ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

26/11 ಮುಂಬೈ ಮಾದರಿಯ ಮತ್ತೊಂದು ದಾಳಿ ನಡೆಸುತ್ತೇವೆ; ಪಹಲ್ಗಾಮ್‌ ಅಟ್ಯಾಕ್‌ ಮಾಸ್ಟರ್‌ಮೈಂಡ್‌ ಕಸೂರಿಯಿಂದ ಎಚ್ಚರಿಕೆ: ದೇಶಾದ್ಯಂತ ಕಟ್ಟೆಚ್ಚರ

Saifullah Kasuri: 2008ರ ನವೆಂಬರ್‌ 26ರಂದು ಪಾಕಿಸ್ತಾನದ ಲಷ್ಕರ್‌-ಎ-ತೈಬಾ ಉಗ್ರ ಸಂಘಟನೆಯ ಸದಸ್ಯರು ಸಮುದ್ರ ಮಾರ್ಗದಲ್ಲಿ ಬಂದು ಮುಂಬೈ ಮೇಲೆ ದಾಳಿ ನಡೆಸಿದ ಮಾದರಿಯಲ್ಲಿ ಮತ್ತೊಂದು ಅಟ್ಯಾಕ್‌ ಮಾಡುವುದಾಗಿ ಲಷ್ಕರ್‌-ಎ-ತೈಬಾದ ಮುಖಂಡ ಸೈಫುಲ್ಲಾ ಕಸೂರಿ ಬೆದರಿಕೆ ಹಾಕಿದ್ದಾನೆ.

26/11 ಮಾದರಿಯ ಮತ್ತೊಂದು ದಾಳಿಯ ಎಚ್ಚರಿಕೆ ನೀಡಿದ ಉಗ್ರ

ಸೈಫುಲ್ಲಾ ಕಸೂರಿ (ಸಂಗ್ರಹ ಚಿತ್ರ). -

Ramesh Ballamoole
Ramesh Ballamoole Feb 24, 2026 11:17 PM

ದೆಹಲಿ, ಫೆ. 24: ಜಮ್ಮು ಕಾಶ್ಮೀರದ (Jammu and Kashmir) ಪಹಲ್ಗಾಮ್‌ನಲ್ಲಿ ಪಾಕಿಸ್ತಾನದ ಉಗ್ರರು ದಾಳಿ ನಡೆಸಿ ಸುಮಾರು 1 ವರ್ಷ ಆಗುತ್ತಿದ್ದು, ಆ ಕಹಿ ನೆನಪಿನಿಂದ ದೇಶ ಇನ್ನೂ ಹೊರ ಬಂದಿಲ್ಲ. ಅದಾಗಲೇ ದಾಳಿಯ ಮಾಸ್ಟರ್‌ಮೈಂಡ್‌ ಸೈಫುಲ್ಲಾ ಕಸೂರಿ (Saifullah Kasuri) ಭಾರತಕ್ಕೆ ಇನ್ನೊಂದು ಬೆದರಿಕೆ ಒಡ್ಡಿದ್ದಾನೆ. 2008ರ ನವೆಂಬರ್‌ 26ರಂದು ಪಾಕಿಸ್ತಾನದ ಲಷ್ಕರ್‌-ಎ-ತೈಬಾ (Lashkar-e-Taiba) ಉಗ್ರ ಸಂಘಟನೆಯ ಸದಸ್ಯರು ಸಮುದ್ರ ಮಾರ್ಗದಲ್ಲಿ ಬಂದು ಮುಂಬೈ ಮೇಲೆ ದಾಳಿ ನಡೆಸಿದ ಮಾದರಿಯಲ್ಲಿ ಮತ್ತೊಂದು ಅಟ್ಯಾಕ್‌ ಮಾಡುವುದಾಗಿ ಬೆದರಿಕೆ ಹಾಕಿದ್ದಾನೆ. ಪಹಲ್ಗಾಮ್‌ ದಾಳಿಯ ಮಾಸ್ಟರ್‌ ಮೈಂಡ್‌, ಲಷ್ಕರ್‌-ಎ-ತೈಬಾದ ಮುಖಂಡ ಸೈಫುಲ್ಲಾ ಕಸೂರಿ ಈ ರೀತಿ ಬೆದರಿಕೆ ಒಡ್ಡಿದ್ದಾಗಿ ಸಿಎನ್‌ಎನ್‌-ನ್ಯೂಸ್‌18 ಸುದ್ದಿಸಂಸ್ಥೆ ವರದಿ ಮಾಡಿದೆ.

ಭಾರತಕ್ಕೆ ಬೆದರಿಕೆ ಒಡ್ಡುವ ವಿಡಿಯೊವನ್ನು ಕಸೂರಿ ಹರಿಯಬಿಟ್ಟಿದ್ದಾನೆ ಎನ್ನಲಾಗಿದೆ. ಅದರಲ್ಲಿ ಆತ ಪಾಕಿಸ್ತಾನ ಸೇನೆಗೆ ಮೆಚ್ಚುಗೆ ಸೂಚಿಸಿ ಭಾರತದ ವಿರುದ್ಧ ಮತ್ತೊಂದು ದಾಳಿಯ ಎಚ್ಚರಿಕೆ ನೀಡಿದ್ದಾನೆ.

ಭಾರತಕ್ಕೆ ಬೆದರಿಕೆ ಒಡ್ಡಿದ ಸೈಫುಲ್ಲಾ ಕಸೂರಿ:



2008ರಲ್ಲಿ ಲಷ್ಕರ್‌-ಎ-ತೈಬಾ ಉಗ್ರ ಸಂಘಟನೆಯ ಸದಸ್ಯರು ಸಮುದ್ರ ಮಾರ್ಗದ ಮೂಲಕ ಮಹಾರಾಷ್ಟ್ರದ ಮುಂಬೈಗೆ ನುಗ್ಗಿ ಸರಣಿ ದಾಳಿ, ಬಾಂಬ್‌ ಸ್ಫೋಟ ನಡೆಸಿದ್ದರು. ಈ ವೇಳೆ ಒಟ್ಟು 175 ಮಂದಿ ಮೃತಪಟ್ಟು, 300ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದರು. ಈ ಬಾರಿಯೂ ಜಲಮಾರ್ಗದ ಮೂಲಕ 2026ರಲ್ಲಿ ಮತ್ತೊಮ್ಮೆ ದಾಳಿ ನಡೆಸುವುದಾಗಿ ಕಸೂರಿ ಹೇಳಿದ್ದಾನೆ.

ವಿಡಿಯೊದಲ್ಲಿ ಏನಿದೆ?

ಕಸೂರಿ ತನ್ನ ವಿಡಿಯೊದಲ್ಲಿ 2025ರಲ್ಲಿ ಪಾಕಿಸ್ತಾನ ವಾಯು ಮಾರ್ಗದಲ್ಲಿ ಆದಿಪತ್ಯ ಸಾಧಿಸಿತ್ತು. 2026ರಲ್ಲಿ ಸಮುದ್ರ ಮಾರ್ಗದಲ್ಲಿ ಪ್ರಬಾಲ್ಯ ಸಾಧಿಸಲಿದೆ ಎಂದಿದ್ದಾನೆ. ಭೂಮಿ, ವಾಯು ಅಥವಾ ಸಮುದ್ರ ಹೀಗೆ ಎಲ್ಲೂ ಶತ್ರುಗಳಿಗೆ ಸ್ಥಳಾವಕಾಶವಿಲ್ಲ ಎಂದು ಬೊಗಳೆ ಬಿಟ್ಟಿದ್ದಾನೆ. ಇದನ್ನು ಅಲ್ಲಾಹನ ಇಚ್ಛೆ ಎಂದು ಬಣ್ಣಿಸಿದ ಆತ ಪಾಕಿಸ್ತಾನವು ಶೀಘ್ರದಲ್ಲೇ ಎಲ್ಲ ಪ್ರಮುಖ ಕಾರ್ಯತಂತ್ರದ ಕ್ಷೇತ್ರಗಳಲ್ಲಿ ನಿಯಂತ್ರಣವನ್ನು ಸ್ಥಾಪಿಸುತ್ತದೆ ಎಂದು ಹೇಳಿದ್ದಾನೆ. ಕಸೂರಿಯ ಹೇಳಿಕೆಯನ್ನು ಭಾರತ ಗಂಭೀರವಾಗಿ ಪರಿಗಣಿಸಿದ್ದು, ಎಲ್ಲೆಡೆ ಕಟ್ಟೆಚ್ಚರ ವಹಿಸಲಾಗಿದೆ.

ಪಹಲ್ಗಾಮ್‌ ದಾಳಿಯಲ್ಲಿ ಭಾಗಿಯಾಗಿದ್ದ ಇಬ್ಬರು ಲಷ್ಕರ್‌ ಉಗ್ರರ ಮನೆಗಳು ಧ್ವಂಸ

ಪಹಲ್ಗಾಮ್‌ ದಾಳಿಯ ಮಾಸ್ಟರ್‌ ಮೈಂಡ್‌

2025ರ ಏಪ್ರಿಲ್ 22ರಂದು ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಯ ಪ್ರಮುಖ ಸೂತ್ರಧಾರಿ ಈ ಸೈಫುಲ್ಲಾ ಕಸೂರಿ. ಈ ದಾಳಿಗೆ ಪ್ರತೀಕಾರವಾಗಿ ಭಾರತ ಆಪರೇಷನ್‌ ಸಿಂದೂರ್‌ ಕಾರ್ಯಾಚರಣೆ ಮೂಲಕ ತಕ್ಕ ಉತ್ತರ ನೀಡಿದೆ. ಪಾಕಿಸ್ತಾನ ಹಾಗೂ ಪಾಕಿಸ್ತಾನ ಆಕ್ರಮಿತ ಜಮ್ಮು ಮತ್ತು ಕಾಶ್ಮೀರದಲ್ಲಿ ಕಾರ್ಯನಿರ್ವಹಿಸುತ್ತಿರುವ ಲಷ್ಕರ್-ಎ-ತೈಬಾ ಮತ್ತು ಮಿತ್ರ ಸಂಘಟನೆಗಳ ಭಯೋತ್ಪಾದಕ ಶಿಬಿರಗಳನ್ನು ನಾಶಪಡಿಸಲಾಗಿದೆ. ಹಲವು ಪ್ರಮುಖ ಭಯೋತ್ಪಾದಕ ಮುಖಂಡರು ಈಗಾಗಲೇ ಹತರಾಗಿದ್ದಾರೆ. ಇಷ್ಟಾಗಿಯೂ ಉಗ್ರರು ಇನ್ನೂ ಬುದ್ದಿ ಕಲಿತಂತೆ ಕಾಣುತ್ತಿಲ್ಲ.

ಯಾರು ಈ ಕಸೂರಿ?

ಪಾಕಿಸ್ತಾನ ಮೂಲದ ಸೈಫುಲ್ಲಾ ಕಸೂರಿ ಲಷ್ಕರ್-ಎ-ತೈಬಾ ಸಂಘಟನೆಯ ಪ್ರಮುಖ ವ್ಯಕ್ತಿಗಳಲ್ಲಿ ಒಬ್ಬ ಎನಿಸಿಕೊಂಡಿದ್ದಾನೆ. ಈತ ಹಲವು ಗಡಿಯಾಚೆಗಿನ ಭಯೋತ್ಪಾದಕ ಕಾರ್ಯಾಚರಣೆ ನಡೆಸಿದ್ದಾನೆ. ಆ ಮೂಲಕ ಉನ್ನತ ಹುದ್ದೆಗೆ ಏರಿದ್ದಾನೆ. ಭಾರತೀಯ ಗುಪ್ತಚರ ವಲಯದಲ್ಲಿ ಖಾಲಿದ್ ಎಂಬ ಹೆಸರಿನಿಂದ ಪರಿಚಿತರಾಗಿರುವ ಕಸೂರಿಯನ್ನು ಹೊಡೆದುರುಳಿಸಲು ಭಾರತೀಯ ಸೇನೆ ಹಲವು ಸಮಯಗಳಿಂದ ಯೋಜನೆ ರೂಪಿಸುತ್ತಿದೆ.

ದೇಶದ ಇನ್ನಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್‌ ಮಾಡಿ.