Operation Sindoor: ಆಪರೇಷನ್ ಸಿಂದೂರ: ರಾಷ್ಟ್ರಕ್ಕೆ ರಣವೀಳ್ಯೆಯ ಮುಹೂರ್ತ
ಪಾಕಿಸ್ತಾನ ಏ. 22ರಂದು ಜಮ್ಮು ಕಾಶ್ಮೀರದ ಪಹಲ್ಗಾಮ್ ಮೇಳೆ ದಾಳಿ ನಡೆಸಿ 26 ಮಂದಿಯನ್ನು ಹತ್ಯೆಗೈದಿದೆ. ಇದಕ್ಕೆ ಪ್ರತೀಕಾರವಾಗಿ ಭಾರತ ಉಗ್ರರ ನೆಲೆಯನ್ನು ಧ್ವಂಸ ಮಾಡಿದೆ. ಈ ಕಾರ್ಯಾಚರಣೆಗೆ ಆಪರೇಷನ್ ಸಿಂದೂರ ಎಂದು ಹೆಸರಿಡಲಾಗಿದೆ. ಈ ಕಾರ್ಯಾಚರಣೆಯ ಮಹತ್ವವನ್ನು ತುಮಕೂರು ಜಿಲ್ಲೆಯ ಪಾವಗಡದ ಶ್ರೀ ರಾಮಕೃಷ್ಣ ಸೇವಾಶ್ರಮದ ಅಧ್ಯಕ್ಷರಾದ ಸ್ವಾಮಿ ಜಪಾನಂದ ಅವರು ವಿವರಿಸಿದ್ದಾರೆ.

ಸ್ವಾಮಿ ಜಪಾನಂದ ಮತ್ತು ಆಪರೇಷನ್ ಸಿಂದೂರ್.

ಸ್ವಾಮಿ ಜಪಾನಂದ,
ಅಧ್ಯಕ್ಷರು, ಶ್ರೀ ರಾಮಕೃಷ್ಣ ಸೇವಾಶ್ರಮ, ಪಾವಗಡ, ತುಮಕೂರು ಜಿಲ್ಲೆ
ಭಾರತೀಯರೇ, ನಾವೆಲ್ಲರೂ ಎಚ್ಚೆತ್ತು ಭಾರತಾಂಬೆಯ ಸಂತತಿ ಎಂಬುದನ್ನು ಮರೆಯಬಾರದು! ಸಿಂದೂರ್ ಕೇವಲ ಭಾರತೀಯ ಮಹಿಳೆಯರ ನೊಸಲಲ್ಲಿ ರಾರಾಜಿಸುವಂತದ್ದಲ್ಲ, ಬದಲಾಗಿ ಭಾರತಾಂಬೆಯ ನೊಸಲಿಗೆ ಭೂಷಣವಾಗಿ ಇರುವಂತಹ ಮಹತ್ಕಾರ್ಯ ಆಪರೇಷನ್ ಸಿಂದೂರ್ (Operation Sindoor). ಈ ನಮ್ಮ ಯುದ್ಧ ಘೋಷಣೆಗೆ ಶಕ್ತಿ ತುಂಬುವಂತಹ ವಿಚಾರವೆಂದರೆ ಭಾರತೀಯರ ಜೀವನ ಮಾರ್ಗದರ್ಶಿಯಾಗಿರುವ ಭಗವಾನ್ ಶ್ರೀಕೃಷ್ಣನ ಭಗವದ್ಗೀತೆಯಲ್ಲಿ ಅತ್ಯಂತ ಸ್ಪಷ್ಟವಾಗಿ ಯೋಧರಿಗೆ ವಿಶೇಷವಾಗಿ ತಿಳಿಸಿರುವಂತಹ ಶ್ಲೋಕವಿದೆ.
“ಯದೃಚ್ಛಯಾ ಚೋಪಪನ್ನಂ ಸ್ವರ್ಗದ್ವಾರಾಮಸಾವೃತಮ್ |
ಸುಖಿನಃ ಕ್ಷತ್ರಿಯಾಃ ಪಾರ್ಥ ಲಭಂತೇ ಯುದ್ಧಮೀ ದೃಶಮ್” || (2.32)
ಎಲೈ ಅರ್ಜುನ ಅಪಾರ್ಥಿತವಾಗಿ ಬಂದಿರುವ, ತೆರೆದಿರುವ ಸ್ವರ್ಗದ ಬಾಗಿಲಂತಿರುವ ಇಂತಹ ಯುದ್ಧವನ್ನು ಭಾಗ್ಯಶಾಲಿಗಳಾದ ಯೋಧರು ಪಡೆಯುತ್ತಾರೆ.
ಇದು ಭಾರತೀಯರಾದ ನಮ್ಮೆಲ್ಲರಿಗೂ ಎಚ್ಚರಿಸುವಂತಹ ಭಗವದ್ ವಾಣಿ. ಈಗ ಆ ಸಂದರ್ಭ ತಾನೇ ತಾನಾಗಿ ಒದಗಿದೆ. ಈ ಸಂದರ್ಭವನ್ನು ʼಆಪರೇಷನ್ ಸಿಂದೂರ್ ಎಂದು ಕರೆದು ನಮ್ಮ ಪ್ರಧಾನಮಂತ್ರಿಯವರು ಹಾಗೂ ತಂಡ ಕಾರ್ಯೋನ್ಮುಖವಾಗಿದೆ. ನಾವೆಲ್ಲರೂ ಒಂದೇ ತಾಯಿಯ ಸಂತತಿ ಎಂಬುದನ್ನು ಅರಿತು ಇಡೀ ರಾಷ್ಟ್ರವೇ ಒಗ್ಗೂಡಿದ ಮಹಾನ್ ರಾಷ್ಟ್ರ ಎಂಬುದನ್ನು ಜಗತ್ತಿಗೆ ತೋರಿಸಬೇಕು. 22-4-25ರಂದು ನಡೆದ ನರಮೇಧ, ನಿರಪರಾಧಿಗಳೂ, ಸಾಮಾನ್ಯ ನಾಗರೀಕರೂ, ಏನೂ ತಿಳಿಯದ ಆಗ ತಾನೇ ಗೃಹಸ್ಥಾಶ್ರಮಕ್ಕೆ ಕಾಲಿಟ್ಟವರ ಮೇಲೆ ಯಾವ ರೀತಿಯಲ್ಲಿ ನಿರ್ದಯಿಗಳಾಗಿ ಘೋರ ರಾಕ್ಷಸೀಯ ಮನಃಸ್ಥಿತಿಯುಳ್ಳ ಪಾಕಿಸ್ತಾನದ ಭಯೋತ್ಪಾದಕರು ನಡೆಸಿದ ಮಾರಣಹೋಮ ಇಡೀ ಜಗತ್ತಿನಿಂದ ಖಂಡನೆಯನ್ನು ಪಡೆಯಿತು. ಅದಾಗ್ಯೂ ತಾನೇನು ಮಾಡಲಿಲ್ಲ ಎಂಬುವಮ್ತೆ ಬಿಂಬಿಸುತ್ತಿರುವ ನರರಾಕ್ಷಸ ಪಾಕಿಗಳು ಕೇವಲ ಪಾಕಿಗಳಲ್ಲ, ಬದಲಾಗಿ ಪಾಪಿಗಳು ಎನ್ನಬಹುದು. ಈ ನರಹತ್ಯೆಯಲ್ಲಿ ಒಳಗಾದ ಸರಳ ಹಾಗೂ ಸಜ್ಜನರ ಜೀವನವನ್ನು ಕೇವಲ ‘ಹಿಂದೂ’ ಧರ್ಮಕ್ಕೆ ಸೇರಿದವರು ಎಂಬ ಕಾರಣದಿಂದ ನೇರವಾಗಿ ಗುಂಡಿಟ್ಟು ಕೊಂದ ಈ ಭಯೋತ್ಪಾದಕರ ಗತಿಯನ್ನು ಮುಗಿಸಬೇಕಾಗಿದೆ.
ಇದು ರಣವೀಳ್ಯವನ್ನು ನೀಡಿದವರಿಗೆ ಸರಿಯಾದ ಬುದ್ಧಿ ಕಲಿಸಿ ಭಾರತಾಂಬೆಯ ಸಂತಾನದವರು ಏನು ಎಂಬುದನ್ನು ಕೇವಲ ಪಾಕಿಗಳಿಗೇ ಅಲ್ಲ! ಬದಲಾಗಿ ಜಗತ್ತಿಗೇ ತೋರಿಸಬೇಕಾದ ಸಮಯವಿದು.
ಇನ್ನಾದರೂ ಭಾರತ ರಾಷ್ಟ್ರದ ಜನತೆ ಅದರಲ್ಲಿಯೂ ದಾರಿ ತಪ್ಪಿರುವ ಯುವ ಜನತೆ ದೇಶಾಭಿಮಾನವನ್ನು ಅರಿತು ಕಂಕಣಬದ್ಧರಾಗಿ ಈ ʼನವ ಚೈತನ್ಯ ಚಳುವಳಿಗೆʼ ಧುಮುಕಬೇಕಾಗಿದೆ. ನಮ್ಮ ಯುವ ಜನರ ಆದರ್ಶ ಕೇವಲ ಮೋಜು, ಮಸ್ತಿಗಳಿಗೆ ಪ್ರೇರಣೆ ನೀಡುವ ನಿತ್ರಾಣ ನಟರಲ್ಲ, ಬದಲಾಗಿ ದೇಶವನ್ನು ರಕ್ಷಿಸಿದ ಮೊಟ್ಟ ಮೊದಲ ಒರಿಸ್ಸಾ ಬಾಲಕ ಬಾಜೀ ರಾವುತ್ (12 ವರುಷ) 1938ರ ಅಕ್ಟೋಬರ್ 11ರಂದು ಬ್ರಿಟೀಷ್ ಸಾಮ್ರಾಜ್ಯ ಶಾಹಿ ವಿರುದ್ಧ ಹೋರಾಡಿ – ಗುಂಡಿನ ಏಟಿನಿಂದ ಹುತಾತ್ಮನಾದ. ನಂತರ ಭಗತ್‍ಸಿಂಗ್, ಚಂದ್ರಶೇಖರ್, ಆಜಾದ್, ಸುಖದೇವ್, ರಾಜಗುರು ಹಾಗೂ ಯುವ ಹುತಾತ್ಮರುಗಳಾದ ಮಂಗಲ್‍ಪಾಂಡೆ, ಮುಂತಾದವರು ಇಂದಿನ ರಾಷ್ಟ್ರದ ಮಾದರಿಯಾಗಬೇಕು. ʼಆಪರೇಷನ್ ಸಿಂದೂರ್;ನಿಂದ ಕೇವಲ ರಾಕ್ಷಸೀ ಪ್ರವೃತ್ತಿಯ ಪಾಕಿಗಳಿಗೆ ಮಾತ್ರ ಬುದ್ಧಿ ಕಲಿಸುವುದಲ್ಲ, ಬದಲಾಗಿ ಇಡೀ ವಿಶ್ವಕ್ಕೆ ಒಂದು ಮಹತ್ತರವಾದ ಸಂದೇಶ ಕಳುಹಿಸಿದಂತಾಗಿದೆ.
ನೇತಾರರಾದ ಶಿವಾಜಿ, ಸುಭಾಷ್‍ಚಂದ್ರಬೋ, ಸಂಗೊಳ್ಳಿ ರಾಯಣ್ಣ, ರಾಣಿ ಚೆನ್ನಮ್ಮ, ಝಾನ್ಸಿರಾಣಿ, ಅಬ್ಬಕ್ಕದೇವಿ ಹೀಗೆ ಒಂದು ಮಹಾನ್ ಸಂಪ್ರದಾಯವೇ ನಮ್ಮ ಮುಂದಿದೆ. ಈ ಸುವರ್ಣಾವಕಾಶದಿಂದ ಈ ಮಹನೀಯರು, ರಾಷ್ಟ್ರಪ್ರೇಮಿಗಳು ನೀಡಿದ ಅದ್ಭುತವಾದ ಉದಾಹರಣೆಯ ಮೂಲಕ ಪಾಪಿ ರಾಷ್ಟ್ರ ಪಾಕಿಸ್ತಾನಕ್ಕೆ ಒಂದು ಮಹತ್ತರವಾದ ಸಂದೇಶ ಸಾರುವಂತಾಗಿದೆ.
ಈ ಸಂದರ್ಭದಲ್ಲಿ ನಮ್ಮ ದೇಶಭಕ್ತ ನಾಯಕರು, ಪ್ರಧಾನಿಗಳು ಮತ್ತೆಲ್ಲದಕ್ಕಿಂತ ಮಿಗಿಲಾಗಿ ನಮ್ಮನ್ನು ಹಗಲಿರುಳೂ ರಕ್ಷಿಸುತ್ತಿರುವ ಯೋಧರು ನಮಗೆ ಮಾದರಿಯಾಗಲಿ. ಅವರ ದೇಶಪ್ರೇಮ, ರಾಷ್ಟ್ರಪ್ರೇಮದ ಸಂಸ್ಕಾರ ನಮ್ಮ ಯುವ ಜನಾಂಗಕ್ಕೆ ಸಿಗಲಿ ಎಂಬುದೇ ನಮ್ಮ ಪ್ರಾರ್ಥನೆ.
ನಮ್ಮ ಶತ್ರು ರಾಷ್ಟ್ರವಾದ ಹಾಗೂ ಎಲ್ಲ ಭಯೋತ್ಪಾದಕರ ತರಪೇತು ಸ್ಥಾನವಾದ ಪಾಕಿಸ್ತಾನಕ್ಕೆ ಸರಿಯಾದ ಬುದ್ಧಿ ಕಲಿಸುವ ಒಂದು ಸುವರ್ಣಾವಕಾಶ ಇದು. ಪಾಕ್ ತಲೆ ಎತ್ತದಂತೆ ಮಾಡಲು ಇದೇ ಅವಕಾಶ. ಈ ಅವಕಾಶವನ್ನು ಸದುಪಯೋಗಪಡಿಸಿಕೊಂಡಲ್ಲಿ ಈ ಹಿಂದಿನ ಕಾರ್ಗಿಲ್‍ನಂತಹ ಯುದ್ಧಗಳಲ್ಲಿ ಹುತಾತ್ಮರಾದ ನಮ್ಮ ಯೋಧರಿಗೆ ಅರ್ಪಿಸುವ ಅಂಜಲಿ ಇದಾಗುತ್ತದೆ. ಇದೇ ತೆರನಾಗಿ ಮುಂಬರುವ ರಾಷ್ಟ್ರ ರಕ್ಷಕರಿಗೆ ಇದೊಂದು ಸ್ಫೂರ್ತಿದಾಯಕವಾದ ಶಕ್ತಿ ನೀಡಿದಂತೆಯೇ ಸರಿ.
ಈ ಸುದ್ದಿಯನ್ನೂ ಓದಿ: Indian Army: ಭಾರತೀಯ ಸೇನೆ, ನೌಕಾಪಡೆ, ವಾಯುಪಡೆಗಳಲ್ಲಿದೆ ವಿಭಿನ್ನ ಸೆಲ್ಯೂಟ್; ಯಾಕೆ ಗೊತ್ತಾ?
ಬಹುಶಃ ಈ ಸಂದರ್ಭದಲ್ಲಿ ‘ಸಂಧಾನ’ವು ಖಂಡಿತವಾಗಿಯೂ ನಡೆಯಬಾರದು. ಕಾರಣ, ಹಿಂದಿನ ಸಂಧಾನಗಳಿಂದ ಈ ರಾಕ್ಷಸರು ಯಾವುದೇ ರೀತಿಯ ಪಾಠವನ್ನೂ ಕಲಿತಿಲ್ಲ ಬದಲಾಗಿ ಅನೇಕ ರೀತಿಯ ಭಯೋತ್ಪಾದನಾ ಕಾರ್ಯಗಳನ್ನು ನಡೆಸಿ ತಮ್ಮ ಅಟ್ಟಹಾಸವನ್ನು ಬೀಗಿದ್ದು ಕಂಡಿದ್ದೇವೆ. ಮುಖ್ಯವಾಗಿ ಮುಂಬೈ ಭಯೋತ್ಪಾದನೆ ಇಂದಿಗೂ ನಮ್ಮ ಮನದಲ್ಲಿ ಚಿರಸ್ಥಾಯಿಯಾಗಿ ಉಳಿದಿದೆ. ಈ ಕಾರಣದಿಂದ ಯಾವುದೇ ರೀತಿಯ ಸಂಧಾನ ಕೂಡದು ಎಂಬುದು ನನ್ನ ಭಾವನೆ. ಹಾಗಾಗಿ ವಿಶ್ವಶಾಂತಿ ಪ್ರಿಯರಾದ ಭಾರತೀಯರ ಮೃದು, ಸೌಮ್ಯತೆಯಂತಹ ಮಾನವೀಯ ಮೌಲ್ಯಗಳನ್ನು ದುರುಪಯೋಗಪಡಿಸಿಕೊಳ್ಳುವುದೇ ಮತ್ತು ಅನೇಕ ನಿರಪರಾದಿಗಳು ಹಾಗೂ ಸಜ್ಜನತೆಯನ್ನು ತಮ್ಮ ಭಯೋತ್ಪಾದನೆಗಾಗಿ ಉಪಯೋಗಿಸಿಕೊಂಡಿರುವುದು ಒಂದು ಜ್ವಲಂತ ಸಾಕ್ಷಿಯಾಗಿದೆ. ಮುಂದಿನ ಪೀಳಿಗೆಗಾದರೂ ಈಗ ಇಟ್ಟಿರುವ ಹೆಜ್ಜೆ ಹಿಂದೆ ಇಡಬಾರದು. “ಆಪರೇಷನ್ ಸಿಂಧೂರ್ 2.00” ನಡೆಯಲಿ. ಇನ್ನು ಚಿರಶಾಶ್ವತ ಬುದ್ದಿಯನ್ನು ಅ ನರರಾಕ್ಷಸರಿಗೆ ಕಲಿಸುವುದೊಂದೇ ದಾರಿ. ಭಗವಾನ್ ಶ್ರೀಕೃಷ್ಣ ಗೀತೆಯಲ್ಲಿ ತಿಳಿಸಿರುವಂತೆ ಇ ಸ್ವರ್ಗದ ದಾರಿ ಎಂಬ ಯುದ್ಧ ಪ್ರಕ್ರಿಯೆ ನಡೆಯಲಿ ಎಂಬುದೇ ಈ ಲೇಖಕನ ಹೃದಯಾಂತರಾಳದ ಅನಿಸಿಕೆ.
ಈ ಲೇಖಕನು ಈ ಹಿಂದೆ ನಡೆದ ಬಾಂಗ್ಲಾ ಯುದ್ಧದ ಸಮಯದಲ್ಲಿ 8ನೇ ತರಗತಿ ಓದುವ ವಿದ್ಯಾರ್ಥಿಯಾಗಿದ್ದ. ಆಗ ನಗರದ ಮಹಾನ್ ರಸ್ತೆಯಲ್ಲಿ ಬೂಟ್ ಪಾಲಿಶ್ ಅಂದರೆ 25 ನಯಾಪೈಸೆಗೆ ಪಾಲಿಶ್ ಮಾಡಿ ಹಣ ದುಡಿದು ನಮ್ಮ ವೀರ ಯೋಧರಿಗೆ ಕಾಣಿಕೆಯಾಗಿ ಸಲ್ಲಿಸಿದ ನೆನಪಿನ್ನೂ ಮಾಸಿಲ್ಲ. ಈ ತೆರನಾದ ಸಂದರ್ಭಗಳಲ್ಲಿ ಮಾತೃಭೂಮಿಗೆ ಯಾವುದೇ ಸೇವೆಯನ್ನು ಸಲ್ಲಿಸಲು ನಾವೆಲ್ಲರೂ ಕಂಕಣಬದ್ಧರಾಗಿ ಇರಬೇಕು. ಜೀವನದಲ್ಲಿ ಮೊಟ್ಟಮೊದಲು ದೇಶಸೇವೆ, ತದನಂತರ ಈಶ ಸೇವೆ. ಕಾರಣ, ದೇಶವಿಲ್ಲದಿದ್ದಲ್ಲಿ ಯಾವ ದೇವಾಲಯಕ್ಕೆ ಪೂಜೆ ಸಲ್ಲಿಸಬೇಕಾಗುತ್ತದೆ. ಊಹೆ ಮಾಡಿ ನೋಡಿಕೊಳ್ಳಿ. ಆ ಕಾರಣದಿಂದಲೇ ಇಂದಿನ ಯುವ ಜನತೆಗೆ ನಮ್ಮ ಕಿವಿ ಮಾತೆಂದರೆ ದೈವ ಭಕ್ತಿ ಹಾಗೂ ದೇಶ ಭಕ್ತಿ. ಈವರೆಡೂ ಅತ್ಯಂತ ಮುಖ್ಯವಾದದ್ದು. ಈ ಕಾರಣದಿಂದ ಭಯಾನಕ ಸ್ಥಿತಿಯಲ್ಲಿ ಭಾರತದ ಉತ್ತರ ಭಾಗ ಹೊತ್ತಿ ಉರಿಯುತ್ತಿದೆ. ಈ ಸಂದರ್ಭದಲ್ಲಿ ನಮ್ಮ ಮೆಚ್ಚಿನ ಪ್ರಧಾನಮಂತ್ರಿಯವರು ತೆಗೆದುಕೊಂಡ ನಿರ್ಧಾರಗಳು ಸಮಯೋಚಿತವಾಗಿದೆ ಹಾಗೂ ಭಾರತೀಯ ಸನಾತನ ಧರ್ಮದ ಹಿನ್ನೆಲೆಯಲ್ಲಿ ತೆಗೆದುಕೊಂಡಂತಹ ದೃಢ ನಿರ್ಧಾರಗಳು ಇವಾಗಿವೆ. ಈ ನಿರ್ಧಾರದಿಂದ ಭವಿಷ್ಯ ಭಾರತದ ಭವಿಷ್ಯ ಸದೃಢವಾಗುತ್ತದೆ ಹಾಗೂ ಮುಂಬರುವ ಪೀಳಿಗೆಗೆ ಇದೊಂದು ಮಹತ್ತರವಾದ ಪಾಠ ಕಲಿತಂತಾಗುತ್ತದೆ.
ಭಾರತ ಕಂಡ ಮಹಾನ್ ದೇಶ ಭಕ್ತ ಯುವ ನಾಯಕ ಹಾಗೂ ಸಹಸ್ರ ಸಹಸ್ರ ದೇಶ ಭಕ್ತ ಯುವಕರಿಗೆ ಸ್ಫೂರ್ತಿಯನ್ನು ನೀಡಿದ ಸ್ವಾಮಿ ವಿವೇಕಾನಂದರ ದೇಶ ಭಕ್ತಿಯನ್ನು ಇಲ್ಲಿ ಸ್ಮರಿಸಬಹುದಾಗಿದೆ. ದೇಶಕ್ಕೆ ಬೇಕಾಗಿರುವ ಮುಖ್ಯವಾದ ಅಂಶವೆಂದರೆ ಯುವಕರು. ಈ ಬಗ್ಗೆ ಸ್ವಾಮಿ ವಿವೇಕಾನಂದರು ಹೀಗೆ ತಿಳಿಸುತ್ತಾರೆ; “ನಮ್ಮ ದೇಶಕ್ಕೆ ಇಂದು ಬೇಕಾಗಿರುವುದು ಕಬ್ಬಿಣದಂತಹ ಮಾಂಸ ಖಂಡಗಳು, ಉಕ್ಕಿನಂತಹ ನರಗಳು, ಯಾವುದನ್ನೂ ಲೆಕ್ಕಿಸದೆ ವಿಶ್ವದ ರಹಸ್ಯತಮ ಸತ್ಯಗಳನ್ನು ಭೇದಿಸಿ ಸಾಧ್ಯವಾದರೆ ಕಡಲಿನ ಆಳಕ್ಕಾದರೂ ಹೋಗಿ ಮೃತ್ಯುವಿನೊಂದಿಗೆ ಹೋರಾಡಿ ಗುರಿಯನ್ನು ಸಾಧಿಸಬಲ್ಲ ಅದಮ್ಯ ಪ್ರಚಂಡ ಇಚ್ಛಾಶಕ್ತಿ”. ಸ್ವಾಮಿ ವಿವೇಕಾನಂದರ ದೇಶಪ್ರೇಮ, ದೇಶಭಕ್ತಿ, ಆತ್ಮ ಸಮರ್ಪಣೆ ವಿಚಾರಧಾರೆಗಳು ನೇತಾಜಿ ಸುಭಾಶ್ ಚಂದ್ರ ಬೋಸ್ ರಂತಹ ಮಹಾನ್ ಹೋರಾಟಗಾರರಿಗೆ ಸ್ಫೂರ್ತಿ ನೀಡಿತ್ತು ಎಂಬುದನ್ನು ಮರೆಯಬಾರದು. ಈಗ ಸಮಯ ಬಂದಿದೆ. ಈ ಶಕ್ತಿಯಿಂದ ವಿಶ್ವ ಗುರುವಾಗಿ ಹಾಗೂ ದುಷ್ಟರನ್ನು ಶಿಕ್ಷಿಸಿ ನವಭಾರತವನ್ನು ನಿರ್ಮಾಣ ಮಾಡುವ ಮುಹೂರ್ತ ಮೂಡಿ ಬಂದಿದೆ. ಈ ಸಂದರ್ಭದಲ್ಲಿ ದೇಶವನ್ನು ರಕ್ಷಿಸುತ್ತಿರುವ ನಮ್ಮ ವೀರ ಯೋಧರಿಗೆ ನಮ್ಮೆಲ್ಲರ ಪ್ರಾರ್ಥನೆ ಹಾಗೂ ಆ ದಯಾಮಯನಾದ ಭಗವಂತನು ಇನ್ನೂ ಹೆಚ್ಚಿನ ಶಕ್ತಿಯನ್ನು ನೀಡಿ ಭಾರತಾಂಬೆಯನ್ನು ಪೂರ್ಣವಾಗಿ ರಕ್ಷಿಸುವಂತೆ ಅವರಿಗೆ ಶಕ್ತಿ ನೀಡಲಿ ಎಂಬುದು ನಮ್ಮ ಪ್ರಾರ್ಥನೆ.