“ಸುಪ್ರೀಂ ಕೋರ್ಟ್‌ನಲ್ಲಿ ಯಾವುದೇ ಅರ್ಜಿ ಸಲ್ಲಿಸಲಾಗಿಲ್ಲ”: ವಿದ್ಯಾರ್ಥಿಗಳ ಪ್ರತಿಭಟನಾ ಅರ್ಜಿಯನ್ನು ಆಲಿಸಲು ನಿರಾಕರಿಸಿದ ವರದಿಗಳನ್ನು ತಳ್ಳಿಹಾಕಿದ ಸಿಜೆಐ
CJI Rejects: ತಮಗೆ ತಲುಪಿರುವುದು ಕೇವಲ ಪ್ರಾತಿನಿಧ್ಯ ಮಾತ್ರವೇ ಹೊರತು ರಿಟ್ ಅರ್ಜಿಯಲ್ಲ ಎಂದು ವರದಿಗಳನ್ನು ಭಾರತದ ಮುಖ್ಯ ನ್ಯಾಯಮೂರ್ತಿ ಸೂರ್ಯ ಕಾಂತ್ ಹೇಳಿದ್ದಾರೆ. “ವಿದ್ಯಾರ್ಥಿಗಳ ಮೇಲಿನ ದಮನದ ವಿಚಾರವನ್ನು ನ್ಯಾಯಾಲಯ ಆಲಿಸುವುದಿಲ್ಲ ಎಂದು ಹೇಳಿದೆ ಅಂತಾ ಮಾಧ್ಯಮಗಳು ಸುಳ್ಳು ವರದಿ ಮಾಡಿದೆ” ಎಂದು ಸಿಜೆಐ ಹೇಳಿದ್ದಾರೆ.
ಭಾರತದ ಮುಖ್ಯ ನ್ಯಾಯಮೂರ್ತಿ ಸೂರ್ಯ ಕಾಂತ್ (ಸಂಗ್ರಹ ಚಿತ್ರ) -
ನವದೆಹಲಿ, ಜು.24: ಸೋಮವಾರ, ಜುಲೈ 20 ರಂದು ವಿದ್ಯಾರ್ಥಿಗಳ ಮೇಲಿನ ಪೊಲೀಸ್ ಕ್ರಮದ ವಿರುದ್ಧದ ಅರ್ಜಿಯ ತುರ್ತು ವಿಚಾರಣೆಯನ್ನು ಸುಪ್ರೀಂ ಕೋರ್ಟ್ (Supreme Court) ನಿರಾಕರಿಸಿರುವ ಬಗ್ಗೆ ಮಾಧ್ಯಮ ವರದಿಗಳನ್ನು ಭಾರತದ ಮುಖ್ಯ ನ್ಯಾಯಮೂರ್ತಿ ಸೂರ್ಯ ಕಾಂತ್ (CJI Surya Kant) ತಳ್ಳಿಹಾಕಿದ್ದಾರೆ. ಅಂತಹ ಯಾವುದೇ ಅರ್ಜಿಯನ್ನು ನ್ಯಾಯಾಲಯದ ಮುಂದೆ ಸಲ್ಲಿಸಲಾಗಿಲ್ಲ ಎಂದು ಹೇಳಿದರು.
ತಮಗೆ ತಲುಪಿರುವುದು ಕೇವಲ ಪ್ರಾತಿನಿಧ್ಯ ಮಾತ್ರವೇ ಹೊರತು ರಿಟ್ ಅರ್ಜಿಯಲ್ಲ ಎಂದು ಅವರು ಹೇಳಿದರು. ಈ ವಿಷಯವನ್ನು ಆಲಿಸಲು ಅವರು ನಿರಾಕರಿಸಿದ್ದಾರೆ ಎಂಬ ವರದಿಗಳು ಸಂಪೂರ್ಣವಾಗಿ ಸುಳ್ಳು ಎಂದು ಅವರು ತಿಳಿಸಿದರು. ಕಳೆದ ಎರಡು ದಿನಗಳಲ್ಲಿ, ಒಂದು ವಿಷಯದ ಬಗ್ಗೆ ಸಂಪೂರ್ಣವಾಗಿ ಸುಳ್ಳು ಹೇಳಿಕೆ ನೀಡಲಾಗಿದೆ. “ವಿದ್ಯಾರ್ಥಿಗಳ ಮೇಲಿನ ದಮನದ ವಿಚಾರವನ್ನು ನ್ಯಾಯಾಲಯ ಆಲಿಸುವುದಿಲ್ಲ ಎಂದು ಮಾಧ್ಯಮಗಳು ಸುಳ್ಳು ವರದಿ ಮಾಡಿದೆ” ಎಂದು ಸಿಜೆಐ ಹೇಳಿದ್ದಾರೆ.
“ಬೆಳಗ್ಗೆ 10 ಗಂಟೆಯವರೆಗೆ ಒಂದೇ ಒಂದು ಪುಟವೂ ಸಲ್ಲಿಕೆಯಾಗಿಲ್ಲ. ಇದು ಮಿಶ್ರಾ ಅಥವಾ ಬೇರೆಯವರು ಕಳುಹಿಸಿದ ಒಂದು ಅರ್ಜಿ. ನಾನು ಈ ಅರ್ಜಿಯನ್ನು ರಿಟ್ ಅರ್ಜಿ ಎಂದು ಹೇಗೆ ಪರಿಗಣಿಸಬಹುದು?” ಎಂದು ಅವರು ಪ್ರಶ್ನಿಸಿದ್ದಾರೆ.
ಧರ್ಮೇಂದ್ರ ಪ್ರಧಾನ್ ರಾಜೀನಾಮೆಗೆ ಪಟ್ಟು; ಸರ್ಕಾರ ನಾಳೆಯವರೆಗೆ ಸಮಯ ಕೋರಿದೆ ಎಂದ CJP
ಜುಲೈ 20 ರಂದು ನಡೆದ ಕಾಕ್ರೋಚ್ ಜನತಾ ಪಕ್ಷದ ನೇತೃತ್ವದ ಪ್ರತಿಭಟನಾ ಮೆರವಣಿಗೆಯ ಸಂದರ್ಭದಲ್ಲಿ ವಿದ್ಯಾರ್ಥಿಗಳ ವಿರುದ್ಧ ಪೊಲೀಸ್ ಕ್ರಮದ ಬಗ್ಗೆ ತುರ್ತು ವಿಚಾರಣೆ ನಡೆಸಬೇಕೆಂದು ಬುಧವಾರ (ಜು.22) ವಕೀಲರೊಬ್ಬರು ಕೋರಿದ್ದರು. “ಪೊಲೀಸರ ದೌರ್ಜನ್ಯದ ಕುರಿತು ನನ್ನ ಬಳಿ ವಿಡಿಯೊಗಳೂ ಇವೆ. ಇದನ್ನು ಗುರುವಾರ (ಜು.23) ವಿಚಾರಣೆಗೆ ಪಟ್ಟಿ ಮಾಡಬಹುದಾದರೆ, ವಿದ್ಯಾರ್ಥಿಗಳು ಇದ್ದಾರೆ ಎಂದು ವಕೀಲರು ಹೇಳಿದ್ದರು. ಪ್ರತಿಭಟನೆ ವೇಳೆ ವಿದ್ಯಾರ್ಥಿಗಳ ಮೇಲೆ ಪೊಲೀಸರು ದೌರ್ಜನ್ಯ ನಡೆಸಿದ್ದಾರೆ ಎಂದು ಅವರು ಆರೋಪಿಸಿದ್ದರು.
ಆದರೆ, ಸಿಜೆಐ ಮನವಿಯನ್ನು ತಿರಸ್ಕರಿಸಿದರು. ಪ್ರಸ್ತಾಪಿಸುವ ಹಂತದಲ್ಲಿ ವಿಡಿಯೊ ದೃಶ್ಯಾವಳಿಗಳನ್ನು ಪರಿಶೀಲಿಸಲು ಪೀಠವು ಒಲವು ಹೊಂದಿಲ್ಲ ಎಂದು ಸ್ಪಷ್ಟಪಡಿಸಿದರು. “ನಮಗೆ ವೀಡಿಯೊಗಳಲ್ಲಿ ಆಸಕ್ತಿ ಇಲ್ಲ, ಅಲ್ಲದೆ ನಮಗೆ ವೀಕ್ಷಿಸಲೂ ಸಮಯವಿಲ್ಲ. ನಾವು ವಿಡಿಯೊಗಳನ್ನು ನೋಡಲು ಬಯಸುವುದಿಲ್ಲ” ಎಂದು ಅವರು ಹೇಳಿದರು. ವಿದ್ಯಾರ್ಥಿಗಳನ್ನು ಥಳಿಸಲಾಗಿದೆ ಎಂದು ವಕೀಲರು ಪುನರಾವರ್ತಿಸಿ ವಿಡಿಯೊ ಸಾಕ್ಷ್ಯವನ್ನು ಮತ್ತೆ ಉಲ್ಲೇಖಿಸಿದಾಗ, “ನಮ್ಮ ಸಮಯವನ್ನು ವ್ಯರ್ಥ ಮಾಡಬೇಡಿ. ನಾವು ಯಾವುದೇ ವಿಡಿಯೊಗಳನ್ನು ನೋಡಲು ಬಯಸುವುದಿಲ್ಲ” ಎಂದು ಸಿಜೆಐ ಹೇಳಿದರು.
ಒಟ್ಟಾರೆಯಾಗಿ, ತುರ್ತು ವಿಚಾರಣೆಯನ್ನು ನಿರಾಕರಿಸಿದ್ದಾರೆಂದು ಹೇಳುವ ವರದಿಗಳು ಸುಳ್ಳು ಎಂದು ಸಿಜೆಐ ಹೇಳಿದರು. ಯಾವುದೇ ಅರ್ಜಿಯನ್ನು ಸಲ್ಲಿಸಲಾಗಿಲ್ಲ, ನ್ಯಾಯಾಲಯಕ್ಕೆ ಪ್ರಾತಿನಿಧ್ಯವನ್ನು ಮಾತ್ರ ಕಳುಹಿಸಲಾಗಿದೆ ಎಂದು ಅವರು ಹೇಳಿದರು.