ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

BRICS Summit: ನವದೆಹಲಿ ಘೋಷಣೆ 2026 ಒಮ್ಮತದಿಂದ ಅಂಗೀಕಾರ; ಭಯೋತ್ಪಾದನೆ ವಿರುದ್ಧ ಸಂದೇಶ, ವ್ಯಾಪಾರ ನಿರ್ಬಂಧಕ್ಕೆ ಖಂಡನೆ... ಭಾರತ ಮುಂದಿಟ್ಟ ಟಾಪ್ 10 ಅಂಶಗಳಿವು

New Delhi Declaration 2026: ಬ್ರಿಕ್ಸ್ ಸದಸ್ಯ ರಾಷ್ಟ್ರಗಳು ಒಮ್ಮತದಿಂದ 'ನವದೆಹಲಿ ಘೋಷಣೆ 2026' ಅಂಗೀಕರಿಸಿವೆ. ಎರಡು ದಿನಗಳ ಈ ಜಾಗತಿಕ ಶೃಂಗಸಭೆಯ ಮೊದಲ ದಿನದ ಮುಕ್ತಾಯದ ನಂತರ ಪ್ರಧಾನ ಮಂತ್ರಿ ನರೇಂದ್ರ ಮೋದಿ ಈ ಐತಿಹಾಸಿಕ ಒಪ್ಪಂದವನ್ನು ಅಧಿಕೃತವಾಗಿ ದೃಢಪಡಿಸಿದ್ದಾರೆ.

ಬ್ರಿಕ್ಸ್‌ ನವದೆಹಲಿ ಘೋಷಣೆ 2026 ಒಮ್ಮತದಿಂದ ಅಂಗೀಕಾರ

ದೆಹಲಿಯಲ್ಲಿ ನಡೆಯುತ್ತಿರುವ ಬ್ರಿಕ್ಸ್‌ ಶೃಂಗಸಭೆಯಲ್ಲಿ ಜಾಗತಿಕ ನಾಯಕರೊಂದಿಗೆ ನರೇಂದ್ರ ಮೋದಿ -

Priyanka P
Priyanka P Sep 12, 2026 8:38 PM

ನವದೆಹಲಿ, ಸೆ. 12: ಪ್ರಸ್ತುತ ನಡೆಯುತ್ತಿರುವ ಬ್ರಿಕ್ಸ್ ಶೃಂಗಸಭೆಯಲ್ಲಿ (BRICS Summit 2026) ಅಂತಾರಾಷ್ಟ್ರೀಯ ವಿವಾದಗಳನ್ನು ಮಾತುಕತೆ, ಸಮಾಲೋಚನೆ ಮತ್ತು ರಾಜತಾಂತ್ರಿಕತೆಯ ಮೂಲಕವೇ ಬಗೆಹರಿಸಿಕೊಳ್ಳುವ ತಮ್ಮ ಬದ್ಧತೆಯನ್ನು ಸದಸ್ಯ ರಾಷ್ಟ್ರಗಳು ಪುನರುಚ್ಚರಿಸಿವೆ. ಬ್ರಿಕ್ಸ್ ಸದಸ್ಯ ರಾಷ್ಟ್ರಗಳು ಒಮ್ಮತದಿಂದ ನವದೆಹಲಿ ಘೋಷಣೆ 2026 (New Delhi Declaration 2026) ಅನ್ನು ಅಂಗೀಕರಿಸಿವೆ. ಎರಡು ದಿನಗಳ ಈ ಜಾಗತಿಕ ಶೃಂಗಸಭೆಯ ಮೊದಲ ದಿನದ ಮುಕ್ತಾಯದ ನಂತರ ಪ್ರಧಾನಮಂತ್ರಿ ನರೇಂದ್ರ ಮೋದಿ ಈ ಐತಿಹಾಸಿಕ ಒಪ್ಪಂದವನ್ನು ಅಧಿಕೃತವಾಗಿ ದೃಢಪಡಿಸಿದ್ದಾರೆ.

“ಯಾವುದೇ ಸದಸ್ಯರು ಯಾವುದೇ ಆಕ್ಷೇಪಣೆ ವ್ಯಕ್ತಪಡಿಸಿಲ್ಲ. ನವದೆಹಲಿ ಘೋಷಣೆ 2026 ಅನ್ನು ಸರ್ವಾನುಮತದಿಂದ ಅಂಗೀಕರಿಸಲಾಗಿದೆ” ಎಂದು ಪ್ರಧಾನಿ ಮೋದಿ ಹೇಳಿದರು. ಪ್ರಮುಖ ಜಾಗತಿಕ ಸವಾಲುಗಳ ಕುರಿತು ಸದಸ್ಯ ರಾಷ್ಟ್ರಗಳು ಹೊಂದಿರುವ ವೈವಿಧ್ಯ ನಿಲುವುಗಳನ್ನು ಗಣನೆಗೆ ತೆಗೆದುಕೊಳ್ಳುವಂತಹ ಬಹುಪಕ್ಷೀಯ ದೃಷ್ಟಿಕೋನಕ್ಕೆ ಈ ಪ್ರಾದೇಶಿಕ ಒಕ್ಕೂಟವು ಕರೆ ನೀಡಿದೆ. ಪರಮಾಣು ಮತ್ತು ಸಂಘರ್ಷದಿಂದ ಹೆಚ್ಚುತ್ತಿರುವ ಅಪಾಯಗಳ ಬಗ್ಗೆ ರಾಷ್ಟ್ರಗಳು ಕಳವಳ ವ್ಯಕ್ತಪಡಿಸಿದವು. ಅಂತಾರಾಷ್ಟ್ರೀಯ ವಿವಾದಗಳ ಶಾಂತಿಯುತ ಪರಿಹಾರಕ್ಕೆ ತನ್ನ ಬದ್ಧತೆಯನ್ನು ಪುನರುಚ್ಚರಿಸಿದವು.

ಬ್ರಿಕ್ಸ್ ಶೃಂಗಸಭೆ ಬಗ್ಗೆ ಪ್ರಧಾನಿ ಮೋದಿ ಎಕ್ಸ್‌ ಪೋಸ್ಟ್‌:



2026ರ ಬ್ರಿಕ್ಸ್ ನವದೆಹಲಿ ಘೋಷಣೆಯ ಟಾಪ್ 10 ಪ್ರಮುಖ ಅಂಶಗಳು

  • ಬ್ರಿಕ್ಸ್‌ನಿಂದ ವಿಶ್ವಸಂಸ್ಥೆಯ ಪ್ರಮುಖ ಸುಧಾರಣೆಗಳಿಗೆ ಒತ್ತು: ವಿಶ್ವಸಂಸ್ಥೆಯಲ್ಲಿನ ಸುಧಾರಣೆಗಳನ್ನು ಬ್ರಿಕ್ಸ್‌ ಬೆಂಬಲಿಸಿದೆ. ಪ್ರಜಾಪ್ರಭುತ್ವ ಮತ್ತು ಪ್ರಾತಿನಿಧಿಕ ಜಾಗತಿಕ ವ್ಯವಸ್ಥೆಗೆ ಕರೆ ನೀಡಿದೆ. ಇದು ವಿಶ್ವಸಂಸ್ಥೆ ಭದ್ರತಾ ಮಂಡಳಿಯ ಸುಧಾರಣೆಗಳನ್ನೂ ಒಪ್ಪಿಕೊಂಡಿದೆ. ಜಾಗತಿಕ ಸಂಸ್ಥೆಗಳು ಇಂದಿನ ಬಹುಧ್ರುವೀಯ ಜಗತ್ತನ್ನು ಉತ್ತಮವಾಗಿ ಪ್ರತಿಬಿಂಬಿಸಬೇಕು ಎಂದು ಹೇಳಿದೆ. ವಿಶ್ವಸಂಸ್ಥೆ ಭದ್ರತಾ ಮಂಡಳಿಯಲ್ಲಿ ಶಾಶ್ವತ ಸ್ಥಾನಕ್ಕಾಗಿ ದೀರ್ಘಕಾಲದಿಂದ ಒತ್ತಾಯಿಸುತ್ತಿರುವ ಭಾರತಕ್ಕೆ ಈ ವಿಚಾರವು ಪ್ರಮುಖವಾಗಿದೆ.

ಬ್ರಿಕ್ಸ್ ಸಮಾವೇಶದಲ್ಲಿ ಪ್ರಧಾನಿ ನರೇಂದ್ರ ಮೋದಿ ಜತೆ ಪೋಸ್‌ ನೀಡಿದ ಹೆಂಗಳೆಯರು

  • ಭಾರತ ಮತ್ತು ಬ್ರೆಜಿಲ್‌ಗೆ ಬೆಂಬಲ: ವಿಶ್ವಸಂಸ್ಥೆಯಲ್ಲಿ ಪ್ರಮುಖ ಪಾತ್ರ ವಹಿಸುವ ಭಾರತ ಮತ್ತು ಬ್ರೆಜಿಲ್‌ಗಳಿಗೆ ಚೀನಾ ಮತ್ತು ರಷ್ಯಾ ಬೆಂಬಲವನ್ನು ಪುನರುಚ್ಚರಿಸಿವೆ. ಇದು ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ (UNSC) ಖಾಯಂ ಸದಸ್ಯರಾಗುವ ಉಭಯ ದೇಶಗಳ ಮಹತ್ವಾಕಾಂಕ್ಷೆಯನ್ನೂ ಒಳಗೊಂಡಿದೆ. ಜಾಗತಿಕ ನಿರ್ಧಾರಗಳನ್ನು ತೆಗೆದುಕೊಳ್ಳುವ ಪ್ರಕ್ರಿಯೆಯಲ್ಲಿ ಎರಡೂ ದೇಶಗಳು ದೊಡ್ಡ ಪಾತ್ರ ವಹಿಸುತ್ತಿರುವ ಸಂದರ್ಭದಲ್ಲಿ ಈ ಬೆಂಬಲವು ಅತ್ಯಂತ ಮಹತ್ವದ್ದಾಗಿದೆ.
  • ಜಾಗತಿಕ ದಕ್ಷಿಣಕ್ಕೆ ಪ್ರಬಲ ಧ್ವನಿ: ಬ್ರಿಕ್ಸ್ ಒಕ್ಕೂಟವು ಉದಯೋನ್ಮುಖ ಮತ್ತು ಅಭಿವೃದ್ಧಿಶೀಲ ಆರ್ಥಿಕತೆಗಳ ಪ್ರಮುಖ ಜಾಗತಿಕ ವೇದಿಕೆಯಾಗಿ ಬಿಂಬಿಸಿಕೊಂಡಿದೆ. ಜಾಗತಿಕ ಸಂಸ್ಥೆಗಳಲ್ಲಿ ಅಭಿವೃದ್ಧಿಶೀಲ ರಾಷ್ಟ್ರಗಳ ಕಳವಳಗಳು ಮತ್ತು ನಿರ್ಧಾರಗಳಿಗೆ ಹೆಚ್ಚಿನ ಆದ್ಯತೆ ಸಿಗಬೇಕು ಎಂದು ಈ ಪ್ರಾದೇಶಿಕ ಒಕ್ಕೂಟವು ಬಯಸಿದೆ.
  • ಐಎಂಎಫ್ ಮತ್ತು ವಿಶ್ವಬ್ಯಾಂಕ್ ಸುಧಾರಣೆಗಳು: ಅಂತಾರಾಷ್ಟ್ರೀಯ ಹಣಕಾಸು ನಿಧಿ (IMF) ಮತ್ತು ವಿಶ್ವಬ್ಯಾಂಕ್‌ನಂತಹ ಜಾಗತಿಕ ಸಂಸ್ಥೆಗಳಲ್ಲಿ ತುರ್ತು ಸುಧಾರಣೆಗಳನ್ನು ತರುವಂತೆ ಬ್ರಿಕ್ಸ್ ಕರೆ ನೀಡಿದೆ.
  • ಸ್ಥಳೀಯ ಕರೆನ್ಸಿ ವ್ಯಾಪಾರಕ್ಕೆ ಉತ್ತೇಜನ: ಗಡಿಯಾಚೆಗಿನ ಪಾವತಿಗಳನ್ನು ಹೆಚ್ಚು ಬಲಪಡಿಸಲು ಬ್ರಿಕ್ಸ್ ತನ್ನ ಪ್ರಯತ್ನವನ್ನು ಮುಂದುವರಿಸಿದೆ. ಸದಸ್ಯ ರಾಷ್ಟ್ರಗಳು ತಮ್ಮ ದ್ವಿಪಕ್ಷೀಯ ವ್ಯಾಪಾರ ವಹಿವಾಟುಗಳಿಗಾಗಿ ಸ್ಥಳೀಯ ಕರೆನ್ಸಿಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಬಳಸುವ ಕುರಿತು ಚರ್ಚಿಸಿದವು. ಪರಸ್ಪರ ಕಾರ್ಯಸಾಧ್ಯ ಪಾವತಿ ಮತ್ತು ಸಂದೇಶ ಕಳುಹಿಸುವ ವ್ಯವಸ್ಥೆಗಳ ಅಭಿವೃದ್ಧಿಗೂ ಬೆಂಬಲ ಸೂಚಿಸಿದೆ.
  • ಹೊಸ ಅಭಿವೃದ್ಧಿ ಬ್ಯಾಂಕ್‌ಗೆ ಹೆಚ್ಚಿನ ಜವಾಬ್ದಾರಿ: ಇದು ಅಭಿವೃದ್ಧಿಯಾಗಿರುವ ಬ್ಯಾಂಕ್‌ನ (NDB) ಬೆಳೆಯುತ್ತಿರುವ ಪ್ರಾಮುಖ್ಯತೆಯನ್ನು ಎತ್ತಿ ತೋರಿಸಲಾಗಿದೆ. ಸಂಪನ್ಮೂಲಗಳನ್ನು ಕ್ರೋಢೀಕರಿಸುವ ಮತ್ತು ಸ್ಥಳೀಯ ಕರೆನ್ಸಿಗಳಲ್ಲಿ ಹಣಕಾಸು ನೆರವು ಒದಗಿಸುವ ಎನ್‌ಡಿಬಿ ಸಾಮರ್ಥ್ಯವನ್ನು ಬ್ರಿಕ್ಸ್ ಮುಕ್ತವಾಗಿ ಸ್ವಾಗತಿಸಿದೆ.
  • ಆಹಾರ ಭದ್ರತೆಗಾಗಿ ಬ್ರಿಕ್ಸ್ ಧಾನ್ಯ ವಿನಿಮಯ ಕೇಂದ್ರ: ಈ ಶೃಂಗಸಭೆಯಲ್ಲಿ ಆಹಾರ ಭದ್ರತೆಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ. ಆಹಾರ ಪದಾರ್ಥಗಳ ಬೆಲೆ ಏರಿಳಿತವನ್ನು ನಿಯಂತ್ರಿಸಲು ನೆರವಾಗುವಂತೆ 'ಬ್ರಿಕ್ಸ್ ಗ್ರೇನ್ ಎಕ್ಸ್‌ಚೇಂಜ್' ಸ್ಥಾಪಿಸುವ ಯೋಜನೆಗಳನ್ನು ಬ್ರಿಕ್ಸ್ ಮುನ್ನಡೆಸಿದೆ.

ವಿಶ್ವ ನಾಯಕರನ್ನುದ್ದೇಶಿಸಿ ಬ್ರಿಕ್ಸ್‌ ಶೃಂಗಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಖಡಕ್‌ ಮಾತು

  • ಏಕಪಕ್ಷೀಯ ವ್ಯಾಪಾರ ನಿರ್ಬಂಧಗಳಿಗೆ ಬ್ರಿಕ್ಸ್ ವಿರೋಧ: ರಕ್ಷಣಾತ್ಮಕ ವ್ಯಾಪಾರ ಕ್ರಮಗಳು ಮತ್ತು ಏಕಪಕ್ಷೀಯ ಆರ್ಥಿಕ ಕ್ರಮಗಳನ್ನು ತೀವ್ರವಾಗಿ ಟೀಕಿಸಲಾಗಿದೆ. ಬ್ರಿಕ್ಸ್ ಒಕ್ಕೂಟವು ದ್ವಿತೀಯ ಆರ್ಥಿಕ ನಿರ್ಬಂಧಗಳು ಮತ್ತು ಕಾರ್ಬನ್ ಬಾರ್ಡರ್ ಅಡ್ಜಸ್ಟ್‌ಮೆಂಟ್ ಮೆಕ್ಯಾನಿಸಂಗಳ ಕುರಿತು ಕಳವಳ ವ್ಯಕ್ತಪಡಿಸಿದೆ.
  • ಭಯೋತ್ಪಾದನೆ ವಿರುದ್ಧ ಕಠಿಣ ಸಂದೇಶ: ಭಯೋತ್ಪಾದನೆಯ ವಿರುದ್ಧ ಬ್ರಿಕ್ಸ್ ಅತ್ಯಂತ ಕಟ್ಟುನಿಟ್ಟಾದ ನಿಲುವನ್ನು ತಳೆದಿದೆ. ಜಾಗತಿಕ ನಾಯಕರು ಎಲ್ಲ ರೀತಿಯ ಭಯೋತ್ಪಾದನಾ ಕೃತ್ಯಗಳನ್ನು ಒಮ್ಮತದಿಂದ ಖಂಡಿಸಿದ್ದಾರೆ. ಭಯೋತ್ಪಾದಕರ ಗಡಿಯಾಚೆಗಿನ ಸಂಚಾರ ಮತ್ತು ಭಯೋತ್ಪಾದನೆಗೆ ಧನಸಹಾಯ ಒದಗಿಸುವ ವಿಷಯಗಳ ಬಗ್ಗೆಯೂ ಕಳವಳ ವ್ಯಕ್ತಪಡಿಸಿದ್ದಾರೆ. 2025ರ ಏಪ್ರಿಲ್‌ನಲ್ಲಿ ಜಮ್ಮು ಮತ್ತು ಕಾಶ್ಮೀರದಲ್ಲಿ ನಡೆದ ಉಗ್ರರ ದಾಳಿಯನ್ನು ಖಂಡಿಸಲಾಗಿದೆ.
  • ಎಐ, ಡಿಜಿಟಲ್ ಮೂಲಸೌಕರ್ಯ ಮತ್ತು ಜಾಗತಿಕ ಆರೋಗ್ಯ: ತಂತ್ರಜ್ಞಾನ ಮತ್ತು ಆರೋಗ್ಯ ರಕ್ಷಣೆಯು ಸಹಕಾರದ ಇತರ ಪ್ರಮುಖ ಕ್ಷೇತ್ರಗಳಾಗಿ ಹೊರಹೊಮ್ಮಿವೆ. ವಿಶ್ವಾಸಾರ್ಹ ಕೃತಕ ಬುದ್ಧಿಮತ್ತೆ (AI) ಆಡಳಿತ, ಡೇಟಾ ಭದ್ರತೆ ಮತ್ತು ಜವಾಬ್ದಾರಿಯುತ ತಂತ್ರಜ್ಞಾನದ ಬಳಕೆಯ ಪ್ರಯತ್ನಗಳನ್ನು ಬ್ರಿಕ್ಸ್ ಬೆಂಬಲಿಸಿದೆ.

ಒಟ್ಟಿನಲ್ಲಿ ನವದೆಹಲಿ ಘೋಷಣೆಯನ್ನು ಭಾರತಕ್ಕೆ ಸಿಕ್ಕ ರಾಜತಾಂತ್ರಿಕ ವಿಜಯವೆಂದೇ ವಿಶ್ಲೇಷಿಸಲಾಗುತ್ತಿದೆ. ಯಾವುದೇ ದೇಶವು ಇದಕ್ಕೆ ಆಕ್ಷೇಪಣೆ ವ್ಯಕ್ತಪಡಿಸಿಲ್ಲ. ಬ್ರಿಕ್ಸ್ ವೇಗವಾಗಿ ಬೆಳೆಯುತ್ತಿರುವ ಮತ್ತು ಹೆಚ್ಚು ಪ್ರಭಾವಶಾಲಿ ಗುಂಪಾಗುತ್ತಿರುವ ಸಮಯದಲ್ಲಿ ಈ ಒಮ್ಮತ ದೊರಕಿರುವುದು ಗಮನಾರ್ಹವಾಗಿದೆ.