ಆಪರೇಷನ್ ಸಿಂದೂರ್‌ಗೆ ಒಂದು ವರ್ಷ: ಭಯೋತ್ಪಾದನೆಯನ್ನು ಸೋಲಿಸುವ ಸಂಕಲ್ಪಕ್ಕೆ ಭಾರತ ಬದ್ಧ ಎಂದ ಪ್ರಧಾನಿ ಮೋದಿ
2025ರ ಪಹಲ್ಗಾಮ್ ಭಯೋತ್ಪಾದನಾ ದಾಳಿಗೆ ಪ್ರತಿಯಾಗಿ ಆರಂಭಿಸಲಾದ ಆಪರೇಷನ್ ಸಿಂದೂರ್ ಕಾರ್ಯಾಚರಣೆಗೆ ಇಂದು ಒಂದು ವರ್ಷ ತುಂಬಿದೆ. ಈ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಭಾರತೀಯ ಸೇನೆಯ ಧೈರ್ಯ ಮತ್ತು ನಿಖರ ಕಾರ್ಯಾಚರಣೆಯನ್ನು ಶ್ಲಾಘಿಸಿ, ಭಯೋತ್ಪಾದನೆ ವಿರುದ್ಧ ಭಾರತದ ಹೋರಾಟ ಅಚಲ ಎಂದು ತಿಳಿಸಿದ್ದಾರೆ. ಪಾಕಿಸ್ತಾನ ಮತ್ತು ಪಿಒಕೆಯಲ್ಲಿನ ಭಯೋತ್ಪಾದಕ ಶಿಬಿರಗಳ ಮೇಲೆ ನಡೆದ ದಾಳಿಯಲ್ಲಿ 100ಕ್ಕೂ ಹೆಚ್ಚು ಉಗ್ರರು ಹತರಾಗಿದ್ದರು.
ಆಪರೇಷನ್ ಸಿಂದೂರ್ ಲೋಗೊ ಮತ್ತು ನರೇಂದ್ರ ಮೋದಿ -
ಶ್ರೀನಗರ, ಮೇ 7: 26 ನಾಗರಿಕರನ್ನು ಬಲಿ ಪಡೆದ ಪಹಲ್ಗಾಮ್ ಭಯೋತ್ಪಾದನಾ ದಾಳಿಗೆ (Pahalgam terror attack) ಪ್ರತಿಯಾಗಿ 2025ರಲ್ಲಿ ಪ್ರಾರಂಭಿಸಲಾದ ಆಪರೇಷನ್ ಸಿಂದೂರ್ (Operation Sindoor) ಕಾರ್ಯಾಚರಣೆಗೆ ಒಂದು ವರ್ಷ ತುಂಬಿದೆ. ಈ ಸಂದರ್ಭದಲ್ಲಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ (Prime Minister Narendra Modi), ಭಯೋತ್ಪಾದನೆಯನ್ನು ಬೇರುಸಹಿತ ಕಿತ್ತೊಗೆಯುವ ಭಾರತದ ಸಂಕಲ್ಪವು ಅಚಲವಾಗಿದೆ ಎಂದು ಪುನರುಚ್ಚರಿಸಿದ್ದಾರೆ.
ಕಳೆದ ವರ್ಷ ಏಪ್ರಿಲ್ 22ರಂದು ನಡೆದ ಪಹಲ್ಗಾಮ್ ದಾಳಿಗೆ ತಕ್ಕ ಪ್ರತ್ಯುತ್ತರ ನೀಡಲು ಮೇ 7ರ ಮುಂಜಾನೆ ಭಾರತವು ಈ ಕಾರ್ಯಾಚರಣೆಯನ್ನು ಆರಂಭಿಸಿತ್ತು. ಆಪರೇಷನ್ ಸಿಂದೂರ್ ಅಡಿಯಲ್ಲಿ ಭಾರತೀಯ ಸೇನೆಯು ಪಾಕಿಸ್ತಾನ ಮತ್ತು ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿರುವ (ಪಿಒಕೆ) ಒಂಬತ್ತು ಭಯೋತ್ಪಾದಕ ಶಿಬಿರಗಳ ಮೇಲೆ ನಿಖರವಾದ ವೈಮಾನಿಕ ಮತ್ತು ಕ್ಷಿಪಣಿ ದಾಳಿಗಳನ್ನು ನಡೆಸಿತ್ತು. ನಿಷೇಧಿತ ಜೈಶ್-ಎ-ಮೊಹಮ್ಮದ್ ಮತ್ತು ಲಷ್ಕರ್-ಎ-ತೊಯ್ಬಾ ಸಂಘಟನೆಗಳಿಗೆ ಸೇರಿದ ಈ ನೆಲೆಗಳ ಮೇಲೆ ನಡೆದ ದಾಳಿಯಲ್ಲಿ ಕನಿಷ್ಠ 100 ಭಯೋತ್ಪಾದಕರು ಹತರಾಗಿದ್ದರು. ಸತತ ಸಂಘರ್ಷದ ನಂತರ, ಮೇ 10ರಂದು ಉಭಯ ದೇಶಗಳ ನಡುವಿನ ಮಿಲಿಟರಿ ಮಟ್ಟದ ಮಾತುಕತೆಯೊಂದಿಗೆ ಈ ಕಾರ್ಯಾಚರಣೆ ಅಂತ್ಯಗೊಂಡಿತು.
ಪ್ರಧಾನಿ ಮೋದಿ ಅವರ ಎಕ್ಸ್ ಪೋಸ್ಟ್:
A year ago, during #OperationSindoor, our armed forces showcased their valour and gave a firm response to those who attacked our people. Every Indian is proud of our armed forces. As a mark of respect to our forces and their success during #OperationSindoor, let us all change our… pic.twitter.com/w4A3j1bGTw
— Narendra Modi (@narendramodi) May 7, 2026
ಸೋಷಿಯಲ್ ಮೀಡಿಯಾ ಪ್ಲಾಟ್‌ಫಾರ್ಮ್ ಎಕ್ಸ್ನಲ್ಲಿ ಪೋಸ್ಟ್ ಮಾಡಿರುವ ಪ್ರಧಾನಿ ಮೋದಿ, "ನಮ್ಮ ಸಶಸ್ತ್ರ ಪಡೆಗಳು ಈ ಕಾರ್ಯಾಚರಣೆಯ ಸಮಯದಲ್ಲಿ ಅಪ್ರತಿಮ ಧೈರ್ಯ, ನಿಖರತೆ ಮತ್ತು ದೃಢತೆಯನ್ನು ಪ್ರದರ್ಶಿಸಿವೆ. ಇದು ಭಯೋತ್ಪಾದನೆಯ ವಿರುದ್ಧ ಭಾರತದ ಕಠಿಣ ನಿಲುವು ಮತ್ತು ರಾಷ್ಟ್ರೀಯ ಭದ್ರತೆಯ ಬಗ್ಗೆ ನಮಗಿರುವ ಅಚಲ ಬದ್ಧತೆಯನ್ನು ಪ್ರತಿಬಿಂಬಿಸುತ್ತದೆ" ಎಂದು ಶ್ಲಾಘಿಸಿದ್ದಾರೆ. ಈ ದಾಳಿಯು ಭಾರತೀಯ ಸೇನೆಯ ವೃತ್ತಿಪರತೆ ಮತ್ತು ಸಿದ್ಧತೆಯನ್ನು ಜಗತ್ತಿಗೆ ತೋರಿಸಿದ್ದು ಮಾತ್ರವಲ್ಲದೆ, ರಕ್ಷಣಾ ಕ್ಷೇತ್ರದಲ್ಲಿ ಭಾರತವು ಸಾಧಿಸುತ್ತಿರುವ ಸ್ವಾವಲಂಬನೆಯ (ಆತ್ಮನಿರ್ಭರ) ಶಕ್ತಿಯನ್ನೂ ಎತ್ತಿ ಹಿಡಿದಿದೆʼʼ ಎಂದು ಅವರು ತಿಳಿಸಿದ್ದಾರೆ.
ಆಪರೇಷನ್ ಸಿಂದೂರ್: ಸಾಂಕೇತಿಕತೆಯಿಂದ ಕಾರ್ಯತಂತ್ರದ ಬದಲಾವಣೆಯತ್ತ ಭಾರತದ ಹೊಸ ಹೆಜ್ಜೆ
ಪ್ರೊಫೈಲ್ ಚಿತ್ರ ಬದಲು
ಈ ದಿನದ ನೆನಪಿಗಾಗಿ ಪ್ರಧಾನಿ ಮೋದಿ ಮತ್ತು ಎನ್‌ಡಿಎ (ಎನ್‌ಡಿಎ) ಮೈತ್ರಿಕೂಟದ ಹಲವು ನಾಯಕರು ತಮ್ಮ ಸಾಮಾಜಿಕ ಜಾಲತಾಣಗಳ ಪ್ರೊಫೈಲ್ ಚಿತ್ರಗಳನ್ನು 'ಆಪರೇಷನ್ ಸಿಂದೂರ್' ಲೋಗೋಗೆ ಬದಲಾಯಿಸಿಕೊಂಡಿದ್ದಾರೆ. ಗಡಿಯಾಚೆಗಿನ ಭಯೋತ್ಪಾದನೆಯ ವಿರುದ್ಧ ಭಾರತ ನೀಡಿದ ಈ ಪ್ರಬಲ ಸಂದೇಶವು, ಪಾಕಿಸ್ತಾನದ ಪರಮಾಣು ಬ್ಲ್ಯಾಕ್‌ಮೇಲ್ ತಂತ್ರಗಳಿಗೆ ಭಾರತ ಮಣಿಯುವುದಿಲ್ಲ ಎಂಬುದನ್ನು ಸ್ಪಷ್ಟಪಡಿಸಿದೆ. ಈ ಕಾರ್ಯಾಚರಣೆಯ ನಂತರ, ಭಾರತೀಯ ಸೇನೆಯು ಡ್ರೋನ್‌ಗಳು, ಕ್ಷಿಪಣಿ ವ್ಯವಸ್ಥೆಗಳು, ಕೃತಕ ಬುದ್ಧಿಮತ್ತೆ (ಎಐ) ಮತ್ತು ಸುಧಾರಿತ ಕಣ್ಗಾವಲು ತಂತ್ರಜ್ಞಾನದ ಮೂಲಕ ತನ್ನ ಯುದ್ಧ ಸಿದ್ಧತೆಯನ್ನು ಮತ್ತಷ್ಟು ಬಲಪಡಿಸಿಕೊಳ್ಳುತ್ತಿದೆ.