು ವರ್ಷಗಳವರೆಗೆ ಜೈಲು ಶಿಕ್ಷೆ, ದಂಡ ಅಥವಾ ಎರಡನ್ನೂ ವಿಧಿಸಬಹುದಾಗಿತ್ತು. ಆದರೆ ಎರಡನೇ ಬಾರಿ ಹಾಗೂ ನಂತರದ ಪ್ರತಿ ಅಪರಾಧ ಸಾಬೀತಾದಲ್ಲಿ ಕನಿಷ್ಠ ಒಂದು ವರ್ಷದ ಜೈಲು ಶಿಕ್ಷೆ ವಿಧಿಸಲಾಗುತ್ತಿತ್ತು. ಈ ಹಿಂದಿನ ಕಾನೂನಿನಲ್ಲಿ ವಂದೇ ಮಾತರಂಗೆ ಇದೇ ರೀತಿಯ ರಕ್ಷಣೆ ನೀಡಲಾಗಿರಲಿಲ್ಲ.
ಸ್ವಾತಂತ್ರ್ಯೋತ್ಸವದಲ್ಲಿ ಹೊಸ ಸಂಪ್ರದಾಯ: ರಾಷ್ಟ್ರಗೀತೆಗೆ ಮುನ್ನ ಕೆಂಪುಕೋಟೆಯಲ್ಲಿ ಮೊಳಗಲಿದೆ ‘ವಂದೇ ಮಾತರಂ’
ಈ ಮೊದಲು ವಂದೇ ಮಾತರಂ ಹಾಡನ್ನು ಅವಮಾನಿಸುವುದನ್ನು ತಡೆಯಲು ಯಾವುದೇ ನಿರ್ದಿಷ್ಟ ಕಾನೂನು ಇರಲಿಲ್ಲ. ಇದನ್ನು ರಾಷ್ಟ್ರೀಯ ಗೀತೆ ಎಂದು ಗೌರವಿಸಲಾಗುತ್ತಿತ್ತು. ಇದೀಗ ಯಾವುದೇ ವ್ಯಕ್ತಿ ರಾಷ್ಟ್ರೀಯ ಗೀತೆಯನ್ನು ಹಾಡುವುದನ್ನು ಉದ್ದೇಶಪೂರ್ವಕವಾಗಿ ತಡೆಯುವುದನ್ನು ಅಥವಾ ಅಂತಹ ಗಾಯನದಲ್ಲಿ ತೊಡಗಿರುವ ಯಾವುದೇ ಸಭೆಗೆ ತೊಂದರೆ ಉಂಟು ಮಾಡುವುದನ್ನು ನಿಯಂತ್ರಿಸುವ ಸಲುವಾಗಿ ಕಾಯ್ದೆಯ ಸೆಕ್ಷನ್ 3 ಅನ್ನು ತಿದ್ದುಪಡಿ ಮಾಡಲಾಗಿದೆ. ಇದರಿಂದಾಗಿ ಉಲ್ಲಂಘನೆಯಂತಹ ಕೃತ್ಯಗಳು ಶಿಕ್ಷಾರ್ಹವಾಗುತ್ತದೆ ಎಂದು ಸರ್ಕಾರ ತಿಳಿಸಿದೆ.