Bank Employees Strike: ನಾಳೆ ದೇಶವ್ಯಾಪಿ ಬ್ಯಾಂಕ್ ಮುಷ್ಕರ! ಬ್ಯಾಂಕಿಂಗ್ ಸೇವೆಗಳು ಇರುತ್ತಾ? ಇಲ್ಲಿದೆ ಮಾಹಿತಿ
ಆಲ್ ಇಂಡಿಯಾ ಬ್ಯಾಂಕ್ ಎಂಪ್ಲಾಯೀಸ್ ಅಸೋಸಿಯೇಷನ್, ಆಲ್ ಇಂಡಿಯಾ ಬ್ಯಾಂಕ್ ಆಫೀಸರ್ಸ್ ಅಸೋಸಿಯೇಷನ್ ಮತ್ತು ಬ್ಯಾಂಕ್ ಎಂಪ್ಲಾಯೀಸ್ ಫೆಡರೇಶನ್ ಆಫ್ ಇಂಡಿಯಾ ಸೇರಿದಂತೆ ಪ್ರಮುಖ ಸಂಘಟನೆಗಳು ಸೇರಿ ಫೆ. 12ರಂದು ಮುಷ್ಕರ ನಡೆಸಲು ಮುಂದಾಗಿವೆ.ದೇಶದ ಪ್ರಮುಖ ಬ್ಯಾಂಕ್ ಒಕ್ಕೂಟಗಳು ನಾಳೆ, ಅಂದರೆ ಫೆಬ್ರವರಿ 12ರ ಗುರುವಾರದಂದು ರಾಷ್ಟ್ರವ್ಯಾಪಿ ಮುಷ್ಕರಕ್ಕೆ ಕರೆ ನೀಡಿವೆ. ಈ ಹಿನ್ನೆಲೆಯಲ್ಲಿ ಅಂದು ಬ್ಯಾಂಕ್ ವ್ಯವಹಾರಗಳು ನಡೆಯಲಿವೆಯೇ ಅಥವಾ ಇಲ್ಲವೇ ಎಂಬ ಗೊಂದಲ ಗ್ರಾಹಕರಲ್ಲಿ ಉಂಟಾಗಿದೆ.
ಬ್ಯಾಂಕ್ ಮುಷ್ಕರ -
ಬೆಂಗಳೂರು: ದೇಶದ ಪ್ರಮುಖ ಬ್ಯಾಂಕ್ ಒಕ್ಕೂಟ (bank unions)ಗಳು ನಾಳೆ, ಅಂದರೆ ಫೆಬ್ರವರಿ 12ರ ಗುರುವಾರದಂದು ರಾಷ್ಟ್ರವ್ಯಾಪಿ ಮುಷ್ಕರ (strike)ಕ್ಕೆ ಕರೆ ನೀಡಿವೆ. ಈ ಹಿನ್ನೆಲೆಯಲ್ಲಿ ಅಂದು ಬ್ಯಾಂಕ್ ವ್ಯವಹಾರಗಳು ನಡೆಯಲಿವೆಯೇ ಅಥವಾ ಇಲ್ಲವೇ ಎಂಬ ಗೊಂದಲ ಗ್ರಾಹಕರಲ್ಲಿ ಉಂಟಾಗಿದೆ. ಮುಷ್ಕರದ ಸಂಭವನೀಯ ಪರಿಣಾಮಗಳ ಬಗ್ಗೆ ಬ್ಯಾಂಕ್ ಆಫ್ ಬರೋಡಾ (Bank of Baroda) ಈಗಾಗಲೇ ಬಾಂಬೆ ಸ್ಟಾಕ್ ಎಕ್ಸ್ಚೇಂಜ್ (Bombay Stock Exchange) ಗೆ ಮಾಹಿತಿ ನೀಡಿದೆ.
ಮುಷ್ಕರಕ್ಕೆ ಕರೆ ನೀಡಿದ ಸಂಘಟನೆಗಳು ಯಾವುವು?
ಆಲ್ ಇಂಡಿಯಾ ಬ್ಯಾಂಕ್ ಎಂಪ್ಲಾಯೀಸ್ ಅಸೋಸಿಯೇಷನ್ (AIBEA), ಆಲ್ ಇಂಡಿಯಾ ಬ್ಯಾಂಕ್ ಆಫೀಸರ್ಸ್ ಅಸೋಸಿಯೇಷನ್ (AIBOA) ಮತ್ತು ಬ್ಯಾಂಕ್ ಎಂಪ್ಲಾಯೀಸ್ ಫೆಡರೇಶನ್ ಆಫ್ ಇಂಡಿಯಾ (BEFI) ಸೇರಿದಂತೆ ಪ್ರಮುಖ ಸಂಘಟನೆಗಳು, 10 ಕೇಂದ್ರ ಕಾರ್ಮಿಕ ಸಂಘಟನೆಗಳೊಂದಿಗೆ ಸೇರಿ ಫೆ. 12ರಂದು ಮುಷ್ಕರ ನಡೆಸಲು ಮುಂದಾಗಿವೆ.
ಮುಷ್ಕರಕ್ಕೆ ಮುಖ್ಯ ಕಾರಣಗಳೇನು?
* ಕೇಂದ್ರ ಸರ್ಕಾರ ಕಾರ್ಮಿಕರಿಗೆ ವಿರುದ್ಧವಾದ ನಾಲ್ಕು ಹೊಸ ಕಾರ್ಮಿಕ ಸಂಹಿತೆಗಳ (Labour Codes)ನ್ನು ಜಾರಿಗೆ ತರಲು ಮುಂದಾಗಿರುವುದು
* ಕಾರ್ಮಿಕ ವರ್ಗದ ಮೇಲೆ ಹೆಚ್ಚುತ್ತಿರುವ ದಾಳಿಗಳು
* ಕಾರ್ಮಿಕ ಸಂಘಟನೆಗಳ ನೋಂದಣಿಗೆ ವಿಧಿಸಿರುವ ಕಠಿಣ ನಿಯಮಗಳು
* ಬ್ಯಾಂಕ್ ನೌಕರರ ಕೆಲಸ ಮತ್ತು ವೈಯಕ್ತಿಕ ಜೀವನದ ಸಮತೋಲನಕ್ಕಾಗಿ ವಾರಕ್ಕೆ ಐದು ದಿನಗಳ ಕೆಲಸದ ಅವಧಿಗೆ ಆಗ್ರಹಿಸಿ.
ಬ್ಯಾಂಕ್ ಸಂಘಟನೆಗಳ ಪ್ರಕಾರ, “ಜಾರಿಗೆ ತರಲು ಉದ್ದೇಶಿಸಿರುವ ಕಾರ್ಮಿಕ ಸಂಹಿತೆಗಳು ಸಂಪೂರ್ಣವಾಗಿ ಕಾರ್ಮಿಕರ ವಿರುದ್ಧವಾಗಿವೆ ಮತ್ತು ಟ್ರೇಡ್ ಯೂನಿಯನ್‌ಗಳನ್ನು ನೋಂದಾಯಿಸಲು ಕಠಿಣ ಷರತ್ತುಗಳನ್ನು ವಿಧಿಸಲಾಗಿದೆ” ಎಂದು ತಿಳಿಸಲಾಗಿದೆ.
ಪುತ್ರನ ವಿವಾಹಕ್ಕೆ ಆಮಂತ್ರಿಸಲು ಪ್ರಧಾನಿ ಮೋದಿ ಭೇಟಿಯಾದ ಸಚಿನ್ ತೆಂಡೂಲ್ಕರ್
ಫೆಬ್ರವರಿ 12 ರಂದು ಬ್ಯಾಂಕ್‌ಗಳು ತೆರೆದಿರುತ್ತವೆಯೇ?
ಸದ್ಯಕ್ಕೆ ಭಾರತೀಯ ರಿಸರ್ವ್ ಬ್ಯಾಂಕ್ (RBI) ಆಗಲಿ ಅಥವಾ ಇತರ ಯಾವುದೇ ಪ್ರಮುಖ ಬ್ಯಾಂಕ್‌ಗಳಾಗಲಿ ಫೆಬ್ರವರಿ 12 ರಂದು ಅಧಿಕೃತ ರಜೆ ಘೋಷಿಸಿಲ್ಲ. ಆದ್ದರಿಂದ ತಾಂತ್ರಿಕವಾಗಿ ಬ್ಯಾಂಕ್‌ಗಳು ತೆರೆದಿರುತ್ತವೆ. ಆದರೆ, ನೌಕರರು ಮುಷ್ಕರದಲ್ಲಿ ಪಾಲ್ಗೊಂಡರೆ ಬ್ಯಾಂಕಿಂಗ್ ಸೇವೆಗಳಲ್ಲಿ ವ್ಯತ್ಯಯ ಉಂಟಾಗುವ ಸಾಧ್ಯತೆ ಇದೆ.
ಬಿಎಸ್‌ಇಗೆ ಬ್ಯಾಂಕ್ ಆಫ್ ಬರೋಡಾ ನೀಡಿದ ಎಚ್ಚರಿಕೆ ಏನು?
ಬ್ಯಾಂಕ್ ಆಫ್ ಬರೋಡಾ ಬಿಎಸ್‌ಇಗೆ ಪತ್ರ ಬರೆದಿದ್ದು, "ಮುಷ್ಕರದ ದಿನದಂದು ಬ್ಯಾಂಕಿನ ಶಾಖೆಗಳು ಮತ್ತು ಕಚೇರಿಗಳು ಸುಗಮವಾಗಿ ಕಾರ್ಯನಿರ್ವಹಿಸಲು ಅಗತ್ಯವಿರುವ ಎಲ್ಲಾ ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತಿದೆ. ಆದರೂ, ಮುಷ್ಕರ ನಡೆದರೆ ಬ್ಯಾಂಕಿನ ಕಾರ್ಯನಿರ್ವಹಣೆಯಲ್ಲಿ ವ್ಯತ್ಯಯ ಉಂಟಾಗುವ ಸಾಧ್ಯತೆಯಿದೆ," ಎಂದು ಮುನ್ನೆಚ್ಚರಿಕೆ ನೀಡಿದೆ.
ಈಗಾಗಲೇ ಬ್ಯಾಂಕ್ ಒಕ್ಕೂಟಗಳು ಫೆ. 12ರಂದು ಮುಷ್ಕರಕ್ಕೆ ಕರೆ ನೀಡಿರುವುದರಿಂದ, ಅಂದು ಹಣಕಾಸಿನ ವ್ಯವಹಾರಗಳನ್ನು ಯೋಜಿಸುವವರು ಜಾಗರೂಕರಾಗಿರಲು ಸೂಚಿಸಲಾಗಿದೆ